ತಾ ಪ್ರೋಮ್ ದೇವಾಲಯ – ಏನಿದರ ವಿಶೇಶತೆ?

– .

 

ಇತ್ತೀಚಿನ ದಿನಗಳಲ್ಲಿ “ತಾ ಪ್ರೋಮ್” ಎಂದು ಗುರುತಿಸಿಕೊಂಡಿರುವ ಈ ದೇವಾಲಯದ ಮೂಲ ಹೆಸರು ರಾಜವಿಹಾರ ಎಂದಿತ್ತು. ಇದಿರುವುದು ಕಾಂಬೋಡಿಯಾದ ಸೀಮ್ ರೀಪ್ ನಲ್ಲಿ. ಬಹುತೇಕ ಬಾಯನ್ ಶೈಲಿಯಲ್ಲಿನ ದೇವಾಲಯವನ್ನು 12ನೇ ಶತಮಾನದ ಕೊನೆಯಲ್ಲಿ ಹಾಗೂ 13ನೇ ಶತಮಾನದ ಮೊದಲಲ್ಲಿ ನಿರ‍್ಮಿಸಲಾಯಿತು ಎನ್ನಲಾಗುತ್ತದೆ. ತಾ ಪ್ರೋಮ್ ಅಂಕೋರ್ ತಾಮ್ ನ ಪೂರ‍್ವದಲ್ಲಿದೆ. ಸೀಮ್ ರೀಪ್ನ ಮದ್ಯಬಾಗದಿಂದ ಸರಿ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ. ಪ್ರವಾಸಿಗರಿಗೆ ಬೇಟಿ ನೀಡಲು ಇದು ಅನುಕೂಲಕರವಾದ ಜಾಗದಲ್ಲಿದೆ. ಆದರೂ ತಾ ಪ್ರೋಮ್ ದೇವಾಲಯದ ವೈಬವವನ್ನು ಗಮನಿಸಿದರೆ, ಇದು ವಿಶ್ವದಲ್ಲೇ ಅತ್ಯಂತ ನಿಕ್ರುಶ್ಟ ಪ್ರಚಾರಕ್ಕೆ ಒಳಗಾದ ದೇವಾಲಯವೆನ್ನಿಸದಿರದು. ಹನ್ನೆರಡನೇ ಶತಮಾನದ ಕೊನೆಯಲ್ಲಿ ಇದರ ನಿರ‍್ಮಾಣ ಪ್ರಾರಂಬವಾಗಿ ಹದಿಮೂರನೇ ಶತಮಾನದ ಮೊದಲಲ್ಲಿ ಪೂರ‍್ಣಗೊಂಡರೂ ಸಹ, ಇದರ ಇರುವನ್ನು 20ನೇ ಶತಮಾನದಲ್ಲಿ ಕಂಡು ಹಿಡಿಯಲಾಯಿತು.

ಈ ದೇವಾಲಯವನ್ನು 1189ರಲ್ಲಿ ಕಮೇರ್ ರಾಜ ಜಯವರ‍್ಮನ್ VII ಪ್ರಾರಂಬಿಸಿದರು. ಅಂಕೋರ್ ವಾಟ್ ನಲ್ಲಿರುವ ಇನ್ನೂ ಅನೇಕ ದೇವಾಲಯಗಳಿಗೆ ಹೋಲಿಸಿದರೆ ಇದು ಬಿನ್ನವಾಗಿದೆ. ಕಾಡಿನ ಮದ್ಯ ಬಾಗದಲ್ಲಿರುವ ತಾ ಪ್ರೋಮ್ ದೇವಾಲಯ, ಅಂಕೋರ್ ವಾಟ್ನಲ್ಲಿನ ದೇವಾಲಯಗಳಲ್ಲಿ ಹೆಸರುವಾಸಿಯಾಗಿದೆ. ತಾ ಪ್ರೋಮ್ ದೇವಾಲಯದ ಸಂಕೀರ‍್ಣವು ಸುಮಾರು ಒಂದು ಕಿಲೋಮೀಟರ್ ಉದ್ದವಿದ್ದು, 650 ಮೀಟರ್ ಅಗಲವಿದೆ. ಇದು ಮಹಾಯಾನ ಬೌದ್ದದರ‍್ಮದ ಶಾಲೆಯಾಗಿತ್ತು. ಆ ಸಮಯದಲ್ಲಿ ಇದರಲ್ಲಿ 18 ಸನ್ಯಾಸಿಗಳು, 2740 ಪುರೋಹಿತರು, 2232 ಸೇವಕಿಯರು ಮತ್ತು 650 ನ್ರುತ್ಯಗಾರರು ಸೇರಿದಂತೆ 12640 ಜನ ವಾಸಿಸುತ್ತಿದ್ದರು. ಇದೊಂದು ದೊಡ್ಡ ಹಳ್ಳಿ ಆಗಿತ್ತು.

ಕಮೇರ್ ಸಾಮ್ರಾಜ್ಯದ ರಾಜದಾನಿಯಾಗಿದ್ದ ಇದನ್ನು ಸಿಯಾಮೀಸ್ ಮತ್ತು ಕಮೇರ್ ರಾಜರು 15ನೇ ಶತಮಾನದಲ್ಲಿ ಬಿಟ್ಟು ನಾಮ್ ಪೆನ್ ಗೆ ವಲಸೆ ಹೋದರು. ನಂತರದ ದಿನಗಳಲ್ಲಿ ಈ ದೇವಾಲಯ ಜನ ಮಾನಸದಿಂದ ದೂರವೇ ಉಳಿಯಿತು. ಕ್ರಮೇಣ ಸಂಪೂರ‍್ಣವಾಗಿ ಮರೆತುಹೋಯಿತು. ಈ ಅವದಿಯಲ್ಲಿ ಕಾಡಿನ ಮರಗಳಿಗೆ ಇದೇ ಪಲವತ್ತಾದ ಪ್ರದೇಶವಾಯಿತು, ಮರಗಳು ಈ ದೇವಾಲಯದಲ್ಲಿ ಎಲ್ಲಂದರಲ್ಲಿ ಬೆಳೆಯಲು ಶುರುವಾಯಿತು. ಯಾವುದೇ ಅಂಕೆಯಿಲ್ಲದೆ ಬೆಳದ ಮರದ ಬೇರುಗಳು ದೊಡ್ಡದಾಗಿ ಬೆಳೆದು, ಇಡೀ ದೇವಾಲಯವನ್ನು ತನ್ನ ಕದಂಬ ಬಾಹುಗಳಿಂದ ಬಳಸಿ ಆಕ್ರಮಿಸಿಕೊಂಡಿತು. ನಂತರದ ದಿನಗಳಲ್ಲಿ ದೇವಾಲಯದ ಬಾಗಿಲು, ಕಿಟಕಿ, ಚಾವಣಿ, ಬಾಗಿಲಿನಲ್ಲಿಯೂ ಬೆಳೆಯತೊಡಗಿತು. ಈ ದೊಡ್ಡ ಮರ ಎಶ್ಟರ ಮಟ್ಟಿಗೆ ದೇವಾಲಯವನ್ನು ಆಕ್ರಮಿಸಿಕೊಂಡಿತೆಂದರೆ, ದೇವಾಲಯದ ರಚನೆ ಪೂರ‍್ಣ ಪ್ರಮಾಣದಲ್ಲಿ ಮುಚ್ಚುವಶ್ಟು. ಬೇರೆ ದೇವಾಲಯಗಳಲ್ಲಿ ಬೇರನ್ನು ಕಟ್ಟಡದಿಂದ ಬೇರ‍್ಪಡಿಸಲು ಸಾದ್ಯವಾಯಿತು. ಅದರೆ ತಾ ಪ್ರೋಮ್ ನಲ್ಲಿ ಬೇರನ್ನು ಕಿತ್ತು ಹಾಕಲು ಪ್ರಯತ್ನಿಸಿದರೆ, ಇಡೀ ದೇವಾಲಯದ ಕಟ್ಟಡವೇ ಶಿತಿಲವಾಗಿ ಬಿದ್ದುಹೊಗುವಂತಾದ ಕಾರಣ, ಅದನ್ನು ಮುಟ್ಟದೆ ಹಾಗೇ ಉಳಿಸಿಕೊಳ್ಳಲಾಗಿದೆ.

ಈ ದೇವಾಲಯವನ್ನು ಮಾನವ ಸಂಶೋದಿಸಿದ್ದು 1860ರಲ್ಲಿ. ಪ್ರೆಂಚ್ ಸಂಶೋದಕ ಹೆನ್ರಿ ಮೊಹೊಟ್ ಇದನ್ನು ಮರುಶೋದಿಸಿದರು . ಈ ದೇವಾಲಯವನ್ನು ಆಕ್ರಮಿಸಿಕೊಂಡಿರುವ ದೊಡ್ಡ ಮರವನ್ನು ಟೆಟ್ರಾಮೆಲ್ಸ್ ನುಡಿಪ್ಲೋರ ಎಂದು ಕರೆಯಲಾಗುತ್ತದೆ. ದೊಡ್ಡ ಆಕ್ಟೋಪಸ್ನಂತೆ ಈ ಮರ ದೇವಾಲಯವನ್ನು ತಬ್ಬಿದೆ. ತಾ ಪ್ರೋಮ್ ದೇವಾಲಯ ಒಂದೇ ಸಮತಲದಲ್ಲಿದೆ. ದೇವಾಲಯವನ್ನು ಹತ್ತಿರದಿಂದ ನೋಡಿದರೆ, ಅದರಲ್ಲಿನ ವಿಶೇಶ ಕೆತ್ತನೆಗಳನ್ನು ಕಾಣಬಹುದು. ಅದರ ಒಳಾಂಗಣ ಆಕರ‍್ಶಕವಾಗಿದೆ. ಸಂಪೂರ‍್ಣವಾಗಿ ಮರದಿಂದ ಸುತ್ತುವರೆದ ಕಾರಣ, ಇಲ್ಲಿ ಬಹಳ ತಂಪಾದ ವಾತಾವರಣವಿದ್ದು, ಪ್ರವಾಸಿಗರಿಗೆ ವಿರಮಿಸಲು ಅತ್ಯಂತ ಪ್ರಶಸ್ತವಾದ ತಾಣ ಇದು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, viator.com, exoticvoyages.com, atlasobscura.com, lonelyplanet.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: