ವಿದ್ಯಾರ‍್ತಿ ಮಿತ್ರರಿಗೊಂದು ಪತ್ರ

– .

ನನ್ನ ನಲ್ಮೆಯ ವಿದ್ಯಾರ‍್ತಿ ಮಿತ್ರರಿಗೆ ಶುಬ ಹಾರೈಕೆಗಳು. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಶೆ ಆರಂಬಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ ಸಕಲ ಸಿದ್ದತೆ ಮಾಡಿಕೊಂಡಿರುವೆಂದು ಬಾವಿಸಿರುವೆ.

ಒಂದೆಡೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯು ಸಾರ‍್ವಕಾಲಿಕವಾದದು. ಮೊಗ್ಗಿನ ಮನಸಿನ ಮಕ್ಕಳನ್ನು ಜ್ನಾನದ ಪರಿಮಳವ ಬೀರುವ ಹೂಗಳಂತಾಗಿಸುವ ಕೆಲಸವನ್ನು ಶಿಕ್ಶಣವು ಮಾಡುತ್ತದೆ. ನಾಲ್ಕು ಗೋಡೆಗಳ ಮದ್ಯೆ, ಕಪ್ಪು/ಹಸಿರು ಹಲಗೆಯ ಮೇಲೆ, ಪುಸ್ತಕ ರಾಶಿಗಳ ನಡುವೆ, ಶೈಕ್ಶಣಿಕ ವರ‍್ಶದಲ್ಲಿ ಕಲಿತ ವಿದ್ಯಾರ‍್ತಿಗಳ ಕಲಿಕೆಯ ಪಲಿತವನ್ನು ಅಳೆಯಲು ಇರುವ ಮಾನದಂಡಗಳೇ ಪರೀಕ್ಶೆಗಳು.

ಪೋಶಕರು ಮತ್ತು ಶಿಕ್ಶಕರ ಕನಸುಗಳನ್ನು ನನಸಾಗಿಸುವ ಹೊಣೆ ಹೊತ್ತು, ವರ‍್ಶವೆಲ್ಲಾ ಕಲಿತಿದ್ದನ್ನು ಮೂರು ಗಂಟೆಗಳ ಅವದಿಗಳೊಳಗೆ, ಎಂಬತ್ತು ಅತವಾ ನೂರು ಅಂಕಗಳ ಪ್ರಶ್ನೆಗಳನ್ನು ವಿದ್ಯಾರ‍್ತಿಗಳು ಅರ‍್ತೈಸಿಕೊಂಡು ಉತ್ತರ ಬರೆಯುತ್ತಾರೆ. ಪರೀಕ್ಶೆಯ ನಂತರ ಪಲಿತಾಂಶ ಬಂದೇ ಬರುತ್ತದೆ. ಕೆಲವರು ಉತ್ತೀರ‍್ಣಗೊಂಡರೆ, ಕೆಲವರು ಅನುತ್ತೀರ‍್ಣಗೊಳ್ಳುವ ವಿದ್ಯಾರ‍್ತಿಗಳಿರುತ್ತಾರೆ.

ಪರೀಕ್ಶೆಯೆಂದರೆ ಸಾಕು ಕಲಿಕೆಯಲ್ಲಿ ಹಿಂದುಳಿದ ಕೆಲವು ವಿದ್ಯಾರ‍್ತಿಗಳಿಗೆ ಬಯದ ವಾತಾವರಣ ನಿರ‍್ಮಾಣವಾಗಿರುತ್ತದೆ. ಆದರೆ ಶೈಕ್ಶಣಿಕ ವರ‍್ಶದಲ್ಲಿ ಕಲಿತ ಜ್ನಾನದ ಮಟ್ಟವನ್ನು ನಿರ‍್ದರಿಸುವ ಔಪಚಾರಿಕ ಪರೀಕ್ಶೆಗಳ ಬಗ್ಗೆ ವಿದ್ಯಾರ‍್ತಿಗಳು ಬಯ ಪಡದೇ ಎದುರಿಸುವ ಕಲೆಯನ್ನು ರೂಪಿಸುವ ಜವಾಬ್ದಾರಿ ಪೋಶಕರು ಮತ್ತು ಶಿಕ್ಶಕರ ಮೇಲಿದೆ. ಮತ್ತೊಂದೆಡೆ ವಿದ್ಯಾರ‍್ತಿಗಳು ಸಹ ಮೊದಲು ಪರೀಕ್ಶೆಯನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದಿರಬೇಕು.

ಆತ್ಮೀಯ ವಿದ್ಯಾರ‍್ತಿ ಮಿತ್ರರೇ ಪರೀಕ್ಶೆಯೆಂಬ ಯುದ್ದದ ಸಮಯ ಹತ್ತಿರವಿರುವ ಸಮಯದಲ್ಲಿ ಶಸ್ತ್ರಾಸ್ತ್ರ ಅಬ್ಯಾಸ ಮಾಡುವ ಬದಲಾಗಿ ಶೈಕ್ಶಣಿಕ ವರ‍್ಶದ ಆರಂಬದಿಂದಲೇ ನಿಗದಿತ ವೇಳಾಪಟ್ಟಿ ಹಾಕಿಕೊಂಡು, ಆಯಾ ದಿನದ ಪಾಟಗಳಿಗೆ ಸಂಬಂದಿಸಿದ ಅನುಮಾನ, ಗೊಂದಲಗಳನ್ನು ಶಿಕ್ಶಕರು, ಪೋಶಕರು, ಸ್ನೇಹಿತರ ಜೊತೆ ಚರ‍್ಚಿಸಿ ಬಗೆಹರಿಸಿಕೊಳ್ಳಿರಿ. ಆಗ ಕಲಿಕೆಯಲ್ಲಿ ಪ್ರಗತಿ ಕಂಡು ಬರುತ್ತದೆ.

ಇನ್ನು ಪರೀಕ್ಶೆಗಳು ಸಮೀಪಿಸಿದಾಗ ವಿದ್ಯಾರ‍್ತಿಗಳು ಪರೀಕ್ಶೆಯ ಬಗ್ಗೆ ಬಯ ಪಡುವ ಅಗತ್ಯವಿಲ್ಲ. ಪರೀಕ್ಶೆಗಳು ನಮ್ಮ ಕಲಿಕೆಯ ಜ್ನಾನದ ಮಟ್ಟವನ್ನು ಆಳೆಯುವ ಮಾಪನಗಳೇ ಹೊರತು, ನಮ್ಮ ವೈಯುಕ್ತಿಕ ಪ್ರತಿಬೆಗಳನ್ನು, ಕೌಶಲ್ಯಗಳನ್ನು ಆಳೆಯುವ ಮಾನದಂಡಗಳಲ್ಲ ಎಂಬುದನ್ನು ಅರಿತಿರಬೇಕು. ಪರೀಕ್ಶೆಯ ಕೇಂದ್ರಗಳಿಗೆ ತೆರಳುವ ಮುನ್ನ ಪರೀಕ್ಶೆಯ ಬಯವನ್ನು ಮರೆತು ಹೋಗಬೇಕು.

ಪ್ರಶ್ನೆ ಪತ್ರಿಕೆಗಳನ್ನು ಸಾವದಾನವಾಗಿ ನೋಡಿಕೊಂಡು ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ನಿರ‍್ದಿಶ್ಟ ಹಾಗೂ ನಿಕರವಾದ ಉತ್ತರವನ್ನು ಸ್ಪಶ್ಟವಾಗಿ ಬರೆಯುವ ಮನೋಬಾವ ರೂಡಿಸಿಕೊಳ್ಳಿರಿ. ನಕಲು ಮಾಡುವ ಆಲೋಚನೆ ಹೊಂದದೆ, ಗೊತ್ತಿರುವುದನ್ನು ಪ್ರಾಮಾಣಿಕವಾಗಿ ಬರೆಯಿರಿ. ಪರೀಕ್ಶೆಯಲ್ಲಿ ಏನಾದರೂ ಕಡಿಮೆ ಅಂಕ ಬಂದರೆ ಅತವಾ ಅನುತ್ತೀರ‍್ಣಗೊಳ್ಳುವ ಪೂರ‍್ವಾಗ್ರಹ ಪೀಡಿತ ಮನೋಬಾವದಿಂದ ಹೊರಬಂದು ಆತ್ಮಸ್ತೈರ‍್ಯದಿಂದ ಪರೀಕ್ಶೆಯನ್ನು ಎದುರಿಸಿ. ಪರೀಕ್ಶೆಯೆಂದರೆ ಯುದ್ದಬೂಮಿಯಲ್ಲ, ನಮ್ಮ ಜ್ನಾನ ಮಟ್ಟವನ್ನು ಪರೀಕ್ಶಿಸುವ ಪ್ರಯೋಗಾಲಯವಶ್ಟೇ ಎಂದು ಬಾವಿಸಿರಿ. ಪೋಶಕರ ಹಾಗೂ ಶಿಕ್ಶಕರ ಬರವಸೆಗಳನ್ನು ಹುಸಿಗೊಳಿಸದೆ ಸಾಕಾರ ಮಾಡೇ ಮಾಡುತ್ತೇನೆ ಎಂಬ ದ್ರುಡ ಸಂಕಲ್ಪವನ್ನು ರೂಡಿಸಿಕೊಂಡರೆ ಸಾಕು ಪರೀಕ್ಶೆ ಬಯದ ಪೆಡಂಬೂತ ದೂರವಾಗುತ್ತದೆ.

ಶಾಲೆಯಲ್ಲಿ ಶಿಕ್ಶಕರು ನೀಡಿರುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿರಿ. ಪರೀಕ್ಶೆ ಮುಗಿಯುವರೆಗೂ ಸಾಮಾಜಿಕ ಜಾಲತಾಣಗಳಿಂದ, ಮನಸ್ಸನ್ನು ವಿಚಲಿತಗೊಳಿಸುವ ಮೊಬೈಲು, ಆರೋಗ್ಯ ಹದಗೆಡಿಸುವ ತಿಂಡಿ ತಿನಿಸುಗಳಿಂದ ದೂರವಿರಿ. ಪರೀಕ್ಶೆ ಸಮಯದಲ್ಲಿ ಪೋಶಕರೊಂದಿಗೆ ಪರೀಕ್ಶೆ ಕೇಂದ್ರಗಳಿಗೆ ಹೋಗಿ ಬನ್ನಿರಿ. ಪರೀಕ್ಶೆ ಮುಗಿದ ನಂತರ ಆ ದಿನದ ಪ್ರಶ್ನೆ ಪತ್ರಿಕೆಯ ಬಗ್ಗೆ ಚಿಂತಿಸದೆ, ಮುಂದಿನ ವಿಶಯದ ಬಗ್ಗೆ ಹೆಚ್ಚು ಗಮನ ನೀಡಿರಿ. ಪ್ರಶ್ನೆ ಪತ್ರಿಕೆಗಳ ಸೋರಿಕೆಯ ವದಂತಿಗಳ ಬಗ್ಗೆ ಗಮನ ನೀಡದಿರಿ. ಪರೀಕ್ಶೆಯ ಸಮಯ ಆರಂಬವಾಗುವ ಮುಂಚೆಯೇ ಪರೀಕ್ಶೆ ಕೇಂದ್ರಗಳಿಗೆ ಹೋಗಿರಿ. ಪರೀಕ್ಶೆ ಕೊಟಡಿಯಲ್ಲಿ ಏಕಾಗ್ರತೆಯಿಂದ ಪ್ರಶ್ನೆಗಳನ್ನು ಅರ‍್ತ ಮಾಡಿಕೊಂಡು, ಸೂಕ್ತವಾದ ಹಾಗೂ ನಿರ‍್ದಿಶ್ಟ ಉತ್ತರ ಬರೆಯಿರಿ. ಪ್ರಮುಕ ಮುಕ್ಯಾಂಶಗಳಿಗೆ ಅಡಿಗೆರೆ ಹಾಕಿರಿ. ಬರೆದಾದ ಮೇಲೆ ಉತ್ತರಗಳನ್ನು ಒಮ್ಮೆ ಗಮನಿಸಿರಿ. ಪರೀಕ್ಶೆ ಕೇಂದ್ರಗಳಲ್ಲಿ ಏನಾದರೂ ಅಕ್ರಮಗಳು ಕಂಡು ಬಂದರೆ ಪೋಶಕರು ಹಾಗೂ ಶಿಕ್ಶಕರ ಗಮನಕ್ಕೆ ತನ್ನಿರಿ.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಶೆ ಬರೆಯಲು ಸಿದ್ದವಾಗಿರುವ ಎಲ್ಲಾ ವಿದ್ಯಾರ‍್ತಿ ಮಿತ್ರರೇ ಪರೀಕ್ಶೆ ಬಯವ ಬಿಟ್ಟು, ಜೀವನದ ಮುಂದಿನ ಹಂತಕ್ಕೆ ಪರೀಕ್ಶೆಗಳು ಸೂಕ್ತ ವೇದಿಕೆಯೆಂದು ಬಾವಿಸಿ, ಸಿಕ್ಕಿರುವ ವೇದಿಕೆಯನ್ನು ಸಮರ‍್ಪಕವಾಗಿ ಬಳಸಿಕೊಂಡರೆ ವಿದ್ಯಾರ‍್ತಿ ಜೀವನವು ಸಾರ‍್ತಕತೆಯನ್ನು ಪಡೆಯುತ್ತದೆಂಬುದನ್ನು ಮರೆಯದಿರಿ.

ಅಂತಿಮವಾಗಿ ವಿದ್ಯಾರ‍್ತಿ ಮಿತ್ರರೇ ಪರೀಕ್ಶೆಗಳ ಪಲಿತಾಂಶ ಬರುವ ದಿನದಂದು ಬಾವನಾತ್ಮಕ ಒತ್ತಡಗಳಿಗೆ ಒಳಗಾಗದಿರಿ. ಪರೀಕ್ಶೆ ಎಂದ ಮೇಲೆ ಉತ್ತೀರ‍್ಣ ಹಾಗೂ ಅನುತ್ತೀರ‍್ಣ ಸಹಜ. ಅಕಸ್ಮಾತ್ ಕಡಿಮೆ ಅಂಕಗಳು ಬಂದರೆ, ಅತವಾ ಅನುತ್ತೀರ‍್ಣಗೊಂಡಾಗ ಪೋಶಕರು, ಬಂದು ಬಾಂದವರು, ಸ್ನೇಹಿತರು, ಶಿಕ್ಶಕರು ಏನಾದರೂ ಅನ್ನುವರು, ಅವಮಾನಿಸುವರೆಂದು ಮಾನಸಿಕ ಕಿನ್ನತೆಯಿಂದ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆ ಮಾಡದಿರಿ. ಎಶ್ಟೋ ಮಹನೀಯರು ಮೊದಲ ಪರೀಕ್ಶೆಯಲ್ಲಿ ಅನುತ್ತೀರ‍್ಣಗೊಂಡರೂ ಮುಂದೆ ಮರು ಪರೀಕ್ಶೆಯಲ್ಲಿ ಉತ್ತೀರ‍್ಣಗೊಂಡು ಜೀವನದಲ್ಲಿ ದೊಡ್ಡ ಸಾದನೆಗಳನ್ನು ಮಾಡಿರುವರೆಂಬುದನ್ನು ಮರೆಯದಿರಿ.

ಈಸಬೇಕು ಇದ್ದು ಜಯಿಸಬೇಕು. ನಿಮ್ಮೆಲ್ಲರ ಕನಸುಗಳು ಸಾಕಾರಗೊಳ್ಳುವ ಸಮಯವಿದು. ಶುಬ ಹಾರೈಕೆಗಳು ನಿಮಗೆ.. ಒಳ್ಳೆಯದಾಗಲಿ ನಿಮಗೆ.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: