ಅಂಬಿಗರ ಚೌಡಯ್ಯನ ವಚನ ಓದು – 7ನೆಯ ಕಂತು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು
ಮತ್ತೆ ಪುನರಪಿಯಾಗಿ ಕೊಯಿವವನಂತೆ
ಭಕ್ತರಿಗೆ ಬೋಧೆಯ ಹೇಳಿ
ಚಿತ್ತವೃತ್ತಿಯನರಿದು ಬೇಡುವಂಗೆ
ಇನ್ನೆತ್ತಣ ಮುಕ್ತಿಯೆಂದನಂಬಿಗ ಚೌಡಯ್ಯ.

ಸತ್ಯ, ನೀತಿ ಮತ್ತು ನ್ಯಾಯದ ಸಂಗತಿಗಳನ್ನು ಬಹಿರಂಗದಲ್ಲಿ ಜನರಿಗೆ ತಿಳಿಯ ಹೇಳುತ್ತ, ಅಂತರಂಗದಲ್ಲಿ ಅವರಿಂದ ಹಣ ಒಡವೆ ವಸ್ತುಗಳನ್ನು ಬೇಡಿ ಪಡೆಯುವ ವ್ಯಕ್ತಿಯ ಕಪಟತನವನ್ನು ಈ ವಚನದಲ್ಲಿ ಟೀಕಿಸಲಾಗಿದೆ.

“ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು ಮತ್ತೆ ಪುನರಪಿಯಾಗಿ ಕೊಯಿವವನಂತೆ” ಎಂಬ ಉಪಮೆ/ಹೋಲಿಕೆಯು ಜನರಿಂದ ಮತ್ತೆ ಮತ್ತೆ ಉಪಯೋಗವನ್ನು ಪಡೆಯುವುದಕ್ಕಾಗಿಯೇ ವ್ಯಕ್ತಿಯು ಉಪದೇಶದ ನಾಟಕವನ್ನು ಆಡುತ್ತಿದ್ದಾನೆ ಎಂಬ ತಿರುಳಿನಲ್ಲಿ ಬಳಕೆಯಾಗಿದೆ.

ಹಿತ್ತಿಲು=ಮನೆಯ ಹಿಂದಿನ ಜಾಗ; ಸೊಪ್ಪು=ಮರಗಿಡಬಳ್ಳಿಗಳ ಎಲೆ; ಹಿತ್ತಿಲ ಸೊಪ್ಪು=ಮನೆಯ ಹಿತ್ತಿಲಿನ ಜಾಗದಲ್ಲಿ ಒಂದು ಕಡೆ ಮಣ್ಣನ್ನು ಅಗೆದು ಹದಗೊಳಿಸಿ ಚಿಕ್ಕ ಚಿಕ್ಕ ಪಾತಿಗಳನ್ನು ಕಟ್ಟಿ, ಅಲ್ಲಿ ಕೀರೆ ಬೀಜಗಳನ್ನು ಬಿತ್ತಿ ಬೆಳೆಸುತ್ತಾರೆ. ಇದನ್ನು ಕೀರೆ ಮಡಿ ಎನ್ನುತ್ತಾರೆ. ಸಣ್ಣನೆಯ ಕಡ್ಡಿಯಾಕಾರದಲ್ಲಿ ಬೆಳೆಯುವ ಕೀರೆ ಗಿಡಗಳ ಸೊಪ್ಪನ್ನು ಮಾತ್ರ ಕಿತ್ತುಕೊಂಡು ಸಾರನ್ನು ಮಾಡಲು ಬಳಸುತ್ತಾರೆ. ಕೀರೆ ಗಿಡಗಳ ಬೇರು ಹಾಗೆಯೇ ಇರುತ್ತದೆ. ಮತ್ತೆ ಮತ್ತೆ ನೀರನ್ನು ಹಾಕಿದಂತೆಲ್ಲಾ ಮತ್ತೆ ಮತ್ತೆ ಕೀರೆ ಸೊಪ್ಪು ಬೆಳೆಯುತ್ತಿರುತ್ತದೆ.

ಹೊಯ್=ಸುರಿ/ಎರೆ; ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು=ಹಿತ್ತಿಲಿನಲ್ಲಿರುವ ಸೊಪ್ಪಿನ ಮಡಿಗೆ ನೀರನ್ನು ಎರೆದು; ಮತ್ತೆ=ತಿರುಗಿ; ಪುನರಪಿ=ಮತ್ತೆ ಮತ್ತೆ/ಅನೇಕ ಸಲ; ಕೊಯ್=ಕೀಳು/ಕತ್ತರಿಸು; ಅಂತೆ=ಹಾಗೆ;

ಮತ್ತೆ ಪುನರಪಿಯಾಗಿ ಕೊಯಿವವನಂತೆ=ಸೊಪ್ಪು ಬೆಳೆಬೆಳೆದಂತೆಲ್ಲಾ ಮತ್ತೆ ಮತ್ತೆ ಕೀಳುತ್ತಿರುವ ವ್ಯಕ್ತಿಯಂತೆ;

ಭಕ್ತರು=ದೇವರನ್ನು ಪೂಜಿಸುವವರು ; ಬೋಧೆ=ತಿಳುವಳಿಕೆ/ಅರಿವು; ಭಕ್ತರಿಗೆ ಬೋಧೆಯ ಹೇಳಿ=ದೇವರನ್ನು ಪೂಜಿಸಲೆಂದು ಬರುವ ವ್ಯಕ್ತಿಗಳಿಗೆ ಒಳ್ಳೊಳ್ಳೆಯ ಸಂಗತಿಗಳನ್ನು ಹೇಳಿ; ಚಿತ್ತವೃತ್ತಿ+ಅನ್+ಅರಿದು; ಚಿತ್ತ=ಮನಸ್ಸು; ಚಿತ್ತವೃತ್ತಿ=ಮನಸ್ಸಿನ ಮಿಡಿತ/ತುಡಿತ; ಅನ್=ಅನ್ನು; ಅರಿದು=ತಿಳಿದುಕೊಂಡು; ಬೇಡು=ಯಾಚಿಸು/ಕೇಳು; ಬೇಡುವಂಗೆ=ಬೇಡುವವನಿಗೆ;

ಚಿತ್ತವೃತ್ತಿಯನರಿದು ಬೇಡುವಂಗೆ=ತನ್ನ ಉಪದೇಶವನ್ನು ಕೇಳಲು ಬಂದ ಜನರ ಮನಸ್ಸನ್ನು ಒಳಹೊಕ್ಕು ಅಂದರೆ ಅವರನ್ನು ಮಾತಿನ ಮೂಲಕವೇ ಮರುಳುಗೊಳಿಸಿ, ಅವರಿಂದ ಹಣ ಒಡವೆ ವಸ್ತುಗಳನ್ನು ಯಾಚಿಸುವ ವ್ಯಕ್ತಿಗೆ;

ಇನ್+ಎತ್ತಣ; ಇನ್=ಇನ್ನು; ಎತ್ತಣ=ಯಾವ ಕಡೆಯ; ಮುಕ್ತಿ+ಎಂದನ್+ಅಂಬಿಗ; ಮುಕ್ತಿ=ಬಿಡುಗಡೆ/ವ್ಯಕ್ತಿಯು ಕೆಟ್ಟ ನಡೆನುಡಿಗಳನ್ನು ತೊರೆದು ಒಳ್ಳೆಯ ನಡೆನುಡಿಗಳನ್ನು ತನ್ನದಾಗಿಸಿಕೊಳ್ಳುವುದು;

ಇನ್ನೆತ್ತಣ ಮುಕ್ತಿ=ಬಹಿರಂಗದಲ್ಲಿ ಒಳ್ಳೊಳ್ಳೆಯ ಮಾತನ್ನಾಡಿ, ಅಂತರಂಗದಲ್ಲಿ ಜನರನ್ನು ವಂಚಿಸುವವನು ಎಂದೆಂದಿಗೂ ಉತ್ತಮ ವ್ಯಕ್ತಿಯಾಗಲಾರ;

ಎಂದನ್=ಎಂದು ಹೇಳಿದನು; ಅಂಬಿಗ=ದೋಣಿಯನ್ನು ನಡೆಸುವ ಕಾಯಕದವನು;

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: