ಗ್ಯಾಲೆಸ್ಜ್ನಾಕ್ – ಕ್ರೊಯೇಶಿಯಾದಲ್ಲಿನ ಹ್ರುದಯ ಆಕಾರದ ದ್ವೀಪ

– .

ಕ್ರೊಯೇಶಿಯಾದಲ್ಲಿ ಗ್ಯಾಲೆಸ್ಜ್ನಾಕ್ ಎಂಬ ದ್ವೀಪವಿದೆ. ಇಲ್ಲಿ ಜನವಸತಿಯಿಲ್ಲ, ಮೇಲ್ಮೈ ತುಂಬಾ ಚಿಕ್ಕದಾಗಿದೆ, ನೈಸರ‍್ಗಿಕ ಸೌಂದರ‍್ಯವಿಲ್ಲ, ಗಿಡ ಮರಗಳೂ ಸಹ ಕಡಿಮೆ, ಆದರೂ ಇದು ಪ್ರಪಂಚದ ಎಲ್ಲಾ ಪ್ರೇಮಿಗಳ ಮನದಲ್ಲಿ ಪ್ರೇಮದ ಕಿಚ್ಚು ಹಚ್ಚುವ ದ್ವೀಪ. ಹಾಗಾದಲ್ಲಿ ಇದರ ವಿಶೇಶತೆ ಏನು? ಪ್ರಪಂಚದಲ್ಲಿರುವ ಅನೇಕ ದ್ವೀಪಗಳಂತೆ ಇದೂ ಸಹ ಒಂದು ದ್ವೀಪ. ಇತರೆ ದ್ವೀಪಗಳಿಂದ ಇದನ್ನು ಪ್ರತ್ಯೇಕಿಸಿರುವುದು ಅದರ ವಿಶಿಶ್ಟ ನೋಟ, ಕಾರಣ ಈ ಪುಟ್ಟ ದ್ವೀಪವಿರುವುದು ಹ್ರುದಯದ ಆಕಾರದಲ್ಲಿ.

2009ರಲ್ಲಿ ಗೂಗಲ್ ನಲ್ಲಿ ಈ ದ್ವೀಪದ ವಿಶಿಶ್ಟ ಆಕಾರವನ್ನು ಜಾಲತಾಣದಲ್ಲಿ ದಾಕಲಿಸಿದಾಗ, ಈ ದ್ವೀಪ ಮೊದಲ ಬಾರಿಗೆ ಸಾರ‍್ವಜನಿಕರ ಗಮನ ಸೆಳೆಯಿತು. ಇಂದು ಈ ದ್ವೀಪವನ್ನು “ಐಲೆಂಡ್ ಆಪ್ ಲವ್” ಅತವಾ “ಪ್ರೇಮಿಗಳ ದ್ವೀಪ” ಎಂಬ ಅಡ್ಡ ಹೆಸರಿನಿಂದ ಗುರುತಿಸಲಾಗುತ್ತದೆ. ಪ್ರೇಮಿಗಳಿಗಿಂತ ಇದು ದಂಪತಿಗಳಿಗೆ ಅಚ್ಚುಮೆಚ್ಚಿನ ತಾಣ. ದಂಪತಿಗಳು ಮದುಚಂದ್ರಕ್ಕೆ, ವಾರ‍್ಶಿಕೋತ್ಸವವನ್ನು ಆಚರಿಸಲು ಈ ದ್ವೀಪಕ್ಕೆ ಬರುತ್ತಾರೆ. ಇದರೊಂದಿಗೆ ಯುವಕರು ಪ್ರಿಯತಮೆಗೆ ತಮ್ಮ ಪ್ರೇಮವನ್ನು ಪ್ರಸ್ತಾಪಿಸುವ ಸ್ತಳವಾಗಿ ಗ್ಯಾಲೆಸ್ಜ್ನಾಕ್ ದ್ವೀಪವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ದ್ವೀಪದಲ್ಲಿ ಜನವಸತಿಯಿಲ್ಲ, ಪ್ರವಾಸಿ ಸೌಲಬ್ಯವಿಲ್ಲ, ಮಾನವ ನಿರ‍್ಮಿತ ಕಟ್ಟಡವಿಲ್ಲ, ಹಾಗಾದರೆ ಇಲ್ಲಿ ಏನು ಮಾಡಲು ಸಾದ್ಯ ಎಂಬ ಪ್ರಶ್ನೆ ಉದ್ಬವಿಸುತ್ತದೆ ಅಲ್ಲವೆ? ಆದರೆ ಈ ದ್ವೀಪದ ಆಕರ‍್ಶಣೆ ಇರುವುದೇ ಇಲ್ಲಿ. ಕಾಡು, ಗದ್ದಲವಿಲ್ಲದ ಶಾಂತ ವಾತಾವರಣವಿರುವುದರಿಂದ ಏಕಾಂತ ಬಯಸುವ ಜೋಡಿಗಳಿಗೆ ಇದಕ್ಕಿಂತಾ ಉತ್ತಮ ಪ್ರದೇಶ ಮತ್ತಾವುದಿದೆ? ಗ್ಯಾಲೆಸ್ಜ್ನಾಕ್ ದ್ವೀಪವು ತನ್ನ ಸುತ್ತ ಹಲವಾರು ಬೆಣಚುಕಲ್ಲಿನ ಕರಾವಳಿಯನ್ನು ಹೊಂದಿದೆ. ಇಲ್ಲಿನ ಕಡಲ ತೀರವು ಕ್ರೊಯೇಶಿಯಾದ ಕಡಲ ತೀರದಶ್ಟು ಉತ್ತಮವಲ್ಲದಿದ್ದರೂ, ಪ್ರಣಯ ಪಕ್ಶಿಗಳು ಈಜುವುದನ್ನು ಆನಂದಿಸಲು ಆಹ್ಲಾದಕರ ವಾತಾವರಣ ಇಲ್ಲಿದೆ.

ಗ್ಯಾಲೆಸ್ಜ್ನಾಕ್ ದ್ವೀಪವು ಪಚ್ಚೆ ನೀಲಿ ಸಮುದ್ರದಿಂದ ಸುತ್ತುವರೆದಿದೆ. ಇದು ಇಲ್ಲಿನ ಕಡಲ ತೀರದಲ್ಲಿ ಸ್ವರ‍್ಗವನ್ನೇ ಸ್ರುಶ್ಟಿಸಿದೆ. ಇಲ್ಲಿಗೆ ಬೇಟಿ ನೀಡುವ ಜೋಡಿಗಳು ಹಲವಾರು ದಿನ ಇಲ್ಲೇ ಉಳಿಯಬೇಕು ಎಂದು ಸಂಕಲ್ಪಿಸಿದರೂ, ಯಾವುದೇ ವಸತಿ ಸೌಕರ‍್ಯವಿಲ್ಲದ ಕಾರಣ ಅದು ಸಾದ್ಯವಾಗಿಲ್ಲ. ಇಶ್ಟರ ಮೇಲೂ ಇಲ್ಲೇ ಉಳಿಯಬೇಕು ಎನ್ನುವವರು ಕ್ಯಾಂಪಿಗ್ ಆಯ್ಕೆ ಮಾಡಿಕೊಳ್ಳಬೇಕು. ಬಹಳಶ್ಟು ಪ್ರವಾಸಿಗರು ಈ ದ್ವೀಪಕ್ಕೆ ಹತ್ತಿರದ ದ್ವೀಪವಾದ ಪಾಸ್ಮನ್ ಅತವಾ ಜುದರ್ ನಗರದಲ್ಲಿ ವಾಸ್ತವ್ಯ ಹೂಡುತ್ತಾರೆ. ಗ್ಯಾಲೆಸ್ಜ್ನಾಕ್ ದ್ವೀಪಕ್ಕೆ ಹೋಗಿ ಬರಲು ವಿಹಾರ ನೌಕೆಯನ್ನು ಅತವಾ ಬೋಟುಗಳನ್ನು ಬಾಡಿಗೆ ಆದಾರದ ಮೇಲೆ ಪಡೆಯಬಹುದು. ಬಾಡಿಗೆಗೆ ಬೋಟುಗಳನ್ನು ನೀಡುವ ಅನೇಕ ಸಂಸ್ತೆಗಳು ಇಲ್ಲಿವೆ.

ಪ್ರೀತಿಯ ಚಿಹ್ನೆಯಂತಿರುವ ಈ ದ್ವೀಪ “ಶಾಂತಿಯ ದ್ವೀಪ” ಎಂಬ ಬಿರುದನ್ನೂ ಸಹ ಹೊಂದಿದೆ. ಈ ದ್ವೀಪವನ್ನು ತನ್ನ ಒಡೆತನದಲ್ಲಿ ಇರಿಸಿಕೊಂಡಿರುವ ಕುಟುಂಬವು ಇದರಲ್ಲಿ ಆಲಿವ್ ಮರಗಳನ್ನು ನೆಟ್ಟಿದೆ. ಆಲಿವ್ ಮರ ಪ್ರೀತಿಯ ಮತ್ತು ಶಾಂತಿಯ ಸಂಕೇತವಾಗಿದೆ. “ದಿ ವಲ್ರ‍್ಡ್ ಆರ‍್ಕಿಪೆಲಾಗೋ ಆಪ್ ಲವ್” ಎಂಬ ಯೋಜನೆಯ ಮೂಲಕ ಪ್ರಪಂಚದಲ್ಲಿನ ಇತರೆ ಹ್ರುದಯಾಕಾರದ ದ್ವೀಪಗಳನ್ನು ಗ್ಯಾಲೆಸ್ಜ್ನಾಕ್ ದ್ವೀಪದ ಜೊತೆ ಸಂರಕ್ಶಿಸುವ ಏರ‍್ಪಾಡನ್ನು ಕ್ರೊಯೇಶಿಯಾದ ಪ್ರವಾಸೋದ್ಯಮ ಸಚಿವಾಲಯ ಮಾಡುತ್ತಿದೆ.

ಪ್ರಣಯ ಪಕ್ಶಿಗಳಿಗೆ ಇದು ಅದ್ಬುತ ತಾಣವಾಗಿದೆ. ಪಿಕ್ನಿಕ್, ವಿಶ್ರಾಂತಿ ಪಡೆಯಲು, ಕ್ಯಾಂಪಿಂಗ್ ಮಾಡಲು ಇದು ಪ್ರಶಸ್ತವಾಗಿದೆ. 500 ಮೀಟರ್ ಅಗಲದ ಈ ಪುಟ್ಟ ದ್ವೀಪದ ವಿಸ್ತೀರ‍್ಣ 0.132 ಚದರ ಕಿಲೋಮೀಟರ್. ಈ ದ್ವೀಪ ಕಾಸಗಿ ಒಡೆತನದಲ್ಲಿರುವ ಕಾರಣ ಇದರ ವೀಕ್ಶಣೆಗೆ ಮುಂಗಡ ಪರವಾನಗಿಯನ್ನು ಪಡೆಯಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: flickr.com, orvasyachting.com, camping-simuni.hr, esa.int, ekornaexperience.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: