‘ರಾಮದಾನ್ಯ ಪ್ರಸಂಗ’ದ ಓದು : ನೋಟ-4

– ಸಿ.ಪಿ.ನಾಗರಾಜ.

‘ರಾಮದಾನ್ಯ ಪ್ರಸಂಗ’ದ ಓದು : ನೋಟ – 4

(ಇತ್ತ ರಾಮನು ತನ್ನ ಪರಿವಾರದೊಡನೆ ಅಯೋಧ್ಯೆಗೆ ಬಂದು ಪಟ್ಟಾಭಿಷಕ್ತನಾಗುತ್ತಾನೆ. ಆರೇಳು ತಿಂಗಳುಗಳ ನಂತರ ಮುಚುಕುಂದ ಮುನಿಯ ಆಶ್ರಮದಲ್ಲಿ ನಡೆದಿದ್ದ ‘ನರೆದಲೆಗ ಮತ್ತು ವ್ರಿಹಿಗ’ಪ್ರಸಂಗವನ್ನು ರಾಮನು ನೆನಪಿಸಿಕೊಂಡು, ಅವರಲ್ಲಿ ಯಾರು ಗಟ್ಟಿಗರು ಮತ್ತು ಜನಸಮುದಾಯಕ್ಕೆ ಹೆಚ್ಚಿನ ಉಪಯೋಗವಾಗುತ್ತಿದೆ ಎಂಬುದನ್ನು ತೀರ್ಮಾನಿಸಲೆಂದು ಒಂದು ದಿನ ತನ್ನ ಒಡ್ಡೋಲಗದಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸುತ್ತಾನೆ.)

ರಾಮ: ಕೇಳು ಲಕ್ಷ್ಮಣ… ಕೇಳು ಜಾಂಬವ… ಕೇಳು ನಳ… ನೀಲಾದಿ ಸುಭಟರು ಕೇಳಿರೈ… ನರೆದಲೆಗ ವ್ರಿಹಿಯರು ಸೆರೆಯೊಳು ಇರ್ದರು. ಅವರ ಕಾಲ ಸವೆದುದು. ದಿವಸವು ಇಂದಿಗೆ ಏಳು ತಿಂಗಳು ಕಳೆದವು. ಅವದಿರ ಪಾಲಿಸಲು ಬೇಕು. ಅನಿಲಸುತ, ನೀ ಕರೆದು ತಾರ.

ಹನುಮಂತ: ಹೈ… ಹಸಾದ.

(ಎನುತ್ತ ವಂದಿಸೆ, ನಿರ್ವಾಹದಲಿ ಬಾಹುಬಲದ ಅಗ್ಗಳಿಕೆ ಮಿಗೆ, ಅತಿ ವೇಗದಲಿ ಪಥವಿಡಿದು ಹೊರವಂಟನು. ವಜ್ರದ ದೇಹನಲ್ಲಾ ಹನುಮ. ಸಾಹಸವನು ಏನೆಂಬೆ, ತನ್ನ ಮನೋಹರದ ಪಂಚನಂದಿಯಲಿ ಋಷಿಗಳನು ಕಂಡನು. ಅವರ ಪದಾಂಬುಜಕೆ ವಂದಿಸಿ ಪವನಸುತ ಬಿನ್ನೈಸಿದನು…)

ಹನುಮಂತ: ರಾಘವ ನೃಪಾಲನು ಕಳುಹೆ ನಿಮ್ಮ ದರುಶನಕೆ ಬಂದೆನು. ಅವಧಿ ಸವೆದುದು. ಸೆರೆಮನೆಯೊಳು ಇರ್ದವರನು ಒಡಗೊಂಡು ಈ ಕ್ಷಣವೆ ನೀವು ಅವನಿಪನ ಸಂಮುಖಕೆ ಚಿತ್ತೈಸಿ.

(ಎಂದು ಕೈಮುಗಿದ. ಹನುಮನು ಆಡಿದ ನುಡಿಗೆ ಗೌತಮ ಮುನಿಪ ನಸುನಗುತ ಎದ್ದು, ಬನದಲಿ ಘನತಪೋಬಲ ಮಹಿಮರನು ಕರೆಸಿದನು. ಮನದಿ ಹರುಷಿತನಾಗಿ ಮುನಿ ಸೆರಮನೆಯ ಪ್ರತಿವಾದಿಗಳನು ಒಡಗೊಂಡು ಅನುಪಮಿತ ಗುಣನಿಲಯ ಮುನಿ ಅತುಳವೇಗದಲಿ ಆಶ್ರಮವ ಹೊರವಂಟನು. ಅತಿಹರುಷದಲಿ ಬಂದನು. ಮುನಿಕುಲವೃಂದದೊಡನೆ ಐತರಲು, ರಘುಕುಲನು ಅಂದು ಬಿಜಯಂಗೈಸೆ ರಾಜಮಂದಿರಕೆ ತಂದನು.)

ರಾಮ: ಪ್ರತಿವಾದಿಗಳು ಬಂದರೇ. ನೀವು ಕರತಂದಿರೇ.

(ಎನುತ ಮುನಿಕುಲವೃಂದವನು ಸತ್ಕರಿಸಿ ಗೌತಮನ ಕುಳ್ಳಿರಿಸಿದನು. ಇವರ ವ್ಯವಹಾರವನು ಪರಿಹರಿಸುವ ವಿಚಾರವ ನೋಡಿ, ರವಿಕುಲಾನ್ವಯ ರಾಮ ಹೃದಯ ಶುದ್ಧಿಯಲಿ ಮನದಲಿ ನೆನೆದನು. ಶಿವನ ಧ್ಯಾನಿಸಲು ಆ ಕ್ಷಣವೆ ತ್ರೈಭುವನಕರ್ತರು ಇಂದ್ರ ಮೊದಲಾದವರು ಅಯೋಧ್ಯಾಪುರಪತಿಧಾಮನ ಓಲಗಕೆ ಬಂದರು. ವಸುಗಳು, ಅಮರರು, ಭುಜಂಗಾಮರರು, ಅಸುರ, ಕಿನ್ನರ, ಯಕ್ಷ, ರಾಕ್ಷಸ, ಶಶಿರವಿಗಳ್, ಆದಿತ್ಯ ವಿದ್ಯಾಧರರು, ಗುಹ್ಯಕರು, ವಸುಧೆಯ ಅಮರರು, ಕ್ಷತ್ರಿಯರು, ಜೋಯಿಸರು, ವೈಶ್ಯ ಚತುರ್ಥರು, ಉನ್ನತ ಕುಶಲ ವಿದ್ಯಾಧಿಕರು ನೃಪನ ಸಭೆಯೊಳಗೆ ನೆರೆದುದು. ಇಂತೆಸೆವ ಆ ಸಭೆಯೊಳಗೆ ಮತಿವಂತ ನುಡಿದನು…)

ರಾಮ: ಧಾನ್ಯವರ್ಗದ ಸಂತತಿಯ ಬರಹೇಳಿ.

(ಎನೆ, ಸೆರೆಮನೆಯೊಳು ಇರ್ದವರು ನಿಂತು ಕರಗಳ ಮುಗಿದು…)

ನರೆದಲೆಗ: ಧರಣೀಕಾಂತ ರಘುವರನು ಈ ಸುಬುದ್ಧಿಯನು ಎಂತು ನಮಗೆ ಅರುಹುವಿರಿ ಅದ ಪೇಳಿ.

(ಎಂದ ನರೆದಲೆಗ. ಎನಲು ರಾಮನೃಪಾಲ ನೋಡಿದ ಘನ ತಪೋಮಹಿಮರಿಗೆ ನುಡಿದನು…)

ರಾಮ: ಮನವ ವಂಚಿಸಲಾಗದು. ಈ ಧರ್ಮವನು ನೆರೆ ತಿಳಿದು ಅನುನಯದಿ ಪೇಳಿ.

(ಎನೆ, ಮುನೀಂದ್ರರು ಅನಿಮಿಷರನು ಈಕ್ಷಿಸಿದರು. ಅಲ್ಲಿಯ ಘನ ಮಹಾಸಭೆಯೊಳಗೆ ಭಾರ್ಗವ ರಾಮನು ಇಂತು ಎಂದ…)

ರಾಮ: ಆರು ನುಡಿಯರೆ… ನೀವು ಹಿರಿಯರು… ಇವರೊಳಗೆ ಆರು ಮೀರಿಸುವರು… ಗುಣಸಾರವನು ಪೇಳಿ.

ಜಂಭಾರಿ: (ನಸುನಗುತ) ಸಾರಹೃದಯನು ನರೆದಲೆಗ. ನಿಸ್ಸಾರನು ಈ ವ್ರಿಹಿ.

(ಎನಲು, ಗುಣನಿಧಿ ಮಾರುತಾತ್ಮಜ ಸನ್ನೆಯಲಿ ನಾರದನ ನೋಡಿದನು.)

ನಾರದ: ಅಹುದು, ಸುರಪನ ಮಾತು ನಿಶ್ಚಯವಹುದು. ನರೆದಲೆಗನೆ ಸಮರ್ಥನು. ಬಹಳ ಬಲಯುತ. ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ. ಸಹಜವಿದು. ಪರಪಕ್ಷವಾದಡೆ ವ್ರಿಹಿ ಕರಗಿ ಕಂದಿದನು. ಸೆರೆಯಲಿ ವಿಹಿತವದು ಕೇಳು.

(ಎಂದು ನಾರದ ನುಡಿದ ನಸುನಗುತ.)

ಕಪಿಲಮುನಿ: ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು, ಹುಸಿಯಲ್ಲ. ಬಡವರ ಬಲ್ಲಿದರನು ಆರೈದು ಸಲಹುವನು. ಇವಗೆ ಸರಿಯುಂಟೆ. ನೆಲ್ಲಿನಲಿ ಗುಣವೇನು. ಭಾಗ್ಯದಿ ಬಲ್ಲಿದರ ಪತಿಕರಿಸುವನು. ಅವನಲ್ಲಿ ಸಾರವ ಕಾಣೆ.

(ಎಂದನು ಕಪಿಲಮುನಿ ನಗುತ. ಸುರಮುನಿಗಳು ಇಂತು ಎನಲು , ಭೂಸುರವರರು ಸಭಿಕರು ಸಂತೋಷಿಸಲು,)

ರಾಮ: ನರೆದಲೆಗೆ ನೀ ಬಾರ.

(ಎನುತ ರಾಮನೃಪಾಲ ನೆರೆ ಮೆಚ್ಚಿ ತನ್ನ ನಾಮವ ಕರೆದುಕೊಟ್ಟನು. ಧರೆಗೆ ರಾಘವನೆಂಬ ಪೆಸರಾಯ್ತು ಇರದೆ. ವ್ರಿಹಿ ನಾಚಿದನು. ಸಭೆಯಲಿ ಶಿರವ ಬಾಗಿಸಿದ. ಹರುಷ ತೋರಿದ ಮನದಿ ನಲಿವುತ ನರೆದಲೆಗನು ಐತಂದು ರಾಮನ ಸಿರಿಚರಣಕೆ ಅಭಿನಮಿಸೆ, ದೇವಾಸುರರು ಕೊಂಡಾಡೆ, ಹರಸಿ ಮುತ್ತಿನ ಸೇಸೆಯನು ಭೂಸುರರು ಮಂತ್ರಾಕ್ಷತೆಯನು ಇತ್ತು ಉಪಚರಿಸಿದರು. ಅಲ್ಲಿ ಮುನಿವರರು ರಾಗಿಯನು ಪೊಗಳಿದರು.)

ವ್ರಿಹಿ: (ತನ್ನ ಮನದಲ್ಲಿ) ಇಂತು ಸಭೆಯಲಿ ಮಾನಭಂಗವದು ತನಗೆ ಎಂತು ಬಂದುದು.

(ಎನುತ ಅತಿ ಚಿಂತೆಯಲಿ ಕಡುನೊಂದು ನೀರೊಳಗೆ ತಲೆಗುತ್ತಿದನು. ಇಂತು ಪರಿತಾಪದಲಿ “ಲಕ್ಷ್ಮೀಕಾಂತ… ಶಿವಶಿವ ” ಎನುತಲಿರೆ, ಭೂಕಾಂತ ದಶರಥರಾಮನಾಥನು ಕರೆದು ಲಾಲಿಸಿದ.)

ರಾಮ: ಬಾರೈ ವ್ರಿಹಿಯೆ, ಮರುಳೆ ಮನದಲಿ ಕೊರಗಿ ಚಿಂತಿಸಲೇಕೆ. ನಾವು ಈ ನರೆದಲೆಗನ ಅತಿಶಯವ ಮಾಡಿದೆವು ಎಂದು ಕನಲಿದೆಯ. ಧರೆಗೆ ಹೊದ್ದಿದ ಕ್ಷಾಮಗಾಲದಿ ಕರುಣದಿನ್ ನಡೆತಂದು ಲೋಕವ ಹೊರೆವನು. ಅದು ಕಾರಣವೆ ಪತಿಕರಿಸಿದೆವು. ಕೇಳು, ದೀನರಲಿ ದಾರಿದ್ರ ಜನದಲಿ ನೀನು ನಿರ್ದಯನು ಎಂದೆವಲ್ಲದೆ, ನಿನ್ನನು ನಾವು ಸಭೆಯೊಳಗೆ ಹೀನಗಳೆದವರಲ್ಲ. ಮಾನುಷನು ನಮ್ಮೆಡೆಗೆ ನೀ ಸುರಧೇನುವಿನ ಸಮ. ನಿನ್ನ ಚಿತ್ತದೆ ಹಾನಿ ತೋರಲು ಅದೇಕೆ… ಬಿಡು ಬಿಡು ಚಿಂತೆ ಯಾಕೆ. ನೀ ದೇವರಿಗೆ ಪರಮಾನ್ನ . ಈತನು ಮನುಜಾವಳಿಗೆ ಪಕ್ವಾನ್ನಮ್. ನೀವು ಧರೆಯೊಳಗೆ ಇಬ್ಬರು ಅತಿ ಹಿತದಲ್ಲಿ ಇಹುದು. ನಾವು ವರವ ಕೊಟ್ಟೆವು . ಆವ ಕಾಲದಲಿ ಸಲ್ಲುವುದು. ಇನ್ನು ನೀವೆ ಪರಮಸುಖಿ ಪಾವನರು.

(ಎಂದು ನೃಪತಿ ಉಪಚರಿಸಿದನು.)

***

ಪದ ವಿಂಗಡಣೆ ಮತ್ತು ಪದಗಳ ತಿರುಳು

(ಅಯೋದ್ಯೆಯಲ್ಲಿ ರಾಜನಾಗಿ ಆಳುತ್ತಿದ್ದ ರಾಮನು ಆರೇಳು ತಿಂಗಳ ನಂತರ ತನ್ನ ಒಡ್ಡೋಲಗಕ್ಕೆ ವ್ರಿಹಿ ಮತ್ತು ನರೆದಲೆಗನನ್ನು ಮುನಿಗಳ ಮೂಲಕ ಕರೆತರಿಸಿದಾಗ, ಕಣಜದಲ್ಲಿಟ್ಟಿದ ವ್ರಿಹಿಯು ಮುಗ್ಗುಹಿಡಿದು ಹಾಳಾಗಿತ್ತು. ಆದರೆ ನರೆದಲೆಗನು ಗಟ್ಟಿಮುಟ್ಟಾಗಿಯೇ ಇತ್ತು. ಬಹುಕಾಲ ಹಾಳಾಗದೆ ಉಳಿಯುವಂತಹ ಕಸುವು ನರೆದಲೆಗನಲ್ಲಿತ್ತು. ನರೆದಲೆಗನ ಈ ಕಸುವನ್ನು ಮತ್ತು ಬಡವರ ಹಸಿವನ್ನು ನೀಗಿಸುವ ಗುಣವನ್ನು ಮೆಚ್ಚಿಕೊಂಡ ರಾಮನು ನರೆದಲೆಗನಿಗೆ ‘ ರಾಘವ’ ಎಂಬ ತನ್ನ ಹೆಸರನ್ನೇ ನೀಡಿ ಮನ್ನಣೆ ನೀಡುತ್ತಾನೆ ಮತ್ತು ಅಪಮಾನದಿಂದ ಕಂಗೆಟ್ಟಿದ್ದ ವ್ರಿಹಿಯನ್ನು ಕರುಣೆಯಿಂದ ಕಂಡು, ಅವನ ಸಂಕಟವನ್ನು ಪರಿಹರಿಸಿ, ನೀವಿಬ್ಬರೂ ಜನರಿಗೆ ಬೇಕಾದವರಾಗಿ ಬಾಳಿ ಎಂದು ಹರಸುತ್ತಾನೆ.)

ರಘುವರ = ರಾಮ; ಓಲಗ = ಸಬೆ; ನೃಪ = ರಾಜ; ನಿಜ = ತನ್ನ; ಬಾಂಧವ = ನೆಂಟ/ಆಪ್ತ; ಜಾಲ = ಒಬ್ಬರು ಮತ್ತೊಬ್ಬರೊಡೆನೆ ಹೊಂದಿರುವ ನಂಟು; ವರ್ಗ = ಸಮೂಹ/ಗುಂಪು; ಪರಿತೋಷ = ಅಪಾರವಾದ ಆನಂದ; ಸವೆ = ಮುಗಿ/ತೀರು; ಅನಿಲ = ವಾಯು; ಅನಿಲಸುತ = ವಾಯುಪುತ್ರನಾದ ಹನುಮಂತ;

ಹೈ = ಗುರು ಹಿರಿಯರು ಒಡೆಯರು ಆಡಿದ ಮಾತಿಗೆ ವಿನಯದಿಂದ ಒಪ್ಪಿಗೆಯನ್ನು ಸೂಚಿಸುವಾಗ ಆಡುವ ನುಡಿ; ಹಸಾದ = ಅನುಗ್ರಹ/ದಯೆ/ಹಿರಿಯರ ಮಾತಿಗೆ ಒಪ್ಪಿಗೆಯನ್ನು ಸೂಚಿಸುವ ಪದ; ವಂದಿಸು = ನಮಸ್ಕರಿಸು;

ನಿರ್ವಾಹ = ಕೆಲಸದಲ್ಲಿ ತೊಡಗುವುದು/ ಮಾಡುವುದು; ಬಾಹುಬಲ = ದೇಹದ ಕಸವು; ಅಗ್ಗಳಿಕೆ = ಹೆಚ್ಚುಗಾರಿಕೆ; ಮಿಗು = ಹೆಚ್ಚಾಗಲು; ಪಥ+ಪಿಡಿದು; ಪಥ = ದಾರಿ/ಹಾದಿ; ವಜ್ರ = ನವರತ್ನಗಳಲ್ಲಿ ಒಂದು; ದೇಹ = ಶರೀರ; ವಜ್ರದ ದೇಹ = ಇದೊಂದು ನುಡಿಗಟ್ಟು. ಗಟ್ಟಿಮುಟ್ಟಾದ ದೇಹ ಎಂಬ ತಿರುಳನಲ್ಲಿ ಬಳಕೆಯಾಗಿದೆ;

ಸಾಹಸ = ಜೀವಕ್ಕೆ ಬರುವ ಹಾನಿಯನ್ನು ಲೆಕ್ಕಿಸದೆ ಮಾಡುವ ಕೆಲಸ; ಏನ್+ಎಂಬೆ; ಎಂಬೆ = ಹೇಳಲಿ; ಪವನ = ವಾಯು; ಸುತ = ಮತ; ಪವನಸುತ = ವಾಯುಪುತ್ರ/ಹನುಮಂತ; ಬಿನ್ನೈಸು = ಅರಿಕೆಮಾಡಿಕೊಂಡನು; ರಾಘವ = ರಾಮ; ಅವಧಿ = ಕಾಲದ ಗಡುವು; ಇರ್ದ+ಅವರನು; ಇರ್ದವರನು = ಇರುವ ಅವರನ್ನು; ಒಡಗೊಂಡು = ಜತೆಗೂಡಿ; ಅವನಿ+ಪ: ಅವನಿ = ಬೂಮಿ; ಪ = ಪಾಲಿಸುವವನು; ಅವನಿಪ = ರಾಜ/ದೊರೆ; ಸಂಮುಖ = ಮುಂದುಗಡೆ/ಎದುರು; ಚಿತ್ತೈಸು = ಆಗಮಿಸು; ಬನ = ಕಾಡು; ಘನ = ದೊಡ್ಡದು; ತಪೋಬಲ = ತಪಸ್ಸಿನ ಕಸುವು; ಮಹಿಮ = ಹಿರಿಮೆಯುಳ್ಳವನು; ಪ್ರತಿವಾದಿಗಳು = ವಾದದಲ್ಲಿ ಎದುರಾಳಿಗಳಾಗಿರುವ ಇಬ್ಬರು; ಒಡಗೊಂಡು = ಜತೆಗೂಡಿ; ಅನುಪಮಿತ = ಹೋಲಿಸಲಾಗದ/ಎಣೆಯಿಲ್ಲದ; ನಿಲಯ = ಮನೆ; ಗುಣನಿಲಯ = ಒಳ್ಳೆಯ ನಡೆನುಡಿಯುಳ್ಳವನು; ಅತುಳ = ಎಣೆಯಿಲ್ಲದ/ಅತಿ ಹೆಚ್ಚಿನ; ವೃಂದ = ಸಮೂಹ/ಗುಂಪು;

ಬಿಜಯಂಗೈಸೆ = ಬರಲು/ಆಗಮಿಸಲು; ಸತ್ಕರಿಸಿ = ಉಪಚರಿಸಿ; ವ್ಯವಹಾರ = ಜಗಳ/ಕಲಹ/ವ್ಯಾಜ್ಯ; ಪರಿಹರಿಸು = ಬಗೆಹರಿಸು/ತೀರ‍್ಮಾನಿಸು; ರವಿಕುಲಾನ್ವಯ = ರವಿವಂಶಕ್ಕೆ ಸೇರಿದ; ತ್ರೈಭುವನ = ಮೂರು ಲೋಕಗಳು; ಕರ್ತರು = ನಿರ‍್ಮಿಸಿದವರು; ಧಾಮ = ಮನೆ; ಅಯೋಧ್ಯಾಪುರಪತಿಧಾಮ = ಅಯೋದ್ಯೆಯ ರಾಜನ ಅರಮನೆ;

ವಸುಗಳು, ಬುಜಂಗರು, ಅಮರರು, ಕಿನ್ನರರು, ಯಕ್ಷರು, ಗುಹ್ಯಕರು, ವಿದ್ಯಾದರರು — ಇವರೆಲ್ಲರೂ ಪ್ರಾಚೀನ ಇಂಡಿಯಾದ ಕಾಡುಬೆಟ್ಟಗುಡ್ಡಗಳಲ್ಲಿ ನೆಲೆಸಿದ್ದ ುಡಕಟ್ಟುಗಳ ಜನಸಮುದಾಯದವರು; ಭುಜಂಗ+ಅಮರರು; ಅಮರರು = ದೇವತೆಗಳು; ಭುಜಂಗ = ಹಾವು/ಸರ‍್ಪ. ಹಾವನ್ನು ತಮ್ಮ ಬುಡಕಟ್ಟಿನ ದೇವರನ್ನಾಗಿ ಪೂಜಿಸುತ್ತಿದ್ದವರೇ ಬುಜಂಗರು; ಶಶಿ = ಚಂದ್ರ; ರವಿ = ಸೂರ‍್ಯ; ಆದಿತ್ಯ = ಸೂರ‍್ಯ; ವಸುಧೆ = ಬೂಮಿ; ವಸುಧೆಯಮರರು = ಬ್ರಾಹ್ಮಣರು; ಚತುರ್ಥರು = ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ವರ‍್ಣದ ಜನಸಮುದಾಯದವರು; ವಿದ್ಯಾಧಿಕರು = ವಿದ್ಯೆಯಲ್ಲಿ ಪಾಂಡಿತ್ಯವನ್ನು ಪಡೆದವರು; ನೆರೆ = ಸೇರು/ಕೂಡು; ಇಂತು+ಎಸೆವ = ; ಎಸೆ = ಕಂಗೊಳಿಸು; ಮತಿವಂತ = ತಿಳುವಳಿಕೆಯುಳ್ಳವನು/ವಿವೇಕವುಳ್ಳವನು; ಸಂತತಿ = ವಂಶ/ಗುಂಪು/ಸಮೂಹ; ಧರಣೀಕಾಂತ = ಬೂಮಂಡಲದ ಒಡೆಯನಾದ ರಾಜ; ಸುಬುದ್ಧಿ = ಒಳ್ಳೆಯ ತಿಳುವಳಿಕೆ;
ಎಂತು = ಹೇಗೆ; ಅರುಹುವಿರಿ = ತಿಳಿಸುವಿರಿ;

ತಪೋಮಹಿಮರು = ತಪಸ್ಸನ್ನು ದೊಡ್ಡ ವ್ಯಕ್ತಿತ್ವವನ್ನು ಹೊಂದಿದವರು; ವಂಚಿಸಲು+ಆಗದು; ವಂಚಿಸು = ಮರೆಮಾಚುವುದು/ನುಣಿಚಿಕೊಳ್ಳುವುದು; ಧರ್ಮ = ವಾಸ್ತವ/ದಿಟ/ನಿಜ; ಅನುನಯ = ಯಾರ ಮನಸ್ಸನ್ನು ನೋಯಿಸದಂತಹ ರೀತಿಯಲ್ಲಿ ಬಹಳ ಒಳ್ಳೆಯ ನಡೆನುಡಿಯಿಂದ ವರ‍್ತಿಸುವುದು; ಅನಿಮಿಷರು = ದೇವತೆಗಳು; ಈಕ್ಷಿಸು = ನೋಡು;

ಭಾರ್ಗವ = ಬಿಲ್ಲುಗಾರ/ಪರಶುರಾಮ; ಭಾರ್ಗವ ರಾಮ = ಬಿಲ್ ವಿದ್ಯೆಯಲ್ಲಿ ಪರಿಣತನಾದ ರಾಮ/ಪರಶುರಾಮನನ್ನು ಸೋಲಿಸಿದ ರಾಮ; ಗುಣಸಾರ = ; ಮೀರಿಸು = ಹೆಚ್ಚಾಗು; ಗುಣಸಾರ = ಒಳ್ಳೆಯ ಕಸುವು/ಶಕ್ತಿ; ಜಂಭಾರಿ = ದೇವೇಂದ್ರ; ಸಾರಹೃದಯ = ಕರುಣೆಯಿಂದ ಕೂಡಿದ ಮನಸ್ಸು; ನಿಸ್ಸಾರ = ಕರುಣೆಯಿಲ್ಲದ ಮನಸ್ಸು; ನಿಧಿ = ಸಂಪತ್ತು/ಸಮುದ್ರ;

ಗುಣನಿಧಿ = ಒಳ್ಳೆಯ ನಡೆನುಡಿಯುಳ್ಳವನು; ಮಾರುತ+ಆತ್ಮಜ; ಮಾರುತ = ವಾಯುದೇವ; ಆತ್ಮಜ = ಮಗ; ಸನ್ನೆ = ಗುರುತು/ಸಂಕೇತ; ನಾರದ = ಒಬ್ಬ ದೇವತೆ; ಸುರಪ = ದೇವೇಂದ್ರ; ನಿಶ್ಚಯ+ಅಹುದು; ನಿಶ್ಚಯ = ದಿಟ/ನಿಜ; ಸಮರ್ಥ = ಬಲಶಾಲಿ/ಗಟ್ಟಿಗ; ಬಲಯುತ = ಕಸುವಿನಿಂದ ಕೂಡಿದವನು;

ಕಾಂತಿ+ಕೆಡಲಿಲ್ಲ; ಕಾಂತಿ = ಚೆಲುವು/ತೇಜಸ್ಸು/ಕಳೆ; ಸಹಜ+ಇದು; ಸಹಜ = ದಿಟ/ವಾಸ್ತವ/ನಿಜ; ಪರಪಕ್ಷ+ಆದಡೆ; ಪರ = ಇತರ/ಬೇರೆಯ; ಪಕ್ಷ = ಪಂಗಡ/ಗುಂಪು; ಪರಪಕ್ಷ = ಎದುರು ಪಂಗಡ; ಆದಡೆ = ಆದರೆ; ಕರಗು = ಗಟ್ಟಿಯಾಗಿದ್ದುದು ದ್ರವರೂಪವನ್ನು ತಳೆಯುವುದು. ಇದೊಂದು ರೂಪಕವಾಗಿದೆ. ವ್ರಿಹಿಯ ಆಕಾರವು ಗಾತ್ರದಲ್ಲಿ ಕುಗ್ಗಿದೆ; ಕಂದು = ಕಳೆಗುಂದು/ಬಣ್ಣೆಗೆಡು/ಆರು ತಿಂಗಳ ಕಾಲ ಸೆರೆಯಲ್ಲಿದ್ದುದರಿಂದ ವ್ರಿಹಿ ಮುಗ್ಗು ಹಿಡಿದು ಕಳೆಗುಂದಿದ್ದಾನೆ;

ವಿಹಿತ+ಅದು; ವಿಹಿತ = ಹೊಂದಿಸಿದ/ಕೂಡಿಸಿದ/ಯೋಗ್ಯವಾದ/ಸೂಕ್ತವಾದ; ಬಲ್ಲಿದ = ಗಟ್ಟಿಗ/ಬಲಶಾಲಿ; ಹುಸಿ+ಅಲ್ಲ; ಹುಸಿ = ಸುಳ್ಳು; ಬಡವರು = ಜೀವನಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಉಣಲು ಅನ್ನ, ತೊಡಲು ಬಟ್ಟೆ , ವಾಸಿಸಲು ವಸತಿಯಿಲ್ಲದೆ ಸಂಕಟಕ್ಕೆ ಒಳಗಾದವರು; ಬಲ್ಲಿದರು = ಜೀವನದಲ್ಲಿ
ಅಗತ್ಯಕ್ಕಿಂತಲೂ ಹೆಚ್ಚಾಗಿ ಅನ್ನ ಬಟ್ಟೆ ವಸತಿಯನ್ನು ಪಡೆದು ವಿದ್ಯೆ, ಸಂಪತ್ತು, ಮತ್ತು ಆಡಳಿತದ ಗದ್ದುಗೆಯಲ್ಲಿರುವವರು;

ಆರೈದು = ವಿಚಾರಿಸಿ/ಚಿಂತಿಸಿ/ಗಮನಿಸಿ; ಸಲಹುವನು = ಕಾಪಾಡುತ್ತಾನೆ; ಇವಗೆ = ಇವನಿಗೆ/ಈ ನರೆದಲೆಗನಿಗೆ; ಸರಿ+ಉಂಟೆ; ಸರಿ = ಸಮಾನ/ಸಾಟಿ; ಉಂಟೆ = ಇರಲಾಗುವುದೇ; ಭಾಗ್ಯ = ಸಿರಿವಂತಿಕೆ; ನಾಮ = ಹೆಸರು; ನಾಮವ ಕರೆದು = ತನ್ನ ಹೆಸರನ್ನು ಉಚ್ಚರಿಸುತ್ತ;

ಧರೆ = ಬೂಮಿ; ರಾಘವನ್+ಎಂಬ; ರಾಘವ = ರಾಮ; ; ಪೆಸರ್+ಆಯ್ತು; ಪೆಸರ್ = ಹೆಸರು; ಇರದೆ = ಬಿಡದೆ;

ನರೆದಲೆಗ ನೀ ಬಾರ ಎನುತ ರಾಮನೃಪಾಲ ನೆರೆ ಮೆಚ್ಚಿ ಕರೆದುಕೊಟ್ಟನು ತನ್ನ ನಾಮವ ಧರೆಗೆ ರಾಘವನೆಂಬ ಪೆಸರಾಯ್ತು = ನರೆದಲೆಗನನ್ನು ರಾಮನು ತನ್ನ ಹತ್ತಿರಕ್ಕೆ ಕರೆದುಕೊಂಡು, ತನ್ನ ಮೆಚ್ಚುಗೆಯ ಸೂಚಕವಾಗಿ ತನ್ನ ಹೆಸರನ್ನೇ ನರೆದಲೆಗನಿಗೆ ಇಡುತ್ತಾನೆ. ಅಂದಿನಿಂದ ನರೆದಲೆಗನ ಹೆಸರನ್ನು ಇಡೀ ಜಗತ್ತಿನಲ್ಲಿ “ರಾಗಿ” ಎಂಬ ಹೆಸರಿನಿಂದ ಕರೆಯಲಾಗುತ್ತದೆ. “ರಾಘವ” ಎಂಬ ಪದ ಜನರ ಉಚ್ಚಾರಣೆಯಲ್ಲಿ “ರಾಗಿ” ಎಂದಾಗಿದೆ ಎಂಬುದು ಜನಮನದ ಕಲ್ಪನೆಯಾಗಿದೆ;

ಶಿರ = ತಲೆ; ಬಾಗಿಸು = ಬಗ್ಗಿಸು; ಚರಣ = ಪಾದ; ಸಿರಿಚರಣ = ಮಂಗಳವನ್ನುಂಟುಮಾಡುವ ಪಾದ. ಇದೊಂದು ನುಡಿಗಟ್ಟು. ದೇವತೆಗಳು ಹಾಗೂ ಗುರುಹಿರಿಯರ ಮಹಿಮೆಯನ್ನು ಸೂಚಿಸಲು ಅವರ ಪಾದಗಳನ್ನು ಈ ರೀತಿ ಹಾಡಿಹೊಗಳುತ್ತಾರೆ; ಅಭಿನಮಿಸು = ನಮಸ್ಕರಿಸು/ವಂದಿಸು;

ಮಾನಭಂಗ = ಅವಮಾನ; ಎಂತು = ಯಾವ ರೀತಿ; ಕಡುನೊಂದು = ಬಹಳ ಸಂಕಟಪಡುತ್ತ; ತಲೆ+ಕುತ್ತು; ಕುತ್ತು = ತಲೆಗುತ್ತು = ತಲೆತಗ್ಗಿಸಿ; ಪರಿತಾಪ = ಅತಿಯಾದ ಸಂಕಟ; ಲಕ್ಷ್ಮೀಕಾಂತ = ಲಕುಮಿಯ ಗಂಡನಾದ ವಿಶ್ಣು; ಎನುತಲ್+ಇರೆ; ಭೂಕಾಂತ = ರಾಜ; ಲಾಲಿಸು = ಅಕ್ಕರೆಯನ್ನು ತೋರು; ಮರುಳ = ತಿಳಿಗೇಡಿ/ದಡ್ಡ; ಮರುಳೆ = ತಿಳಿಗೇಡಿಯೇ;

ಅತಿಶಯ = ಹೆಚ್ಚಿನ; ಕನಲು = ಕೋಪ; ಧರೆ = ಬೂಮಿ; ಹೊದ್ದು = ತಟ್ಟು/ಬಡಿ/ಹೊಡೆ; ಕ್ಷಾಮ+ಕಾಲ; ಕ್ಷಾಮ = ಮಳೆಬೆಳೆಯಿಲ್ಲದೆ ಅನ್ನಕ್ಕೆ ಆಹಾಕಾರವುಂಟಾಗಿ ಜೀವಿಗಳ ನರಳುವುದು; ಹೊರೆ = ಕಾಪಾಡು; ದೀನರು = ಬಡವರು; ದಾರಿದ್ರ = ಬಡತನ; ಎಂದೆವು+ಅಲ್ಲದೆ;

ಹೀನ+ಕಳೆದವರು+ಅಲ್ಲ; ಮಾನುಷ = ಮನುಜ; ನಮ್ಮ+ಎಡೆಗೆ; ಸುರಧೇನು = ದೇವೇಂದ್ರನ ಅಮರಾವತಿಯಲ್ಲಿರುವ ಹಸುವಿನ ಹೆಸರು. ವ್ಯಕ್ತಿಗಳ ಬಯಕೆಗಳೆಲ್ಲವನ್ನೂ ಈ ಹಸು ಈಡೇರಿಸುತ್ತದೆಯೆಂಬ ಕಲ್ಪನೆಯು ಜನಸಮುದಾಯದ ಮನದಲ್ಲಿದೆ; ಚಿತ್ತ = ಮನಸ್ಸು;

ಪರಮಾನ್ನ = ಉತ್ತಮವಾದ ಅನ್ನ; ಮನುಜ+ಆವಳಿ; ಮನುಜ = ಮಾನವ; ಆವಳಿ = ಗುಂಪು; ಮನುಜಾವಳಿ = ಮಾನವ ಸಮುದಾಯ; ಪಕ್ವ+ಅನ್ನ; ಪಕ್ವ = ಬೆಂದಿರುವ/ಬೇಯಿಸಿದ; ಪಕ್ವಾನ್ನ = ಈ ಪದ ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ಎಲ್ಲ ಜೀವಿಗಳಿಗೂ ಅತ್ಯಗತ್ಯವಾದ ಆಹಾರ ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ವರ = ಅನುಗ್ರಹ; ಆವ = ಯಾವ; ಆವ ಕಾಲದಲಿ = ಎಲ್ಲಾ ಕಾಲದಲ್ಲಿಯೂ; ಸಲ್ಲು = ಒಪ್ಪು; ಪಾವನ = ಪವಿತ್ರ;

ನಾವು ವರವ ಕೊಟ್ಟೆವು . ಆವ ಕಾಲದಲಿ ಸಲ್ಲುವುದು. ಇನ್ನು ನೀವೆ ಪರಮಸುಖಿ ಪಾವನರು = “ಎಲ್ಲಾ ಕಾಲದಲ್ಲಿಯೂ ನೀವು ಜನಸಮುದಾಯಕ್ಕೆ ಬೇಕಾದವರಾಗಿ ಬಾಳುವಂತಾಗಲಿ ಮತ್ತು ಜನಸಮುದಾಯಕ್ಕೆ ನಿಮ್ಮಿಂದ ಆನಂದ ಹಾಗೂ ನೆಮ್ಮದಿಯು ದೊರೆಯುವಂತಾಗಲಿ ಎಂಬ ವರವನ್ನು ನಿಮ್ಮಿಬ್ಬರಿಗೂ ನೀಡಿದ್ದೇನೆ. ನಿಮ್ಮಿಬ್ಬರಿಂದ ಜನರ ಜೀವನ ಪಾವನವಾಗುತ್ತದೆ. ಅಂದರೆ ಜನಸಮುದಾಯ ಉಳಿದು ಬೆಳೆದು ಬಾಳುತ್ತದೆ.” ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: