ಮಳೆ ಮಹಾರಾಯ

– ರಾಹುಲ್ ಆರ್. ಸುವರ‍್ಣ.

malenadu

ಮಳೆ ಎಂದ ಕೂಡಲೇ ಮೊದಲು ನೆನಪಾಗುವುದೇ, ದಿನ ಪತ್ರಿಕೆಗಳಲ್ಲಿನ “ಇಂದು ಶಾಲಾ ಕಾಲೇಜುಗಳಿಗೆ ರಜೆ ” ಎಂಬ ಸುದ್ದಿ ಮತ್ತು ಮಲೆನಾಡಿನ ಮಳೆಗಾಲದ ಕೆಲ ದಿನಗಳು. ಹೀಗೆ ಇನ್ನೂ ಹಲವಾರು ವಿಶಯಗಳು ನೆನಪಿಗೆ ಬರುತ್ತವೆ.

ಮಳೆ ಎಂದರೆ ಪ್ರತಿಯೊಬ್ಬರಿಗೂ ಇಶ್ಟವೇ, ಆದರೆ ಮಳೆಯಲ್ಲಿ ನೆನೆದು ಜ್ವರ ಬಂದಾಗ ಅಮ್ಮನ ಬೈಗುಳಕ್ಕೆ ಕಿವಿ ಕೊಡುವುದು ಮಾತ್ರ ಸ್ವಲ್ಪ ಕಶ್ಟ. ನನ್ನೂರು ಮಲೆನಾಡಾದ್ದರಿಂದ ಇಲ್ಲಿನ(ಈಗಿರುವ ಊರು) ಮಳೆಗಾಲಕ್ಕಿಂತ ಮಲೆನಾಡಿನ ಮಳೆಗಾಲವನ್ನು ಹತ್ತಿರದಲ್ಲಿ ಕಂಡವನು ನಾನು. ಇಲ್ಲಿನ ತಾರಸಿ ಮನೆಗೂ ಅಲ್ಲಿನ ಹಂಚಿನ ಮನೆಗೂ ಬೀಳುವ ಮಳೆಯ ಹನಿಯ ಸದ್ದಿಗೂ ಬಹಳಶ್ಟು ಅಂತರವಿದೆ.

ಆಗೆಲ್ಲ ಮಳೆ ಜೋರು ಬಂದಿತೆಂದರೆ ಮರುದಿನದ ಪತ್ರಿಕೆ ಇಂದು ರಾತ್ರಿಯೇ ಬರುತ್ತದೆಯೇನೋ ಎಂದು ಕಣ್ಣು ಮುಚ್ಚದೆಯೇ ನಿದ್ದೆ ಮಾಡುತಿದ್ದವನು ನಾನು. ಪತ್ರಿಕೆಯ ಮೊದಲ ಪುಟದಲ್ಲೋ ಅತವಾ ಮತ್ತೊಂದು ಪುಟದಲ್ಲೋ ರಜೆಯ ಸುದ್ದಿಯಿಲ್ಲದಿದ್ದಾಗ ಎಲ್ಲರಿಗಿಂತ ಹೆಚ್ಚು ನಿರಾಶೆಗೊಳ್ಳುತ್ತಿದ್ದವನು ಕೂಡ ನಾನೇ. ಊರಲ್ಲಿ ಮಳೆ ಹಿಡಿಯಿತೆಂದರೆ ಸಾಕು ಮನೆಯ ಗಂಡಸರು ಗದ್ದೆ ತೋಟಗಳಲ್ಲಿ ಬಿಟ್ಟರೆ ಬೇರೆಲ್ಲೂ ಕಾಣ ಸಿಗುತ್ತಿರಲಿಲ್ಲ. ಅಲ್ಲಿ ಮಳೆ ಬಂದರೆ ಮೈಗೊಂದು ಕೊಪ್ಪೆ ಸಿಕ್ಕಿಸಿಕೊಂಡು ಮನೆಯಿಂದ ಕೆಳಕ್ಕಿಳಿಯುವ ಜನ, ಇಲ್ಲಿ ಮಳೆ ಬಂದರೆ ಹೊರಗಡೆಯಿಂದ ಒಳ ಸೇರುವ ಜನ.

ಮಳೆಗೂ ಮನಸ್ಸಿಗೂ ತುಂಬಾ ಹತ್ತಿರದ ಸಂಬಂದ. ಮಳೆ ಕೈ ಕೊಟ್ಟರೂ, ಮನಸ್ಸು ಹದಗೆಟ್ಟರೂ ಪರಿಣಾಮವಾಗುವುದು ನಮಗೇನೇ. ಬಹುಶ ದರ‍್ಮ, ಜಾತಿ, ಪಂಗಡಗಳು ಈ ಪ್ರಕ್ರುತಿಯ ಅಂದಕ್ಕೆ ಮುಕ್ಯ ಕಾರಣವಾದ ಜಲದಾರೆಗೂ ಅಂಟಿಕೊಂಡಿದ್ದಿದ್ದಿದ್ದರೆ ನಾವಿಂದು ಕಣ್ಣು ಬಿಡುವುದು ಕೂಡ ಅಸಾದ್ಯವಾಗುತ್ತಿತ್ತೊ ಏನೋ!

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: