ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 1

– ಮನು ಗುರುಸ್ವಾಮಿ.

ಒಲವು, ಪ್ರೀತಿ, Love

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ
ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ

ದಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ ಹಿಡಿದಿಟ್ಟ ಕವಿ ದ.ರಾ. ಬೇಂದ್ರೆ. ಬಡತನದ ಬೇಗೆಯಲ್ಲೂ ದಾಂಪತ್ಯದವೆಂಬುದು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕವಿ. ಒಲವೆಂಬುದೇನು? ಅದು ಹುಡುಗಾಟವಲ್ಲ. “ಒಲವೆಂಬುದು ಹೊತ್ತಿಗೆ” ಎನ್ನುವುದು ಬೇಂದ್ರೆಯವರ ನಿಲುವು. ಪ್ರೀತಿ ಮತ್ತು ದಾಂಪತ್ಯವನ್ನು ಒಂದುಗೊಳಿಸಿ ಕಾವ್ಯವನ್ನು ಕಟ್ಟಿಕೊಡುವ ಬೇಂದ್ರೆ, ತಮ್ಮ ಹಲವು ಕವಿತೆಗಳಲ್ಲಿ ಅವುಗಳ ಮಹತ್ವವನ್ನು ಪ್ರಸ್ತಾಪಿಸುತ್ತಾರೆ.

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದಕು

ಈ ಕವಿತೆಯ ಸಾಲುಗಳನ್ನು ಗಮನಿಸಿದಾಗ ಎಶ್ಟು ಕುಶಿ ಎನಿಸುತ್ತದೆ. ಇಂದಿನ ಯುವಜನತೆ, ಅದರಲ್ಲೂ ಯುವತಿಯರು ಮತ್ತು ಅವರ ಪೋಶಕರು ಮದುವೆ ವಿಚಾರ ಬಂದ ತಕ್ಶಣ ವರನ ಸ್ತಿತಿಗತಿಗಳನ್ನು ಗಮನಿಸುತ್ತಾರೆ. ಬಹುತೇಕರಿಗೆ ಗೊತ್ತಿಲ್ಲ. ಬಾಗಶಹ ಹಣವಿದ್ದವರಿಗೆ ಪ್ರೀತಿ ನೀಡುವಶ್ಟು ಸಮಯವಿರುವುದಿಲ್ಲ. ಅದು ಬಡತನದಲ್ಲೇ ಹೆಚ್ಚು ಹುಟ್ಟಿದ ತಾವರೆ. ಇಲ್ಲಿ ಕವಿ ಬಡತನದ ಬೇಗೆಯನ್ನೂ ಬದಿಗಿಟ್ಟು ಒಲವು ಎಂಬುದೇನಿದೆಯೋ ಅದೇ ನಮಗೆ ಬದುಕು. ಪ್ರತಿ ವಿಚಾರದಲ್ಲೂ ಪ್ರೀತಿಯನ್ನು ಎಳೆದು ತರುವ ನಮಗೆ ಅದರ ಕೊರತೆಯಿರುವುದಿಲ್ಲ. ಒಲವನ್ನು ನಂಬಿ ಬದುಕುವ ಕಲೆಯನ್ನು ನಾವು ರೂಡಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಬಡತನ ಒಡೆತನ ಕಡೆತನಕುಳಿದಾವೇನ
ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
ಕಡೆಗೋಲು ಹಿಡಿಹುಟ್ಟ

ಬಡತನ ಒಡೆತನ ಕೊನೆವರೆಗೂ ಬರುವುದಿಲ್ಲ ಎನ್ನುವ ಕವಿ. ಬದುಕಿನ ಕಡಲಿನಲ್ಲಿ ನೌಕೆ ಇಳಿಸಿರುವ ನಾವು ಒಂದು ದಡವನ್ನು ಮುಟ್ಟುವ ಅಗತ್ಯವಿದೆ. ಅದನ್ನು ಬಿಟ್ಟು ಚಿಂತಿಸುತ್ತಾ ಕೂತರೇಗೆ? ಮುಳುಗುವುದು ಬೇಡ, ಹುಟ್ಟನ್ನ ಹಿಡಿದು ದಡ ಮುಟ್ಟಿಬಿಡೋಣವೆಂದು ಕವಿ ಅಬಿಪ್ರಾಯಿಸಿದ್ದಾರೆ.

ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನ

ಈ ಸಾಲುಗಳನ್ನು ಗಮನಿಸಿದಾಗ ಕೆ ಎಸ್ ನರಸಿಂಹಸ್ವಾಮಿ ಅವರ “ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು” ಎಂಬ ಸಾಲುಗಳೂ ನೆನಪಾಗುತ್ತವೆ. ಪ್ರೀತಿಯಲ್ಲೇ ಆಗಲಿ, ದಾಂಪತ್ಯದಲ್ಲೇ ಆಗಲಿ ಹೊಂದಾಣಿಕೆ ಮುಕ್ಯ. ಎತ್ತು ಏರಿಗೇಳಿದರೆ, ಕೋಣ ನೀರಿಗೆ ಎಳಿತ್ತಿತ್ತೆಂಬ ಗಾದೆಯಂತೆ ಗಂಡು ಹೆಣ್ಣು ತದ್ವಿರುದ್ದವಾದರೆ ದಾಂಪತ್ಯವಾಗಲಿ, ಪ್ರೀತಿಯಾಗಲಿ ಬಹುಕಾಲ ಉಳಿಯುವುದಿಲ್ಲ. ನನ್ನ ಕೈಯನ್ನು ಹಿಡಿದು ಸಪ್ತಪದಿ ತುಳಿದು ಬಂದಿರುವ ಮಡದಿಯನ್ನು ಕುರಿತು ನಿನ್ನ ದುಕ್ಕವೇನಿದೆಯೋ ಅದನ್ನು ನುಂಗಿ ಒಮ್ಮೆ ನಕ್ಕುಬಿಡು. ನಿನ್ನ ನಗುಮುಕವ ಕಂಡು ನಾನೂನು ನಕ್ಕುಬಿಡುತ್ತೇನೆ ಎಂಬ ಕವಿಯ ನಿಲುವು ದಾಂಪತ್ಯದಲ್ಲಿ ಒಲವಿನ ಪಾತ್ರವೆಶ್ಟಿದೆ ಎಂಬುದನ್ನು ಒತ್ತಿ ಹೇಳುತ್ತದೆ.

ಮುಂದುವರೆಯುವುದು…

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: