ದುರ‍್ಯೋದನನನ್ನು ಪೂಜಿಸುವ ದೇವಾಲಯ

– .

ದುರ‍್ಯೋದನ, ಈ ಹೆಸರು ಕೇಳಿದಾಕ್ಶಣ ಮನದಲ್ಲಿ ಮೂಡುವ ಚಿತ್ರಣ ಒಬ್ಬ ಕಳನಾಯಕನದು. ದುರ‍್ಯೋದನನ ಬಗ್ಗೆ ಹೇಳುವುದಾದರೆ ಆತ ಒಬ್ಬ ನತದ್ರುಶ್ಟ ಎಂಬ ವೈಯಕ್ತಿಕ ಅನಿಸಿಕೆ ನನ್ನದು. ತನ್ನ ತಂದೆ ರಾಜ ದ್ರುತರಾಶ್ಟ್ರನ ಹಿರಿಯ ಮಗನಾದರೂ, ಆತನ ನಂತರ ಸಿಂಹಾಸನ ಏರುವಲ್ಲಿ, ತನ್ನ ಚಿಕ್ಕಪ್ಪನ ಮಕ್ಕಳ ರೂಪದಲ್ಲಿ ತೊಡಕುಗಳು ಕಾಣಿಸಿಕೊಂಡವು. ಹಾಗಾಗಿ ದುರ‍್ಯೋದನ ಕಳನಾಯಕನಾಗಿಯೇ ಯುದ್ದದಲ್ಲಿ ಸಾವನ್ನಪ್ಪಿದ. ಅತಿ ದೊಡ್ಡ ಬಯಾನಕ ಕಳನಾಯಕ ಎಂದು ಗುರುತಿಸಿಕೊಂಡಿರುವ ದುರ‍್ಯೋದನನಿಗೂ ಒಂದು ದೇವಾಲಯವಿದೆ ಎಂದರೆ ನಂಬಲು ಸಾದ್ಯವೇ? ಕಲ್ಲುಗಳನ್ನು ದೇವರೆಂದು ಪೂಜಿಸುವ ಈ ನಾಡಿನಲ್ಲಿ ಅಂತಹ ದೇವಾಲಯವಿರುವುದು ಆಶ್ಚರ‍್ಯವೇನಲ್ಲ. ಕೇರಳದ ಪೋರುವಾಜಿ ಪೆರುವಿರುತ್ತಿ ಮಲನಾಡಲ್ಲಿ, ಇಡೀ ಮಹಾಬಾರತದಲ್ಲಿ ಅತಿ ಹೆಚ್ಚು ದ್ವೇಶಿಸಲ್ಪಡುವ ಕಳನಾಯಕನಾದ ದುರ‍್ಯೋದನನಿಗೆ ದೇವಾಲಯವೊಂದಿದೆ. ಇಲ್ಲೇಕೆ ಆತನ ದೇವಾಲಯವಿದೆ? ಅದರ ಹಿಂದಿರುವ ಇತಿಹಾಸ ಏನು?

ಕೆಲವು ಸನ್ನಿವೇಶಗಳು ಒಬ್ಬ ನಾಯಕ ಅತವಾ ಒಬ್ಬ ಕಳನಾಯಕ ತನ್ನದೇ ಕತೆಗೆ ಬಲಿಪಶುವಾಗುವಂತೆ ಮಾಡುತ್ತವೆ. ಒಬ್ಬ ವ್ಯಕ್ತಿ ಕಳನಾಗವುದು, ಆತ ತನ್ನ ಗಮ್ಯವನ್ನು ಸಾದಿಸಲು ಆಯ್ದುಕೊಂಡ ವಿದಾನದಲ್ಲಿ ಇತರರಿಗೆ ತೊಂದರೆಯಾದಲ್ಲಿ ಮಾತ್ರ. ಹಾಗೆಂದ ಮಾತ್ರಕ್ಕೆ ಆತನಲ್ಲಿ ಮಿಡಿಯುವ ಹ್ರುದಯ ಇಲ್ಲವೆಂದಲ್ಲ. ಜನ ಅದನ್ನು ಗುರುತಿಸಲು ಸೋತಿರುತ್ತಾರೆ. ದುರ‍್ಯೋದನ ಸಹ ಅನೇಕ ಒಳ್ಳೆಯ ಗುಣಗಳನ್ನು ಹೊಂದಿದ್ದನು. ಕೆಲವೊಂದು ಪ್ರಶಂಸನೀಯ ಗುಣಗಳು ಅವನಲ್ಲಿದ್ದವು. ಅದಕ್ಕಾಗಿಯೇ ಆತ ಕರ‍್ಣನನ್ನು ಗೆಳೆಯನಾಗಿ ಸ್ವೀಕರಿಸಿ, ರಾಜನನ್ನಾಗಿ ಮಾಡಿದ್ದು. ದುರ‍್ಯೋದನನ ಕಾರ‍್ಯಗಳನ್ನು ಸಮಾಜ ಟೀಕಿಸಬಹುದು, ಚರ‍್ಚಿಸಬಹುದು, ಆದರೆ ಕೇರಳದ ಮಲನಾಡ ದೇವಾಲಯ ದುರ‍್ಯೋದನನೆಂಬ ಕಳನ ಸಹಾನುಬೂತಿಗೆ ಸಾಕ್ಶಿಯಾಗಿದೆ. ಈ ಕೌರವ ಯುವರಾಜ ಉದಾರ, ದೀನ ದಲಿತ ಮತ್ತು ಗೌರವಾನ್ವಿತ ಜನರ ಬಗ್ಗೆ ಅನುಕಂಪ ಹೊಂದಿದ್ದ ಎಂಬ ಅಂಶವನ್ನು ಎಂದಿಗೂ ತೆಗೆದುಹಾಕುವಂತಿಲ್ಲ.

ಈ ಅಪ್ರತಿಮ ಕಳನಾಯಕನಿಗಾಗಿಯೇ ಇರುವ ಕೇರಳದ ಪೋರುವಾಜಿ ಪೆರುವಿರುತ್ತಿ ಮಲನಾಡ ದೇವಾಲಯ ನಿರ‍್ಮಾಣವಾಗುವುದರ ಹಿಂದಿರುವ ದಂತ ಕತೆ, ಆತನ ಗುಣ ಸ್ವಬಾವಕ್ಕೆ ಸಾಕ್ಶಿಯಾಗಿದೆ. ಸ್ತಳೀಯ ದಂತಕತೆಯಂತೆ, ಪಾಂಡವರು ವನವಾಸ ಮುಗಿಸಿ ಅಜ್ನಾತವಾಸಕ್ಕೆ ಕಾಲಿಟ್ಟಾಗ, ಯುವರಾಜ ದುರ‍್ಯೋದನ, ಅವರನ್ನು ಹುಡುಕಲು ತೆಂಕಣಕ್ಕೆ ಬಂದು ಕೇರಳದ ಕಾಡುಗಳನ್ನು ತಲುಪುತ್ತಾನೆ. ಈ ಸಮಯದಲ್ಲಿ ಪಾಂಡವರೇನಾದರೂ ಕಂಡರೆ ಮತ್ತೆ ಹನ್ನೆರೆಡು ವರ‍್ಶ ವನವಾಸಕ್ಕೆ ಮರಳಬೇಕು ಎಂಬುದು ನಿಯಮವಾಗಿತ್ತು. ಪಾಂಡವರ ಹುಡುಕಾಟದಲ್ಲಿ ಕಾಡು ಮೇಡುಗಳನ್ನು ಸುತ್ತುವಾಗ ದಣಿದ ದುರ‍್ಯೋದನ, ಅರ‍್ಚಕ ಮತ್ತು ಮಲನಾಡ ಅಪ್ಪೋಪ್ಪ ಅವರಲ್ಲಿ ಕುಡಿಯುವ ನೀರಿಗಾಗಿ ಬೇಡಿಕೆಯಿಟ್ಟ. ದುರ‍್ಯೋದನನ ಬೇಡಿಕೆಯನ್ನು ಆಲಿಸಿದ ಮನೆಯಲ್ಲಿನ ಮುದುಕಿ, ಅವನಿಗೆ ಕಳ್ಳನ್ನು ನೀಡಿದಳಂತೆ. ದುರ‍್ಯೋದನ ಅದನ್ನೇ ಕುಡಿದು ಬಾಯಾರಿಕೆಯನ್ನು ನೀಗಿಸಿಕೊಂಡನಂತೆ. ಆ ಮುದುಕಿಯ ಆತಿತ್ಯದಿಂದ ಸಂತುಶ್ಟನಾದ ರಾಜ ದುರ‍್ಯೋದನ, ತನ್ನ ಕ್ರುತಜ್ನತೆಯ ಸಂಕೇತವಾಗಿ ಅಲ್ಲಿನ ಬೆಟ್ಟದ ಮೇಲೆ ಕೂತು, ಈ ಗ್ರಾಮದ ಜನರ ಒಳಿತಿಗಾಗಿ ದೇವರಲ್ಲಿ ಪ್ರಾರ‍್ತಿಸಿ, ದೊಡ್ಡ ಪ್ರಮಾಣದ ಕ್ರುಶಿ ಬೂಮಿಯನ್ನು ಅಲ್ಲಿನ ನಿವಾಸಿಗಳಿಗೆ ದಾನ ಮಾಡಿದನಂತೆ. ದುರ‍್ಯೋದನ ಗ್ರಾಮದ ಒಳಿತಿಗಾಗಿ ಪ್ರಾರ‍್ತಿಸಿದ ಸ್ತಳದಲ್ಲೇ ಪೋರುವಾಜಿ ಪೆರುವಿರುತ್ತಿ ಮಲನಾಡ ದೇವಾಲಯವನ್ನು ನಿರ‍್ಮಿಸಲಾಗಿದೆ. ದೇವಾಲಯವು ತನ್ನ ಆಸ್ತಿ ತೆರಿಗೆಯನ್ನು ದುರ‍್ಯೋದನನ ಹೆಸರಿನಲ್ಲಿ ಪಾವತಿಸುತ್ತದೆ.

ಪೋರುವಾಜಿ ಪೆರುವಿರುತ್ತಿ ಮಲನಾಡ ದೇವಾಲಯದಲ್ಲಿ ಚಿನ್ನದ ಲೇಪನದ ಬಾವುಟವಿದೆ. ಇದು ಮಲೆನಾಡ ಅಪ್ಪೋಪ್ಪನ ಹಾಗೂ ಮನ್ನನ್ ರ ಶಕ್ತಿಯ ಮತ್ತು ಅದಿಕಾರದ ಸಂಕೇತವಾಗಿದೆ. ಮಲಕ್ಕುಡ ಮಹೋಲ್ಸವಂ ದಿನದಂತಹ ಶುಬದಿನದಂದು ಮಾತ್ರ ಇದು ಸಾರ‍್ವಜನಿಕರಿಗೆ ನೋಡಲು ಸಿಗುತ್ತದೆ. ಈ ಆಚರಣೆಯು ದ್ವಜಾರೋಹಣ ಕಾರ‍್ಯಕ್ರಮದೊಂದಿಗೆ ಮೊದಲಾಗುತ್ತದೆ. ನಂತರ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಳ್ಳಲು ಜನಗಳ ಜಾತ್ರೆಯೇ ಸೇರುತ್ತದೆ. ಈ ದೇಗುಲವು ಚಿಕ್ಕ ಬೆಟ್ಟದ ಮೇಲಿದೆ. ಮಲಯಾಳಂನಲ್ಲಿ ಮಲ ಎಂದರೆ ಬೆಟ್ಟ, ನಾಡ ಎಂದರೆ ದೇವಾಲಯ, ಮಲನಾಡ ಎಂದರೆ ಬೆಟ್ಟದ ಮೇಲಿನ ದೇವಾಲಯ ಎಂದು.

ಇದೊಂದು ವಿಗ್ರಹ ಮತ್ತು ಗೋಪುರವಿಲ್ಲದ ದೇವಾಲಯ. ಪ್ರವೇಶ ದ್ವಾರದಲ್ಲಿ ಮಂಡಪಂ ಅತವಾ ಅಲ್ತಾರಾ ಎಂದು ಕರೆಯಲ್ಪಡುವ ಎತ್ತರದ ವೇದಿಕೆ ಇದೆ. ಪೋರುವಾಜಿ ಪೆರುವಿರುತ್ತಿ ಮಲನಾಡ ದೇವಾಲಯವು ಕೇವಲ ತೆರೆದ ವೇದಿಕೆ ಹೊಂದಿದ್ದು, ಇಲ್ಲಿಗೆ ಬರುವ ಬಕ್ತಸಾಗರವು ತಮ್ಮ ಕಲ್ಪನೆಯ ದೈವಿಕ ಶಕ್ತಿಗೆ ಪ್ರಾರ‍್ತನೆ ಸಲ್ಲಿಸಬಹುದು. ದೇವಾಲಯದ ಕಲ್ಲಿನ ಮಂಟಪದಲ್ಲಿ ನಿಂತು ಪ್ರಾರ‍್ತಿಸಬಹುದು. ಇದು ದುರ‍್ಯೋದನನ ದೇವಾಲಯವಾದರೂ ಇಲ್ಲಿ ಆತನ ಪ್ರತಿಮೆ ಇಲ್ಲ ಎನ್ನುವುದೇ ಆಶ್ಚರ‍್ಯಕರ ಸಂಗತಿ.

(ಮಾಹಿತಿ ಮತ್ತು ಚಿತ್ರ ಸೆಲೆ: speakingtree.in, timesofindia.indiatimes.com, thedailyholiday.com, curlytales.com, malanada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: