ಶಾವಿಗೆ ಕಾರಾ ಪೊಂಗಲ್

– ಸವಿತಾ.

ಬೇಕಾಗುವ ಸಾಮಾನುಗಳು

  • ಶಾವಿಗೆ – 1 ಲೋಟ
  • ಹೆಸರು ಬೇಳೆ -1/4 ಲೋಟ
  • ತುಪ್ಪ – 3 ಚಮಚ
  • ಹಸಿ ಮೆಣಸಿನಕಾಯಿ – 4
  • ಜೀರಿಗೆ – 1 ಚಮಚ
  • ಮೆಣಸಿನ ಕಾಳು – 1/4 ಚಮಚ
  • ಒಣ ಕೊಬ್ಬರಿ ತುರಿ – 1/2 ಲೋಟ
  • ಗೋಡಂಬಿ -15
  • ನಿಂಬೆ ರಸ – 1/4 ಹೋಳು
  • ಹಸಿ ಶುಂಟಿ – ಸ್ವಲ್ಪ
  • ಕರಿಬೇವು ಎಲೆ – ಸ್ವಲ್ಪ
  • ಅರಿಶಿಣ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ಬಗೆ

ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ, ಹೆಸರು ಬೇಳೆ ಹಾಕಿ ಚೆನ್ನಾಗಿ ಹುರಿಯಿರಿ. ಸ್ವಲ್ಪ ಅರಿಶಿಣ ಪುಡಿ ಹಾಕಿ ಒಲೆ ಆರಿಸಿ ಇಳಿಸಿ. ಒಂದು ಬಟ್ಟಲಲ್ಲಿ ಹಾಕಿ ನೀರು ಸೇರಿಸಿ ಕೂಕರ್‌ ನಲ್ಲಿ ಇಟ್ಟು ಎರಡು ಕೂಗು ಕುದಿಸಿ ಇಳಿಸಿ.

ಅದೇ ಬಾಣಲೆಗೆ ಉಳಿದ ತುಪ್ಪ ಹಾಕಿ ಬಿಸಿ ಮಾಡಿ, ಅದರಲ್ಲಿ ಕರಿಬೇವು ಜೀರಿಗೆ, ಹಸಿ ಶುಂಟಿ, ಗೋಡಂಬಿ, ಶಾವಿಗೆ, ಒಣ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಹುರಿಯಿರಿ. ರುಚಿಗೆ ತಕ್ಕಶ್ಟು ಉಪ್ಪು, ಸ್ವಲ್ಪ ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ ಮಾಡಿ ಹಾಕಿ ನೀರು ಸೇರಿಸಿ ಒಂದು ಕುದಿ ಕುದಿಸಿ.

ನಂತರ ಕುದಿಸಿಟ್ಟ ಹೆಸರು ಬೇಳೆ ಕಲಸಿ ಇನ್ನಶ್ಟು ನೀರು ಸೇರಿಸಿ. ಬೇಕಾದರೆ ಸ್ವಲ್ಪ ತುಪ್ಪ ಹಾಕಿ ಒಂದು ಕುದಿ ಕುದಿಸಿ ಇಳಿಸಿ. ನಿಂಬೆ ರಸ ಮತ್ತು ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಒಮ್ಮೆ ಕೈಯಾಡಿಸಿ. ಈಗ ಶಾವಿಗೆ ಕಾರಾ ಪೊಂಗಲ್ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: