ಜಗಳಗಂಟ ಕಾಮಣ್ಣನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಜಗಳಗಂಟ ಕಾಮಣ್ಣ (‘ಜಗಳಗಂಟ’ ಎಂದರೆ “ಮಾತುಕತೆಯ ಸನ್ನಿವೇಶಗಳಲ್ಲಿ ಒಂದಲ್ಲ ಒಂದು ಬಗೆಯ ತಂಟೆ ತಕರಾರುಗಳನ್ನು ಮುಂದೊಡ್ಡಿ ವಾದದಲ್ಲಿ ತೊಡಗುವವನು”. ಜನಜೀವನದಲ್ಲಿ ಕಂಡುಬರುತ್ತಿದ್ದ ಅರೆಕೊರೆಗಳನ್ನು ಇಲ್ಲವೇ ತಪ್ಪುಗಳನ್ನು ಕೆದಕಿ ನೇರವಾದ ಮಾತುಗಳಿಂದ ಟೀಕಿಸುತ್ತಿದ್ದ ಕಾಮಣ್ಣನೆಂಬ ವ್ಯಕ್ತಿಗೆ ಅಡ್ಡಹೆಸರು ಬಂದಿರಬಹುದೆಂದು ಊಹಿಸಲಾಗಿದೆ.)
ವಚನಗಳ ಅಂಕಿತನಾಮ: ಕಾಮೇಶ್ವರ
ದೊರೆತಿರುವ ವಚನಗಳು: 4

ಸಾವ ದೇವರನೊಲ್ಲೆ
ಭಾವವಳಿಯದ ಭಕ್ತಿಯನೊಲ್ಲೆ
ಆವಾವ ಪರಿಯಲ್ಲೂ ವಿಧಿಯನೊಲ್ಲೆ
ಕಾಮೇಶ್ವರನೆಂಬುದನೊಂದನೆ ಬಲ್ಲೆ.

ವ್ಯಕ್ತಿಯ ಜೀವನದಲ್ಲಿ ಉಂಟಾಗುವ ಒಳಿತು ಕೆಡುಕಿಗೆ ‘ದೇವರ ಇಚ್ಚೆ ಮತ್ತು ಹಣೆಬರಹ’ ಕಾರಣವೆಂಬ ಜನಮನದಲ್ಲಿರುವ ನಂಬಿಕೆಯನ್ನು ಈ ವಚನದಲ್ಲಿ ನಿರಾಕರಿಸಲಾಗಿದೆ.

ಸಾವ=ಸಾಯುವ/ಇಲ್ಲವಾಗುವ; ದೇವರನ್+ಒಲ್ಲೆ; ದೇವರು=ವ್ಯಕ್ತಿಯ ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ, ಒಳ್ಳೆಯದನ್ನು ಮಾಡುವ ವ್ಯಕ್ತಿ/ಶಕ್ತಿಯನ್ನು ದೇವರೆಂದು ನಂಬಲಾಗಿದೆ; ಒಲ್ಲೆ=ಬೇಕಾಗಿಲ್ಲ/ಒಪ್ಪಿಕೊಳ್ಳುವುದಿಲ್ಲ;

ಸಾವ ದೇವರನೊಲ್ಲೆ=ಸಾಯುವ ದೇವರನ್ನು ನಾನು ಒಪ್ಪಿಕೊಳ್ಳುವುದಿಲ್ಲ; ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಕಲ್ಲು/ಮರ/ಲೋಹ/ಮಣ್ಣಿನಿಂದ ಮಾಡಿದ ಜಡರೂಪಿಯಾದ ವಿಗ್ರಹದಲ್ಲಿ ದೇವರಾದ ಶಿವನನ್ನು ಕಾಣುತ್ತಿರಲಿಲ್ಲ. ತಮ್ಮ ನಿತ್ಯ ಜೀವನದ ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯನ್ನು ನೀಡುವ ಚೇತನರೂಪಿಯಾಗಿ ದೇವರನ್ನು ಕಾಣುತ್ತಿದ್ದರು. ಆದ್ದರಿಂದಲೇ ಅವರು ವಿಗ್ರಹಗಳಿಂದ ಕೂಡಿರುವ ದೇಗುಲವನ್ನು ನಿರಾಕರಿಸಿದ್ದರು. ವಿಗ್ರಹರೂಪದಲ್ಲಿರುವ ಜಡರೂಪಿ ದೇವರು ಇಂದಲ್ಲ ನಾಳೆ ಕಾಲದ ಉರುಳುವಿಕೆಯಲ್ಲಿ ನಾಶವಾಗುವುದರಿಂದ, ಅದನ್ನು ‘ಸಾವ ದೇವರು’ ಎಂದು ಶಿವಶರಣಶರಣೆಯರು ಕರೆದಿದ್ದಾರೆ;

ಭಾವ+ಅಳಿಯದ; ಭಾವ=ವ್ಯಕ್ತಿಯ ಮನದಲ್ಲಿ ಮೂಡುವ ಒಳಿತು ಕೆಡುಕಿನ;

ಒಳಮಿಡಿತ/ಸಂವೇದನೆ/ಆಲೋಚನೆ/ಚಿಂತನೆ; ಅಳಿ=ನಾಶವಾಗುವುದು/ಇಲ್ಲವಾಗುವುದು; ಭಕ್ತಿ=ಒಳ್ಳೆಯ ನಡೆನುಡಿಯಿಂದ ಬಾಳುವುದೇ ದೇವರಿಗೆ ಮಾಡುವ ಪೂಜೆಯೆಂದು ನಂಬಿರುವುದು; ಭಾವವಳಿಯದ ಭಕ್ತಿ=ಕೆಟ್ಟ ನಡೆನುಡಿಯನ್ನು ಬಿಡದೆ, ದೇವರನ್ನು ಪೂಜಿಸುವುದು. ಇಂತಹ ಪೂಜೆಯು ಕೇವಲ ಬೂಟಾಟಿಕೆಯಿಂದ ಕೂಡಿರುತ್ತದೆ. ಇದು ಒಳ್ಳೆಯದಲ್ಲ;

ಭಾವವಳಿಯದ ಭಕ್ತಿಯನೊಲ್ಲೆ=ಶಿವನನ್ನು ಒಲಿದು ಪೂಜಿಸುವ ವ್ಯಕ್ತಿಯು ತನ್ನ ಮಯ್ ಮನದಲ್ಲಿ ನಿರಂತರವಾಗಿ ತುಡಿಯುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಇಲ್ಲವೇ ನಾಶಪಡಿಸಿಕೊಂಡು, ಒಳ್ಳೆಯದನ್ನು ಆಚರಣೆಗೆ ತರಬೇಕು. ಇಂತಹ ಅರಿವು ಮತ್ತು ಎಚ್ಚರವಿಲ್ಲದ ನಡೆನುಡಿಯನ್ನು ನಾನು ಒಪ್ಪುವುದಿಲ್ಲ;

ಆವ+ಆವ; ಆವ=ಯಾವ; ಪರಿ=ರೀತಿ/ಬಗೆ; ವಿಧಿ+ಅನ್+ಒಲ್ಲೆ; ವಿಧಿ=ಹಣೆಬರಹ; ಅನ್=ಅನ್ನು;

ಆವಾವ ಪರಿಯಲ್ಲೂ ವಿಧಿಯನೊಲ್ಲೆ=ಯಾವುದೇ ಕಾರಣದಿಂದಲೂ ನಾನು ಹಣೆಬರಹವೆಂಬುದನ್ನು ಒಪ್ಪುವುದಿಲ್ಲ;

ಸಾವಿರಾರು ವರುಶಗಳಿಂದಲೂ ಜನಮನದಲ್ಲಿ ‘ಹಣೆಬರಹ/ವಿದಿ ಬರಹ’ ಎಂಬ ಒಂದು ನಂಬಿಕೆಯು ನೆಲೆಯೂರಿದೆ. ಈ ಜಗತ್ತಿನಲ್ಲಿರುವ ಎಲ್ಲಾ ಬಗೆಯ ಜೀವರಾಶಿಗಳ ಹುಟ್ಟಿಗೆ ಕಾರಣನಾಗಿರುವ ಬ್ರಹ್ಮನೆಂಬ ದೇವರು “ವ್ಯಕ್ತಿಯು ಹುಟ್ಟಿದಂದಿನಿಂದ ಸಾಯುವ ತನಕ ಅವನ/ಅವಳ ಜೀವನದಲ್ಲಿ ನಡೆಯಲಿರುವ ಎಲ್ಲಾ ಬಗೆಯ ನೋವು ನಲಿವುಗಳನ್ನು ಹುಟ್ಟಿದಾಗಲೇ ಅವರ ಹಣೆಯಲ್ಲಿ ಬರೆದಿರುತ್ತಾನೆ. ಅದರಂತೆಯೇ ಎಲ್ಲವೂ ನಡೆಯುತ್ತದೆ. ಮಾನವರ ಬದುಕಿನ ಹಸಿವು ಅಪಮಾನ ನೋವು ನಲಿವು ಸಂತಸಕ್ಕೆ ವಿದಿ ಇಲ್ಲವೇ ಹಣೆಬರಹವೇ ಕಾರಣ.” ಈ ಬಗೆಯ ಜನಮನದ ನಂಬಿಕೆಯನ್ನು ಶಿವಶರಣ ಶರಣೆಯರು ನಿರಾಕರಿಸಿದ್ದರು.

ಮಾನವರ ಬದುಕಿನ ನೋವು ನಲಿವಿಗೆ ನಿಸರ್‍ಗದಲ್ಲಿ ನಡೆಯುವ ಕ್ರಿಯೆಗಳಾದ ಮಳೆಗಾಲ, ಬರಗಾಲ, ಬೂಕಂಪಗಳು ಮತ್ತು ಮಾನವರ ಒಳಿತು ಕೆಡುಕಿನ ನಡೆನುಡಿಗಳೇ ಕಾರಣ. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನಕ್ಕೆ ಅಗತ್ಯವಾದ “ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯ” ವನ್ನು ಪಡೆದು ಒಲವು ನಲಿವು ನೆಮ್ಮದಿಯಿಂದ ಬಾಳಬೇಕಾದರೆ ನಿಸರ್‍ಗದಲ್ಲಿ ನಡೆಯುವ ಕ್ರಿಯೆಗಳು ಮತ್ತು ಮಾನವರ ನಡೆನುಡಿಗಳು ಉತ್ತಮವಾಗಿರಬೇಕು. ಆದ್ದರಿಂದ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಅವನ, ಅವನ ಕುಟುಂಬಕ್ಕೆ ಒಳಿತನ್ನು ತರುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡಬೇಕು ಎಂಬ ನಿಲುವನ್ನು ಶಿವಶರಣ ಶರಣೆಯರು ಹೊಂದಿದ್ದರು;

ಕಾಮೇಶ್ವರನ್+ಎಂಬುದನ್+ಒಂದನೆ; ಕಾಮೇಶ್ವರ=ಶಿವನಿಗೆ ಇದ್ದ ಮತ್ತೊಂದು ಹೆಸರು/ಜಗಳಗಂಟ ಕಾಮಣ್ಣನ ವಚನಗಳ ಅಂಕಿತನಾಮ; ಎಂಬುದನ್ನು=ಎನ್ನುವುದನ್ನು; ಒಂದನೆ=ಅದನ್ನು ಮಾತ್ರ; ಬಲ್ಲೆ=ತಿಳಿದಿದ್ದೇನೆ;

ಕಾಮೇಶ್ವರನೆಂಬುದನೊಂದನೆ ಬಲ್ಲೆ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಕಾಮೇಶ್ವರನೆಂಬ ಒಬ್ಬ ದೇವರನ್ನು ನಾನು ಚೆನ್ನಾಗಿ ಅರಿತಿದ್ದೇನೆ. ನಾನು ಒಲಿದು ನಂಬಿ ಪೂಜಿಸುವ ಈ ನನ್ನ ದೇವರು ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯನ್ನು ಕೊಡುವ ಚೇತನರೂಪಿಯಾಗಿ ನನ್ನ ಮಯ್ ಮನದಲ್ಲಿಯೇ ನೆಲೆಸಿದ್ದಾನೆ;

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: