ಕವಿತೆ: ಇಳೆಗೆ ಬಂದಾಗಿದೆ ಮಳೆ

– ನಿತಿನ್ ಗೌಡ.

ಮಳೆ-ಹಸಿರು, Rain-Green

 

ಇಳೆಗೆ ಬಂದಾಗಿದೆ ಮಳೆ
ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು

ಬೇಸಿಗೆಯ‌ ಬೇಗೆಗೆ ಬಳಲಿದ ಜೀವ ಬಳಗಕೆ
ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ

ಇಳೆಯ ಬೇಗೆಯ ಕಂಡು, ಮೋಡ ಮರುಕ ಪಟ್ಟಾಗಿದೆ
ಅದರಳುವೆ ಮಳೆಯಾಗಿ ಇಳೆಗೆ ಇಳಿದಾಗಿದೆ, ಮಳೆರಾಯ ಬಂದಾಗಿದೆ

ಚಿಗುರೊಡೆಯಲು ಮೊದಲಾಗಿದೆ
ಹಸಿರ ಹೊನಲಿನ ಸಾಲು

ಚೆಲ್ಲಿದೆ ಚೆಲುವು, ಕಂಡಶ್ಟು ದೂರ
ಕೆರೆಕಟ್ಟೆಗಳು ಉಕ್ಕಿ ಹರಿಯುತಿವೆ ಹಸನಾಗಿ

ಮುಂಗಾರ‌ ಹನಿ‌, ನೇಸರನ ನೋಟವ ಚದುರೆ
ಮೂಡಿದೆ ಕಾಮನಬಿಲ್ಲು, ಇಳೆಗೆ ಚಾಚಿದ ಏಣಿಯಂತೆ

ಬೋರ್‍ಗರೆಯುತ ದುಮ್ಮಿಕ್ಕುತಿದೆ ಜೋಗ,
ಸಾಗುತಿದೆ ಕಾನನದಿ ಬಳುಕುತ, ಹಾಲ್ನೊರೆಯ ಹೆಜ್ಜೆಯಂತೆ

ಬರದಿ ಸಾಗಲಿದೆ ,ಸರದಿಯಲಿ ನಟ್ಟಿ
ಕಂಗೊಳಿಸಲಿದೆ, ಬತ್ತದ ಅಗೆಯ ಪಟ್ಟಿ

ಇತಿಮಿತಿಯಲಿ‌ ಮಳೆ ಸುರಿಯೆ, ಅರಳುವುದು ಹಸನಾಗಿ
ನೇಗಿಲ‌ ಹೊತ್ತವನ ಮೊಗವು ಸೊಗಸಾಗಿ

(ಚಿತ್ರಸೆಲೆ: pnnl.gov )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks