ಜಪಾನಿನ ಕೊಕೇಶಿ ಗೊಂಬೆಗಳು

– .


ಕೊಕೇಶಿ ಗೊಂಬೆಗಳು ಜಪಾನಿನ ಸಾಂಪ್ರದಾಯಿಕ ಮರದ ಗೊಂಬೆಗಳು. ಇವುಗಳನ್ನು ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಮೂಲತಹ ಕೊಕೇಶಿ ಗೊಂಬೆಗಳು 1600 -1868ರ ಜಪಾನಿನ ಇಡೋ ಅವದಿಯ ಕೊನೆಯ ಕಾಲದ್ದೆಂದು ಹೇಳಲಾಗುತ್ತದೆ. ಜಪಾನಿನ ತೊಹೊಕು ಪ್ರದೇಶದಲ್ಲಿನ ಬಿಸಿ ನೀರಿನ ಬುಗ್ಗೆಯನ್ನು ನೋಡಲು ಬರುವ ಪ್ರವಾಸಿಗರಿಗೆ ಇದನ್ನು ಮಾರಲಾಗುತ್ತಿತ್ತು. ಚಳಿಗಾಲದಲ್ಲಿ ಪ್ರವಾಸಿಗರ ಸಂಕ್ಯೆ ಇಳಿಮುಕವಾದಾಗ, ಕೆಲಸಗಾರರನ್ನು ಕಾರ‍್ಯನಿರತರಾಗಿ ಇರಿಸಿಕೊಳ್ಳಲು ಕೊಕೇಶಿ ಗೊಂಬೆಗಳ ತಯಾರಿಕೆಗೆ ಹಚ್ಚಲಾಗುತ್ತಿತ್ತು. ಕಾಲ ಕ್ರಮೇಣ ಈ ಬೊಂಬೆಗಳು ವಿಶೇಶವಾಗಿ ಜಪಾನಿನ ಶಿನ್ನಿಚ್ಚಿ (ಜಪಾನೋಪೈಲ್ಸ್) ಜನಾಂಗದವರಲ್ಲಿ ಹಾಗೂ ವಿಶ್ವಾದ್ಯಂತ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ಬೇಡಿಕೆಯನ್ನು ಪೂರೈಸಲು ಅದಿಕ ಸಂಕ್ಯೆಯಲ್ಲಿ ತಯಾರಿಸಲು ಪ್ರಾರಂಬವಾಯಿತು.

ಕೊಕೇಶಿ ಗೊಂಬೆಯ ತಯಾರಿಕೆ ಈಗ ಜಪಾನ್ ದೇಶದ ಅತ್ಯಂತ ರೋಮಾಂಚಕ ಜಾನಪದ ಕಲೆಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕವಾಗಿ ಸಪೂರ ದೇಹ ಮತ್ತು ದಪ್ಪನೆಯ ತಲೆಯನ್ನು ಒಳಗೊಂಡಿರುವ ಈ ಬೊಂಬೆಗಳಿಗೆ ತೆಳುವಾದ ಬಣ್ಣದ ಗೆರೆಗಳಿಂದ ಅಲಂಕಾರ ಮಾಡಲಾಗುತ್ತದೆ. ದಿನಗಳೆದಂತೆ ಕೊಕೇಶಿ ಬೊಂಬೆಗಳ ವಿನ್ಯಾಸ ಹೆಚ್ಚು ಸಂಕೀರ‍್ಣ ಹಾಗೂ ವೈವಿದ್ಯಮಯವಾಗಿ, ಮಾನವನ ರೂಪಕ್ಕೆ ಹೊಂದಿಕೊಂಡಂತೆ ಬದಲಾಯಿತು. ಇದರ ಪರಿಣಾಮವೇ ಇಂದು ಕಾಣ ಬರುವ ಆಕರ‍್ಶಕ ಮತ್ತು ಜೀವಂತ ಗೊಂಬೆಗಳಿಗೆ ಹತ್ತಿರವಾದ ಕೊಕೇಶಿ ಮರದ ಗೊಂಬೆಗಳು.

ಸಮಕಾಲೀನ ಕೊಕೇಶಿ ಗೊಂಬೆಗಳು ಸಾಂಪ್ರದಾಯಿಕ ಪ್ರತಿರೂಪಗಳಿಗಿಂತ ಹೆಚ್ಚು ದುಂಡಾದ ಆಕಾರವನ್ನು ಹೊಂದಿವೆ. ಇದರಲ್ಲಿ ಅಲಂಕಾರಕ್ಕಾಗಿ ಬಳಸುವ ಉತ್ಕ್ರುಶ್ಟ ಬಣ್ಣ ಹಾಗೂ ಮುಕದ ವೈಶಿಶ್ಟ್ಯಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶೇಶ ಸಂದರ‍್ಬಗಳನ್ನು ಆಚರಿಸಲು, ವ್ರುತ್ತಿಯನ್ನು ಪ್ರತಿಬಿಂಬಿಸಲು ಅತವಾ ಕೆಲವು ಕಾಲ್ಪನಿಕ ಪಾತ್ರಗಳನ್ನು ಅನುಕರಿಸಲು ಹಾಗೂ ವಿಶೇಶ ಉಡುಗೊರೆಯಾಗಿ ಕೊಕೇಶಿ ಗೊಂಬೆಗಳ ಬಳಸಲಾಗುತ್ತದೆ. ಕೊಕೇಶಿ ಗೊಂಬೆಗಳ ಅರ‍್ತ ಹಾಗೂ ಅವುಗಳ ಆದ್ಯಾತ್ಮಿಕ ಪ್ರಾಮುಕ್ಯತೆ ಬಗ್ಗೆ ವಿಬಿನ್ನ ಅಬಿಪ್ರಾಯಗಳು ಕೇಳಿ ಬಂದಿವೆ. ಇದಕ್ಕೆ ಹೆಚ್ಚಿನ ಒತ್ತು ನೀಡಿರುವುದು ಮಕ್ಕಳ ಗೊಂಬೆಗಳು ಎಂದೇ. ಕೆಲವರು ಕೊಕೇಶಿ ಆರೋಗ್ಯಕರ ಮಗುವಿನ ಆಶಯವನ್ನು ಪ್ರತಿನಿದಿಸುತ್ತದೆ ಎಂದರೆ, ಮತ್ತೆ ಕೆಲವರು ಇದು ಮಕ್ಕಳಲ್ಲಿ ಬೆಟ್ಟದಶ್ಟು ದೈರ‍್ಯ ಮತ್ತು ಶಕ್ತಿಗಳನ್ನು ತುಂಬುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಸ್ನೇಹದ ಪ್ರತಿನಿದಿಯಾಗಿ ವಿನಿಮಯ ಮಾಡಿಕೊಂಡಾಗ ಅದರೊಡನೆ ಮರೆಮಾಚಲಾದ ಸಂದೇಶಗಳು ರವಾನೆಯಾಗುತ್ತವೆ ಎಂದು ನಂಬಿದ್ದಾರೆ.

ಜಪಾನಿನ ನಗರ ನರುಕೋದಲ್ಲಿ ಪ್ರತಿ ವರ‍್ಶ ಸೆಪ್ಟೆಂಬರ್ ತಿಂಗಳಿನಲ್ಲಿ ಕೊಕೇಶಿ ಉತ್ಸವವನ್ನು ಅಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ಅನುಪಯುಕ್ತ ಹಾಗೂ ಅನಗತ್ಯವಾದ ಕೊಕೇಶಿ ಗೊಂಬೆಗಳನ್ನು ಉರುವಲಿನಲ್ಲಿ ಹಾಕಿ ಸುಡಲಾಗುತ್ತದೆ. ಮನಕಲಕುವ ಈ ದ್ರುಶ್ಯವನ್ನು ಅನೇಕ ಪ್ರವಾಸಿಗರು ಬೇಸರದಿಂದ ವೀಕ್ಶಿಸುತ್ತಾರೆ.

ಕೊಕೇಶಿ ಗೊಂಬೆಗಳ ತಯಾರಿಕೆ ಸಹ ಒಂದು ರೋಚಕವಾದ ಕೆಲಸ. ಸಾಮಾನ್ಯವಾಗಿ ಅತ್ಯಂತ ಹಳೆಯದಾದ ಚೆರ‍್ರಿ ಅತವಾ ಮಿಜುಕಿ ಮರವನ್ನು ಇದರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೊದಲು ಮರವನ್ನು ಕೊಕೇಶಿ ಗೊಂಬೆಗಳ ತಯಾರಿಕೆಗೆ ಅವಶ್ಯವಿರುವ ಅಳತೆಗೆ ಕತ್ತರಿಸಿಕೊಳ್ಳಲಾಗುತ್ತದೆ. ನಂತರ ಅದರ ಅಂಚುಗಳನ್ನು ದುಂಡಗೆ ಮಾಡಿ, ಲೇತ್ ಯಂತ್ರ ಬಳಕೆಯಿಂದ ಮೊದಲು ದೊಡ್ಡದಾದ ನಂತರ ಸಣ್ಣದರ ಆಕಾರಕ್ಕೆ ಕತ್ತರಿಸಲಾಗುತ್ತದೆ. ಕತ್ತರಿಸಿದ ನಂತರದ ಕೆಲಸ ಕುಶಲ ಕರ‍್ಮಿಗಳದ್ದು. ಕೊಕೇಶಿ ಗೊಂಬೆಯ ಮುಕ ಮತ್ತು ದೇಹದ ಬಾಗವನ್ನು ಆಕರ‍್ಶಣೀಯವಾಗಿಲು ಸೂಕ್ಶ್ಮವಾಗಿ ಕೆತ್ತನೆ ಮಾಡಿ, ಬ್ರಶ್ ಉಪಯೋಗಿಸಿ ಬಣ್ಣ ಬಳಿಯಲಾಗುತ್ತದೆ. ಈ ಬಣ್ಣವು ಒಣಗಿದ ನಂತರ ಅದರ ಮೇಲೆ ಮೇಣದ ಪದರವನ್ನು ಲೇಪಿಸಲಾಗುತ್ತದೆ. ಮೇಣದ ಪದರ ಕೊಕೇಶಿ ಗೊಂಬೆಗೆ ಮಾಸದ ಹೊಳಪನ್ನು ನೀಡುತ್ತದೆ.

ಕೊಕೇಶಿ ಗೊಂಬೆ ಜಪಾನಿನ ಸಂಸ್ಕ್ರುತಿಯ ಅತ್ಯಂತ ಪೂಜನೀಯ ಸಂಕೇತ. ಇದರ ಅಂಗವಾಗಿ ಜಪಾನ್ ರಾಶ್ಟ್ರೀಯ ಕೊಕೇಶಿ ಗೊಂಬೆಗಳ ಸ್ಪರ‍್ದೆ ಸಹ ಅಯೋಜಿಸಲಾಗುತ್ತದೆ. ಜವೋ ಪರ‍್ವತದ ಬುಡದಲ್ಲಿ ಕೊಕೇಶಿ ಗೊಂಬೆಗಳ ವಸ್ತುಸಂಗ್ರಹಾಲಯವಿದೆ. ಈ ವಸ್ತು ಸಂಗ್ರಹಾಲಯದಲ್ಲಿ 5000ಕ್ಕೂ ಹೆಚ್ಚು ಸಾಂಪ್ರದಾಯಿಕ ಹಾಗೂ ಸಮಕಾಲೀನ ಕೊಕೇಶಿ ಗೊಂಬೆಗಳ ಸಂಗ್ರಹವಿದೆ. ಎರಡು ಶತಮಾನದಶ್ಟು ಹಳೆಯ ಕೊಕೇಶಿ ಗೊಂಬೆಗಳ ಸಂಗ್ರಹ ಗೊಂಬೆಗಳ ವಿಕಾಸವನ್ನು ತೆರೆದಿಡುತ್ತದೆ. ಇದರೊಂದಿಗೆ ಶತಮಾನಗಳ ಹಿಂದೆ ಯಾವುದೇ ಯಂತ್ರೋಪಕರಣದ ಸಹಾಯವಿಲ್ಲದ ಸಮಯದಲ್ಲಿ, ಇದರ ಕೆತ್ತನೆ ವಿನ್ಯಾಸ ಮತ್ತು ತಯಾರಿಕೆಯ ಕೌಶಲ್ಯವನ್ನು ಯಾವ ರೀತಿಯಲ್ಲಿ ಸಾದಿಸಿದ್ದರು ಎಂಬುದನ್ನು ಸಹ ಈ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: pixabay.com, thejapaneseshop.co.uk, mymodernmet.com, coco-papaya.com, booksandbao.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: