ಅರಳಿಮರ: ದೈವಗಳ ಬೀಡು

– ಶ್ಯಾಮಲಶ್ರೀ.ಕೆ.ಎಸ್.

ಮೂಲತೋ ಬ್ರಹ್ಮ ರೂಪಾಯ
ಮಧ್ಯತೋ ವಿಷ್ಣು ರೂಪಿಣೇ
ಅಗ್ರತೋ ಶಿವ ರೂಪಾಯ
ವೃಕ್ಷ ರಾಜಾಯ ತೇ ನಮಃ

ಎಂಬ ಶ್ಲೋಕವನ್ನು ಹೇಳುವ ಮೂಲಕ ವ್ರುಕ್ಶ ರಾಜನಾದ ಅಶ್ವತ್ತ ವ್ರುಕ್ಶವನ್ನು ಆರಾದಿಸಲಾಗುತ್ತದೆ. ಸ್ರುಶ್ಟಿಕಾರಕ ಬ್ರಹ್ಮ‌ನ ರೂಪ ಬೇರುಗಳಲ್ಲಿ, ಸ್ತಿತಿಕಾರಕ ವಿಶ್ಣು ರೂಪ ಕಾಂಡದಲ್ಲಿ ಹಾಗೂ ಎಲೆಗಳಲ್ಲಿ ಲಯಕಾರಕ ಶಿವನ ರೂಪ ಅಡಗಿದೆ ಎಂಬುದನ್ನು ಈ ಶ್ಲೋಕದ ಸಾಲುಗಳಲ್ಲಿ ಬಣ್ಣಿಸಲಾಗಿದೆ. ಆದ್ದರಿಂದ ಬಹಳ ಹಿಂದಿನಿಂದಲೂ ಅಶ್ವತ್ತ ವ್ರುಕ್ಶ ಅತವಾ ಅರಳೀ ಮರವನ್ನು ದೇವತೆಗಳ ಸಾನಿದ್ಯವೆಂದು ಹಿಂದೂ ದರ‍್ಮದಲ್ಲಿ ನಂಬಲಾಗಿದೆ. ಸಾಮಾನ್ಯವಾಗಿ ಊರಿನ ಹೊರವಲಯದಲ್ಲಿ, ದೇವಸ್ತಾನದ ಬಳಿ ಬೆಳೆಸುವ ಅರಳಿಮರದ ಸುತ್ತ ವಿಶಾಲವಾದ ಕಟ್ಟೆಯನ್ನು ನಿರ‍್ಮಿಸಿರುತ್ತಾರೆ. ಇದನ್ನು ಅಶ್ವತ್ತ ಕಟ್ಟೆ, ಅರಳೀಕಟ್ಟೆ, ಜಗುಲೀಕಟ್ಟೆ, ಪಂಚಾಯ್ತಿ ಕಟ್ಟೆ ಎಂದೆಲ್ಲ ಕರೆಯುವುದು ವಾಡಿಕೆ. ಎಲ್ಲಾ ಅರಳಿಕಟ್ಟೆಗಳಲ್ಲೂ ನಾಗರಕಲ್ಲುಗಳನ್ನು ಪ್ರತಿಶ್ಟಾಪಿಸಿರುತ್ತಾರೆ. ಕೇವಲ ಹಳ್ಳಿಗಳಲ್ಲಿ ಮಾತ್ರವಲ್ಲ, ನಗರಗಳಲ್ಲೂ ಅಲ್ಲಲ್ಲಿ ಅಶ್ವತ್ತಕಟ್ಟೆಗಳನ್ನು ನೋಡಿದ್ದೇವೆ. ಮನೆಯಿಂದ ಹೊರತೆಗೆದ ದೇವರ ಹಳೇ ಪೋಟೊಗಳನ್ನು, ದೇವರ ಸಾಮಗ್ರಿ, ತಾಯತಗಳನ್ನು ದೈವಸಂಬೂತವಾದ ಅಶ್ವತ್ತ ಮರದ ಬುಡದಲ್ಲಿ ಇರಿಸುವುದನ್ನು ಕಾಣಬಹುದು.

ಹಿಂದೆ ದುಶ್ಟ ಶಕ್ತಿಗಳಿಂದ ದೇವತೆಗಳ ಮೇಲೆ ನಡೆಯುತ್ತಿದ್ದ ದೌರ‍್ಜನ್ಯಗಳಿಂದ ತಪ್ಪಿಸಿಕೊಳ್ಳಲು, ವಿಶ್ಣುವು ಆ ದುಶ್ಟ ಶಕ್ತಿಗಳಿಗೆ ಪಾಟ ಕಲಿಸುವ ಸಲುವಾಗಿ ಎಲ್ಲಾ ದೇವತೆಗಳಿಗೂ ಅರಳೀ ಮರದ ಹಿಂದೆ ಅಡಗಿಕೊಳ್ಳಲು ಪರಿಹಾರ ಸೂಚಿಸಿದನಂತೆ. ಅಂದಿನಿಂದ ದೇವತೆಗಳು ಅಶ್ವತ್ತ ವ್ರುಕ್ಶದಲ್ಲಿ ನೆಲೆಸಿರಬಹುದೆಂಬ ಪೌರಾಣಿಕ ಹಿನ್ನೆಲೆಯಿದೆ. ಕೆಲವು ಗಿಡಮರಗಳಾದ ಬಿಳೀ ಎಕ್ಕ, ಅತ್ತಿ, ಬನ್ನೀ, ಉತ್ತರಾಣಿ ಇತ್ಯಾದಿಗಳು‌‌ ನವಗ್ರಹಗಳ ಸಂಕೇತಗಳು ಎನಿಸಿವೆ. ಹಾಗೆ ಅರಳೀಮರವು ಗುರು ಗ್ರಹದ ಪ್ರತಿನಿದಿ ಎನಿಸಿದೆ. ಹಿಂದೆ ಅನೇಕ ರುಶಿ ಮುನಿಗಳು ಅರಳೀಮರದ ಕೆಳಗೆ ಕುಳಿತು ಜಪ ತಪಗಳನ್ನು ಮಾಡುತ್ತಿದ್ದರಂತೆ. ಗೌತಮ ಬುದ್ದನಿಗೆ ಜ್ನಾನೋದಯವಾಗಿದ್ದು ಬುದ್ದ ಗಯದಲ್ಲಿರುವ ಅರಳೀಮರದ ಕೆಳಗೆ ಎಂದು ಬೌದ್ದ ದರ‍್ಮೀಯರರಿಗೂ ಈ ಮರದ ಬಗ್ಗೆ ದೈವತ್ವ ಬಾವವಿದೆ. ಇದನ್ನು ಬೋದಿ ವ್ರುಕ್ಶ ಎಂದೂ ಸಹ ಹೇಳಲಾಗುತ್ತದೆ.

ಗ್ರಾಮೀಣ ಬಾಗಗಳಲ್ಲಿ ಪ್ರತಿ ವರ‍್ಶ ಆಚರಿಸುವ ರಾಮನವಮಿ ಹಬ್ಬದ ಸಮಯದಲ್ಲಿ ಈ ಅರಳಿಕಟ್ಟೆಯನ್ನು ಚೆನ್ನಾಗಿ ಶುಚಿಗೊಳಿಸಿ, ಅಲಂಕರಿಸಿ ಊರಿನ ಮಂದಿಯೆಲ್ಲಾ ಒಟ್ಟಾಗಿ ಸೇರಿ ರಾಮನ ಬಜನೆಯನ್ನು ಮಾಡಿ, ಪಾನಕ ಕೋಸಂಬರಿಗಳನ್ನು ಹಂಚಿ ತಿನ್ನುವುದೇ ಒಂದು ಸಂಬ್ರಮ. ಊರಿನ ಯಾವುದೇ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಡೆಸುವ ಪಂಚಾಯ್ತಿಗಳಿಗೆ ಈ ಅರಳಿಕಟ್ಟೆಯೇ ಮಹಾವೇದಿಕೆ. ಹಲವೆಡೆ ಯುಗಾದಿ ಹಬ್ಬದ ವೇಳೆಯಲ್ಲಿ ಪಡ್ಡೆ ಹುಡುಗರಿಗೆ ಚೌಕಬಾರ, ಇಸ್ಪೀಟು.ಇತ್ಯಾದಿ ಮೋಜು ಮಸ್ತಿ ಮಾಡಲು ಅರಳಿಕಟ್ಟೆಯೇ ಬೇಕು. ಹಿಂದೆ ಕೆಲವು ಹಳ್ಳಿಗಳಲ್ಲಿ ಸರಿಯಾದ ಶಾಲಾಕಟ್ಟಡಗಳಿಲ್ಲದೆ ಎಶ್ಟೋ ಬಾರಿ ಈ ಅರಳೀಮರದ ಕೆಳಗೆ ತರಗತಿಗಳು ನಡೆಯುತ್ತಿದ್ದವು. ದನುರ‍್ಮಾಸದಲ್ಲಿ ಮುಂಜಾನೆ ವೇಳೆ ಹೆಣ್ಣು ಮಕ್ಕಳು ಮಡಿಯಿಂದ ನಾಗರಕಲ್ಲುಗಳಿಗೆ, ಅರಳಿಮರಕ್ಕೆ ಪೂಜಿಸುವ ಪದ್ದತಿ ಈಗಲೂ ಇದೆ.

ಸಸ್ಯಶಾಸ್ತ್ರದಲ್ಲಿ ‘ಪೈಕಸ್ ರಿಲಿಜಿಯೋಸ್’ (Ficus Religiosa) ಎಂದು ಕರೆಸಿಕೊಳ್ಳುವ ಅರಳೀಮರದ ಉಗಮ ಸ್ತಾನ ಬಾರತ. ಪೀಪಲ್ ಟ್ರೀ ಎಂದೇ ಹೆಚ್ಚು ಜನಪ್ರಿಯ. ತೈಲ್ಯಾಂಡ್, ನೇಪಾಳ, ಬ್ಯಾಂಕಾಕ್, ಚೀನಾ, ಏಶ್ಯಾ ಕಂಡದ ಇತರೆ ಎಲ್ಲಾ ದೇಶಗಳಲ್ಲಿ ಅರಳೀಮರಗಳು ಕಂಡು ಬರುತ್ತವೆ. ತಂಪಾದ ನೆರಳು ನೀಡುತ್ತ, ತಂಗಾಳಿಯನ್ನು ಬೀಸುವುದರ ಜೊತೆಗೆ ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವ ಮರ. ಆದ್ದರಿಂದ ನಮ್ಮ ಪೂರ‍್ವಜರು ಪ್ರತಿ ಹಳ್ಳಿಗಳಲ್ಲೂ ಆರಂಬದಲ್ಲಿಯೇ ಇದರ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದರು. ಇದೊಂದು ಅರೆ ನಿತ್ಯಹರಿದ್ವರ‍್ಣ ಮರ, ಸುದೀರ‍್ಗ ಕಾಲ ಬದುಕುವ ಹೆಮ್ಮರ. ಯಾವುದೇ ಪೋಶಣೆಯಿಲ್ಲದೆಯೆ ಕಾಡುಗಳಲ್ಲಿ ಅರಳೀಮರಗಳು ಸೊಂಪಾಗಿ ಬೆಳೆದಿರುತ್ತವೆ. ದೈವಿಕ ಮಾತ್ರವಲ್ಲ ಬೇವಿನ ಮರದಂತೆಯೇ ಅಶ್ವತ್ತ ಮರದ ಬೇರು, ಎಲೆ, ತೊಗಟೆಗಳು ಆಯುರ‍್ವೇದದ ಪ್ರಕಾರ ಆರೋಗ್ಯಕ್ಕೆ ರಕ್ಶಣೆ ನೀಡುವಂತಹ ಅನೇಕ ಗುಣಲಕ್ಶಣಗಳನ್ನು ಹೊಂದಿದೆ.

(ಚಿತ್ರ ಸೆಲೆ: asergeev.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: