ಕವಿತೆ: ಬೆಳಗಿನ ಚಿತ್ತಾರ

– ಮಹೇಶ ಸಿ. ಸಿ.

ಮೂಡಣದಿ ದಿನವೂ
ಓಕಳಿಯ ರಂಗು,
ಮಿಹೀರನು ನೀಡುತಿಹ
ಕಣ್ಮನಕೆ ಸೊಬಗು
ಸಂಬ್ರಮದಿ ಹಾರುತಿವೆ
ನೋಡಲ್ಲಿ ಬಾನಾಡಿ,
ಮುತ್ತಿನಿಬ್ಬನಿ ಎಲೆಯ
ಮೇಲಣ ಹರಡಿ

ಪಾತರಗಿತ್ತಿ ನಲಿದಿದೆ
ನವದವನಗಳ ಮೇಲೆ,
ಪುಶ್ಪದೊಳು ಮದು ಹೀರೋ
ಜೇನುಗಳ ಸಾಲೇ,
ಅಲ್ಲಲ್ಲಿ ಕೇಳುತಿದೆ ನಲಿವ
ದುಂಬಿಗಳ ಜೇಂಕಾರ,
ಕಣ್ಮನವ ಸೆಳೆಯುತಿದೆ
ಮಯೂರನ ವೈಯ್ಯಾರ

ಮುಂಜಾನೆ ಚಳಿಯಲ್ಲಿ
ಚಿಲಿಪಿಲಿಯ ಗಾನ,
ಹಾರುತ ಸೇರುತಿವೆ
ಮುಗಿಲಂಚಿನ ಬಾನ
ಮೋಡಗಳು ಚಲಿಸುತಿವೆ
ಹೊಸ ದಾರಿಯಲ್ಲಿ
ಎಂತ ಚಿತ್ತಾರದ ಸೊಬಗು
ಒಮ್ಮೆ ನೋಡಲ್ಲಿ

ಊರಲ್ಲಿ ಹರಡಿತು
ಜಂಬದ ಹುಂಜದ ದ್ವನಿಯು
ರಾತ್ರಿಯಲಿ ಮನೆಕಾದು
ಮೂಲೆಯಲಿ ಶ್ವಾನವು
ಕಂದನ ಕೂಗುತಿದೆ
ಮೊಲೆಯುಣಿಸಲು ಆಕಳು,
ಕುಶಿಯಿಂದ ಕುಣಿಯಿತು
ತಾಯ ತನು ಸೋಕಲು

ಸೋಲದಿರದು ಮನವು
ಈ ದ್ರುಶ್ಯ ವೈಬವಕೆ,
ಇದೆಂತಹ ಸ್ಪೂರ‍್ತಿಯೂ
ಮನದೊಳಗಿನ ಕಾವ್ಯಕೆ
ಮರುಗದಿರು ಮನವೇ
ಕಳೆದುದಾ ನೆನೆಸಿ
ಪ್ರಕ್ರುತಿಯೇ ಬದಲಾಯ್ತು
ಹೊಸತನವ ಬಯಸಿ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: