ಕವಿತೆ: ಬೇವು ಬೆಲ್ಲ

 ಪ್ರವೀಣ್ ದೇಶಪಾಂಡೆ.

ಸಾಮಾಜಿಕ ಜಾಲತಾಣ, social media

ದಿನಕೊಂದು ಪೋಸ್ಟು
ಬಾರಿ ಬಾರಿ ಬದಲಿಸಿ
ಸ್ಟೇಟಸ್ಸು
ಬಸವಳಿದು ಕುಂತು
ಸ್ಕ್ರೀನ ಬೆರಳಾಡಿಸಿ
ನಿರಾಳ
ಉಸ್ಸಪ್ಪಾ ಉಸ್ಸು

ಎಶ್ಟು ಶೇರು, ವ್ಯೂ ಗಳು?
ಬಿನ್ನಿಗೆ ಬಿನ್ನಾಯ ಬಿಟ್ಟು
ಎಲ್ಲ ಬೇಕು, ಬೇಕೆಂಬ
ಹುಂಬ ಬಯಕೆಗೆ ಸಿಲುಕಿ
ರ‍್ಯಾಮು ತುಂಬಿ
ಸುಡುವ ರೋಮು

ನಿರೋ‌ ನ ಬೊಗಸೆಗಳೊಳಗೆ
ಗಿಗಾ ಹರ‍್ಡ್ಜುಗಳ ಪ್ರೊಸೆಸ್ಸರು
ನಿಗಿ ಬೆಂಕಿ ಹೀಟು,
ಬಿಡಲೊಲ್ಲ
ಚಾರ‍್ಜು ಮುಗದಿಲ್ಲ
ಕುಂಡಿಗೊತ್ತಿ ಕಿಲೊ
ಪಾವರ್ ಬ್ಯಾಂಕೂತಿದೆಯಲ್ಲ

ಸಾಕು
ನಿನ್ನ ನೀ ಪಾರ‍್ಮ್ಯಾಟು ಹೊಡಿ
ರಿಪ್ರೆಶ್ ಬಟನ್ನು ಒತ್ತ್ಹಿಡಿ
ಕಾಲಿಯಾಗಲಿ ಒಡಲು
ಎಲ್ಲದಕು ಚೂರು ಜಾಗ
ದಕ್ಕಲಿ
ಕರೇ ಬದುಕ ಚಾನೆಲ್ಲಿಗೆ
ಸಬ್ಸ್ಕ್ರೈಬು ಮಾಡಿ

ಎದ್ದು ಕಿಚ್ಚಾರಿಸು ಗೊಜ್ಜಿ
ಕುದಿ ನೀರೂ ಆದಾತು,
ಉರಿದುಳಿದ ಬೂದಿ
ಬೇರಾಗಲಿ
ಹೊಸತು ಚಿಗುರಿಗೆ,
ಕಿವಿಯ ತೂತಲ್ಲಿ
ಇಯರ್ ಪೀಸು
ಸವೆದಶ್ಟು ಕೇಳಿದ್ದಾಯಿತು
ಹಾಡೊಂದ ಗುನುಗು

ವಟ್ಟಿದ ಓಟೀಟಿಗಳ
ಕುಟ್ಟಿ
ಕವಿತೆಯೊಂದನು ಕಟ್ಟು
ತೇಲಿಬಿಡು
ಕಮೆಂಟು, ಲೈಕುಗಳಾಚೆ
ಜೀವ ಲಹರಿ
ಬಾವದಲೆ

ಸುಡುವ ಸಂಕಟ ಮೀರಿ
ದಡಗುಂಟ ಹಸಿರು,
ಏಕಾಂತ ಮೊಬೈಲ ದಾಟಿ
ನಿವಾಂತವಾಗಲಿ,
ಬದುಕ ಪತಾಕೆ
ಉಸಿರ ಸುಳಿರ‍್ಗಾಳಿ
ನಾಲ್ಕು ಮಂದಿಗೆ
ತಾಕಲಿ

ಜಂಗಮ ಗಂಟೆಯಲಿ
ಸ್ತಾವರವಾಗದ
ಬದುಕು ಹಲವರಿಗೆ ಬೇವು.
ಎಲ್ಲರಿಗೆ ಬೆಲ್ಲ ಬೇಕು,
ಕೆಲವರಿಗೆ
ಬೆಲ್ಲದಲ್ಲೇ ಬೇವು
ಬಲ್ಲವರಿಗೆ ಬೇವೂ ಬೆಲ್ಲ

( ಚಿತ್ರ ಸೆಲೆ:  wheelerblogs.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: