ಸಿದ್ದರಾಮೇಶ್ವರನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ.

ಶರಣ ಸಿದ್ದರಾಮೇಶ್ವರ, Sharana Siddarameshwara

ಮನದ ಮಲಿನವನು ಕಳೆಯಾ ಅಯ್ಯಾ
ಮನವೇ ಶುದ್ಧನಾಗು
ಮನವೇ ಸಿದ್ಧನಾಗು
ಮನವೇ ಪ್ರಸಿದ್ಧನಾಗಯ್ಯಾ
ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥ
ಮನದ ಸರ್ವಾಂಗ ನೀನಾಗಯ್ಯಾ.

ಜೀವನದಲ್ಲಿನ ಎಲ್ಲಾ ಬಗೆಯ ಒಳಿತು ಕೆಡುಕಿಗೆ ಕಾರಣವಾಗುವ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಒಳ್ಳೆಯ ರೀತಿಯಲ್ಲಿ ಬಾಳುವಂತಹ ಕಸುವನ್ನು ತನಗೆ ನೀಡುವಂತೆ ದೇವರಾದ ಶಿವನಲ್ಲಿ ವ್ಯಕ್ತಿಯು ಮೊರೆಯಿಡುತ್ತಿರುವ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಮನ=ಮನಸ್ಸು;ಮಲಿನ=ಕೊಳೆ/ಹೊಲಸು; ಕಳೆ=ಹೋಗಲಾಡಿಸು/ತೆಗೆ;

ಮನದ ಮಲಿನವನು ಕಳೆಯಾ ಅಯ್ಯಾ=ಮನಸ್ಸಿನಲ್ಲಿ ನಿರಂತರವಾಗಿ ಮೂಡುತ್ತಿರುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹೋಗಲಾಡಿಸಿ, ಒಳ್ಳೆಯದನ್ನು ಅನುಸರಿಸಿ ಬಾಳುವಂತೆ ಮಾಡು;

ಶುದ್ಧನ್+ಆಗು;ಶುದ್ಧ=ಚೊಕ್ಕಟ/ಶುಚಿ;

ಮನವೇ ಶುದ್ಧನಾಗು=ವ್ಯಕ್ತಿಯು ತನ್ನ ಮನದಲ್ಲಿ ಕೆರಳುವ ಕೆಟ್ಟ ಬಯಕೆಗಳನ್ನು ಮತ್ತು ಆಲೋಚನೆಗಳನ್ನು ತೊಡೆದುಹಾಕಿ, ಮನದಲ್ಲಿ ಒಳ್ಳೆಯ ಬಯಕೆಗಳು ಮತ್ತು ಆಲೋಚನೆಗಳು ನೆಲೆಗೊಳ್ಳುವಂತೆ ಮಾಡುವುದು;

ಸಿದ್ಧನ್+ಆಗು; ಸಿದ್ಧ=ಅಣಿಯಾದ/ತಯಾರಾದ;

ಮನವೇ ಸಿದ್ಧನಾಗು=ನಿತ್ಯದ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ರೀತಿಯಲ್ಲಿ ಬದುಕನ್ನು ನಡೆಸಲು ಮಾನಸಿಕವಾಗಿ ತಯಾರಾಗುವುದು;

ಪ್ರಸಿದ್ಧನ್+ಆಗು+ಅಯ್ಯಾ; ಪ್ರಸಿದ್ಧ=ಹೆಸರುವಾಸಿಯಾದ;

ಮನವೇ ಪ್ರಸಿದ್ಧನಾಗಯ್ಯಾ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡುವುದರ ಮೂಲಕ ದೊಡ್ಡ ಹೆಸರನ್ನು ಪಡೆಯುವುದು;

ಮನದ+ಒಡೆಯ; ಒಡೆಯ=ಯಜಮಾನ;ಮಹಾದೇವ=ಶಿವ; ಕಪಿಲಸಿದ್ಧಮಲ್ಲಿನಾಥ=ಶಿವನ ಮತ್ತೊಂದು ಹೆಸರು. ಸಿದ್ದರಾಮೇಶ್ವರ ಅವರ ವಚನಗಳ ಅಂಕಿತನಾಮ;

ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥಾ=ಮನಸ್ಸಿಗೆ ಒಡೆಯನಾದ ಶಿವ. ಅಂದರೆ ತನ್ನ ಮನದಲ್ಲಿ ಸದಾಕಾಲ ಅರಿವು ಮತ್ತು ಎಚ್ಚರವನ್ನು ಮೂಡಿಸುವವನು;

ಸರ್ವ+ಅಂಗ; ಸರ್ವ=ಸಕಲ/ಎಲ್ಲ; ಅಂಗ=ದೇಹ/ರೀತಿ; ನೀನ್+ಆಗು+ಅಯ್ಯಾ;

ಮನದ ಸರ್ವಾಂಗ ನೀನಾಗಯ್ಯಾ=ಒಳ್ಳೆಯ ನಡೆನುಡಿಗಳಿಂದ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ತನ್ನ ಮಯ್ ಮನದಲ್ಲಿಯೇ ಶಿವನು ನೆಲೆಸುವಂತಾಗಲೆಂದು ವ್ಯಕ್ತಿಯು ಹಂಬಲಿಸುತ್ತಿದ್ದಾನೆ;

ವ್ಯಕ್ತಿಯು ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಬಹುಬಗೆಯ ವ್ಯಾಯಾಮಗಳ ಮೂಲಕ ತನ್ನ ದೇಹಕ್ಕೆ ತರಬೇತಿಯನ್ನು ನೀಡುವಂತೆಯೇ, ಒಳ್ಳೆಯ ನಡೆನುಡಿಯಿಂದ ಬಾಳುವುದಕ್ಕಾಗಿ ಜೀವನದ ಕೊನೆ ಗಳಿಗೆಯ ತನಕ ತನ್ನ ಮನಸ್ಸಿಗೆ ತರಬೇತಿಯನ್ನು ನೀಡುತ್ತಿರಬೇಕೆಂದು ಕ್ರಿ.ಪೂ.ಅಯ್ದನೆಯ ಶತಮಾನದಲ್ಲಿದ್ದ ಗವುತಮ ಬುದ್ದರು ಹೇಳಿದ್ದಾರೆ.

ಕ್ರಿ.ಶ.ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ಗವುತಮ ಬುದ್ದರಂತೆಯೇ ವ್ಯಕ್ತಿಯ ನಡೆನುಡಿಗಳೇ ಜೀವನದ ಆಗುಹೋಗುಗಳಿಗೆ ಕಾರಣವೆಂಬುದನ್ನು ಗುರುತಿಸಿ, ಸಹಮಾನವರ ಮತ್ತು ಸಮಾಜದ ಒಳಿತಿಗೆ ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕವಾಗಿ ಒಳ್ಳೆಯ ತರಬೇತಿಯನ್ನು ಪಡೆಯಬೇಕೆಂಬುದನ್ನು ಪ್ರತಿಪಾದಿಸಿದ್ದಾರೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: