ಗ್ನೋಮ್ಸ್ವಿಲ್ಲೇ – ಕುಳ್ಳ ಗೊಂಬೆಗಳ ಬೀಡು

– .

ಕುಳ್ಳರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇವರುಗಳ ದೇಹ ಸಾಮಾನ್ಯ ಜನರ ಸರಾಸರಿ ಎತ್ತರಕ್ಕಿಂತ ಚಿಕ್ಕದಾಗಿರುವ ಕಾರಣ ಅವರನ್ನು ಕುಳ್ಳರೆನ್ನಲಾಗುತ್ತದೆ. ಅತಿ ಎತ್ತರದ ಮನುಶ್ಯರಂತೆ, ಅತಿ ಕುಳ್ಳ ಮನುಶ್ಯ ಸಹ ಇರುವುದು ವಿಶ್ವ ದಾಕಲೆಯ ಪಟ್ಟಿಯಲ್ಲಿ ಸೇರಿಹೋಗಿದೆ. ಅದು ಒತ್ತಟ್ಟಿಗಿರಲಿ. ಈ ಕುಳ್ಳ ಗೊಂಬೆಗಳ ಬೀಡಿನ ಬಗ್ಗೆ ಏನಾದರೂ ತಿಳಿದಿದೆಯೇ? ಇಲ್ಲಿದೆ ಅದರ ನೋಟ.

ದಕ್ಶಿಣ ಆಸ್ಟ್ರೇಲಿಯಾದ ಪರ‍್ಗುಸನ್ ಕಣಿವೆಯಲ್ಲಿ ಗ್ನೋಮ್ಸ್ವಿಲ್ಲೇ ಎಂಬ ಸಣ್ಣ ಹಳ್ಳಿಯಿದೆ. ಇಲ್ಲಿದೆ ಕುಳ್ಳ ಗೊಂಬೆಗಳ ಬಹು ದೊಡ್ಡ ಸಮುದಾಯ. ಒಂದೇ ಒಂದು ಕುಳ್ಳ ಗೊಂಬೆಯಿಂದ ಮೊದಲಾದ ಇದು, ಇಂದು ನಾಯಿಕೊಡೆಯಂತೆ ಬೆಳೆದು, ಸಾವಿರ ಸಾವಿರ ಕುಳ್ಳ ಗೊಂಬೆಗಳ ಬೀಡಾಗಿದೆ. ಈ ಹಳ್ಳಿಯಲ್ಲಿ ಹೆಜ್ಜೆಯಿಟ್ಟೆಡೆಯಲ್ಲೆಲ್ಲಾ ಕುಳ್ಳ ಗೊಂಬೆಗಳು ಸಿಗುತ್ತವೆ. ದಾಕಲಾಗಿರುವ ಇತಿಹಾಸ ಗಮನಿಸಿದರೆ, 16ನೇ ಶತಮಾನದಿಂದ ಇಲ್ಲಿ ಕುಳ್ಳ ಗೊಂಬೆಗಳ ಇರುವಿಕೆ ಇದೆ ಎಂದು ಕಂಡು ಬರುತ್ತದೆ. ಈ ಹಳ್ಳಿಯಲ್ಲಿನ ಗುಪ್ತ ನಿದಿಗಳನ್ನು ಸಂರಕ್ಶಿಸುವ ಸಲುವಾಗಿ ಈ ಪುಟ್ಟ ದೇಹದ ಜೀವಿಗಳು ಇಲ್ಲಿದ್ದವಂತೆ. ತಮ್ಮ ತಲೆಯ ಮೇಲೆ ದರಿಸಿರುವ ಚೂಪಾದ ಕೆಂಪು ಟೋಪಿಯಿಂದ, ಅವುಗಳನ್ನು ಬಹಳ ಸುಲಬವಾಗಿ ಗುರುತಿಸಲು ಸಾದ್ಯ. ಒಂದು ದಂತಕತೆಯಂತೆ, ಪಶ್ಚಿಮ ಆಸ್ಟ್ರೇಲಿಯಾದ ಕರವಾಳಿಯಲ್ಲಿ ಕುಳ್ಳನೊಬ್ಬ ತಿರುಗಾಡುತ್ತಿರುವಾಗ, ವಿಚಿತ್ರವಾದ ಮಾಂತ್ರಿಕ ಶಕ್ತಿ ಅವನನ್ನು ಈ ಪ್ರದೇಶಕ್ಕೆ ಕರೆದು ತಂದಿತಂತೆ. ಅದೇ ಈಗ ಗ್ನೋಮ್ಸ್ವಿಲ್ಲೇ ಎಂಬ ಹಳ್ಳಿಯಾಗಿದೆ. ಇದು ಹತ್ತಿರದ ನಗರವಾದ ಬನ್ ಬರಿಯಿಂದ ಕೇವಲ ಮೂವತ್ತು ನಿಮಿಶಗಳ ಪ್ರಯಾಣದ ದೂರದಲ್ಲಿದೆ. ಅವನ ಹೆಜ್ಜೆಯನ್ನು ಅನುಸರಿಸಿ ಹಲವಾರು ಕುಳ್ಳರು ಈ ಹಳ್ಳಿಗೆ ಬಂದರು. ಸದ್ದಿಲ್ಲದೆ ಸೇರಿದ ಸಾವಿರಾರು ಕುಳ್ಳರು ಈ ಮಂತ್ರಮುಗ್ದವಾಗಿಸುವ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

ಒಂದು ಕುಳ್ಳ ಗೊಂಬೆಯಿಂದ ಪ್ರೇರಿತರಾಗಿ, ಇನ್ನೂ ಹೆಚ್ಚು ಹೆಚ್ಚು ಕುಳ್ಳ ಗೊಂಬೆಗಳು ಸೇರಿದವು. ನ್ಯೂಜಿಲೆಂಡಿನ ಕಾರ‍್ಡೋನಾದ ಬ್ರಾ ಪೆನ್ಸ್ ನಂತೆ, ಇಲ್ಲೂ ಕುಳ್ಳರ ಸಮೂಹವೇ ಸೇರಿತು. ಈ ಕುಳ್ಳ ಗೊಂಬೆಗಳ ಅನೇಕ ಪ್ರಬೇದಗಳನ್ನು ಈ ಹಳ್ಳಿಯಲ್ಲಿ ಕಾಣಬಹುದು. ಇದರಿಂದ ಅದನ್ನು ತಯಾರಿಸುವವರ ಸ್ರುಜನಶೀಲತೆಗೆ ತಲೆಬಾಗಲೇಬೇಕು. ಈ ಕುಳ್ಳ ಗೊಂಬೆಗಳ ನಡುವೆ ನಡೆದಾಡುವುದು, ಅದರ ಕಾಲ್ಪನಿಕ ವ್ಯವಸ್ತೆಗಳನ್ನು ಮತ್ತು ನಾಮಪಲಕವನ್ನು ಗುರುತಿಸುವುದು ಒಂದು ರೀತಿಯ ಆನಂದವನ್ನು ನೀಡುತ್ತದೆ. ಇಲ್ಲಿರುವ ಕುಳ್ಳ ಗೊಂಬೆಗಳು ದೊಡ್ಡ ದೊಡ್ಡ ಕುಟುಂಬಗಳು ಕೊಡುಗೆಯಾಗಿ ನೀಡಿದ್ದು, ಅದರ ಮೇಲೆ ಆ ಮನೆತನದ ಹೆಸರನ್ನು ದಾಕಲಿಸಲಾಗಿದೆ. ಇದರೊಂದಿಗೆ ದೊಡ್ಡ ದೊಡ್ಡ ವ್ಯಾಪಾರಿಗಳು, ಕಂಪನಿಗಳು, ಕ್ರೀಡಾ ಕ್ಲಬ್‍ಗಳು, ಶಾಲೆಗಳು ಹಾಗೂ ಸಾಮಾಜಿಕ ಕಳಕಳಿಯುಳ್ಳ ಗುಂಪುಗಳ ಕೊಡುಗೆ ಕುಳ್ಳ ಗೊಂಬೆಗಳ ಸಂಕ್ಯೆಯನ್ನು ಹೆಚ್ಚಿಸಲು ಕಾರಣವಾಗಿದೆ. ಮತ್ತೆ ಕೆಲವು ಕುಳ್ಳ ಗೊಂಬೆಗಳನ್ನು ತಮ್ಮ ಪ್ರೀತಿಪಾತ್ರರ ಗೌರವಾರ‍್ತ ಅತವಾ ನೆನಪಿನ ಸ್ಮಾರಕವಾಗಿ ಇಲ್ಲಿ ಇಡಲಾಗಿದೆ. ತಮ್ಮ ಸಂತೋಶದ ದಿನಗಳನ್ನು ಕಳೆಯಲು ಬಂದ ಪ್ರವಾಸಿಗರು, ತಮ್ಮ ಸಂತಸದ ದ್ಯೋತಕವಾಗಿ ಕುಳ್ಳ ಗೊಂಬೆಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಇಲ್ಲಿರುವ ಎಲ್ಲಾ ಕುಳ್ಳ ಗೊಂಬೆಗಳು ಸುಮ್ಮನೆ ಕೆಲಸವಿಲ್ಲದೆ ನಿಂತಿಲ್ಲ. ಅದು ಅವರ ಜಾಯಮಾನವೂ ಅಲ್ಲ. ಕೆಲವರು ತೋಟಗಾರಿಕೆಯಲ್ಲಿ ನಿರತರಾಗಿದ್ದರೆ ಮತ್ತೆ ಕೆಲವರು ವಿಮಾನ ಹಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಬಸ್ ಕಂಡಕ್ಟರ್ ಕೆಲಸ, ರಾಕೆಟ್ ಚಾಲನೆ, ಇವೇ ಮುಂತಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕುಳ್ಳ ಗೊಂಬೆಗಳನ್ನು ಇಲ್ಲಿ ಕಾಣಬಹುದು. ಮಲಗಿರುವ ಕೆಲವು ಸೋಂಬೇರಿ ಕುಳ್ಳರೂ ಇಲ್ಲಿದ್ದಾರೆ. ಇಲ್ಲಿರುವ ಸಾವಿರಾರು ಕುಳ್ಳ ಗೊಂಬೆಗಳಿಗೆ, ವೈವಿದ್ಯಮಯ ಹೆಸರು ನೀಡಿರುವುದನ್ನು ಕಾಣಬಹುದು. ಗ್ನೋಮ್ ಈಸ್ ವೇರ್ ಹಾರ‍್ಟ್ ಈಸ್, ಗ್ನೋಮ್ ಮೆನ್ಸ್ ಲ್ಯಾಂಡ್, ಗ್ನೋಮ್ಸ್ ನ್ಯೂಸ್ ಈಸ್ ಗುಡ್ ನ್ಯೂಸ್, ರೋಮ್ ಗ್ನೋಮ್ಸ್ ಮೋರ್ ಇವೇ ಮುಂತಾದವುಗಳು. ಮತ್ತೆ ಕೆಲವರು ಗ್ನೋಮ್ ಎಂಪೈರ್ ಎಂದು ಬರೆದಿರುವುದನ್ನೂ ಸಹ ಕಾಣಬಹುದು. ನಿಜ ಇದು ಗ್ನೋಮ್ ಸಾಮ್ರಾಜ್ಯವೇ ಹೌದು. ಎಲ್ಲಾ ವೈವಿದ್ಯಮಯ ಗ್ನೋಮ್ಗಳನ್ನು ನೋಡಿಯಾಯಿತು ಎಂದು ಬಾವಿಸಿದರೆ, ಮತ್ತೆ ಮತ್ತೆ ಹೊಸ ಹೊಸ ಗುಂಪುಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಚಿತ್ರ ವಿಚಿತ್ರ ಕುಳ್ಳರನ್ನು ಕಾಣಬಹುದು. ನೋಡುತ್ತಾ ಮುಂದುವರೆಯುತ್ತಿದ್ದರೆ, ಇಡೀ ಪ್ರದೇಶದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಗ್ನೋಮ್ಸ್‍ಗಳು ಹರಡಿರುವುದು ಗೋಚರಿಸುತ್ತದೆ. ಇವುಗಳ ಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, roamingdownunder.com, gnomesville.com.au, gnomesville.com.au )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: