ಕವಿತೆ: ಪುಟ್ಟ ದೇವತೆಗಳು

– ಶ್ಯಾಮಲಶ್ರೀ.ಕೆ.ಎಸ್.

ತಾಯಿ ಮತ್ತು ಮಗು

ಪುಟ್ಟ ಪುಟ್ಟ ಹೆಜ್ಜೆಯ ಇಡುತಾ
ಗಲ್ ಗಲ್ ಗೆಜ್ಜೆಯ ಸದ್ದನು ಮಾಡುತಾ
ಪುಟಿಯುತ ನಲಿದಾಡುವ ಪುಟಾಣಿಗಳು

ಪಳ ಪಳ ಹೊಳೆಯುವ ಕಂಗಳಲಿ
ಮಿಣ ಮಿಣ ಮಿಟುಕಿಸೋ ರೆಪ್ಪೆಗಳಲಿ
ಎಲ್ಲರ ಸೆಳೆಯುವ ಮುದ್ದು ಗೊಂಬೆಗಳು

ಕಿಲ ಕಿಲ ನಗುತ ನಗುವನು ಚೆಲ್ಲುತ
ಸರ ಸರ ಓಡುತ ಏಳುತ ಬೀಳುತ
ಅಂಗಳದಲಿ ಮಿಂಚುವ ನಕ್ಶತ್ರಗಳು

ಗುಡು ಗುಡು ಗುಡುಗುವ ಗುಡುಗಿಗೆ
ಗಡ ಗಡ ನಡುಗುತ ಬೆದರುತ
ಅಮ್ಮನ ತೋಳಲಿ ಬಿಗಿದಪ್ಪುವ ಕಂದಮ್ಮಗಳು

ಗಿರ ಗಿರ ತಿರುಗುವ ಬುಗುರಿಯ ಆಟಕೆ
ಪಟ ಪಟ ಮೇಲೇರುವ ಗಾಳಿಪಟದ ಮಾಟಕೆ
ಚಪ್ಪಾಳೆ ತಟ್ಟಿ ಬೊಬ್ಬಿಡುವ ಮುದ್ದು ಮಣಿಗಳು

ಮಿರು ಮಿರು ಮಿರುಗುವ ಚಂದಿರನಂತೆ
ತಳ ತಳ ಹೊಳೆಯುವ ಸೂರ‍್ಯನಂತೆ
ಮನವನು ತಣಿಸಿ ಮನೆಯನು ಬೆಳಗುವ
ಮುಗ್ದ ಕೂಸುಗಳು ಈ ಪುಟ್ಟದೇವತೆಗಳು

(ಚಿತ್ರ ಸೆಲೆ:pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: