ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ – ಇದು ಎಶ್ಟು ನಿಜ?

– .

‘ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ’ ಎಂಬ ಗಾದೆ ಮಾತಿದೆ. ಗಾದೆಯ ಮಾತಿನಂತೆ ದಿನಕ್ಕೊಂದು ಸೇಬು ಸೇವಿಸಿದರೆ, ವೈದ್ಯರಿಂದ ಸಂಪೂರ‍್ಣವಾಗಿ, ಶಾಶ್ವತವಾಗಿ ದೂರವಿರಲು ಸಾದ್ಯವೇ? ಕಂಡಿತ ಇಲ್ಲ.

ಈ ಗಾದೆಯ ಮೂಲ ಯಾವುದು? ಅದು ಹುಟ್ಟಿದ್ದಾದರೂ ಹೇಗೆ?

ವೇಲ್ಸ್ ನಲ್ಲಿ ಈ ಮಾತು 1856ರಲ್ಲಿ ಮೊದಲ ಬಾರಿ ಒಂದು ಪ್ರಕಟಣೆಯಲ್ಲಿ ಕಾಣಿಸಿಕೊಂಡಿತು. ಅದು ಆಂಗ್ಲ ಬಾಶೆಯಲ್ಲಿ ಈ ರೀತಿಯಲ್ಲಿತ್ತು. “Eat an apple on going to bed, and you’ll keep doctor from earning his Bread”. ಆಂಗ್ಲ ಬಾಶೆಯಲ್ಲಿ ಪ್ರಾಸಬದ್ದವಾಗಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದರೆ; “ಮಲಗುವ ಮುನ್ನ ಸೇಬನ್ನು ಸೇವಿಸಿದರೆ, ನೀವು ವೈದ್ಯರ ಗಳಿಕೆಯನ್ನು ನಿಲ್ಲುಸುವಿರಿ” ಎಂದಾಗಬಹುದು. ಕ್ರಮೇಣ ಈ ಮಾತುಗಳು ಬದಲಾವಣೆಯಾಗಿ, 1913ರ ನಂತರ “ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ” ಎಂಬ ಮಾತು ಕಾಣಿಸಿಕೊಂಡಿತು. ಯಾವುದೇ ಬಾಶೆಯಲ್ಲಾಗಲಿ, ಗಾದೆಯ ಮಾತುಗಳು ಅನುಬವ ಜನ್ಯ. ಇದು ಅದಕ್ಕೆ ಹೊರತೇನಲ್ಲ. ಹಾಗಾದರೆ ಈ ಗಾದೆಯಲ್ಲೂ ಸತ್ಯ ಅಡಿಗಿರಬಹುದಲ್ಲವೇ? ಬನ್ನಿ, ಸೇಬಿನಿಂದಾಗುವ ಆರೋಗ್ಯದ ಪ್ರಯೋಜನಗಳನ್ನು ಪಟ್ಟಿ ಮಾಡೋಣ.

ಸೇಬಿನಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ಸೇಬುಗಳನ್ನು ಸವಿಯಲು ಎಶ್ಟು ಸಿಹಿಯೋ, ಅದರಿಂದ ದೇಹಕ್ಕಾಗುವ ಲಾಬಗಳು ಅಶ್ಟೇ ಸಿಹಿ. ಸೇಬು ನಾರಿನಂಶ, ಸಿ ಮತ್ತು ಕೆ ಜೀವಸತ್ವ, ಪೊಟ್ಯಾಸಿಯಮ್‍‍ ಗಳ ಉತ್ತಮ ಮೂಲವಾಗಿದೆ. ಸೇಬಿನಲ್ಲಿ, ಮಾನವನ ದೇಹದ ಅವಶ್ಯಕತೆಯ ಪ್ರತಿಶತ 2-4 ರಶ್ಟು ಮ್ಯಾಂಗನೀಸ್, ವಿಟಮಿನ್ ಎ, ಇ, ಬಿ1, ಬಿ2 ಮತ್ತು ಬಿ6 ಸೇಬಿನಲ್ಲಿ ಲಬ್ಯವಿರುತ್ತದೆ. ತೂಕವನ್ನು ಕಳೆದುಕೊಳ್ಳ ಬಯಸುವವರಿಗೆ ಸೇಬು ಉತ್ತಮವಾದ ಹಣ್ಣು. ಏಕೆಂದರೆ ಆಗಲೇ ತಿಳಿಸದಂತೆ ಇದರಲ್ಲಿ ನಾರಿನಂಶ ಮತ್ತು ನೀರಿನಂಶ ಹೆಚ್ಚಿರುತ್ತದೆ. ಹಸಿ, ತಾಜಾ ಸೇಬನ್ನು ತಿಂದಲ್ಲಿ, ಅದು ಬೇಗನೆ ಹೊಟ್ಟೆ ತುಂಬಿದ ಅನುಬವವನ್ನು ನೀಡುತ್ತದೆ. ಇದರಿಂದ ತೂಕ ಕಳೆದುಕೊಳ್ಳಲು ಸಾದ್ಯವಾಗಲಿದೆ. ಸೇಬಿನಲ್ಲಿ ಪಾಲಿಪಿನಾಲ್ ನಂತಹ ಸಾವಯವ ಸಸ್ಯ ಸಂಯುಕ್ತಗಳಿದ್ದು, ಇವು ಅನೇಕ ಆರೋಗ್ಯ ಪ್ರಯೋಜನಗಳಿಗೆ ಕಾರಣವಾಗುತ್ತದೆ. ಈ ಪಾಲಿಪಿನಾಲ್ ನಲ್ಲಿ ವಿವಿದ ಪ್ಲೇವನಾಯ್ಡ್ ಗಳಿವೆ. ಬಹಳಶ್ಟು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ವಿವಿದ ಸಂಯುಕ್ತಗಳು ಸೇಬಿನಲ್ಲಿದೆ. ಸೇಬಿನಲ್ಲಿರುವ ಪ್ಲೇವನಾಯ್ಡ್ ಎಪಿಕಾಟೆಚನ್ ವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕಚ್ಚಾ/ಕಾಯಿ ಸೇಬನ್ನು ನಿರಂತರವಾಗಿ ಸೇವಿಸುತ್ತಿದ್ದರೆ, ಹ್ರುದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಟೈಪ್ 2 ಡಯಾಬಿಟೀಸ್ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ, ಹಲವಾರು ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆ ಮಾಡಬಹುದು. ಸೇಬನ್ನು ಸೇವಿಸುವುದರಿಂದ ಮೂಳೆಯ ಆರೋಗ್ಯ ಸುದಾರಿಸುತ್ತದೆ, ಮೆದುಳಿನ ಚಟುವಟಿಕೆ ಉತ್ತೇಜನಗೊಳ್ಳುತ್ತದೆ, ಅಸ್ತಮಾ ಕಾಯಿಲೆಯ ಅಪಾಯವನ್ನೂ ನಿಯಂತ್ರಿಸುತ್ತದೆ.

ಬಹುಶಹ ಈ ಎಲ್ಲಾ ಪ್ರಯೋಜನಗಳು, ಮೇಲಿನ ಗಾದೆ ಮಾತು ಹುಟ್ಟಲು ಕಾರಣವಾಗಿರಬಹುದು. ಪ್ರಕಟವಾಗಿರುವ ಅದ್ಯಯನ ಪಲಿತಾಂಶದಂತೆ ದಿನವೊಂದಕ್ಕೆ ಒಂದು ಸಣ್ಣ ಗಾತ್ರದ ಸೇಬನ್ನು (ಅಂದಾಜು 150ಗ್ರಾಂ) ಸೇವಿಸುವವರು ಎಶ್ಟು ಬಾರಿ ಕಾಯಿಲೆಯ ಕಾರಣಕ್ಕೆ ವೈದ್ಯರನ್ನು ಬೇಟಿ ಮಾಡುತ್ತಾರೋ, ಸೇವಿಸದಿದ್ದವರೂ ಸಹ ಅಶ್ಟೇ ಬಾರಿ ಅದೇ ಕಾರಣಕ್ಕೆ ಬೇಟಿ ಮಾಡುತ್ತಾರಂತೆ! ಇದು ಸ್ಪಶ್ಟವಾಗಿ, ದಿನನಿತ್ಯ ಸೇಬನ್ನು ಸೇವಿಸುವುದಕ್ಕೂ, ಕಾಯಿಲೆಯ ಕಾರಣ ವೈದ್ಯರನ್ನು ಬೇಟಿ ಮಾಡುವುದಕ್ಕೂ ಯಾವುದೇ ರೀತಿಯ ಸಂಬಂದವಿಲ್ಲವೆಂದು ರುಜುವಾತು ಪಡಿಸುತ್ತದೆ. ಬಹುಶಹ ದಿನನಿತ್ಯ ಸೇಬನ್ನು ಸೇವಿಸುವವರಿಗೆ ವೈದ್ಯರು ನೀಡುವ ಔಶದದ ಪ್ರಮಾಣ ಮತ್ತು ಔಶದಗಳ ಸಂಕ್ಯೆ ಕಡಿಮೆಯಿರಬಹುದು.

ಬರಹ ಮುಗಿಸುವ ಮುನ್ನ; ಬಾರತದಂತಹ ರಾಶ್ಟ್ರದಲ್ಲಿ, ಮದ್ಯಮ ವರ‍್ಗದವರೂ ಸಹ ದಿನಕ್ಕೊಂದು (150 ಗ್ರಾಂನಶ್ಟು) ಸೇಬನ್ನು ಸೇವಿಸುವಶ್ಟು ಸ್ತಿತಿವಂತರಲ್ಲ. ಈ ದ್ರುಶ್ಟಿಕೋನದಲ್ಲಿ ಗಮನಿಸಿದರೆ, ಮೇಲಿನ ಗಾದೆಯ ಮಾತು ಸತ್ಯವೇ ಆದರೂ, ಬಡವರ ಪಾಲಿಗೆ ಕೈಗೆಟುಕದ ಹುಳಿ ದ್ರಾಕ್ಶಿಯೇ ಅಲ್ಲವೇ?

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ: pixabay.com, vedantu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: