ಬೇಸಿಗೆ: ಎಳವೆಯ ನೆನಪುಗಳು

– ನಿತಿನ್ ಗೌಡ.

ಬೇಸಿಗೆ ಬಂದೊಡನೆ ಮೊದಲಿಗೆ ನೆನಪಾಗುವುದು, ಬೇಸಿಗೆಯ ರಜೆ ದಿನಗಳನ್ನು ನಮ್ಮ ಅಜ್ಜನ ಮನೆಯಲ್ಲಿ ಕಳೆದ ಚಿಕ್ಕಂದಿನ ನೆನಪುಗಳು. ನಮ್ಮ ಊರು ಹಳ್ಳಿಯಾದ್ದರಿಂದ, ಬೇಸಿಗೆ ರಜೆಗೆ ಅಲ್ಲಿ ತೆರಳಿದಾಗ ಒಂದೆರಡು ತಿಂಗಳಾದರೂ ಅಲ್ಲಿಯ ಜೀವನದ ಪರಿಚಯ ಸಿಗುತಿತ್ತು. ವರುಶವಿಡೀ ಆ ಬೇಸಿಗೆ ರಜೆಗಾಗಿ ಕಾಯುತ್ತಿರುವುದರಲ್ಲಿ, ಏನೋ‌ ಒಂತರಾ ಕಾತರತೆ. ಬೇಸಿಗೆಯಲ್ಲಿ ಊರಿನ ಹೊಳೆಯ ನೀರಿನ ಮಟ್ಟ ತಗ್ಗಿರುತ್ತಿದ್ದರಿಂದ, ಮೀನು ಹಿಡಿಯಲು, ಏಡಿ ಹಿಡಿಯಲು ಗೆಳೆಯರೊಡನೆ ಹೋಗುತ್ತಿದ್ದ ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹೊಳೆಗೆ ಕಟ್ಟು ಕಟ್ಟಿ ,ನೀರು ಗೋರಿ ಮೀನು ಹಿಡಿಯಲಾಗುತ್ತಿತ್ತು. ಇನ್ನು ಯಾವಾಗ ಊರಿಗೆ ಹೋದರೂ ಆಯಾ ಸೀಸನ್‌ಗೆ ಯಾವುದಾದರೂ ಒಂದು ಹಣ್ಣು ಸವಿಯಲು ಸಿಗುತಿತ್ತು. ಬೇಸಿಗೆಯಲ್ಲಿ ಮಾವಿನ ಹಣ್ಣು, ಪೇರಲೆ, ಗೇರು ಹಣ್ಣು, ಹಲಸು, ಅನಾನಾಸು, ಸೀತಾಪಲ ಇಬ್ಬಳದ ಹಣ್ಣು ಮತ್ತು ನೇರಳೆ ಹಣ್ಣು ಹೆಚ್ಚಾಗಿ ಸಿಗುತ್ತಿದ್ದವು.

ಬಗೆ ಬಗೆಯ ಹಣ್ಣುಗಳಿಗೇನು ಬರವಿರಲಿಲ್ಲ!

ನಮ್ಮಜ್ಜನ‌ ಮನೆಯ ಬಳಿ, ಮೂರ‌್ನಾಲ್ಕು ಬಗೆಯ ನಾಟಿ ಮಾವಿನ ಮರಗಳಿದ್ದವು.‌ ಒಂದೊಂದರ ಹಣ್ಣುಗಳೂ ಒಂದೊಂದು ಬಗೆಯ ರುಚಿ ನೀಡುತ್ತಿದ್ದವು‌. ಈ‌ ಮರಗಳನ್ನು ಆಗಾಗಲೇ ನಾನು, ನಮ್ಮಕ್ಕ ಪಾಲು ಮಾಡುಕೊಂಡಿದ್ದೆವು. ಈ ಮರ ನಂದು, ಆ ಮರ ನಿಂದು, ಹೀಗೆ. ಈ ಮರಗಳ ಹಣ್ಣಿನಿಂದ ನಮ್ಮವ್ವ(ಮುತ್ತಜ್ಜಿ) ಮಾಡುತ್ತಿದ್ದ ಮಾವಿನ ಹಣ್ಣಿನ ಗೊಜ್ಜು ಮತ್ತು ಸೀಕರಣೆ ನೆನೆದರೆ ಈಗಲೂ ನಾಲಿಗೆಯಲ್ಲಿ ನೀರೂರುತ್ತದೆ. ಮಾವಿನ ಹಣ್ಣನ್ನು ಸಿಪ್ಪೆ ಬಿಡಿಸಿ, ಬೆಲ್ಲದಲ್ಲಿ ಕಲಸಿ ಒಂದು ಒಗ್ಗರಣೆ ಕೊಟ್ಟು ಅನ್ನದ ಜೊತೆ ಸವಿದರೆ ಅದರ ಸೊಗಸೇ ಬೇರೆ. ಇನ್ನು‌ ಪಕ್ಕದ ದಿಂಬದಲ್ಲಿ ,ಒಂದು ತೋತಾಪುರಿ ಮರವಿತ್ತು. ಅದರ ಕಾಯಿಯನ್ನು ಉಪ್ಪು ಕಾರ ಹಾಕಿ ತಿನ್ನುತ್ತಿದ್ದೆವು ಮತ್ತು ಕೊಚ್ಚುಪ್ಪಿನಕಾಯಿ ಹಾಕಲು ಬಳಸಲಾಗುತ್ತಿತ್ತು.

ಇನ್ನು ಗೋಡಂಬಿಯ ಬಗ್ಗೆ ಎಲ್ಲರಿಗೂ ಗೊತ್ತಿರಬಹುದು,ಆದರೆ ಅದು ಯಾವುದರಿಂದ ಸಿಗುತ್ತದೆ ಎಂದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಮಲೆನಾಡು ಮತ್ತು‌ ಕರಾವಳಿಯಲ್ಲಿ ಗೇರು ಮರ ಹೆಚ್ಚಾಗಿ ಕಾಣಸಿಗುತ್ತದೆ. ನಮ್ಮಜ್ಜಿಯ ಅಣತಿಯಂತೆ ಗೇರು‌ ಮರ ಹತ್ತಿ, ಗೇರು ಹಣ್ಣುಗಳನ್ನು ಮರದಿಂದ ಉದುರಿಸುತ್ತದ್ದೆವು. ಗೇರಿನ ಹಣ್ಣ ತುದಿಯಲ್ಲಿ, ಪೀಟ ಸಿಗುತ್ತದೆ. ಈ‌ ಪೀಟದಿಂದಲೇ ನಮಗೆ‌ ಮುಂದೆ ಗೋಡಂಬಿ‌ ಸಿಗುತ್ತದೆ‌. ಇನ್ನು ಗೇರು ಹಣ್ಣನ್ನು ಕತ್ತರಿಸಿ, ಉಪ್ಪು ಕಾರ ಹಾಕಿ ಸವಿಯಬಹುದು. ಇದು ಒಗರು ಮತ್ತು ಸಿಹಿಯಿಂದ ಕೂಡಿರುತ್ತದೆ. ಸ್ವಲ್ಪ ದ್ವಾರ(ಬಲಿಯದ) ಹಣ್ಣನ್ನು‌ ತಿಂದರೆ ಗಂಟಲು ಕಟ್ಟಿದಂತಾಗುತ್ತದೆ. ಇನ್ನೂ ಈ ಹಣ್ಣಿನಿಂದ ತಿಪ್ಪಳಿಸಿದ (ಬಿಡಿಸಿದ) ಪೀಟಗಳನ್ನು ಒಲೆಯ ಕೆಂಡದಲ್ಲಿ ಹಾಕಿ ಹದವಾಗಿ ಸುಟ್ಟು , ಪೀಟವನ್ನು ಕಲ್ಲಿನಲ್ಲಿ ಜಜ್ಜಿ ಒಡೆದು ಸಿಕ್ಕ‌ ಗೇರುಬೀಜವನ್ನು ಅಜ್ಜಿ ಸಮನಾಗಿ ನಮಗೆ ಹಂಚುತ್ತಿದ್ದರು. ಗೇರು ಪೀಟ ಸುಡುವಾಗ ತುಂಬಾ ಕಾಳಜಿವಹಿಸಬೇಕು ಏಕೆಂದರೆ ಗೇರು ಹಣ್ಣಿನಲ್ಲಿರುವ ಗೇರಿನಾಂಶ ಬೆಂಕಿಗೆ ಬಿದ್ದೊಡನೆ ಜೋರನೆ ಉರಿಯುತ್ತದೆ ಮತ್ತು ಸುಟ್ಟು ಹಾರಬಹುದು. ಗೇರು, ತೆಂಕಣ ಅಮೇರಿಕಾದ ಬ್ರೆಜಿಲ್ ನಿಂದ ಬಂದುದಾಗಿದೆ. ಹೆಚ್ಚಾದ ಮಳೆಯಿಂದಾಗುವ ನೆಲದ ಸವಕಳಿ ತಡೆಯಲು,16ನೇ ಶತಮಾನದಲ್ಲಿ ಪೋರ‌್ಚುಗೀಸರು ಇದನ್ನು ಬಾರತದ ಪಡುವಣ ಕರಾವಳಿಗೆ ತಂದರು ಎನ್ನಲಾಗಿದೆ. ಏನೇ ಆಗಲಿ ಸದ್ಯಕ್ಕೆ ಬಾರತದಲ್ಲಿ ಇದೊಂದು ಪ್ರಮುಕ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮುತ್ತಿದೆ. ಮಲೆನಾಡು,ಕರಾವಳಿಯಲ್ಲಿ‌ ಗೇರುಬೀಜ‌ ಸಂಬಂದಿತ ಕಾರ‌್ಕಾನೆಗಳಿದ್ದು ಸಾವಿರಾರು ಜನಕ್ಕೆ ಕೆಲಸ ನೀಡುತ್ತಿವೆ. ಇದರಲ್ಲಿ ಬಗೆ ಬಗೆಯ ತಳಿಗಳನ್ನು ಕಾಣಬಹುದು‌. ಎತ್ತುಗೆಗೆ ಉಳ್ಳಾಲ 1,2,3, 4 ಎಂಬ ತಳಿ ಕರಾವಳಿಯಲ್ಲಿ ಇದೆ. ಗೇರು ಹಣ್ಣಲ್ಲಿ ಔಶದೀಯ ಗುಣಗಳೂ ಇವೆ.ಗೇರು ಹಣ್ಣಿನ ಜ್ಯೂಸ್ ಕೂಡ ಮಾಡುತ್ತಾರೆ. ಗೇರು ಹಣ್ಣು, ನೇರಲೆ ಹಣ್ಣಿನ ರಸದಿಂದ ವೈನ್ ಕೂಡ ಮಾಡಬಹುದು‌.

ಇನ್ನು ಹೊಳೆಯ ಒಡ್ಡಿನಲಿ(ಅಂಚು), ಕಾಡಿನಲ್ಲಿ ನೇರಲೆ ಹಣ್ಣಿನ ಮರಗಳಿಗೇನೂ ಬರವಿರುತ್ತಿರಲಿಲ್ಲ. ಅಡಿಕೆ ತೋಟದಲ್ಲಿ, ಮನೆಯ ಬಳಿ ಸೀತಾ ಪೇರಲೆ,ಪೇರಲೆ ಹಣ್ಣು, ಅನಾನಾಸ್, ಸಪೋಟಾ ಕೂಡ ಇರುತ್ತಿತ್ತು. ಒಟ್ಟಿನಲ್ಲಿ ಒಂದಲ್ಲಾ ಒಂದು ಹಣ್ಣು ತಿನ್ನಲು ಸಿಗುತ್ತಿತ್ತು. ಇನ್ನೂ ಹಲಸಿನ ಹಣ್ಣನ್ನು ಕಂಡಾಗ, ನಮ್ಮವ್ವ ಮಾಡಿಕೊಡುತ್ತಿದ್ದ ಕೊಟ್ಟೆ ಕಡಬು ನೆನಪಾಗುತ್ತದೆ. ಊರಿನಲ್ಲಿ ಬಕ್ಕೆ ಮತ್ತು ಬಿಳುವ ಎಂಬ ಎರಡು ಬಗೆಯ ಹಲಸಿನ ಹಣ್ಣು ಸಿಗುತ್ತಿತ್ತು. ನಮ್ಮವ್ವ ಹಲಸಿನ ಕಾಯಿಯಲ್ಲಿ ಪಲ್ಯೆ ಕೂಡ ಮಾಡುತಿದ್ದಳು. ಇದನ್ನು ಅಕ್ಕಿರೊಟ್ಟಿಯೊಂದಿಗೆ ಸವಿಯಲು ಸೊಗಸಾಗಿರುತಿತ್ತು. ಹಲಸಿನ ಕಾಯಿಯಲ್ಲಿ ಹಪ್ಪಳ ಕೂಡ ಮಾಡಲಾಗುತಿತ್ತು.

ನಮ್ಮದೇ ಕಾರುಬಾರು

ಇನ್ನೂ ಬೇಸಿಗೆಯ ಕೊನೆ ಕೊನೆಯಲ್ಲಿ ಹದ ಮಳೆಯಾದಲ್ಲಿ, ನಮ್ಮಜ್ಜನ ಮನೆಯಲ್ಲಿ ಶುಂಟಿ ನೆಡಲು ಮೊದಲು ಮಾಡುತ್ತಿದ್ದರು. ಶುಂಟಿ ಹಂಕಲಿಗೆ ಗೊಬ್ಬರ,ದರಗು ಬೇಕಾಗುತ್ತಿತ್ತು. ಆಗ ಗೊಬ್ಬರ ಮತ್ತು ದರಗನ್ನು ಎತ್ತಿನ ಗಾಡಿಯಲ್ಲಿ ಸಾಗಿಸಲಾಗುತ್ತಿತ್ತು. ಆಗ ಎತ್ತಿನ ಗಾಡಿ ಹೊಡೆಯಲು ಸಿಗುತ್ತಿತ್ತು. ಗೊಬ್ಬರವನ್ನು ಇಳಿಸಿ, ಮರಳುವಾಗ ಎತ್ತುಗಳನ್ನು ಜೋರಾಗಿ ಓಡಿಸಿಕೊಂಡು ಬರುವಾಗಿನ ಮಜ, ಯಾವುದೇ ಕಾರು ಓಡಿಸಿದಾಗಲೂ ಸಿಗುವುದಿಲ್ಲ‌. ಎತ್ತುಗಳಿಗೆ ನೀರು ಕುಡಿಸಲು ಹೊಳೆಗೆ ಕರೆದುಕೊಂಡು ಹೋಗುವಾಗ ಕೂಡ ಹೀಗೆ ಓಡಿಸಿಕೊಂಡೆ ಹೋಗುತ್ತಿದ್ದೆ‌. ಇನ್ನು ಶುಂಟಿ ನೆಡುವಾಗ ಒಂದು ಕಯ್ ನೋಡಲೇ ಬೇಕು ಅಂತ ನಾನು ಮತ್ತು ನನ್ನ ಗೆಳೆಯ ಆಗ ಪೈಪೋಟಿಯಲ್ಲಿ, ಶುಂಟಿ ಪಟ್ಟೆ ಮಾಡುವುದು, ಸಣ್ಣ ಕುಂಟಾಣಿಯಲ್ಲಿ ಕುಣಿ ತೋಡುವುದು ಹೀಗೆ ಹೆಮ್ಮಿಗೆ(ಹೊಗಳಿಸಿಕೊಳ್ಳಲು) ಕೆಲಸ ಮಾಡಿ ಸುಸ್ತಾಗಿ, ಬೆಲ್ಲದ ಜೊತೆ ಇಬ್ಬಳದ ಹಣ್ಣನ್ನು ತಿಂದು‌ ಸುದಾರಿಸಿಕೊಳ್ಳುತ್ತಿದ್ದೆವು‌. ಒಟ್ಟಿನಲ್ಲಿ‌ ಬೆಳಗಿನಿಂದ ರಾತ್ರಿಯವರೆಗೆ ಏನಾದರೊಂದು‌ ಕಾರುಬಾರು ಮಾಡಲು ಹಲವಾರು ಅವಕಾಶಗಳು ನಮಗೆ ಸಿಕ್ಕೇ‌ ಸಿಗುತ್ತಿದ್ದವು. ಊರಿನ‌ ಕೊಟ್ಟಿಗೆಯಲ್ಲಿ ಸಾಕಶ್ಟು ದನಕರು,ಎಮ್ಮೆಗಳನ್ನು ಸಾಕಲಾಗುತ್ತಿತ್ತು. ಆದ್ದರಿಂದ ನಾವು ಊರಿಗೆ ಹೋದ ಹೊತ್ತಲ್ಲಿ‌ ಒಂದಲ್ಲಾ ಒಂದು ಹಸು ಕರು ಹಾಕುತಿದ್ದವು‌. ಈ ಹಸುಗಳಿಗೆ ನಮ್ಮ ಅಜ್ಜನವರೇ ಡೆಲಿವರಿ ಮಾಡಿಸುತ್ತಿದ್ದರು. ಅದನ್ನು ನಾವೂ ಕಣ್ಣಾರೆ ನೋಡಿ‌ ನಿಬ್ಬೆರಗಾಗುತ್ತಿದ್ದೆವು. ನಮ್ಮಜ್ಜನ ಅನುಬವ ಯಾವ ವೆಟರ‌್ನರಿ ಡಾಕ್ಟರಿಗೂ ಕಡಿಮೆ ಇರಲಿಲ್ಲ‌. ಕರು ಹುಟ್ಟಿದಾಗ, ಗಿಣ್ಣದ ಹಾಲು ಸಿಗುತಿತ್ತು. ಇದರಿಂದ ಮಾಡುವ ಕೊಯ್ ಗಿಣ್ಣ ಮತ್ತು ಹಾಲ್ ಗಿಣ್ಣವನ್ನು ಅಕ್ಕಿರೊಟ್ಟಿಯೊಂದಿಗೆ ಸವಿಯುವ ಮಜವೇ ಬೇರೆ.

ಹಗಲೂ ಬೈಗೂ ಕುಣಿತ, ಆಟ, ತಿನ್ನಲು ಬಗೆ ಬಗೆಯ ಹಣ್ಣುಗಳು, ಅಜ್ಜನ ಮನೆಯ ಪ್ರೀತಿ ಒಟ್ಟಿನಲ್ಲಿ ಸೊಂಪಾಗಿ ನನ್ನದೇ ಲೋಕದಲ್ಲಿ ಕಳೆದುಹೋಗಿರುತಿದ್ದ ನನಗೆ ಬೇಸಿಗೆ ರಜೆ ಮುಗಿಯುತಿದ್ದಂತೆ ಮತ್ತೆ ಪೇಟೆಗೆ ಮರಳ ಬೇಕಲ್ಲಾ ಅನ್ನುವ ಸಂಕಟ. ನನ್ನಮ್ಮನಿಗೆ ನನ್ನನ್ನು ತಿದ್ದಿ ತೀಡಿ, ಪೇಟೆಯ ಜಗತ್ತಿಗೆ ಮರಳಿ ಒಗ್ಗಿಸುವ ಕೆಲಸ. ಒಟ್ಟಿನಲ್ಲಿ ಪೇಟೆಯ ಜೀವನದ ಜೊತೆಗೆ, ಹಳ್ಳಿಯ ಸೊಗಡಿನ ಜೀವನವನ್ನೂ ನೋಡಿದ ನನ್ನ ಎಳವೆ(ಬಾಲ್ಯ) ಸೊಗಸಾಗಿತ್ತು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: