ಕವಿತೆ: ನನ್ನೂರು ಇದು ನನ್ನೂರು

ಮಹೇಶ ಸಿ. ಸಿ.

ನನ್ನೂರು ಇದು ನನ್ನೂರು
ಪ್ರೀತಿಯ ತೋರುವ ತವರೂರು
ನನ್ನೂರು ಇದು ನನ್ನೂರು
ಸರ‍್ವದರ‍್ಮಗಳ ನೆಲೆಯೂರು
ಸ್ವಾಬಿಮಾನವೇ ನನ್ನೂರು
ಇದು ನನ್ನಯ ನೆಚ್ಚಿನ ನೆಲೆಯೂರು

ಆಡುತ ಪಾಡುತ ಬೆಳೆದೆವು ಇಲ್ಲೆ
ತುಂಟರ ತಾಣವು ನನ್ನೂರು
ಇದ್ದರು ಇಲ್ಲೇ ಮಡಿದರು ಇಲ್ಲೇ
ಕಣಕಣದಲ್ಲೂ ತವರೂರು
ಮರೆಯುವುದುಂಟೆ ನನ್ನೂರು
ಇದು ನನ್ನಯ ನೆಚ್ಚಿನ ನೆಲೆಯೂರು

ಲೋಕವೇನೇ ಹೇಳಿದರೂನು
ಪ್ರೀತಿಯ ಸಾರುವ ನನ್ನವರು
ಹಿರಿಯರ ಮಾತಿಗೆ ತಪ್ಪದೆ ನಡೆಯುವ
ಗ್ರಾಮ ಹಬ್ಬಗಳ ತವರೂರು
ಬಕ್ತಿ ಬಾವವೇ ನನ್ನೂರು
ಇದು ನನ್ನಯ ನೆಚ್ಚಿನ ನೆಲೆಯೂರು

ನಾಡು ನುಡಿಯಲಿ ಮುಂದೆ ನಿಲ್ಲುವ
ವಿಶಾಲ ಹ್ರುದಯವಿದು ನನ್ನೂರು
ಬೇದ ಬಾವಗಳ ಮರೆಸುತ ಎಲ್ಲೆಡೆ
ಪ್ರೀತಿ ಹಂಚುವ ನನ್ನೂರು
ದೇಶಾಬಿಮಾನಿಗಳ ನನ್ನೂರು
ಇದು ನನ್ನಯ ನೆಚ್ಚಿನ ನೆಲೆಯೂರು

ಹಳ್ಳಿ ಸೊಗಡಿನ ಬಿಂಬವ ಸಾರುವ
ವಾತಾವರಣವು ನನ್ನೂರು
ನಂಜನಗೂಡಿನ ಶ್ರೀಕಂಟನ ವರದಲಿ
ಬೆಳೆಯುತಲಿರುವ ತವರೂರು
ಚಾಮಲಾಪುರವೇ ನನ್ನೂರು
ಇದು ನನ್ನಯ ನೆಚ್ಚಿನ ನೆಲೆಯೂರು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: