ಸೊಡ್ಡಳ ಬಾಚರಸನ ವಚನಗಳ ಓದು

ಸಿ.ಪಿ.ನಾಗರಾಜ.

ಸೊಡ್ಡಳ ಬಾಚರಸ, Soddala Bacharasa

ಉದ್ದವಾಗಿ ಕೂದಲು ನಿಮಿರ್ದು
ಗಡ್ಡಂಗಳು ಬೆಳೆದಡೇನು ಹೇಳಾ
ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ
ದೊಡ್ಡದಾಗಿ ಬೆಳೆದ ಗಡ್ಡ ಹೋತಗಳಿಗೆ
ಗಡ್ಡದ ವೃದ್ಧ ವೈಶಿಕರ ಮೆಚ್ಚ
ಮಹಾದೇವ ಸೊಡ್ಡಳ
ಭಕ್ತಿ ಸಜ್ಜನರಲ್ಲದವರ

ಅಂತರಂಗದ ಮನದಲ್ಲಿ ಕಪಟಿಗಳಾಗಿದ್ದು, ಬಹಿರಂಗದಲ್ಲಿ ಜನರ ಮುಂದೆ ತೋರಿಕೆಯ ರೂಪದಲ್ಲಿ ಗುರುಹಿರಿಯರಂತೆ ಕಾಣಿಸಿಕೊಳ್ಳುವ ವ್ಯಕ್ತಿಗಳನ್ನು ಈ ವಚನದಲ್ಲಿ ಟೀಕಿಸಲಾಗಿದೆ.

ನಿಮಿರ್=ಬೆಳೆ/ಹರಡು/ಹೆಚ್ಚಾಗು; ಗಡ್ಡ=ಗಂಡಸರ ಮೊಗದಲ್ಲಿ ಗದ್ದದ ಮೇಲೆ ಬೆಳೆಯುವ ಉದ್ದನೆಯ ಕೂದಲು; ಬೆಳೆದಡೆ+ಏನು; ಬೆಳೆದಡೆ=ಬೆಳೆದರೆ; ಹೇಳಾ=ಹೇಳಿರಿ;

ಉದ್ದವಾಗಿ ಕೂದಲು ನಿಮಿರ್ದು ಗಡ್ಡಂಗಳು ಬೆಳೆದಡೇನು ಹೇಳಾ=ವ್ಯಕ್ತಿಯ ಮೊಗದಲ್ಲಿ ಉದ್ದವಾಗಿ ಕೂದಲು ಬೆಳೆದ ಮಾತ್ರಕ್ಕೆ, ಆತ ವಿರಾಗಿಯೋ ಸಂನ್ಯಾಸಿಯೋ ಆಗುವುದಿಲ್ಲ. ಬಹಿರಂಗದಲ್ಲಿ ಬೆಳೆದಿರುವ ಉದ್ದನೆಯ ಗಡ್ಡಕ್ಕೂ ವ್ಯಕ್ತಿಯ ಮನದೊಳಗಿನ ಚಿಂತನೆಗಳಿಗೂ ಯಾವುದೇ ನಂಟಿಲ್ಲ;

ಹೇಳಿರಿ+ಅಣ್ಣಾ; ಹೇಳಿರಣ್ಣಾ=ಆಲೋಚನೆ ಮಾಡಿ, ವಾಸ್ತವವನ್ನು ತಿಳಿದು ಹೇಳಿರಿ; ಹೋತ=ಗಂಡು ಆಡು/ ಗಂಡು ಮೇಕೆ;

ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ ದೊಡ್ಡದಾಗಿ ಬೆಳೆದ ಗಡ್ಡ ಹೋತಗಳಿಗೆ=ವಯಸ್ಸಾಗುತ್ತಿದ್ದಂತೆಯೇ ಹೋತಗಳಿಗೆ ಉದ್ದನೆಯ ಗಡ್ಡ ತಾನಾಗಿಯೇ ಬೆಳೆಯುತ್ತದೆ. ಗಡ್ಡ ಬೆಳೆಯುವುದು ನಿಸರ್‍ಗ ಸಹಜವಾದ ಒಂದು ಕ್ರಿಯೆಯೇ ಹೊರತು ಮತ್ತೇನು ಅಲ್ಲ;

ವೃದ್ಧ=ವಯಸ್ಸಾದ ವ್ಯಕ್ತಿ/ಹಿರಿಯನಾದ ವ್ಯಕ್ತಿ; ವೈಶಿಕ=ಕಪಟತನ/ವಂಚಕತನ/ಮೋಸ; ವೈಶಿಕರು=ಕಪಟಿಗಳು/ವಂಚಕರು/ಮೋಸಗಾರರು; ಮೆಚ್ಚು=ಒಪ್ಪು/ಒಲಿ;;

ಮಹಾದೇವ ಸೊಡ್ಡಳ=ದೇವರಾದ ಶಿವನ ಮತ್ತೊಂದು ಹೆಸರು/ಸೊಡ್ಡಳ ಬಾಚರಸರ ವಚನಗಳ ಅಂಕಿತನಾಮ;

ಭಕ್ತಿ=ಒಳ್ಳೆಯ ನಡೆನುಡಿಯ ಆಚರಣೆಯೇ ದೇವರೆಂದು ತಿಳಿದು ಬಾಳುವುದು; ಸಜ್ಜನರ್+ಅಲ್ಲದವರ; ಸಜ್ಜನ=ಒಳ್ಳೆಯ ನಡೆನುಡಿಯುಳ್ಳವನು;

ಭಕ್ತಿ ಸಜ್ಜನರಲ್ಲದವರು=ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳದವರು;

ಗಡ್ಡದ ವೃದ್ಧ ವೈಶಿಕರ… ಭಕ್ತಿ ಸಜ್ಜನರಲ್ಲದವರ ಮೆಚ್ಚ ಮಹಾದೇವ ಸೊಡ್ಡಳ=ಎಲ್ಲ ಬಗೆಯ ಕಾಮನೆಗಳನ್ನು ತೊರೆದವರಂತೆ ಜನಗಳ ಮುಂದೆ ಬಹಿರಂಗದಲ್ಲಿ ಕಾಣಿಸಿಕೊಳ್ಳುತ್ತ, ಅಂತರಂಗದ ಜೀವನದಲ್ಲಿ ಜನರನ್ನು ವಂಚಿಸುತ್ತಿರುವ ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಗಳಿಗೆ ಶಿವನು ಒಲಿಯುವುದಿಲ್ಲ. ಏಕೆಂದರೆ “ಶಿವನು ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿದ ವಿಗ್ರಹರೂಪಿಯಲ್ಲ. ವ್ಯಕ್ತಿಗಳು ತಮ್ಮ ನಿತ್ಯ ಜೀವನದಲ್ಲಿ ಆಚರಿಸುವ ಒಳ್ಳೆಯ ನಡೆನುಡಿಯಲ್ಲಿ ನೆಲೆಸಿರುತ್ತಾನೆ” ಎಂಬ ನಿಲುವನ್ನು ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ತಳೆದಿದ್ದರು;

ಜಾತಿ-ಮತ-ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳಲ್ಲಿರುವ ಕೆಲವು ವ್ಯಕ್ತಿಗಳು “ತಾವು ಮಯ್ ಮನವನ್ನು ಹತೋಟಿಯಲ್ಲಿ ಇಟ್ಟುಕೊಂಡು ಎಲ್ಲ ಬಗೆಯ ಕಾಮನೆಗಳನ್ನು ತೊರೆದವರು” ಎಂಬುದನ್ನು ತೋರಿಸಿಕೊಳ್ಳುವಂತೆ ಉದ್ದನೆಯ ಗಡ್ಡವನ್ನು ಬಿಟ್ಟಿರುತ್ತಾರೆ. ಹೊರನೋಟಕ್ಕೆ ಉಡುಗೆ ತೊಡುಗೆಯಲ್ಲಿ ವಿರಾಗಿಗಳಂತೆ ಕಂಡುಬಂದರೂ ಅಂತರಂಗದ ಮನದಲ್ಲಿ ತುಸುವಾದರೂ ಕರುಣೆಯಿಲ್ಲದೆ ಜನರನ್ನು ವಂಚಿಸುವ ಕಲೆಯಲ್ಲಿ ಪರಿಣತರಾಗಿರುತ್ತಾರೆ. ನೂರಾರು ಬಗೆಯ ಜಾತಿ, ಮತ ಮತ್ತು ದೇವರುಗಳ ಹೆಣಿಗೆಯಿಂದ ಕೂಡಿರುವ ಸಮಾಜದಲ್ಲಿನ ಒಟ್ಟು ಜನಸಮುದಾಯದ ನೆಮ್ಮದಿಯ ಬದುಕಿಗೆ ಇಂತಹ ಕಪಟಿಗಳ ನಡೆನುಡಿಯಿಂದ ಹಾನಿಯುಂಟಾಗುವುದನ್ನು ಈ ವಚನದಲ್ಲಿ ಗುರುತಿಸಲಾಗಿದೆ.

( ಚಿತ್ರಸೆಲೆ : lingayatkranti.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: