ಕವಿತೆ: ಬದುಕಿನ ಮರ‍್ಮ

– ರಾಮಚಂದ್ರ ಮಹಾರುದ್ರಪ್ಪ.

 

ಬದುಕು ಸರಳ, ಅರಿಯೋ ಮರುಳ
ನೀ ಬಂದಾಗ ಬರಿಗೈಲಿ ಬಂದೆ
ಹೋಗುವಾಗ ಬರಿಗೈಲೇ ಹೋಗುವೆ
ಹುಟ್ಟು ಸಾವಿನ ನಡುವೆ
ಇಹುದು ನಿನ್ನೀ ಬದುಕಿನ ನಾಟಕ

ಹಲವರು ನೂರ‍್ಕಾಲ ಇಲ್ಲಿರುವರು
ಕೆಲವರು ಮೂರೇ ದಿನಗಳಲ್ಲಿ ಮರಳುವರು
ನೀ ಏನೇ ಕಲಿತರೂ ಇದರ ಮರ‍್ಮ ಅರಿಯಲಾರೆ.
ಇದೇ ವಿದಿಯ ಆಟ

ನೀ ದುಡಿದು ದೊಡ್ಡವನಾದೆನೆಂದು ಬೀಗಬೇಡ
ಕಲಿತು ಸರ‍್ವಜ್ನನಾದೆನೆಂದು ಮೆರೆಯಬೇಡ
ಎಲ್ಲರೂ ಕಡೆಗೆ ಬಾಳ ಪಯಣ ಮುಗಿಸಿ
ಸೋತು ಮರಳಲೇ ಬೇಕು

ಇಲ್ಲಿ ಯಾರೂ ಶಾಶ್ವತರಲ್ಲ
ಇರುವಶ್ಟು ದಿನ ಬದುಕನ್ನು ಅರಿ
ಅನ್ನ, ನೀರು, ಸೂರು ಕಾಯುವವು ನಿನ್ನುಸಿರ

ಬದುಕು ಬಲು ಸರಳ
ನೀನರಿಯದೆ ಮಾಡಿಕೊಂಡಿರುವೆ ಗೊಂದಲ
ಅಸೂಯೆ, ದ್ವೇಶ ಬಿಟ್ಟ ದಿನ ನೀನಾಗುವೆ ಮನುಜ
ಅಲ್ಲಿವರೆಗೂ ನೀನೊಬ್ಬ ಮಾತಾಡುವ ಪ್ರಾಣಿಯಶ್ಟೇ

ಮನುಜನಾಗಿ ಹುಟ್ಟುವುದು ಸುಲಬ
ಮನುಜನಾಗಿ ಬಾಳುವುದೇ ಹೋರಾಟ
ಹೋರಾಡುವೆಯ ನೀ ಮನುಜನಾಗಲು?
ಮನುಜನಾಗು, ಒಳಿತು ಮಾಡು

ನೀನೆಂದು ಮರಳುವೆಯೋ ಬಲ್ಲವರ‍್ಯಾರು
ಬದುಕು ಸರಳ, ಅರಿಯೋ ಮರುಳ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: