ಕೀನ್ಯಾದ ಗೂಳಿ ಕಾಳಗ

– .

ಗೂಳಿ ಕಾಳಗ ಮೆಕ್ಸಿಕೋ, ಸ್ಪೇನ್, ಕೊಲಂಬಿಯಾ ದೇಶಗಳಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಇಲ್ಲಿ ನಡೆಯುವ ಗೂಳಿ ಕಾಳಗಕ್ಕೂ ಕೀನ್ಯಾದ ಕಾಕಮೆಗಾದಲ್ಲಿನ ಗೂಳಿ ಕಾಳಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಗೂಳಿ ಕಾಳಗ ಹೊಸ ಆಯಾಮವೊಂದನ್ನು ತೆರೆಯುತ್ತದೆ. ಕೀನ್ಯಾದ ಪಶ್ಚಿಮ ಬಾಗದಲ್ಲಿರುವ ಕ್ರೀಡಾಂಗಣಗಳಲ್ಲಿ ಈ ಗೂಳಿ ಕಾಳಗವನ್ನು ಆಯೋಜಿಸಲಾಗುತ್ತದೆ. ನೀಲಿ ಆಕಾಶದ ಅಡಿಯಲ್ಲಿ, ಬೀಸುವ ಗಾಳಿಯಲ್ಲಿ ಸಾವಿರಾರು ಅಬಿಮಾನಿಗಳ ಒಕ್ಕೊರಲಿನ ಹರ‍್ಶೋದ್ಗಾರದ ನಡುವೆ, ಗೂಳಿಯ ತರಬೇತುದಾರರು ತಮ್ಮ ಗೂಳಿಯ ಸಮೇತ ಕ್ರೀಡಾಂಗಣದ ಮದ್ಯಬಾಗಕ್ಕೆ ಬರುತ್ತಾರೆ. ನೆರೆದಿರುವ ನೋಡುಗರು ತಮ್ಮ ಇಶ್ಟದ ಗೂಳಿಯ ಮೇಲೆ ಬಾಜಿ ಕಟ್ಟುತ್ತಾರೆ. ಗೂಳಿಗಳು ಕಾಲಿನಲ್ಲಿ ನೆಲವನ್ನು ಬಗೆಯುತ್ತಾ ದೂಳೆಬ್ಬಿಸಿ ಸೆಣೆಸಾಟಕ್ಕೆ ಮುಂದಾಗಿ ತಮ್ಮ ಎದುರಾಳಿಯ ಮೇಲೆ ದಾಳಿ ಮಾಡುತ್ತವೆ. ಹೀಗೆ ಮೊದಲಾಗುವ ಕಾಳಗ ಸರಿ ಹೊತ್ತಿನ ತನಕ ಅವ್ಯಾಹತವಾಗಿ ನಡೆಯುತ್ತದೆ. ಇದು ಕೀನ್ಯಾದ ಗೂಳಿ ಕಾಳಗದ ಒಂದು ನೋಟ.

ಕೀನ್ಯಾದ ನೈರೋಬಿಯಿಂದ 500 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಕೀನ್ಯಾದ ವಿವಿದ ಬಾಗಗಳಲ್ಲಿ ಗೂಳಿ ಕಾಳಗ ಆಯೋಜಿಸಲಾಗುತ್ತದೆ. ಮೆಕ್ಸಿಕೋ, ಸ್ಪೇನ್, ಕೊಲಂಬಿಯಾದಲ್ಲಿ ನಡೆಯುವ ಗೂಳಿ ಕಾಳಗದಲ್ಲಿ ಒಂದೇ ಗೂಳಿ ಮೈದಾನಕ್ಕೆ ಬಂದರೆ, ಕೀನ್ಯಾದಲ್ಲಿ ಇದರ ವರಸೆಯೇ ಬೇರೆ. ಇಲ್ಲಿ ಎರಡು ಗೂಳಿಗಳ ನಡುವೆ ದ್ವಂದ್ವ ಯುದ್ದವೇರ‍್ಪಡುತ್ತದೆ. ಅವುಗಳ ಸಾಮರ‍್ತ್ಯವನ್ನು ನೆರೆದಿರುವ ಸಾವಿರಾರು ನೋಡುಗರ ಸಮ್ಮುಕದಲ್ಲಿ ಒರೆಗೆ ಹಚ್ಚಲಾಗುತ್ತದೆ. ಹಾಗಾಗಿ ಇಲ್ಲಿ ಬೆಟ್ಟಿಂಗ್ ಸಹ ಅತ್ಯದಿಕ ಪ್ರಮಾಣದಲ್ಲಿರುತ್ತದೆ. ಕ್ರೀಡಾಂಗಣದಲ್ಲಿ ಮತ್ತು ಕ್ರೀಡಾಂಗಣದ ಸುತ್ತಮುತ್ತಲಿನ ಆಯಕಟ್ಟಿನ ಪ್ರದೇಶದಲ್ಲಿ ಸಾವಿರಾರು ಪ್ರೇಕ್ಶಕರು ನೆರೆದಿರುತ್ತಾರೆ. ಬಹಳಶ್ಟು ಜನ ಬಾಜಿ ಕಟ್ಟುವುದರಲ್ಲೇ ನಿರತರಾಗಿರುತ್ತಾರೆ. ಇಲ್ಲಿ ಕಾಳಗಕ್ಕೆ ತಯಾರಾಗಿರುವ ಗೂಳಿಗಳಿಗೆ ಕುತೂಹಲ ಕೆರಳಿಸುವ ಹೆಸರುಗಳನ್ನು ಇಡಲಾಗುತ್ತದೆ. ಹಾಲಿವುಡ್ಡಿನ ಜಾನಪದ ಹೆಸರಾದ ರ‍್ಯಾಂಬೋ, ವ್ರುತ್ತಿಪರ ಕುಸ್ತಿ ಪಟುವಾದ ಅಂಡರ್ ಟೇಕರ್, ಹಲ್ಕ್ ಹೋಗನ್, ಸೇನಾ, ಬ್ರೂಸ್ ಲೀ ಹೀಗೆ ತಮ್ಮ ಅಬಿಮಾನದ ಹೀರೋಗಳ ಹೆಸರಿನಿಂದ ಗೂಳಿಗಳನ್ನು ಕರೆಯಲಾಗುತ್ತದೆ.

ಕ್ರೀಡಾಂಗಣದಲ್ಲಿ ಗೂಳಿ ಕಾಳಗದ ದಿನ ಯುದ್ದದ ವಾತಾವರಣ ಸ್ರುಶ್ಟಿಯಾಗುತ್ತದೆ. ನೋಡುಗರು ಹುಚ್ಚೆದ್ದು ಕುಣಿಯುತ್ತಾರೆ. ಅವರುಗಳಿಗೆ ಆಸನವೇ ಬೇಕಿಲ್ಲ. ಕಾಳಗದ ಬಿಸಿ ಏರುತ್ತಿದ್ದಂತೆ ಸಾಂಪ್ರದಾಯಿಕ ಯುದ್ದ ಗೀತೆಗಳನ್ನು ಹಾಡುತ್ತಾ ಗಾಳಿಯಲ್ಲಿ ಗುದ್ದುತ್ತಾ, ಒಂದು ಹಳ್ಳಿಯ ಗೂಳಿ ಮತ್ತೊಂದು ಹಳ್ಳಿಯ ಗೂಳಿಯ ಸಂಗಡ ಕಾಳಗ ಮಾಡುವುದನ್ನು ಹುರಿದುಂಬಿಸುತ್ತಾರೆ. ಕಾಳಗ ತೀವ್ರವಾದಶ್ಟು ನೋಡುಗರ ಹುರಿದುಂಬಿಸುವಿಕೆ ಹೆಚ್ಚುತ್ತದೆ. ಗೂಳಿ ಕಾಳಗದಲ್ಲಿ ಪಾಲ್ಗೊಳ್ಳುವ ಗೂಳಿಗಳನ್ನು ಈ ನಿರ‍್ದಿಶ್ಟ ಉದ್ದೇಶಕ್ಕಾಗಿಯೇ ಸಾಕಲಾಗುತ್ತದೆ. ಈ ದಿನಕ್ಕಾಗಿ ಕೊಬ್ಬಿಸಲಾಗುತ್ತದೆ. ಗೂಳಿ ಕಾಳಗದ ಮುಂಚಿತವಾಗಿ ಗೂಳಿಗಳಿಗೆ ಸ್ತಳೀಯವಾಗಿ, ಮನೆಯಲ್ಲೇ ತಯಾರಿಸಿದ ಬಿಯರ್ ಕುಡಿಸಲಾಗುತ್ತದೆ ಮತ್ತು ಗಾಂಜಾದ ಹೊಗೆಯನ್ನೂ ಸಹ ನೀಡಲಾಗುತ್ತದೆ. ಇವೆಲ್ಲಾ ಗೂಳಿಗಳನ್ನು ಗೋರ ಕಾಳಗಕ್ಕೆ ತಯಾರು ಮಾಡುವ ಪ್ರಕ್ರಿಯೆಯಲ್ಲಿ ಸೇರಿವೆ.

ಕೀನ್ಯಾ ಸರ‍್ಕಾರವು ಪಶ್ಚಿಮ ಕೀನ್ಯಾದ ಗೂಳಿ ಕಾಳಗ ಪ್ರಯೋಜನವಿಲ್ಲದ್ದು ಎಂದು ಪರಿಗಣಿಸಿದ್ದರೂ, ಲುಹ್ಯಾ ಸಮುದಾಯದ ಸದಸ್ಯರಿಗೆ ಇದರಿಂದ ಇರುವ ಉಪಯುಕ್ತತೆಯನ್ನು ಮನಗಂಡು ಅಂತಿಮವಾಗಿ ಒಪ್ಪಿಗೆ ಸೂಚಿಸಿದೆ. ಕಾಕಮೆಗಾದ ಗೂಳಿ ಕಾಳಗ ಸ್ತಳೀಯ ಸಮುದಾಯದ ಸಂಸ್ಕ್ರುತಿಯ ಅಂಶವಾಗಿದೆ. ಹಲವಾರು ವರ‍್ಶಗಳಿಂದ ನಡೆದು ಬಂದಿರುವ ಗೂಳಿ ಕಾಳಗ ಇತ್ತೀಚೆಗೆ ಪ್ರವಾಸಿಗರ ಆಕರ‍್ಶಣೆಯಾಗಿ ಜನಪ್ರಿಯತೆ ಗಳಿಸಿದೆ.

ಪ್ರಾಣಿ ದಯಾಸಂಗದವರಿಂದ ಗೂಳಿ ಕಾಳಗಕ್ಕೆ ಸಾಕಶ್ಟು ವಿರೋದ ಬಂದರೂ, ಈ ಕಾಳಗದಲ್ಲಿ ಗಾಯಗೊಂಡ ಗೂಳಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಕ್ರಮ ಜಾರಿಗೆ ತಂದು ಗೂಳಿ ಕಾಳಗವನ್ನು ಮುಂದುವರೆಸಲಾಯಿತು. ಗೂಳಿ ಕಾಳಗವನ್ನು ಪಶ್ಚಿಮ ಕೀನ್ಯಾದಿಂದ, ಕೀನ್ಯಾದ ರಾಜದಾನಿಗೆ ಸ್ತಳಾಂತರಿಸುವ ಪ್ರಯತ್ನ ನಡೆಯಿತಾದರೂ, ಸ್ತಳೀಯರ ವಿರೋದದ ಕಾರಣ ಕಾರ‍್ಯರೂಪಕ್ಕೆ ತರಲಾಗಲಿಲ್ಲ. ಕಾಕಮೆಗಾದ ಗೂಳಿ ಕಾಳಗ ಅನೇಕ ಸವಾಲುಗಳನ್ನೂ ಮೆಟ್ಟಿನಿಂತು ತನ್ನ ಸಮುದಾಯದಲ್ಲಿನ ಸಮಗ್ರ ಸಾಮಾಜಿಕ ಸಾಂಸ್ಕ್ರುತಿಕ ಪಾತ್ರವನ್ನು ಮುಂದುವರೆಸಿದೆ. ಇಲ್ಲಿನ ನಿವಾಸಿಗಳು ಬಹುಮಾನದ ಹಣ ಮತ್ತು ಪ್ರಾಯೋಜಕತ್ವಗಳ ರೂಪದಲ್ಲಿ ಸಾಕಶ್ಟು ಹಣವನ್ನು ವಿನಿಯೋಗಿಸುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಗೂಳಿ ಕಾಳಗವನ್ನು ತಮ್ಮ ಬೆಂಬಲಿಗರನ್ನು ಹುರಿದುಂಬಿಸಲು ಬಳಸಿಕೊಳ್ಳುವುದು ಮಾಮೂಲಿಯಾಗಿದೆ. ಸ್ತಳೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಇದು ಆಕರ‍್ಶಣೆಯ ಕೇಂದ್ರವಾಗಿದ್ದು, ಇದರಿಂದ ಕೀನ್ಯಾದ ಪ್ರವಾಸೋದ್ಯಮ ಸಹ ಉತ್ತಮವಾಗಿ ಅಬಿವ್ರುದ್ದಿಯಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikimedia.org, potentash.com, bbc.com, kenyavetassociation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: