ಬೆಂಡೆಕಾಯಿ – ಒಂದು ಕಿರು ಪರಿಚಯ

– ಶ್ಯಾಮಲಶ್ರೀ.ಕೆ.ಎಸ್

ಪ್ರಕ್ರುತಿ ನಮಗಾಗಿ ಬಗೆ ಬಗೆಯ ತರಕಾರಿಗಳನ್ನು ಕೊಡುಗೆಯಾಗಿ ನೀಡಿದೆ. ಈ ಪೈಕಿ ಬೆಂಡೆಕಾಯಿ ಕೂಡಾ ಒಂದು. ಇಂಗ್ಲೀಶ್ನಲ್ಲಿ ಲೇಡಿಸ್ ಪಿಂಗರ್ ಅಂದರೆ ಪುಟ್ಟ ಮಕ್ಕಳು ಕೂಡಾ ಇದನ್ನು ಬೇಗ ಗುರುತಿಸುವರು. ಇದು ನೋಡಲು ಮಹಿಳೆಯರ ಬೆರಳುಗಳನ್ನು ಹೋಲುವುದರಿಂದ ಬ್ರಿಟೀಶರು ಈ ಹೆಸರು ಇಟ್ಪಿರಬಹುದು ಎಂದೆನಿಸುತ್ತದೆ. ಯುಎಸ್‌ಎ ಮತ್ತು ಮೆಡಿಟರೇನಿಯನ್ ರಾಶ್ಟ್ರಗಳಲ್ಲಿ ಬೆಂಡೆಯನ್ನು ಓಕ್ರ(okra) ಎಂದು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ವರ‍್ಶ ಪೂರ‍್ತಿ ನಮಗೆ ಮಾರುಕಟ್ಟೆಯಲ್ಲಿ ಕಣ್ಣಿಗೆ ಬೀಳುವ ಈ ತರಕಾರಿಯ ಮೂಲ ಆಪ್ರಿಕಾ ಕಂಡವಂತೆ. 10-12ನೇ ಶತಮಾನದಲ್ಲಿ ಅರಬ್ಬೀ ಜನಾಂಗದ ವಲಸೆ ಮೂಲಕ ಮೆಡಿಟರೇನಿಯನ್ ರಾಶ್ಟ್ರಗಳಿಗೂ ಇದು ಹರಡಿರಬಹುದೆಂಬ ಮಾತಿದೆ. ನಂತರ ಸುಮಾರು 16ನೇ ಶತಮಾನದಲ್ಲಿ ಮದ್ಯಪ್ರಾಚ್ಯದಿಂದ ಬಾರತಕ್ಕೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ಜೆವೆನ್ ಮತ್ತು ಜುಕೊವ್ಸ್ಕಿ(1975) ಪ್ರಕಾರ ಓಕ್ರ ಬಾರತ,ಪಾಕಿಸ್ತಾನ ಮತ್ತು ಬರ‍್ಮಾ ಮೂಲದ್ದು ಎನ್ನುವ ಅಬಿಪ್ರಾಯವೂ ಇದೆ. ಬೆಂಡೆಯ ವೈಜ್ನಾನಿಕ ಹೆಸರು ‘ಅಬೆಲ್ ಮಸ್ಕಸ್ ಎಸ್ಕ್ಯುಲೆಂಟಸ್’ (Abelmoschus eskulentus) . ಎಸ್ಕ್ಯುಲೆಂಟಸ್ ಎಂದರೆ ಮಾನವನು ತಿನ್ನಲು ಯೋಗ್ಯವಾದ ಎಂಬ ಅರ‍್ತವನ್ನು ಸೂಚಿಸುತ್ತದೆ. ಇದು ‘ಮಲ್ವೇಸಿ’ ಎನ್ನುವ ಸಸ್ಯ ವರ‍್ಗಕ್ಕೆ ಸೇರಿದೆ.

ಬೆಂಡೆಕಾಯಿಯಲ್ಲಿರುವ ಲೋಳೆ ಅತವಾ ಜಿಡ್ಡು ಜಿಡ್ಡಾದ ಅಂಟು ಇದರ ವಿಶೇಶತೆಯಾಗಿದೆ. ಇದು ಹೆಚ್ಚಾಗಿ ಎಳೆ ಬೆಂಡೆಯಲ್ಲಿರುತ್ತದೆ. ಎಳೆ ಬೆಂಡೆಯು ಅಡುಗೆಗೆ ಸೂಕ್ತವಾದುದು. ಮಾರುಕಟ್ಟೆಯಲ್ಲಿ ನಾವು ಅದನ್ನು ಕರೀದಿಸುವ ಮುನ್ನ ಬೆಂಡೆಕಾಯಿಯ ತುದಿ ಬಾಗವನ್ನು ಸುಲಬವಾಗಿ ಮುರಿಯಲು ಸಾದ್ಯವಾದರೆ ಅದು ಅಡುಗೆಗೆ ಬಳಸಲು ಯೋಗ್ಯವಾಗಿರುತ್ತದೆ. ಬಲಿತ ಬೆಂಡೆಕಾಯಿಗಳು ಗಡುಸಾಗಿದ್ದು, ಅಡುಗೆಗೆ ರುಚಿಸುವುದಿಲ್ಲ. ಅದರಲ್ಲಿ ಲೋಳೆಯೂ ಕಡಿಮೆಯಿರುತ್ತದೆ. ಕೆಲವೊಮ್ಮೆ ಬೆಂಡೆಕಾಯಿ ಮೇಲ್ನೋಟಕ್ಕೆ ಹುಳುಕಾಗಿಲ್ಲದಿದ್ದರೂ, ಅದನ್ನು ಕತ್ತರಿಸಿದಾಗ ಕಪ್ಪುಬಣ್ಣದಲ್ಲಿ ಹುಳುಕು ಇರುವುದು ಕಂಡುಬರಬಹುದು. ಹಾಗಾಗಿ ಬೆಂಡೆಯನ್ನು ಕತ್ತರಿಸುವಾಗ ಇದನ್ನು ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ಬೆಂಡೆಯಲ್ಲಿರುವ ಲೋಳೆ ಅಡುಗೆಗೆ ಸೂಕ್ತವಲ್ಲದ್ದರಿಂದ ಅದನ್ನು ನೇರವಾಗಿ ಉಪಯೋಗಿಸುವ ಮೊದಲು, ಅದನ್ನು ಸಣ್ಣ ಸಣ್ಣಗೆ ಕತ್ತರಿಸಿ ಅದರ ಹೋಳುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಾಗ ಅದರ ಲೋಳೆ ಅಂಶವು ಬಿಟ್ಟುಕೊಳ್ಳುತ್ತದೆ. ಬೆಂಡೆಕಾಯಿಯಿಂದ ರುಚಿಯಾದ ಸಾಂಬಾರ್, ಬೆಂಡೆಕಾಯಿ ಗೊಜ್ಜು, ಪಲ್ಯ, ರಸಂ, ಬೆಂಡೆ ಪ್ರೈ, ಮಕ್ಕಳಿಗೆ ಇಶ್ಟವಾದ ಬೆಂಡೆ ಕುರುಕುರೆ ಹೀಗೆ ನಾನಾ ಬಗೆಯ ಕಾದ್ಯಗಳನ್ನು ಮಾಡಿ ಸವಿಯಬಹುದು.

ಬೆಂಡೆಯ ಗಿಡಗಳು ಸುಮಾರು ಎರಡು ಮೀಟರ್ ಎತ್ತರದಶ್ಟು ಬೆಳೆಯುತ್ತವೆ. ನೀರು ಬಸಿದು ಹೋಗುವಂತಹ ಕಪ್ಪು ಮತ್ತು ಕೆಂಪು ಮಿಶ್ರಿತ ಮಣ್ಣಿನ ಬೂಮಿಯಲ್ಲಿ ಇದನ್ನು ಬೆಳೆಯಬಹುದಾಗಿದೆ. ವರ‍್ಶದ ಎಲ್ಲಾ ಕಾಲದಲ್ಲಿಯೂ ಸಿಗುವ ತರಕಾರಿ ಬೆಳೆ ಇದಾಗಿದೆ. ಜನವರಿ, ಪೆಬ್ರವರಿ, ಜೂನ್ ಹಾಗೂ ಜುಲೈ ಇದರ ಬಿತ್ತನೆಗೆ ಯೋಗ್ಯವಾಗಿದೆ. ಒಂದೂವರೆ ಎರಡು ತಿಂಗಳಿಗೆ ಇದು ಕೊಯ್ಲಿಗೆ ಬರುತ್ತದೆ. ಆದಶ್ಟು ಎಳೆ ಬೆಂಡೆಕಾಯಿಗಳು ಸಿಕ್ಕರೆ ಅಡುಗೆಗೆ ರುಚಿ ಮತ್ತು ಹಿತ. ಬೆಂಡೆಕಾಯಿಗಳಲ್ಲಿ ಒಂದು ರೀತಿಯ ಪರಿಮಳವೂ ಇರುತ್ತದೆ. ಮನೆಯಂಗಳದಲ್ಲಿ ಜಾಗ ಇದ್ದರೆ ಅಲ್ಲೂ ಇದನ್ನು ಸುಲಬವಾಗಿ ಬೆಳೆಯಬಹುದಾಗಿದೆ.

ಬೆಂಡೆಕಾಯಿ ದೇಹಕ್ಕೆ ತಂಪು ನೀಡುವ ಮುಕ್ಯ ತರಕಾರಿ. ಇದರಿಂದ ಪಿತ್ತ ಶಮನ, ಉರಿಯನ್ನು ತಗ್ಗಿಸಬಹುದು. ಬೇಸಿಗೆಯಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸಬಹುದು. ಬೆಂಡೆಯಲ್ಲಿ ವಿಟಮಿನ್ ಸಿ, ಎ, ನಾರಿನಂಶ, ಐರನ್ ಹೀಗೆ ಎಲ್ಲಾ ವಿದದ ಪೋಶಕಾಂಶಗಳು ಇರುವುದರಿಂದ ಇದರ ನಿಯಮಿತ ಬಳಕೆಯಿಂದ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ತಜ್ನರು. ಹಸಿ ಮತ್ತು ಎಳೆ ಬೆಂಡೆಕಾಯಿ ತಿಂದರೆ ದೇಹಕ್ಕೆ ತುಂಬಾ ಲಾಬ. ಅದಿಕ ನಾರಿನಂಶ ಇರುವುದರಿಂದ ಜೀರ‍್ಣಕ್ರಿಯೆಯೂ ಸುಲಬ. ಬೆಂಡೆಯಲ್ಲಿರುವ ಲೋಳೆ ಕರುಳಿನ ಕ್ಯಾನ್ಸರ್ ಆಗದಂತೆ ಕಾಯುತ್ತದೆಯಂತೆ. ಹೀಗೆ ಬೆಂಡೆಕಾಯಿ ರುಚಿಗೂ ಮತ್ತು ದೇಹದ ಹಿತಕ್ಕೂ ಒಂದು ಅನುಕೂಲವಾದ ತರಕಾರಿ.

( ಚಿತ್ರೆಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: