ವಿಚಿತ್ರ ಮರದ ಕನ್ನಡಕಗಳು

– .

ಈ ವಿಚಿತ್ರ ಮರದ ಕನ್ನಡಕಗಳನ್ನು ತಂಡ್ರಾ ಪ್ರದೇಶದ ಜನ ಬಳಸುತ್ತಾರೆ. ತಂಡ್ರಾ ಪದದ ಮೂಲ ಪಿನ್ನಿಶ್ ಪದವಾದ ‘ತುಂತುರಿ’. ತುಂತುರಿ ಎಂದರೆ ಮರಗಳಿಲ್ಲದ ಬಯಲು ಪ್ರದೇಶ ಎಂಬ ಅರ‍್ತ ಬರುತ್ತದೆ. ಹಿಮದಿಂದ ಆವ್ರುತಗೊಂಡ ಬೂಮಿ, ಅತ್ಯಂತ ಕಡಿಮೆ ತಾಪಮಾನ, ಕಡಿಮೆ ಮಳೆ, ಈ ಕಾರಣದಿಂದ ಮರಗಳ ಬೆಳವಣಿಗೆ ಕುಂಟಿತವಾಗಿರುತ್ತದೆ.

ತಂಡ್ರಾ ಪ್ರದೇಶದ ಜನ ಮರದ ಕನ್ನಡಕಗಳನ್ನು ಬಳಸುವ ಉದ್ದೇಶವಾದರೂ ಏನು?

ಹಿಮದ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ, ಅವು ಪ್ರತಿಪಲನಗೊಂಡು ಅದರಿಂದ ನೇರಳಾತೀತ ವಿಕಿರಣಗಳು ಹೊರಹೊಮ್ಮುತ್ತವೆ. ಇದು ತೀವ್ರಗೊಂಡು ನೇರವಾಗಿ ಕಣ್ಣಿನ ಮೇಲೆ ಬಿದ್ದಾಗ, ಕಣ್ಣಿನಲ್ಲಿರುವ ಕಾರ‍್ನಿಯಾಗೆ ತೊಂದರೆಯಾಗಬಹುದು. ಇದರಿಂದ ಕಣ್ಣು ತಾತ್ಕಾಲಿಕ ಅತವಾ ಶಾಶ್ವತ ಕುರುಡುತನಕ್ಕೆ ಇಡಾಗುವ ಸಂಬವ ಸಹ ಇದೆ. ಹಿಮ ಕುರುಡುತನವನ್ನು ವೈಜ್ನಾನಿಕವಾಗಿ ಪೋಟೋಕೆರಾಟೈಟಿಸ್ ಎಂದು ಕರೆಯಲಾಗುತ್ತದೆ. ಹಿಮ ಕುರುಡುತನ ತೀವ್ರವಾದ ನೋವಿನಿಂದ ಕೂಡಿರುತ್ತದೆ ಹಾಗೂ ಈ ನೋವಿನಿಂದ ಹೊರಬರಲು ಸಾಕಶ್ಟು ಸಮಯ ಬೇಕು.

ಈ ಮರದ ಕನ್ನಡಕಗಳನ್ನು ಕಣ್ಣಿನ ರಕ್ಶಣೆಗಾಗಿ ಇನ್ಯೂಟ್, ಯುಪಿಕ್, ಅಲೆಯಟ್ ಮತ್ತು ಇತರ ಆರ‍್ಕ್ಟಿಕ್ ಜನರು ತಯಾರಿಸಿ ಬಳಸುತ್ತಿದ್ದರು. ಈ ಪ್ರದೇಶದಲ್ಲಿ ಸಿಗುವ ಯಾವುದೇ ಮರ, ಪ್ರಾಣಿಗಳ ಮೂಳೆ, ವಾಲ್ರಸ್ (ಕಡಲ ಸಿಂಹ) ದಂತ, ಕ್ಯಾರಿಬೋ (ಹಿಮ ಸಾರಂಗ)ದ ಕೊಂಬುಗಳು ಈ ಕನ್ನಡಕಗಳ ತಯಾರಿಕೆಗೆ ಸಾಮಾನ್ಯ ಆಯ್ಕೆಗಳಾಗಿವೆ. ಈ ಮರದ ಕನ್ನಡಕಗಳ ತಯಾರಿಕೆ ಇಂದು ನೆನ್ನೆಯದಲ್ಲ. ಇದಕ್ಕೆ ಸಾವಿರಾರು ವರ‍್ಶಗಳ ಇತಿಹಾಸವಿದೆ. ಇದರ ಮೂಲವನ್ನು ಹುಡುಕುತ್ತಾ ಹೋದಲ್ಲಿ, ಇದು ಅಲಾಸ್ಕಾದ ಪಶ್ಚಿಮ ಕರಾವಳಿಯಲ್ಲಿ ವಾಸಿಸುತ್ತಿದ್ದ ಪ್ರಾಚೀನ ಬೇರಿಂಗ್ ಸಮುದ್ರ ಜನಾಂಗಕ್ಕೆ ಬಂದು ನಿಲ್ಲುತ್ತದೆ. ಇವರೇ ಇಂದಿನ ಇನ್ಯೂಟ್ ಜನಾಂಗದ ಮೂಲ ಪುರುಶರು.

ಈ ಮರದ ಕನ್ನಡಕಗಳು ಒಂದು ರೀತಿಯಲ್ಲಿ ಸನ್ ಗ್ಲಾಸಸ್ ನಂತೆ ಬಳಕೆಯಾಗುತ್ತವೆ. ತೊಡುವವರ ಮುಕದ ಅಳತೆಗೆ ಸರಿಹೊಂದುವಂತೆ ಇವುಗಳನ್ನು ತಯಾರಿಸಲಾಗುತ್ತದೆ. ಕಡಲ ಸಿಂಹದ ಚರ‍್ಮದಿಂದ ಅತವಾ ಕ್ಯಾರಿಬೋದ ನರಗಳಿಂದ, ಈ ಕನ್ನಡಕವನ್ನು ಹಿಂದಕ್ಕೆ ಬಿಗಿದು ಕಟ್ಟಲು ಪಟ್ಟಿಗಳನ್ನು ತಯಾರಿಸುತ್ತಾರೆ. ಹೀಗೆ ಕಟ್ಟುವುದರಿಂದ ಕನ್ನಡಕವು ಮುಕದ ಮೇಲೆ ಗಟ್ಟಿಯಾಗಿ ಕೂರುತ್ತದೆ ಹಾಗೂ ಕಣ್ಣನ್ನು ಸಂಪೂರ‍್ಣವಾಗಿ ಕಾಪಾಡುತ್ತದೆ.

ಈ ಕನ್ನಡಕಗಳ ವಿಶೇಶತೆಯೆಂದರೆ, ಇದರ ಮದ್ಯ ಬಾಗದಲ್ಲಿ ಕಣ್ಣಿನ ಮುಂದೆ ಕಿರಿದಾದ ಸಮತಲವಾದ ಸೀಳನ್ನು ತೆರೆದು, ಅದರ ಮೂಲಕ ನೋಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ಸಣ್ಣ ಸೀಳು, ಒಳ ಬರುವ ಬೆಳಕಿನ ಕಿರಣಗಳನ್ನು ಕಡಿಮೆ ಮಾಡಿ, ಪ್ರತಿಪಲನದ ಹೊಳಪನ್ನು ತಗ್ಗಿಸುತ್ತದೆ. ಈ ಕಿರಿದಾದ ಸೀಳು ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡುವುದಲ್ಲದೆ, ದ್ರುಶ್ಟಿಯ ತೀಕ್ಶ್ಣತೆಯನ್ನೂ ಸುದಾರಿಸಲು ಸಹಾಯಕವಾಗಿದೆ. ಮುಂದೊಂದು ದಿನ ಇದೇ ರೀತಿಯ ಕನ್ನಡಕಗಳು ವಿಶ್ವದಾದ್ಯಂತ ಪ್ಯಾಶನ್ ಆಗುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, wikipedia.org, vancouvermaritimemuseum.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: