ಅಳುವ ಗೋಡೆ – ಹವಾಯಿಯ ಮೌಂಟ್ ವೈಲಿಯೇಲ್

– .


ಜಗತ್ತಿನಲ್ಲಿ ಅತಿ ಸುಂದರ ದ್ವೀಪಗಳ ಸಮೂಹವಿರುವುದು ಹವಾಯಿ ದ್ವೀಪ ಸಂಕೀರ‍್ಣದಲ್ಲಿ. ಹವಾಯಿಯ ಕೌಯಿ ದ್ವೀಪದಲ್ಲಿರುವ ಮೌಂಟ್ ವೈಲಿಯೇಲ್, ಹವಾಯಿಯಲ್ಲಿನ ಶಿಕರಗಳಲ್ಲಿ ಎರಡನೇ ಅತ್ಯಂತ ಎತ್ತರದ ಶಿಕರ. 5184 ಅಡಿ ಎತ್ತರದ ಈ ಶಿಕರ ಮತ್ತೊಂದು ವಿಚಾರಕ್ಕೂ ಜಗತ್ಪ್ರಸಿದ್ದವಾಗಿದೆ. ಅದೇನೆಂದರೆ ಇದು ಎರಡನೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. 1912ರಿಂದ ಇಲ್ಲಿ ಪ್ರತಿ ವರ‍್ಶವೂ ಸರಾಸರಿ 11,500 ಮಿಲಿಲೀಟರ್ ಮಳೆಯಾಗಿದೆ. 1982ರಲ್ಲಿ ಮಳೆಯ ಪ್ರಮಾಣ ದಾಕಲೆಯ 17,500 ಮಿಲಿಲೀಟರ್ ಮುಟ್ಟಿತ್ತು. ಹವಾಯಿಯನ್ ಬಾಶೆಯಲ್ಲಿ ವೈಲಿಯೇಲ್ ಅಂದರೆ “ಡಿಂಪ್ಲಿಂಗ್ ವಾಟರ್” ಅತವಾ “ಇಳಿಜಾರು ನೀರು” ಎಂಬುದಾಗಿ ತರ‍್ಜುಮೆ ಮಾಡಬಹುದು. ಹಾಗಾದಲ್ಲಿ ಕಣ್ಣೀರಿನ ಗೋಡೆ ಅತವಾ ಅಳುವ ಗೋಡೆ ಎಂದೇಕೆ ಇದನ್ನು ಕರೆಯುತ್ತಾರೆ? ಮೌಂಟ್ ವೈಲಿಯೇಲ್ ನಿಂದ ಮಳೆಯ ನೀರು ಉಕ್ಕಿ ಹರಿದಾಗ, ಹಲವಾರು ಜಲಪಾತಗಳು ಸ್ರುಶ್ಟಿಯಾಗಿವೆ. ಶಿಕರದಿಂದ ಹೆಚ್ಚು ಕಡಿದಾದ ಸ್ತಳದಲ್ಲಿ ಒಮ್ಮೆಲೆ ದುಮುಕುವ ನೀರು ಒಂದೇ ಸ್ತಳದಲ್ಲಿ ಹರಿಯುತ್ತದೆ. ದಶಕಗಳ ಕಾಲ ಒಂದೇ ಜಾಗದಲ್ಲಿ ಹರಿದ ಕಾರಣ ಅಲ್ಲೆಲ್ಲಾ ಸಣ್ಣ ಸಣ್ಣ ಕೊರಕಲಾಗಿದೆ. ಆ ಸಣ್ಣ ಕೊರಕಲಿನಲ್ಲೇ ನೀರು ಸದಾ ಹರಿಯುವುದರಿಂದ, ಅಳುವ ಶಿಕರದ ಕಣ್ಣೀರಿನಂತೆ ಕಾಣುತ್ತದೆ. ಇಂತಹ ಕಣ್ಣೀರಿನ ಜಲಪಾತಗಳು ಮೌಂಟ್ ವೈಲಿಯೇಲ್ನಲ್ಲಿ ಹೆಚ್ಚಿನ ಸಂಕ್ಯೆಯಲ್ಲಿವೆ. ಕಣ್ಣೀರಿನಂತೆ ಹರಿಯುವ ಜಲಪಾತಗಳ ದ್ರುಶ್ಯವನ್ನು ನೋಡುವುದೇ ಒಂದು ಆದ್ಬುತ ರೋಮಾಂಚನಕಾರಿ ಅನುಬವ.

ಸಣ್ಣ ಸಣ್ಣ ಜಲಪಾತಗಳು ಬೀಳುವ ಕೊರಕಲಿನ ಇಕ್ಕೆಲೆಗಳಲ್ಲಿ ಹಚ್ಚ ಹಸಿರಿನ ಸಸ್ಯವರ‍್ಗ ಆಕ್ರಮಿಸಿಕೊಂಡಿದ್ದು, ಜಲಪಾತದ ದ್ರುಶ್ಯ ಮನಮುಟ್ಟುವ ನೈಸರ‍್ಗಿಕ ಅದ್ಬುತದಂತೆ ಕಂಡುಬರುತ್ತದೆ. ಇದರಿಂದಾಗಿ ಕೌಯಿ ಪ್ರದೇಶ ಅತ್ಯಂತ ಜನಪ್ರಿಯ ಪ್ರವಾಸಿ ಆಕರ‍್ಶಣೆಯಾಗಿದೆ. ವೈಲಿಯೇಲ್ನಲ್ಲಿ ಇಶ್ಟು ದೊಡ್ಡ ಪ್ರಮಾಣದ ಮಳೆಯಾಗಲು ಹಲವಾರು ಕಾರಣಗಳಿವೆ. ಪ್ರಾತಮಿಕವಾಗಿ ಕೌಯಿ, ಹವಾಯಿಯನ್ ದ್ವೀಪಗಳ ಉತ್ತರ ದಿಕ್ಕಿನ ಬಾಗವಾಗಿದೆ. ಇದರಿಂದಾಗಿ ಚಳಿಗಾಲದಲ್ಲಿನ ಮೊದಲ ಮಳೆ ಇಲ್ಲೇ ಆಗುತ್ತದೆ. ಎರಡನೆಯದಾಗಿ ಈ ಪರ‍್ವತದ ರಚನೆ. ಇದು ಗೋಳಾಕಾರ ಮತ್ತು ಶಂಕುವಿನಾಕಾರದಲ್ಲಿದೆ, ಹಾಗಾಗಿ ಇದರ ಎಲ್ಲಾ ಕಡೆಗಳಲ್ಲೂ ತಣ್ಣನೆಯ ಗಾಳಿ ಬೀಸಿ, ಅದರಲ್ಲಿನ ತೇವಾಂಶ ಇಲ್ಲಿನ ಪ್ರದೇಶವನ್ನು ಹಸಿರಾಗಿಸಿದೆ. ಮೂರನೆಯದಾಗಿ, ಈ ಶಿಕರವು 1829 ಮೀಟರ್ ಎತ್ತರದಲ್ಲಿರುವುದರಿಂದ. ಮಳೆ ಮೋಡಗಳು ಇದಕ್ಕೂ ಎತ್ತರಕ್ಕೆ ಏರಲು ಸಾದ್ಯವಿಲ್ಲ. ಹಾಗಾಗಿ ಮಳೆಯ ಮೋಡಗಳು ಪರ‍್ವತಕ್ಕೆ ಡಿಕ್ಕಿ ಹೊಡೆದು, ಮಳೆಯನ್ನು ಅಲ್ಲೇ ಸುರಿಸುತ್ತವೆ. ಕೊನೆಯದಾಗಿ, ಪರ‍್ವತದ ಇಳಿಜಾರು ಬಹಳ ಕಡಿದಾಗಿರುವ ಕಾರಣ, ಪರ‍್ವತದ ಗೋಡೆಯ ಕೆಳಬಾಗದಲ್ಲಿ ಅಪ್ಪಳಿಸಿದ ಗಾಳಿಯು ತ್ವರಿತವಾಗಿ ಮೇಲೇರುತ್ತದೆ. ಇದು ಇಲ್ಲಿ ಹೆಚ್ಚು ಮಳೆಯಾಗಲು ಮತ್ತೊಂದು ಕಾರಣ.

ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶ ಇದಾಗಿದ್ದರೂ ಸಹ, ಪರ‍್ವತದ ಮೇಲ್ಬಾಗವು ನಿರ‍್ಜನವಾಗಿದೆ. ಇದಕ್ಕೆ ಕಾರಣವೆಂದರೆ, ಅತಿ ಕಡಿಮೆ ಸಂಕ್ಯೆಯ ಸಸ್ಯಗಳು ಮತ್ತು ಮರಗಳು ಇಲ್ಲಿ ಬೆಳೆಯಲು ಶಕ್ಯವಾಗಿರುವುದು. ಮತ್ತೊಂದು ಕಾರಣ ವರ‍್ಶದ ಸದಾ ಕಾಲ ಈ ಪ್ರದೇಶದಲ್ಲಿ ಮೋಡ ಮುಸುಕಿರುವ ಹಿನ್ನೆಲೆಯಲ್ಲಿ, ಸೂರ‍್ಯನ ಕಿರಣಗಳು ಗೋಚರಿಸುವುದೇ ಇಲ್ಲ. ಪ್ರವಾಸಿಗರಿಗೆ ಅಳುವ ಗೋಡೆಯನ್ನು ನೋಡಲು ಉತ್ತಮ ಮಾರ‍್ಗವೆಂದರೆ ಹೆಲಿಕಾಪ್ಟರ್. ಹವಾಯಿ ಮತ್ತು ಕೌಯಿ ದ್ವೀಪಗಳಲ್ಲಿ ಅನೇಕ ಹೆಲಿಕಾಪ್ಟರ್ ಟೂರ್ ಆಪರೇಟರ‍್ಗಳಿದ್ದಾರೆ. ಇಲ್ಲಿನ ದ್ವೀಪಗಳ ಪ್ರವಾಸಕ್ಕೆ ಹೋದಲ್ಲಿ ‘ಅಳುವ ಗೋಡೆ’ ಅದರ ಒಂದು ಬಾಗವಾಗಿರುತ್ತದೆ. ನಯನಮನೋಹರ ಅಳುವ ಗೋಡೆಯನ್ನು ನಡೆದು ನೋಡ ಬಯಸುವವರು, ಕುವಾಮೂ ಹೆದ್ದಾರಿ 580ರ ವರೆಗೆ ಮೋಟಾರು ವಾಹನದಲ್ಲಿ ಚಾಲನೆ ಮಾಡಿಕೊಂಡು ಹೋಗಿ, ಎಂಟು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಕಾಲುದಾರಿಯಲ್ಲಿ ನಡೆದು ಹೋಗುವ ಪಾದಯಾತ್ರಿಗಳು, ಬುವಿಯ ಎರಡನೆಯ ಅತಿ ಹೆಚ್ಚು ಮಳೆ ಬೀಳುವ ತಾಣದಲ್ಲಿರುವ ಅನೇಕ ತೊರೆಗಳು, ನದಿಗಳನ್ನು ದಾಟಬೇಕಾದ ಅನಿವಾರ‍್ಯತೆಯಿದೆ. ದಾಟುವಾಗಿ ದರಿಸಿದ್ದ ಉಡುಪು ಒದ್ದೆಯಾಗುವುದು ಕಂಡಿತ. ಇಂತಹ ಅನಿವಾರ‍್ಯತೆಗೆ ತಯಾರಾಗಿ, ಈ ಮಾರ‍್ಗ ಹಿಡಿಯಬೇಕು.
ಮೌಂಟ್ ವೈಲಿಯೇಲ್, ತಮಗೆ ಈಗಾಗಲೇ ತಿಳಿದಂತೆ ವಿಶ್ವದ ಎರಡನೇ ಅತ್ಯಂತ ಮಳೆಯಾಗುವ ಪ್ರದೇಶವಾಗಿದೆ, ಹಾಗಾಗಿ ಈ ಪರ‍್ವತ ಶ್ರೇಣಿಯ ಶಿರೋ ಬಾಗವು ಸದಾಕಾಲ ಮೋಡಗಳಿಂದ ಆವ್ರುತವಾಗಿರುತ್ತದೆ. ಪ್ರತಿ ವರ‍್ಶ ಅಂದಾಜು ಇಪ್ಪತ್ತು ದಿನಗಳ ಕಾಲ, ಮೌಂಟ್ ವೈಲಿಯೇಲ್ ಮೋಡದಿಂದ ಮುಕ್ತವಾಗಿರುತ್ತದೆ. ಇದೊಂದು ಆಶಾದಾಯಕ ವಿಚಾರ.

(ಮಾಹಿತಿ ಮತ್ತು ಚಿತ್ರ ಸೆಲೆ: flickr.com, usa.knoji.com, amazingplacespics.com, timesofindia.indiatimes.com, amusingplanet.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: