ಕವಿತೆ: ಅಮ್ಮ

– ನಾಗರಾಜ್ ಬೆಳಗಟ್ಟ.

ಅಮ್ಮ, Mother

ನವಮಾಸ ಗರ್‍ಬದರಿಸಿ
ಕರುಳ ಬಳ್ಳಿಯ ಕತ್ತರಿಸಿ
ನೆತ್ತರ ಮುದ್ದೆಯ ಸ್ಪರ್‍ಶಿಸಿದ ಕುಲ ದೇವತೆ

ನೋವಲ್ಲೇ ನಗೆಸುರಿಸಿ
ನಿನ್ನುಸಿರ ನನಗರಿಸಿ
ಹ್ರುದಯಕ್ಕೆ ಉಸಿರನ್ನಿಟ್ಟ ಸ್ರುಶ್ಟಿದೇವತೆ

ಹಾಲು ಉಣಿಸಿ
ಅರಿವು ಬೆಳೆಸಿ
ಬಾಳಲ್ಲಿ ನೀನಾದೆ ಅದ್ರುಶ್ಟದೇವತೆ

ಜೀವ ನೀಡಿ
ಹರಕೆ ಮಾಡಿ
ಹರುಶದಿ ಹೊತ್ತು ಮೆರೆದ ಇಶ್ಟದೇವತೆ

ದೈರ್‍ಯ ನೀಡಿ
ಗೆಲುವ ಬೆೇಡಿ
ಬಾಳ ಪಾಟ ಕಲಿಸಿದ ಜ್ನಾನದೇವತೆ

ಮಾತು ಚೆನ್ನ
ನೀತಿ ಚೆನ್ನ
ಎಂದು ತೋರಿದ ಮಾತ್ರುದೇವತೆ

ತಪ್ಪುಗಳ ತಿದ್ದಿ ತೀಡಿ
ಮೊಗಕೆ ಕಾಡಿಗೆಯ ಚಂದ ಮಾಡಿ
ಬಾಳಿನ ದ್ರುಶ್ಟಿ ತೆಗೆದ ದ್ರುಶ್ಟಿದೇವತೆ

ಪ್ರತಿ ಕ್ಶಣವೂ ಮುದ್ದು ಮಾಡಿ
ಪ್ರತಿ ದಿನವೂ ಶುದ್ದ ಮನದಿ
ಜುಟ್ಟು ಕಟ್ಟಿ ಹಿಟ್ಟನಿಟ್ಟ ಅನ್ನದೇವತೆ

ಶಿರವ ಬಾಗಿ
ಕರವ ಮುಗಿದು
ನಮಿಸಿ ನಮಿಸಿ ನಲಿಯುವೆ

ದರಣಿಯೊಳಗೆ
ವರವು ನೀನು
ಮೆರೆದು ಮೆರೆದು ಸ್ಮರಿಸುವೆ

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks