ಸಾನಿಯಾ ಮಿರ‍್ಜಾ: ಬಾರತದ ಅಪ್ರತಿಮ ಟೆನ್ನಿಸ್ ಆಟಗಾರ‍್ತಿ

– ರಾಮಚಂದ್ರ ಮಹಾರುದ್ರಪ್ಪ.

ಬಾರತದಲ್ಲಿ ಟೆನ್ನಿಸ್ ಆಟಗಾರರಾಗಲು ಬೇಕಾದ ಉನ್ನತ ಮಟ್ಟದ ಸೌಲಬ್ಯಗಳು, ತರಬೇತುದಾರರು ಇಲ್ಲದೆ ಹೋದರೂ ದಶಕಗಳಿಂದಲೂ ವಿಜಯ್ ಅಮ್ರಿತ್ ರಾಜ್, ಲಿಯಾಂಡರ‍್ ಪೇಸ್, ಮಹೇಶ್ ಬೂಪತಿ ರಂತಹ ದಿಗ್ಗಜ ಆಟಗಾರರು ಬೆಳಕಿಗೆ ಬಂದದ್ದು ವಿಶೇಶ. ಆದರೆ ಹೆಂಗಸರ ಟೆನ್ನಿಸ್ ಇತಿಹಾಸದಲ್ಲಿ ಇತ್ತೀಚಿನ ದಿನಗಳ ವರೆಗೂ ಆ ದರ‍್ಜೆಯ ಒಬ್ಬ ಟೆನ್ನಿಸ್ ಆಟಗಾರ‍್ತಿಯನ್ನು ಬಾರತ ಕಂಡಿರಲಿಲ್ಲ. ಈ ಕೊರತೆಯನ್ನು ನೀಗಿಸಿದವರೇ ದೇಶ ಕಂಡ ಶ್ರೇಶ್ಟ ಟೆನ್ನಿಸ್ ಆಟಗಾರ‍್ತಿ ಸಾನಿಯಾ ಮಿರ‍್ಜಾ. ಈ ಹಿಂದೆ ಯಾರೂ ಮಾಡದ ಸಾದನೆ ಮಾಡಿ, ದಶಕಗಳ ಕಾಲ ಎಲ್ಲರನ್ನೂ ರಂಜಿಸಿ, ಹಲವಾರು ಗ್ರ‍್ಯಾಂಡ್ಸ್ಲಾಮ್ ಗಳೊಟ್ಟಿಗೆ ಅಂತರಾಶ್ಟ್ರೀಯ ಪಂದ್ಯಾವಳಿಗಳಲ್ಲಿ ಬಾರತದ ಪರ ಸಾಕಶ್ಟು ಪದಕಗಳನ್ನು ಗೆದ್ದು, ಯುವ ಪೀಳಿಗೆಯನ್ನು ಸಾನಿಯಾ ಟೆನ್ನಿಸ್ ನತ್ತ ಸೆಳೆದದ್ದು ಈಗ ಇತಿಹಾಸ. ಇಂದು ಪುಟ್ಟ ಹೆಣ್ಣು ಮಕ್ಕಳು ಟೆನ್ನಿಸ್ ಆಟಗಾರರಾಗಲು ದೊಡ್ಡ ಸ್ಪೂರ‍್ತಿ ಎಂದರೆ ಅದು ಸಾನಿಯಾ ಮಿರ‍್ಜಾ. ಆ ಬಗೆಯ ಪ್ರಬಾವ ಸಾನಿಯಾ ತಮ್ಮ ರಾಕೆಟ್ ಚಳಕದಿಂದ ಬೀರಿದ್ದಾರೆ. ಯಾರೂ ಸಾಗದ ಹಾದಿಯಲಿ ಸಾಗಿ ಅವರು ಕಂಡ ಯಶಸ್ಸು ಬಾರತದಲ್ಲಿ ಟೆನ್ನಿಸ್ ಬೆಳವಣಿಗೆಗೆ ನೀರೆರೆದಿದೆ ಎಂದರೆ ತಪ್ಪಾಗಲಾರದು!

ಹುಟ್ಟು- ಎಳವೆಯ ಟೆನ್ನಿಸ್ ಒಲವು

ನವೆಂಬರ್ 15, 1986 ರಂದು ಇಮ್ರಾನ್ ಮಿರ‍್ಜಾ ಹಾಗೂ ನಸೀಮಾರ ಮೊದಲ ಮಗಳಾಗಿ ಸಾನಿಯಾ ಬಾಂಬೆಯಲ್ಲಿ ಹುಟ್ಟಿದರು. ಸಾನಿಯಾ ಪುಟ್ಟ ಮಗುವಾಗಿರುವಾಗ ಅಮೇರಿಕಾಗೆ ಬದುಕು ಕಟ್ಟಿಕೊಳ್ಳಲು ಹೋಗಿದ್ದ ಮಿರ‍್ಜಾ ಕುಟುಂಬ, ಸಾನಿಯಾರ ಟೆನ್ನಿಸ್ ಪ್ರೀತಿಗೆ ಬೆಂಬಲವಾಗಿ ನಿಂತಿತು. ನಾಲ್ಕು ವರ‍್ಶದ ಸಾನಿಯಾ ಮೊದಲ ಬಾರಿಗೆ ಟೆನ್ನಿಸ್ ರಾಕೆಟ್ ಹಿಡಿದಾಗ ಅವರ ತಂದೆಗೆ ಮಗಳಲ್ಲಿ ಏನೋ ವಿಶೇಶ ಪ್ರತಿಬೆಯಿದೆ ಎಂದೆನಿಸುತ್ತದೆ. ಆದರೆ ಅಲ್ಲಿ ಟೆನ್ನಿಸ್ ಕಲಿಕೆಗೆ ತಗಲುವ ಕರ‍್ಚು ಬರಿಸಲಾಗದಶ್ಟು ದುಬಾರಿ ಎಂಬುದನ್ನು ಮನಗಂಡು ಮಗಳನ್ನು ಟೆನ್ನಿಸ್ ಆಟಗಾರ‍್ತಿಯಾನ್ನಾಗಿ ಮಾಡುವ ಪಣತೊಟ್ಟು ಇಮ್ರಾನ್ ಮಿರ‍್ಜಾ ಕುಟುಂಬ 1992 ರಲ್ಲಿ ಬಾರತಕ್ಕೆ ಮರಳಿ ಹೈದರಾಬಾದ್ ನಲ್ಲಿ ನೆಲೆಸುತ್ತದೆ. ಅಲ್ಲಿನ ನಸರ್ ಶಾಲೆಗೆ ಸೇರಿದ ಸಾನಿಯಾಗೆ ಶ್ರೀಕಾಂತ್ ಮೊದಲ ಕೋಚ್ ಆದರು. ತಂದೆಯ ಮಾರ‍್ಗದರ‍್ಶನದೊಟ್ಟಿಗೆ ಕೋಚ್ ನ ಗರಡಿಯಲ್ಲಿ ಸಾನಿಯಾ ಆಟದ ಮೊದಲ ಪಟ್ಟುಗಳನ್ನು ಕಲಿತರು. ಅಲ್ಲಿಂದ ವರುಶದಿಂದ ವರುಶಕ್ಕೆ ಪಕ್ವಗೊಳ್ಳುತ್ತಾ ಹೋದ ಸಾನಿಯಾ ಅಂತರ-ಶಾಲಾ ಪೋಟಿಗಳಲ್ಲಿ ಮೊದಲಿಗರಾದರು. ಆ ವಯಸ್ಸಿನಲ್ಲೇ ಬಲಶಾಲಿ ಪೋರ್ ಹ್ಯಾಂಡ್ ಹೊಡೆತ ಹೊಂದಿದ್ದ ಬಲಗೈ ಆಟಗಾರ‍್ತಿ ಸಾನಿಯಾಗೆ ಹೈದರಾಬಾದ್ ನಲ್ಲಿ ಸವಾಲೊಡ್ಡಬಲ್ಲ ಒಬ್ಬ ಆಟಗಾರ‍್ತಿಯೂ ಇರುವುದಿಲ್ಲ. ಕಿರಿಯರ ಒಟ್ಟು10 ಸಿಂಗಲ್ಸ್ ಪಂದ್ಯಾವಳಿಗಳು ಹಾಗೂ 13 ಡಬಲ್ಸ್ ಪಂದ್ಯಾವಳಿಗಳನ್ನು ಗೆದ್ದ ಅವರು 2001 ರಲ್ಲಿ ITF ಸರ‍್ಕಿಟ್ ನಲ್ಲಿ ಆಡಲು ಮೊದಲು ಮಾಡಿ 2002 ರಲ್ಲಿ 3 ಸಿಂಗಲ್ಸ್ ಪಂದ್ಯಾವಳಿ ಮತ್ತು 1 ಡಬಲ್ಸ್ ಪಂದ್ಯಾವಳಿಯನ್ನು ಗೆದ್ದರು. ಕಡೆಗೆ 2003 ರಲ್ಲಿ ಕಿರಿಯರ ವಿಂಬಲ್ಡನ್ ಡಬಲ್ಸ್ ಪೋಟಿಯನ್ನು ಗೆದ್ದು ದಾಕಲೆ ಮಾಡಿದರು. ಈ ಗೆಲುವಿನ ಬಳಿಕ ಸಾನಿಯಾರ ಹೆಸರು ಎಲ್ಲೆಡೆ ಜನಪ್ರಿಯಗೊಂಡಿತು. ಆ ಬಳಿಕ ಮೊದಲ ಬಾರಿಗೆ ವೈಲ್ಡ್ ಕಾರ‍್ಡ್ ಮೂಲಕ WTA ಪಂದ್ಯಾವಳಿಯಲ್ಲಿ ಆಡಲು ಮೊದಲು ಮಾಡಿದ ಅವರು ಒಂದೇ ವರ‍್ಶದಲ್ಲಿ ಗ್ರಾಂಡ್ಸ್ಲಾಮ್ ಆಡಲು ಬೇಕಾದ ಪಾಯಿಂಟ್ ಗಳನ್ನು ಸಂಪಾದಿಸಿ ಅರ‍್ಹತೆ ಪಡೆದರು. ಶ್ರೀಕಾಂತ್ ಹೊರತಾಗಿ ಸಿ.ಜಿ.ಕೆ ಬೂಪತಿ ಹಾಗೂ ಬಾಬ್ ಬ್ರೆಟ್ ಕೂಡ ಕೋಚ್ ಗಳಾಗಿ ಸಾನಿಯಾರ ಆಟ ಪಕ್ವಗೊಳ್ಳುವಳ್ಳಿ ತಮ್ಮ ಕೊಡುಗೆ ನೀಡಿದರು.

ಸಾನಿಯಾರ ವ್ರುತ್ತಿ ಬದುಕು

2005 ರಲ್ಲಿ ತಮ್ಮ ತವರಿನಲ್ಲಿ ಹೈದರಾಬಾದ್ ಓಪನ್ ಅನ್ನು (6-4, 5-7, 6-3) ರಿಂದ ಗೆದ್ದು ತಮ್ಮ ವ್ರುತ್ತಿ ಬದುಕಿನ ಚೊಚ್ಚಲ WTA ಪಂದ್ಯಾವಳಿಯನ್ನು ತೆಕ್ಕೆಗೆ ಹಾಕಿಕೊಂಡ 18ರ ಹರೆಯದ ಸಾನಿಯಾ ಮುಂಬರುವ ಗ್ರ‍್ಯಾಂಡ್ಲ್ಯಾಮ್ ಸವಾಲುಗಳಿಗೆ ಅಣಿಯಾದರು. 2005ರ ಆಸ್ಟ್ರೇಲಿಯನ್ ಓಪನ್ ನಲ್ಲಿ ಮೂರನೇ ಸುತ್ತು ತಲುಪಿ ಸೆರೆನಾ ವಿಲಿಯಮ್ಸ್ ಎದುರು ಸೋತ ಅವರು ಅದೇ ವರುಶದ ಯೂ.ಎಸ್ ಓಪನ್ ನಲ್ಲಿ ನಾಲ್ಕನೇ ಸುತ್ತಿನಲ್ಲಿ ಮರಿಯಾ ಶರಪೋವಾ ಎದುರು ಸೋತರು. ಇದು ಗ್ರ‍್ಯಾಂಡ್ಲ್ಯಾಮ್ ನ ಸಿಂಗಲ್ಸ್ ಪೋಟಿಗಳಲ್ಲಿ ಅವರ ಶ್ರೇಶ್ಟ ಸಾದನೆಯಾಗಿ ಕೊನೆಗೊಂಡರೂ ಡಬಲ್ಸ್ ಪೋಟಿಗಳು ಹಾಗೂ ಹಲವಾರು WTA ಪಂದ್ಯಾವಳಿಗಳಲ್ಲಿ ಸಾನಿಯಾರ ಗೆಲುವಿನ ನಾಗಾಲೋಟ ಮುಂದುವರೆಯಿತು. ಸಿಂಗಲ್ಸ್ ಪೋಟಿಗಳಲ್ಲಿ ಸ್ವೆಟ್ಲೆನಾ ಕುಜ್ನೆತ್ಸೋವರಂತಹ ಉತ್ತಮ ಆಟಗಾರ‍್ತಿಯರನ್ನು, ಮರಿಯೊನ್ ಬರ‍್ತೋಲಿ, ವಿಕ್ಟೊರಿಯಾ ಅಜೆರಿಂಕಾರಂತಹ ಗ್ರ‍್ಯಾಂಡ್ಸ್ಲಾಮ್ ವಿಜೇತರನ್ನು ಹಾಗೂ ಮಾಜಿ ಅಗ್ರಶ್ರೇಯಾಂಕಿತ ಮಾರ‍್ಟಿನಾ ಹಿಂಗಿಸ್ ರಂತಹ ದಿಗ್ಗಜ ಆಟಗಾರ‍್ತಿಯರನ್ನು ಸೋಲಿಸಿದ್ದು ಸಾನಿಯಾರ ವ್ರುತ್ತಿಬದುಕಿನ ಉತ್ತುಂಗ ಎಂದೇ ಹೇಳಬೇಕು. 2007ರಲ್ಲಿ ಸಿಂಗಲ್ಸ್ ನಲ್ಲಿ WTA ನ 27 ನೇ ರಾಂಕ್ ಗೆ ಅವರು ಜಿಗಿದಿದ್ದು ಬಾರತದ ಟೆನ್ನಿಸ್ ಆಟಗಾರರೊಬ್ಬರ ಶ್ರೇಶ್ಟ ಸಾದನೆಯಾಗಿ ಇಂದಿಗೂ ಉಳಿದಿದೆ. ಆ ಬಳಿಕ ಪದೇ ಪದೇ ಕಾಡುತ್ತಿದ್ದ ಗಾಯದ ಸಮಸ್ಯೆ, ಶಸ್ತ್ರ ಚಿಕಿತ್ಸೆ ಹಾಗೂ ಸಿಂಗಲ್ಸ್ ಪೋಟಿಯ ಒತ್ತಡವನ್ನು ಅರಿತು ಇನ್ನು ಮುಂದೆ ಕೇವಲ ಡಬಲ್ಸ್ ಪೋಟಿಯಲ್ಲಿ ಮಾತ್ರ ಕಣಕ್ಕಿಳಿಯುವುದಾಗಿ ಸಾನಿಯಾ ತೀರ‍್ಮಾನ ಕೈಗೊಂಡರು.

2009ರಲ್ಲಿ ಬಾರತದ ಮಹೇಶ್ ಬೂಪತಿ ಅವರೊಂದಿಗೆ ಆಸ್ಟ್ರೇಲಿಯಾ ಓಪನ್ ಮಿಕ್ಸೆಡ್ ಡಬಲ್ಸ್ ಗೆದ್ದು ತಮ್ಮ ಮೊದಲ ಗ್ರ‍್ಯಾಂಡ್ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡ ಸಾನಿಯಾ ಆ ನಂತರ 2012 ರ ಪ್ರೆಂಚ್ ಓಪನ್ ಅನ್ನು ಕೂಡ ಬೂಪತಿ ಅವರೊಂದಿಗೆ ಗೆದ್ದರು. 2014 ರ ಯೂ.ಎಸ್ ಓಪನ್ ಅನ್ನು ಬ್ರೆಜಿಲ್ ನ ಬ್ರೂನೋ ಸೋರ‍್ಸ್ ರೊಂದಿಗೆ ಆಡಿ ತಮ್ಮ ಮೂರನೇ ಮಿಕ್ಸೆಡ್ ಡಬಲ್ಸ್ ಗ್ರ‍್ಯಾಂಡ್ಸ್ಲಾಮ್ ಅನ್ನು ಸಾನಿಯಾ ಗೆದ್ದರು. ನಂತರ 2015 ರಲ್ಲಿ ಹೆಂಗಸರ ಡಬಲ್ಸ್ ಪೋಟಿಯಲ್ಲಿ ಮಾರ‍್ಟಿನಾ ಹಿಂಗಿಸ್ ರ ಜೋಡಿಯಾದ ಸಾನಿಯಾ ಸಾಲುಸಾಲು ಗೆಲುವು ದಾಕಲಿಸುತ್ತಾ ಹೋದರು. ಆ ವೇಳೆ ಸಾನಿಯಾ ಡಬಲ್ಸ್ ಪೋಟಿಯ ಅಗ್ರಶ್ರೇಯಾಂಕಿತ ರ‍್ಯಾಕಿಂಗ್ ಕೂಡ ಪಡೆದದ್ದು ವಿಶೇಶ. 2015 ರ ವಿಂಬಲ್ಡನ್ ಮತ್ತು ಯೂ.ಎಸ್ ಓಪನ್ ಗೆದ್ದ ಬಳಿಕ 2016 ರ ಆಸ್ಟ್ರೇಲಿಯಾ ಓಪನ್ ಗೆದ್ದ ಈ ಜೋಡಿ ಸತತ ಮೂರು ಗ್ರ‍್ಯಾಂಡ್ಸ್ಲಾಮ್ ಗೆದ್ದು ಅಪರೂಪದ ದಾಕಲೆ ಮಾಡಿತು. ಈ ಗೆಲುವಿನಿಂದ ಸಾನಿಯಾರ ಗ್ರ‍್ಯಾಂಡ್ಸ್ಲಾಮ್ ಎಣಿಕೆ 6ಕ್ಕೆ ತಲುಪಿತು. ಸಾನಿಯಾ- ಹಿಂಗಿಸ್ ರ ಜೋಡಿ ಸತತ 44 ಪಂದ್ಯಗಳನ್ನು ಗೆದ್ದದ್ದು ಇಂದಿಗೂ ದಾಕಲೆಯೇ.

ಗ್ರ‍್ಯಾಂಡ್ಸ್ಲಾಮ್ ಹೊರತಾಗಿ ಒಟ್ಟು ಡಬಲ್ಸ್ ನಲ್ಲಿ 43, ಸಿಂಗಲ್ಸ್ ನಲ್ಲಿ 1 ಮತ್ತು ಮಿಕ್ಸೆಡ್ ಡಬಲ್ಸ್ ನಲ್ಲಿ 3 WTA ಪಂದ್ಯಾವಳಿಗಳನ್ನು ಕೂಡ ಸಾನಿಯಾ ಗೆದ್ದಿದ್ದಾರೆ. ಇನ್ನು ಬಾರತದ ಪರ 2003ರ ಆಪ್ರೋ-ಏಶಿಯನ್ ಕ್ರೀಡಾಕೂಟದಲ್ಲಿ 4 ಬಂಗಾರದ ಪದಕ ಗೆದ್ದ ಅವರು 2002ರ ಏಶಿಯನ್ ಗೇಮ್ಸ್ ನ ಮಿಕ್ಸೆಡ್ ಡಬಲ್ಸ್ ಪೋಟಿಯಲ್ಲಿ ಕಂಚಿನ ಪದಕ ಗೆದ್ದರು. ಬಳಿಕ 2006 ರ ಏಶಿಯನ್ ಗೇಮ್ಸ್ ನಲ್ಲಿ 1 ಬಂಗಾರ ಮತ್ತು 2 ಬೆಳ್ಳಿ ಪದಕಗಳು, 2010 ರ ಏಶಿಯನ್ ಗೇಮ್ಸ್ ನಲ್ಲಿ 1 ಬೆಳ್ಳಿ ಮತ್ತು 1 ಕಂಚಿನ ಪದಕ, 2014 ರ ಏಶಿಯನ್ ಗೇಮ್ಸ್ ನಲ್ಲಿ 1 ಬಂಗಾರ ಮತ್ತು 1 ಕಂಚಿನ ಪದಕ ಗೆದ್ದು ಟೆನ್ನಿಸ್ ನಲ್ಲಿ ಬಾರತದ ಪದಕ ಬೇಟೆಯ ಮುಕ್ಯ ರೂವಾರಿಯಾದರು. 2010ರ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಸಾನಿಯಾ 1 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಬಾರತಕ್ಕೆ ಗೆಲ್ಲಿಸಿ ಕೊಟ್ಟರು. ಇದರ ಹೊರತಾಗಿ ಒಲಂಪಿಕ್ಸ್ ನಲ್ಲೂ ಬಾರತವನ್ನು ಸಾನಿಯಾ ಪ್ರತಿನಿದಿಸಿದ್ದಾರೆ. ಡೇವಿಸ್ ಕಪ್, ಪೆಡ್ ಕಪ್, ಹಾಪ್ಮಾನ್ ಕಪ್ ನಲ್ಲೂ ಬಾರತದ ಪರ ಕಣಕ್ಕಿಳಿದು ಸಾನಿಯಾ ತಕ್ಕಮಟ್ಟಿನ ಯಶಸ್ಸು ಪಡೆದಿದ್ದಾರೆ. ಒಲಂಪಿಕ್ಸ್, ಏಶಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ನಂತಹ ಅಂತರಾಶ್ಟ್ರೀಯ ಪೋಟಿಗಳಿಗೆ ಬಾರತದ ಪರ ಅಣಿಯಾಗುವ ನಿಟ್ಟಿನಿಂದ ಸಾನಿಯಾ ಎಶ್ಟೋ WTA ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳದೇ ಮಾದರಿ ಕೂಡ ಆಗಿದ್ದರು. ಟೆನ್ನಿಸ್ ವಯಕ್ತಿಕ ಆಟವಾಗಿದ್ದರೂ ಬಾರತದ ಪರ ಆಡುವುದು ನನಗೆ ಹೆಚ್ಚಿನ ಹೆಮ್ಮೆ ತರುವ ಸಂಗತಿ ಎಂದು ಸಾನಿಯಾ ಹೇಳಿಕೊಂಡಿದ್ದುಂಟು. ಬಾರತದ ಹೆಣ್ಣು ಮಕ್ಕಳ ಟೆನ್ನಿಸ್ ಗೆ ಸಾನಿಯಾ ಅಕ್ಶರಶಹ ಬರವಸೆಯ ಬೆಳಕಾಗಿದ್ದರು.

ಸಾನಿಯಾ ಆಟ, ಚಲ

ಆಕ್ರಮಣಕಾರಿ ಬೇಸ್ಲೈನ್ ಆಟಗಾರ‍್ತಿಯಾಗಿರುವ ಸಾನಿಯಾರ ದೊಡ್ಡ ಶಕ್ತಿ ಅವರ ಪೋರ್ ಹ್ಯಾಂಡ್. ಟೆನ್ನಿಸ್ ಇತಿಹಾಸದ ಐದು ಅತ್ಯಂತ ಬಲಶಾಲಿ ಪೋರ್ ಹ್ಯಾಂಡ್ ಹೊಂದಿರುವ ಆಟಗಾರ‍್ತಿಯರ ಪೈಕಿ ಬಾರತದ ಸಾನಿಯಾ ಕೂಡ ಒಬ್ಬರು ಎನ್ನುವುದು ಹೆಗ್ಗಳಿಕೆ. ಎಳವೆಯಲ್ಲಿ ಬೇರೆ ಬಗೆಯ ಸೆರ‍್ವ್ ತಂತ್ರಗಾರಿಕೆಯನ್ನು ರೂಡಿಸಿಕೊಂಡಿದ್ದ ಅವರು ವ್ರುತ್ತಿಪರರಾದ ಮೇಲೆ ಅದನ್ನು ಮಾರ‍್ಪಡಿಸಿಕೊಳ್ಳಲಾಗದೆ, ಅದೇ ಅವರ ಆಟದ ದೊಡ್ಡ ಕುಂದಾಗಿ ಪರಿಣಮಿಸಿತು. ನಿರಂತರ ವಾಲೀ ಆಟವನ್ನು ಆಡುತ್ತಾ ವಿನ್ನರ್ ಗಳನ್ನು ಗಳಿಸುವ ಸಾನಿಯಾರ ಬ್ಯಾಕ್ ಹ್ಯಾಂಡ್ ಕೂಡ ತುಂಬಾ ಪರಿಣಾಮಕ. ಕೋರ‍್ಟ್ನ ಕೋನೆಗಳಲ್ಲಿ ವೇಗವಾಗಿ ಓಡಾಡಿ ಚೆಂಡು ಹಿಂದಿರುಗಿಸುವಲ್ಲಿ ಸಾನಿಯಾ ಹೆಚ್ಚು ಎಡವಿದ್ದುಂಟು. ಹಾರ‍್ಡ್ ಕೋರ‍್ಟ್ಗಳಲ್ಲಿ ಹೆಚ್ಚು ಯಶಸ್ಸು ಕಂಡಿರುವ ಅವರು ಬೇರೆ ಬಗೆಯ ಮೇಲ್ಮಯ್ ಅಂಕಣಗಳಲ್ಲೂ ಸಾಕಶ್ಟು ಗೆಲುವು ಪಡೆದಿದ್ದಾರೆ. ಸಾನಿಯಾ ತಮ್ಮ ಆಟದ ದಿನಗಳಾದ್ಯಂತ ಅಂಕಣದ ಹೊರಗೂ ನಾನಾ ಸವಾಲು, ಟೀಕೆ ಹಾಗೂ ವಿವಾದಗಳನ್ನು ಎದುರಿಸಬೇಕಾದ್ದು ದುರಂತವೇ ಸರಿ. ಸಾಂಪ್ರದಾಯಿಕ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ-ಬೆಳೆದ ಸಾನಿಯಾರ ಟೆನ್ನಿಸ್ ಉಡುಗೆ ಸರಿಯಾದುದ್ದಲ್ಲ ಎಂದು ದಾರ‍್ಮಿಕ ಮೂಲಬೂತವಾದಿಗಳು ಅವರ ಮೇಲೆ ಪತ್ವಾ ಹೊರಡಿಸಿದ್ದರು. ಚಾಯಾಗ್ರಾಹಕನೊಬ್ಬನ ಕುಟಿಲತನದಿಂದ ರಾಶ್ಟ್ರದ್ವಜ ಅವಮಾನದ ಆರೋಪದ ಮೇಲೆ ಸಾನಿಯಾ ಸಮನ್ಸ್ ಕೂಡ ಎದುರಿಸಬೇಕಾಯಿತು. ಇದಲ್ಲದೆ ಮದುವೆಯಂತಹ ಅವರ ವಯಕ್ತಿಕ ವಿಶಯಗಳನ್ನೂ ಎಳೆದು ತಂದು ವಿವಾದಗಳನ್ನು ಸ್ರುಶ್ಟಿಸಲಾಯಿತು. ಆದರೆ ಎದೆಗುಂದದ ಸಾನಿಯಾ ಇವೆಲ್ಲವನ್ನೂ ಹಿಮ್ಮೆಟ್ಟಿ ಟೆನ್ನಿಸ್ ಅಂಕಣದಲ್ಲೇ ಟೀಕಾಕಾರರಿಗೆ ಉತ್ತರ ಕೊಡುತ್ತಾ ಅಕ್ಶರಶಹ ಚಲದಂಕಮಲ್ಲೆಯಂತೆ ಬೆಳೆಯುತ್ತಾ ಹೋದರು.

ಸಾನಿಯಾರಿಗೆ ಒಲಿದು ಬಂದ ಪ್ರಶಸ್ತಿ-ಪುರಸ್ಕಾರಗಳು

2004 ರಲ್ಲಿ ಅರ‍್ಜುನ ಪ್ರಶಸ್ತಿ ಪಡೆದ ಸಾನಿಯಾ ಬಳಿಕ 2006 ರಲ್ಲಿ ಕೇಂದ್ರ ಸರ‍್ಕಾರದ ಪದ್ಮಶ್ರೀ ಗೌರವಕ್ಕೆ ಬಾಜನರಾದರು. 2015ರಲ್ಲಿ ಬಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಕೇಲ್ ರತ್ನ ಪಡೆದ ಅವರು 2016 ರಲ್ಲಿ ಪ್ರತಿಶ್ಟಿತ ಪದ್ಮಬೂಶಣ ಹಿರಿಮೆಗೂ ಪಾತ್ರರಾದರು. ಇದಲ್ಲದೆ 2014ರಲ್ಲಿ ಹುಟ್ಟಿದ ಹೊಸ ರಾಜ್ಯ ತೆಲಂಗಾಣದ ರಾಯಬಾರಿಯಾಗಿ ಅಲ್ಲಿನ ರಾಜ್ಯ ಸರ‍್ಕಾರ ಅವರನ್ನು ನೇಮಿಸಿತು. 2015ರಲ್ಲಿ ಬಿಬಿಸಿ ಬಿಡುಗಡೆ ಮಾಡಿದ ಪ್ರಪಂಚದ 100 ಸ್ಪೂರ‍್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಸಾನಿಯಾರಿಗೆ ಎಡೆ ನೀಡಿತು. ತಾಯಿಯಾದ ಬಳಿಕ ಇತ್ತೀಚಿಗೆ 2020ರಲ್ಲಿ ಟೆನ್ನಿಸ್ ಅಂಕಣಕ್ಕೆ ಮರಳಿದ್ದನ್ನು ಗಮನಿಸಿ ಪೆಡ್ ಕಪ್ ಹಾರ‍್ಟ್ ಪ್ರಶಸ್ತಿ ಕೂಡ ಅವರಿಗೆ ನೀಡಲಾಯಿತು.

ಸಾನಿಯಾ ಎಂಬ ಗಟ್ಟಿಗಿತ್ತಿ

ಸಾನಿಯಾ ಮಿರ‍್ಜಾರಿಗೂ ಮುನ್ನ ಮತ್ತು ಬಳಿಕ ಅವರ ದರ‍್ಜೆಯ ಅಳವುಳ್ಳ ಟೆನ್ನಿಸ್ ಆಟಗಾರ‍್ತಿಯನ್ನು ಬಾರತ ಕಂಡಿಲ್ಲ. ಈ ಒಂದು ಅಂಶ ಸಾಕು ಸಾನಿಯಾರ ಶ್ರೇಶ್ಟತೆಯನ್ನು ಸಾರಿ ಹೇಳೋಕೆ. ಟೆನ್ನಿಸ್ ನಂತಹ ತೀವ್ರ ಪೈಪೋಟಿಯ ಆಟದಲ್ಲಿ ಬಾರತದಿಂದ ಒಬ್ಬರು ಹಲವಾರು ಗ್ರ‍್ಯಾಂಡ್ಸ್ಲಾಮ್ ಗಳನ್ನು ಗೆದ್ದು ಪ್ರಪಂಚದಾದ್ಯಂತ ಚಾಪು ಮೂಡಿಸಿದರೆಂದರೆ ಅವರು ದಿಗ್ಗಜರೆಂದೇ ಹೇಳಬೇಕು. ಈ ಅಳತೆಗೋಲಿನಿಂದ ನೋಡಿದರೆ ಸಾನಿಯಾರ ಸಾದನೆ ಅದ್ವಿತೀಯ. ಕೆಲವೊಮ್ಮೆ ಅವರಿಗೆ ಸಿಗಬೇಕಾದ ಮನ್ನಣೆ ಬಾರತದಲ್ಲಿ ಸಿಕ್ಕಿಲ್ಲ ಎಂದೆನಿಸದೇ ಇರದು. ಇದರ ಕುರಿತು ಎಂದೂ ತಮ್ಮ ಬೇಸರವನ್ನಾಗಲಿ, ಬೆಂಬಲದ ಕೊರತೆಯನ್ನಾಗಲಿ ತೋರಿಸಿಕೊಳ್ಳದ ಅವರು ಹಲವಾರು ಬಾರಿ ಗಾಯದ ಸಮಸ್ಯೆಗಳನ್ನೂ ಎದುರಿಸಿ ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ರಾಕೆಟ್ ಚಳಕದಿಂದ ಟೆನ್ನಿಸ್ ಅಂಕಣದಲ್ಲಿ ಇತಿಹಾಸ ನಿರ‍್ಮಿಸಿದರು. ಕಡೆಗೆ 35ರ ಹರೆಯದ ಸಾನಿಯಾ 2022 ರ ಜನವರಿಯಲ್ಲಿ ಇದೇ ನನ್ನ ಕಡೇ ಟೆನ್ನಿಸ್ ರುತುವಾಗಲಿದೆ ಎಂದು ಆಟದಿಂದ ದೂರ ಸರಿಯುತ್ತಿರುವುದಾಗಿ ಹೇಳಿದರು. ಅಲ್ಲಿಗೆ ಬಾರತದ ಟೆನ್ನಿಸ್ ಪರಂಪರೆಯ ಒಂದು ದೊಡ್ಡ ಕೊಂಡಿ ಕಳಚಿದಂತಾಯಿತು. ಸಾನಿಯಾ ತಮ್ಮ ಆಟದಿಂದ ಟೆನ್ನಿಸ್ ಅನ್ನು ಅದರಲ್ಲೂ ಮುಕ್ಯವಾಗಿ ಹೆಣ್ಣು ಮಕ್ಕಳ ಪೋಟಿಯನ್ನು ದೇಶದ ಮೂಲೆಮೂಲೆಗೆ ತಲುಪುವಂತೆ ಮಾಡಿದ್ದು ಸುಳ್ಳಲ್ಲ. ಇಂದು ಏಳೆಂಟರ ಹರೆಯದ ಪುಟ್ಟ ಮಕ್ಕಳು ಟೆನ್ನಿಸ್ ರಾಕೆಟ್ ಹಿಡಿಯಲು ಸಾನಿಯಾರೇ ಸ್ಪೂರ‍್ತಿ ಎಂದರೆ ತಪ್ಪಾಗಲಾರದು. ಸಾನಿಯಾ ಹಾಕಿಕೊಟ್ಟ ಅಡಿಪಾಯದ ಮೇಲೆ ಮುಂದೆಯೂ ಅವರ ದರ‍್ಜೆಯ ಟೆನ್ನಿಸ್ ಆಟಗಾರ‍್ತಿಯರು ಬಾರತದಿಂದ ಹೊರಹೊಮ್ಮಲಿ ಎಂಬುದೇ ಎಲ್ಲರ ಹೆಬ್ಬಯಕೆ. ಬಾರತದಲ್ಲಿ ಟೆನ್ನಿಸ್ ಆಟಕ್ಕೆ ಸಾನಿಯಾ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯದೆ ಗೌರವಿಸೋಣ. ಏಕೆಂದರೆ ಇನ್ನೊಬ್ಬರು ಸಾನಿಯಾ ಮಿರ‍್ಜಾರನ್ನು ಕಾಣುವುದು ಅಸಾದ್ಯ!

(ಚಿತ್ರ ಸೆಲೆ: wikimedia.org, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: