ಕವಿತೆ: ಜೀವನ ಪ್ರೀತಿ ಸೆಳೆತ ಯಾಕೋ?

ನಾಗರಾಜ್ ಬೆಳಗಟ್ಟ.

 

ನಿಲ್ಲದ ಕಾಲ ಚಕ್ರದಲ್ಲಿ
ಉರುಳಿ ಹೋಗುತ್ತಿವೆ ದಿನಗಳು ಬಾಳ ಬಂಡಿ ಹಾದಿಯಲ್ಲಿ
ಅರಳಿ ಮರಳುತ್ತಿವೆ ರಾತ್ರಿ ಹಗಲುಗಳು
ಬದುಕಿನ ದಾರಿ ದೀವಿಗೆಗಳಲ್ಲೇ
ಸಂಶಯ ತುಂಬಿರಲು
ಜೀವನ ಪ್ರೀತಿ ಸೆಳೆತ ಯಾಕೋ?

ಕಾಲನದು ವ್ಯವಸ್ತಿತ ಪಿತೂರಿ
ಬದುಕಿನದು ನಿಲ್ಲದ ತುತ್ತೂರಿ
ವಯಸ್ಸಿಗೆ ಬಯಕೆಗಳ ಚಪಲ
ವಯಸಾದಂತೆ ಬದುಕಿನ ಹಂಬಲ
ಯಮನು ಬಾಗಿಲಲ್ಲಿ ನಿಂತಾಗ
ಜೀವನ ಪ್ರೀತಿ ಸೆಳೆತ ಯಾಕೋ?

ಹುಚ್ಚು ಮನಗಳ ಅರಮನೆಯಲ್ಲಿ
ಕೋಪ ತಾಪಗಳ ಪಾನಕ
ಪ್ರೀತಿ ಪೇಮಗಳ ಕೋಟೆಯಲ್ಲಿ
ಜಾತಿ ದರ‍್ಮಗಳ ಕಂದಕ
ಬವದ ಬಂದನಗಳ ಕೊಂಡಿ
ಕ್ಶಣ ಮಾತ್ರದಿ ಕಳಚುತ್ತಿರೆ
ಜೀವನ ಪ್ರೀತಿ ಸೆಳೆತ ಯಾಕೋ?

ಹುಟ್ಟು ಸಾವು ಎರಡರ ಮದ್ಯೆ
ಬಯಸದ ಹುಟ್ಟಿನ ದಾರಿ ಸತ್ಯ
ಬಸಿಯುವುದು ಸಾವಿನ ದಾರಿ ನಿತ್ಯ
ಅನಿವಾರ‍್ಯವಿಲ್ಲದೆ ಜೀವನ ಅಂತ್ಯ ಗುರಿ ಏನು?
ಮುದುಡಿ ಮಲಿಗಿಹ ಅನುಬವದ ಮದ್ಯೆ
ಜೀವನ ಪ್ರೀತಿ ಸೆಳೆತ ಯಾಕೋ?

ಬಂದು ಹೋಗುವ ನಡುವೆ
ನಾನೇ ಎಲ್ಲವೂ,ಎಲ್ಲವೂ ನನ್ನದೆಂಬ ಹುಚ್ಚು ಹಂಬಲ
ಯಾಕೆ ಕಾಡುತ್ತಿವೆ ಸುಮ್ಮನೆ ನನ್ನನು
ಕೊನೆ-ಮೊದಲಿಲ್ಲದ ಬಯಕೆಗಳು
ಎಂದೂ ತನ್ನದಾಗದ
ಯಾರಿಗೂ ಕೆೈವಶವಾಗದ
ಜೀವನ ಪ್ರೀತಿ ಸೆಳೆತ ಯಾಕೋ?

( ಚಿತ್ರ ಸೆಲೆ: ninjamarketing.it )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: