ಡೆವಿಲ್ಸ್ ಬಾತ್: ನ್ಯೂಜಿಲ್ಯಾಂಡ್ ನ ಹಸಿರು ಕೆರೆ

– .

ನ್ಯೂಜಿಲ್ಯಾಂಡ್ ನ ವೈ-ಒ-ತಪು ಪಾರ‍್ಕಿನೊಳಗಿರುವ ಬಣ್ಣದ ಕೆರೆಯನ್ನು ಡೆವಿಲ್ಸ್ ಪಾಂಡ್ ಎನ್ನಲಾಗುತ್ತದೆ. ವೈ-ಒ-ತಪು ಎಂದರೆ ‘ಪವಿತ್ರ ನೀರು’ ಎಂದರ‍್ತ. ಇದು ಕುದಿಯುವ ನೀರಿನ ಕೆರೆ. ಈ ಕೆರೆಯ ನೀರು ಹಳದಿ-ಹಸಿರು ಬೆರೆತ ಬಣ್ಣದಿಂದ ಕೂಡಿದೆ. ಸುಮಾರು 2,00,000 ವರ‍್ಶಗಳ ಹಿಂದೆ ಸಂಬವಿಸಿದ ಬೂ ವೈಜ್ನಾನಿಕ ಚಟುವಟಿಕೆಯ ಪಲಿತಾಂಶ ಇದಕ್ಕೆ ಮೂಲ ಕಾರಣವಾಗಿದೆ. ಈ ಕೆರೆಯಲ್ಲಿ ಸಂಗ್ರಹವಾದ ಸಲ್ಪರ್ (ಗಂದಕ) ನಿಕ್ಶೇಪ ಮತ್ತು ಅದರೊಂದಿಗೆ ಬೆರೆತ ವಿವಿದ ಕನಿಜಗಳು ನೆಲಕಾವಿಗೆ (Geothermal) ಒಳಗಾದ ಕಾರಣ ಅತ್ಯಂತ ಸುಂದರ ಬಣ್ಣದ ಕೆರೆಯಾಗಿ ಮಾರ‍್ಪಟ್ಟಿದೆ.

ಈ ಕೆರೆಯ ಜನಪ್ರಿಯತೆಗೆ ಕಾರಣವಾದ ಮತ್ತೊಂದು ವಿಶಯವೆಂದರೆ, ಸೂರ‍್ಯನ ಕಿರಣಗಳು ಕೆರೆಯ ನೀರಿನ ಮೇಲೆ ಬೀಳುವ ಕೋನದಿಂದ ಅಲ್ಲಿನ ಕನಿಜಗಳ ಪ್ರಮಾಣಕ್ಕೆ ಅನುಗುಣವಾಗಿ ಈ ಕೆರೆಯ ಬಣ್ಣ ಬದಲಾಗುತ್ತಾ ಹೋಗುತ್ತದೆ. ಕೆರೆಯ ನೀರಿನಲ್ಲಿರುವ ಕಬ್ಬಿಣದ ಅಂಶ ಗಾಡವಾದ ಹಸಿರು ಬಣ್ಣವನ್ನು ನೀಡಿದರೆ, ಅದರಲ್ಲಿನ ಗಂದಕ (ಸಲ್ಪರ್) ಪ್ರಕಾಶಮಾನವಾದ ಹಳದಿ ಬಣ್ಣದ ಚಾಯೆಯನ್ನು ನೀಡುತ್ತದೆ. ಗಂದಕದ ನಿಕ್ಶೇಪಗಳಿಂದ ಉಂಟಾಗುವ ಹೊಗೆಯು ಇಡೀ ಪ್ರದೇಶದಲ್ಲಿ ವಿಶಿಶ್ಟವಾದ ವಾಸನೆಯನ್ನು ಪಸರಿಸುತ್ತದೆ. ನಿಯಾನ್ ಹಸಿರು ನೀರಿನ ಈ ಕೆರೆಯು ನೈಸರ‍್ಗಿಕ ಅದ್ಬುತಗಳಲ್ಲಿ ಒಂದಾಗಿದೆ.

ಈ ಕೆರೆಯ ಪ್ರದೇಶವು ಸುಮಾರು ಹನ್ನೊಂದು ಚದರ ಮೈಲಿಗಳ ನೆಲಕಾವಿನ (Geothermal) ಸಂಕೀರ‍್ಣವಾಗಿದೆ. ಈ ಪ್ರದೇಶದಲ್ಲಿ ಬಿಸಿನೀರಿನ ಬುಗ್ಗೆಗಳು ಹಾಗೂ ವರ‍್ಣರಂಜಿತ ಸರೋವರಗಳಿವೆ. ಇದರಲ್ಲಿ ಕೊಂಚ ಬಾಗ ಮಾತ್ರ ಸಾರ‍್ವಜನಿಕರಿಗೆ ತೆರೆದಿರುತ್ತದೆ. ವೈ-ಒ-ತಪುವಿನ ಬಾಗವಾದ ಡೆವಿಲ್ಸ್ ಬಾತ್ ಅತ್ಯಂತ ಆಸಕ್ತಿದಾಯಕ ಆಕರ‍್ಶಣೆಯಾಗಿದೆ. ಇದರ ನೀರು ಅನೇಕ ಕಾಯಿಲೆಗಳಿಗೆ ಮದ್ದಾದ ಹಿನ್ನಲೆಯಲ್ಲಿ ಇದನ್ನು ‘ಜಯಂಟ್ ಮ್ಯಾಜಿಕ್ ಪೋಶನ್’ ಎಂದು ಗುರುತಿಸಲಾಗುತ್ತದೆ.

ಈ ಪ್ರದೇಶವು ಅನೇಕ ನೆಲಕಾವಿನ (Geothermal) ದ್ರುಶ್ಯಗಳ ನೆಲೆಯಾಗಿದೆ. ಇದರಲ್ಲೆಲ್ಲಾ ಅತ್ಯಂತ ಕುತೂಹಲಕಾರಿಯಾದದ್ದು ಅಶ್ಟೇ ಶಾಂತವಾಗಿರುವುದು ಡೆವಿಲ್ಸ್ ಬಾತ್. ಇದು ನಿಂತ ನೀರಾದ ಕಾರಣ ಗಬ್ಬುನಾರುತ್ತದೆ. ಔಶದೀಯ ಗುಣವುಳ್ಳ ಹಿನ್ನಲೆಯನ್ನು ಹೊರತುಪಡಿಸಿದರೆ ಈ ಕೆರೆಯ ನೀರನ್ನು ಬೇರಾವುದಕ್ಕೂ ಬಳಸಲಾಗದು. ವೈ-ಒ-ತಪು ಪ್ರದೇಶ ಅನೇಕ ನೀರಿನ ಬುಗ್ಗೆಗಳು ಹಾಗೂ ವರ‍್ಣರಂಜಿತವಾಗಿ ಮಣ್ಣಿನ ಬಾಗ್ಸ್ (ಸ್ಪಂಜಿನಂತ ನೆಲ ಅತವಾ ಜೌಗು ಪ್ರದೇಶ) ನಿಂದ ಕೂಡಿದ್ದು, ಅದ್ಬುತವಾದ ಆಕರ‍್ಶೆಣೆಗೆ ಕೊರತೆಯಿಲ್ಲ.

ಈ ಕೆರೆಯ ಸ್ರುಶ್ಟಿಯ ಬಗ್ಗೆ ನೋಟ ಹರಿಸಿದರೆ, ದೊಡ್ಡದಾದ ನೆಲ ಸ್ಪೋಟದಿಂದ ಉಂಟಾದ ಕುಳಿಯಲ್ಲಿ ಈ ಕೆರೆ ಇರುವುದು ಕಂಡುಬರುತ್ತದೆ. ಈ ಕೆರೆ ತನ್ನ ಪ್ರಕಾಶಮಾನವಾದ ಹಸಿರು ಬಣ್ಣವನ್ನು ಗಂದಕದ ನಿಕ್ಶೇಪಗಳಿಂದ ಪಡೆಯುತ್ತದೆ. ಅದು ಕ್ರಮೇಣ ಮೇಲ್ಮೈಗೆ ಏರುತ್ತದೆ. ಅಲ್ಲಿ ಅದು ನೀರಿನ ಮೇಲೆ ತೇಲುತ್ತದೆ. ಕೆರೆಯ ನೀರಿನ ಹಸಿರು ಬಣ್ಣದ ಜೊತೆ ಕಂಡು ಬರುವ ನೀಲಿ, ಕೆಂಪು ಮತ್ತು ಇತರೆ ಬಣ್ಣಗಳು ಜ್ವಾಲಾಮುಕಿಯ ದಾತುಗಳ ಅಂಶವನ್ನು ಸೂಚಿಸುತ್ತವೆ.

ಡೆವಿಲ್ಸ್ ಬಾತ್ಗೆ ಈ ಅಡ್ಡ ಹೆಸರು ಬರಲು ಯಾವುದೇ ಕಾರಣ ತಿಳಿದಿಲ್ಲ. ಈ ಕೆರೆಯ ನೀರು ದ್ರುಶ್ಟಿಗೆ ಎಶ್ಟು ತಂಪು ಹಾಗೂ ಸಂತೋಶವನ್ನು ನೀಡುವುದೋ ಅಶ್ಟೇ ಅಸ್ವಾಬಾವಿಕವಾಗಿಯೂ ಕಾಣುತ್ತದೆ. ಇಂತಹ ಅಸ್ವಾಬಾವಿಕ ಕೆರೆಯಲ್ಲಿ ಸೈತಾನನು ಮಾತ್ರ ಸ್ನಾನ ಮಾಡಲು ಸಾದ್ಯ ಎಂಬ ಕಾರಣದಿಂದ ಇದಕ್ಕೆ‘ಡೆವಿಲ್ಸ್ ಬಾತ್’ ಎಂಬ ಅಡ್ಡ ಹೆಸರು ಬಂದಿರಬಹುದು. ಅದೆಶ್ಟು ಅಸ್ವಾಬಾವಿಕ ಮತ್ತು ವಿಲಕ್ಶಣ ಈ ನೈಸರ‍್ಗಿಕ ವಿದ್ಯಮಾನ ಎಂಬುದನ್ನು ಮಕ್ಕಳಿಗೆ ಉದಾಹರಣೆಯೊಂದಿಗೆ ತೋರಿಸಬಹುದಾದ ಪ್ರದೇಶ ಇದಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: flickr.com, mybestplace.com, traveller.com.au, atlasobscura.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: