ಸೋಲುಗಳಿಗೆ ಅಂಜುವರಾರು?

– ವೆಂಕಟೇಶ ಚಾಗಿ.

ಗೆಲುವು ಹಾಗೂ ಸೋಲು ಒಂದೇ ನಾಣ್ಯದ ಎರಡು ಮುಕಗಳಿದ್ದಂತೆ. ಜೀವನದಲ್ಲಿ ಸೋಲು ಹಾಗೂ ಗೆಲುವು ಸಹಜ. ಗೆಲುವು ಕುಶಿಯನ್ನು ತರುತ್ತದೆ ಎಂಬುದು ಎಶ್ಟು ಸಹಜವೋ, ಸೋಲು ದುಕ್ಕವನ್ನು, ನಿರಾಶೆಯನ್ನು ತರುತ್ತದೆ ಎಂಬುದು ಅಶ್ಟೇ ಸಹಜ. ಗೆಲುವಿಗೆ ಇದ್ದಶ್ಟು ಮಹತ್ವ ಸೋಲಿಗೂ ಇದೆ. ಹಲವಾರು ಬಾರಿ ಸೋತರೂ ಒಮ್ಮೆ ಗೆಲುವು ಸಿಕ್ಕೇ ಸಿಗುತ್ತದೆ. ಗೆಲುವು ಹಾಗೆ, ಪ್ರತಿ ಬಾರಿಯೂ ಗೆಲ್ಲೋಕೆ ಆಗೋದಿಲ್ಲ.

ಈಜಿಪ್ಟಿನ ಒಂದು ಹಳ್ಳಿಯೊಂದರಲ್ಲಿ ರೈತನೊಬ್ಬ ತನ್ನ ಹೊಲಕ್ಕೆ ದೂರದ ನದಿಯಿಂದ ನೀರು ತರಬೇಕೆಂದು ನಿರ‍್ದರಿಸಿದ. ತನ್ನ ಹೊಲಕ್ಕೆ ನೀರು ಬಂದರೆ ಉತ್ತಮವಾದ ಬೆಳೆ ಬೆಳೆದು ಶ್ರೀಮಂತನಾಗಬಹುದು ಎಂಬ ಕನಸನ್ನು ಕಂಡ. ನದಿಯಿಂದ ಕಾಲುವೆಯ ಮೂಲಕ ನೀರು ತರುವುದು ಅಶ್ಟು ಸುಲಬದ ಮಾತಾಗಿರಲಿಲ್ಲ. ಮರಳು ಮಿಶ್ರಿತ ಮಣ್ಣು, ಬಿಸಿಲು, ಬಿರುಗಾಳಿ, ತನ್ನವರ ನಿರುತ್ಸಾಹ ಇವೆಲ್ಲವನ್ನೂ ಎದುರಿಸಿ ಕಾಲುವೆಯನ್ನು ತೋಡಿ ನೀರು ತರುವ ವಿಚಾರ ಚಿಕ್ಕದಾಗಿರಲಿಲ್ಲ. ಆದರೂ ದ್ರುಡ ನಿರ‍್ದಾರವನ್ನು ಮಾಡಿದ್ದ. ಅವನು ತನ್ನ ಗೆಳೆಯರೊಡನೆ ಹಲವು ಸೋಲುಗಳ ನಡುವೆಯೂ ಕಾಲುವೆ ನಿರ‍್ಮಿಸಿ ನೀರನ್ನು ತನ್ನ ಹೊಲಕ್ಕೆ ತಂದ. ಅಲ್ಲಿಂದ ತಂದ ನೀರನ್ನು ತನ್ನ ಸುತ್ತಮುತ್ತಲಿನ ಹೊಲಗಳಿಗೆ ಹರಿಸಿದ. ಅವನಿಗೆ ಕೊನೆಯಲ್ಲಿ ಸಂದ ಗೆಲುವು ಅಶ್ಟು ಸುಲಬವಾಗಿರಲಿಲ್ಲ. ಆದರೂ ಆತ ಎದೆಗುಂದಲಿಲ್ಲ. ಪ್ರಯತ್ನ ಪಟ್ಟ, ತನ್ನ ಸೋಲುಗಳಿಗೆ ಎದುರಾಗಿ ನಿಂತು ಗೆಲುವಿಗಾಗಿ ಹಪತಪಿಸಿದ.

ಸೋಲು ಕಂಡಾಗ ಗುರಿಯನ್ನು ತಲುಪಲು ಹಿಂಜರಿಯುವ ಮನಸ್ಸು ಉಂಟಾಗುವುದು ಸಹಜ. ತನ್ನಿಂದ ಆಗುವುದಿಲ್ಲ ಎಂಬ ನಕಾರಾತ್ಮಕ ಬಾವನೆ ಮೂಡಬಹುದು. ಹಾಗೆಂದ ಮಾತ್ರಕ್ಕೆ ಗೆಲುವು ನಮಗೆ ದಕ್ಕುವುದೇ ಇಲ್ಲ ಅಂತಲ್ಲ. ಗೆಲುವು ಮುಂದಿದೆ, ಗೆಲುವಿನ ಸನಿಹದಲ್ಲಿದ್ದೇವೆ ಅಂದರೆ ಗುರಿ ತಲುಪಲು ಹಲವು ಮೆಟ್ಟಿಲುಗಳನ್ನು ಹತ್ತಿದ್ದೇವೆ ಎಂದರ‍್ತ. ಸೋಲು ಕಂಡು ಕಿನ್ನತೆಗೆ ಒಳಗಾಗಿ, ವಿಮುಕರಾಗಿ ಹಿಂದೆ ಸರಿದಾಗ ಗುರಿ ಅಸಾದ್ಯವೇ ಸರಿ. ಮನಸ್ಸು ಹಾಗೂ ಬಾಹ್ಯ ಪರಿಸರದ ಪ್ರಬಾವದಿಂದ ಗೆಲುವು ತಲುಪಲು ನಕಾರಾತ್ಮಕ ಪರಿಸ್ತಿತಿ ಉಂಟಾದರೂ ಸೋಲುಗಳಿಗೆ ಅಂಜದೇ ಮುನ್ನಡೆಯಬೇಕು. ಗೆಲುವಿಗಾಗಿ ಕರ‍್ಚು ಮಾಡಿದ ಅಮೂಲ್ಯವಾದ ಸಮಯ ವ್ಯರ‍್ತವಾಗಬಾರದು ಅಲ್ಲವೇ. ಸೋಲುಗಳಿಗೆ ಅಂಜದಿರಿ, ದ್ರುಡ ಮನಸ್ಸಿನಿಂದ ಮುನ್ನುಗ್ಗಿ.

(ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: