ಸಿದ್ದರಾಮೇಶ್ವರನ ವಚನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ.

ಶರಣ ಸಿದ್ದರಾಮೇಶ್ವರ, Sharana Siddarameshwara

ಪುಣ್ಯವ ಮಾಡಬೇಕೆಂದು
ಮರುಗಬೇಡ
ಪಾಪವ ಮಾಡದಿದ್ದಡೆ
ಪುಣ್ಯ ದಿಟ
ಬೇರೆ ತೀರ್ಥ ಬೇಡ
ಸತ್ಯವ ನುಡಿವಲ್ಲಿ ಸಂದಿಲ್ಲದಿಹನು
ಕಪಿಲಸಿದ್ಧಮಲ್ಲಿಕಾರ್ಜುನ
ಹುಸಿಗೆ ಹುರುಡಿಗನು.

ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುತ್ತಿರುವ ವ್ಯಕ್ತಿಯು ಪುಣ್ಯವನ್ನು ಪಡೆಯಲೆಂದು ಇಲ್ಲವೇ ಪಾಪವನ್ನು ಕಳೆಯಲೆಂದು ದೇವರಿಗೆ ಮೊರೆ ಹೋಗಬೇಕಾದ ಅಗತ್ಯವಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

“ದೇವರಿಗೆ ಮೊರೆ ಹೋಗುವುದು” ಎಂದರೆ ದೇವಾಲಯಗಳಿಗೆ ಹೋಗಿ, ನದಿತೊರೆಗಳಲ್ಲಿ ಮಿಂದು, ಅನೇಕ ವ್ರತಗಳನ್ನು ಆಚರಿಸುತ್ತ, ಪುಣ್ಯದ ಗಳಿಕೆಗಾಗಿ ಇಲ್ಲವೇ ಪಾಪದ ನಿವಾರಣೆಗಾಗಿ ಹಂಬಲಿಸುವುದು;

ಪುಣ್ಯ=ವ್ಯಕ್ತಿಯು ಒಳ್ಳೆಯ ನಡೆನುಡಿಯಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವುದು; ಮರುಗು=ತಳಮಳ/ಕಳವಳ/ಚಿಂತೆ;

ಪುಣ್ಯವ ಮಾಡಬೇಕೆಂದು ಮರುಗಬೇಡ=ಸಹಮಾನವರಿಗೆ ಮತ್ತು ಸಮಾಜಕ್ಕೆ ಯಾವ ರೀತಿಯಿಂದಲಾದರೂ ಒಳ್ಳೆಯದನ್ನು ಮಾಡಬೇಕೆಂದು ಮನದಲ್ಲಿಯೇ ತಳಮಳಿಸುತ್ತಿರಬೇಡ;

ಪಾಪ=ವ್ಯಕ್ತಿಯು ಕೆಟ್ಟ ನಡೆನುಡಿಯಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನು ಉಂಟುಮಾಡುವುದು; ಮಾಡದಿದ್ದಡೆ=ಮಾಡದಿದ್ದರೆ;

ಪಾಪವ ಮಾಡದಿದ್ದಡೆ=ವ್ಯಕ್ತಿಯು ಸಹಮಾನವರ ಬದುಕಿಗೆ ಅಗತ್ಯವಾದ ‘ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯಕ್ಕೆ’ ಹಾನಿ ತಟ್ಟುವಂತಹ ಕೇಡಿನ ಕೆಲಸವನ್ನು ಮಾಡದಿದ್ದರೆ;

ದಿಟ=ಸತ್ಯ/ನಿಜ;

ಪುಣ್ಯ ದಿಟ=ವ್ಯಕ್ತಿಯು ತನ್ನ ಜೀವನದಲ್ಲಿ ಇತರರಿಗೆ ಒಳ್ಳೆಯದನ್ನು ಮಾಡದಿದ್ದರೂ ಚಿಂತೆಯಿಲ್ಲ, ಕೇಡನ್ನು ಮಾಡದಿದ್ದರೆ ಸಾಕು. ಅದೇ ನಿಜವಾಗಿಯೂ ಬದುಕಿನಲ್ಲಿ ಪುಣ್ಯವನ್ನು ಮಾಡಿದಂತಾಗುತ್ತದೆ;

ತೀರ್ಥ=ದೇವಾಲಯಗಳಲ್ಲಿ ದೇವರ ಪೂಜೆಯ ನಂತರ ನೀಡುವ ನೀರು. ಇದನ್ನು ಕುಡಿದರೆ ಮತ್ತು ತಲೆಯ ಮೇಲೆ ಚಿಮುಕಿಸಿಕೊಂಡರೆ ಒಳಿತಾಗುವುದೆಂಬ ನಂಬಿಕೆ ಜನಮನದಲ್ಲಿದೆ;

ಬೇರೆ ತೀರ್ಥ ಬೇಡ=ಈ ನುಡಿಗಳು ರೂಪಕವಾಗಿ ಬಳಕೆಗೊಂಡಿವೆ. ಪಾಪವನ್ನು ಮಾಡದಿರುವ ವ್ಯಕ್ತಿಯು ದೇವರ ಕರುಣೆಗಾಗಿ ಮೊರೆಯಿಡಬೇಕಾಗಿಲ್ಲ ಇಲ್ಲವೇ ದೇವರನ್ನು ಪೂಜಿಸಬೇಕಾಗಿಲ್ಲ. ಏಕೆಂದರೆ ಇತರರಿಗೆ ಕೇಡನ್ನು ಮಾಡದಿರುವ ಅವನ ನಡೆನುಡಿಯೇ ದೇವರ ಪೂಜೆಗೆ ಸಮನಾಗಿರುತ್ತದೆ;

ಸತ್ಯ=ದಿಟ/ವಾಸ್ತವ; ನುಡಿ+ಅಲ್ಲಿ; ನುಡಿ=ಹೇಳು; ಸಂದು+ಇಲ್ಲದೆ+ಇಹನು; ಸಂದು=ಬಿರುಕು/ಸೀಳು/ಎಡೆ; ಇಹನು=ಇರುವನು;

ಸಂದಿಲ್ಲದಿಹನು=ಎಡೆಬಿಡದೆ ಇರುವನು/ನೆಲೆಸಿದ್ದಾನೆ; ಕಪಿಲಸಿದ್ಧಮಲ್ಲಿಕಾರ್ಜುನ=ಶಿವನ ಮತ್ತೊಂದು ಹೆಸರು. ಸಿದ್ಧರಾಮೇಶ್ವರ ಅವರ ವಚನಗಳ ಅಂಕಿತನಾಮ;

ಹುಸಿ=ಸುಳ್ಳು; ಹುರುಡಿಗ=ಎದುರಾಳಿ/ಒಲ್ಲದವನು; ಹುಸಿಗೆ ಹುರುಡಿಗನು=ಸುಳ್ಳಿನ ನಡೆನುಡಿಗಳನ್ನು ಒಪ್ಪದವನು;

ಸತ್ಯವ ನುಡಿವಲ್ಲಿ ಸಂದಿಲ್ಲದಿಹನು, ಕಪಿಲಸಿದ್ಧಮಲ್ಲಿಕಾರ್ಜುನ… ಹುಸಿಗೆ ಹುರುಡಿಗನು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. “ಜನರು ಸತ್ಯದ ನುಡಿಯನ್ನಾಡುತ್ತ, ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಿರುವ ಎಡೆಯಲ್ಲಿ ಶಿವನು ನೆಲೆಸಿದ್ದಾನೆ. ಸುಳ್ಳನ್ನು ಆಡುವ ವ್ಯಕ್ತಿಗಳನ್ನು ಶಿವನು ಒಪ್ಪುವುದಿಲ್ಲ. ದೇವರಾದ ಶಿವನು ಕಲ್ಲು/ಮಣ್ಣು/ಮರ/ಲೋಹದ ರೂಪದ ವಿಗ್ರಹದಲ್ಲಿಲ್ಲ. ಜನರ ಒಳ್ಳೆಯ ನಡೆನುಡಿಗಳು ಇರುವ ಎಡೆಯಲ್ಲಿ ಶಿವನು ಇರುತ್ತಾನೆ” ಎಂಬ ನಿಲುವನ್ನು ಹೊಂದಿದ್ದ ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ತಮ್ಮ ಬದುಕಿನ ಒಳಿತಿಗಾಗಿ ಬಯಸುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತಹ ಕಾಯಕದಲ್ಲಿ ತೊಡಗಿದ್ದರು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: