ಆಟಗಾರರ ಜೊತೆಗಾರರು

– .


ಅಂತರರಾಶ್ಟ್ರೀಯ ಪುಟ್ ಬಾಲ್ ಪಂದ್ಯಗಳನ್ನು ಗಮನಿಸಿ. ಆಟಗಾರರು ಮೈದಾನಕ್ಕೆ ಬರುವಾಗ ಅವರ ಜೊತೆ ಜೊತೆಯಾಗಿ, ಆಟಗಾರರ ಕೈಹಿಡಿದು ಪುಟ್ಟ ಪುಟ್ಟ ಮಕ್ಕಳು ಹೆಜ್ಜೆ ಹಾಕುವುದನ್ನು ಕಾಣಬಹುದು. ಇವುಗಳನ್ನು ಮ್ಯಾಚ್ ಮಸ್ಕಾಟ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಆಟಗಾರರ ಜೊತೆಗಾರರು ಎನ್ನಬಹುದು. ಆಟಗಾರರ ಜೊತೆಗಾರರ ಪಡೆ ವಿಶ್ವದರ‍್ಜೆಯ ಪುಟ್ ಬಾಲ್ ಪಂದ್ಯಗಳಲ್ಲಿ ಮೊದಲಾದದ್ದು ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಮುಂತಾದ ಕ್ರೀಡೆಗಳ ಅಂತರರಾಶ್ಟ್ರೀಯ ಪಂದ್ಯಗಳಲ್ಲೂ ಕಾಣ ಸಿಗುತ್ತದೆ. ಈ ಜೊತೆಗಾರರ ಪಡೆ ಆಟಗಾರರ ಜೀವ ರಕ್ಶಣೆಗೆ ನಿಯೋಜಿತವಾದ ಪಡೆಯಲ್ಲ. ಬದಲಿಗೆ ಮೈದಾನಕ್ಕೆ ಇಳಿಯುವ ಪ್ರತಿಯೊಬ್ಬ ಆಟಗಾರನ ಜೊತೆ ಜೊತೆಯಾಗಿ ಈ ಮಕ್ಕಳು ಇರುತ್ತಾರೆ. ಈ ಮಕ್ಕಳನ್ನು ಮ್ಯಾಚ್ ಮಸ್ಕಾಟ್ ಅತವಾ ಚೈಲ್ಡ್ ಮಸ್ಕಾಟ್ ಎಂದೂ ಕರೆಯುವುದುಂಟು. ಈ ಪುಟ್ಟ ಪುಟ್ಟ ಮಕ್ಕಳು ಆಟಗಾರರ ಕೈ ಹಿಡಿದು, ಅವರ ಜೊತೆಯಲ್ಲಿ ಮೈದಾನಕ್ಕೆ ಬಂದು, ಆಟಗಾರರ ಮುಂದೆ ಸಾಲಿನಲ್ಲಿ ನಿಂತು ರಾಶ್ಟ್ರಗೀತೆ ನುಡಿಸುವಾಗ ಸಹ ಬಾಗಿಗಳಾಗುತ್ತಾರೆ. ರಾಶ್ಟ್ರಗೀತೆ ಮುಗಿದ ನಂತರ ಜೊತೆಗಾರ ಮಕ್ಕಳು ಮೈದಾನವನ್ನು ತೊರೆದು ತಮಗೆ ವಹಿಸಿದ ಕೆಲಸವನ್ನು ನಿರ‍್ವಹಿಸಲು ತೆರೆಳುತ್ತಾರೆ. ಸಾಮಾನ್ಯವಾಗಿ ಜೊತೆಗಾರರಾಗಿ ಬರುವ ಈ ಮಕ್ಕಳು ಆರರಿಂದ ಹದಿನೈದರ ವಯಸ್ಸಿನವರು. ಈ ಮಕ್ಕಳಲ್ಲಿ ಲಿಂಗ ಬೇದವಿಲ್ಲ. ಹೆಣ್ಣು ಮಕ್ಕಳನ್ನೂ ಸಹ ಆಯ್ಕೆ ಮಾಡಲಾಗುತ್ತದೆ. ಈ ಮಕ್ಕಳು ಆಟಗಾರರಿಗೆ ಸಹಾಯ ಮಾಡುವ, ದ್ವಜಗಳನ್ನು ಒಯ್ಯುವ, ಸೈಡ್ ಲೈನಿನಿಂದ ಬಾಲನ್ನು ಆಟದ ಮೈದಾನಕ್ಕೆ ತಲುಪಿಸುವ ಕಾರ‍್ಯವನ್ನು ಹಾಗೂ ಇತರೆ ಸಣ್ಣ ಪುಟ್ಟ ಕೆಲಸಗಳನ್ನು ನಿರ‍್ವಹಿಸುತ್ತಾರೆ.

ಆಟಗಾರರ ಜೊತೆಗಾರ ಮಕ್ಕಳ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ, 1990 ರ ದಶಕದಿಂದಲೂ ಪ್ರತಿ ತಂಡಕ್ಕೆ ಒಂದು ಮಸ್ಕಾಟ್ ಅತವಾ ಪ್ರತಿ ಆಟಗಾರನಿಗೆ ಒಬ್ಬರಂತೆ ಮಕ್ಕಳು ಪುಟ್ಬಾಲ್ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮಕ್ಕಳು ಸಾಮಾನ್ಯವಾಗಿ ತಮ್ಮ ಇಶ್ಟದ ಕ್ಲಬ್ ನ ಚಿಕ್ಕ ಲೀಗ್ ಪಂದ್ಯಗಳಲ್ಲಿ ಕಾಣಿಸಿಕೊಂಡು ಪ್ರಾಯೋಜಕರ ಮನ ಸೆಳೆದವರನ್ನ ಮತ್ತು ಮೈದಾನದ ಹೊರಗೆ ಉತ್ತಮ ಕಾರ‍್ಯ ನಿರ‍್ವಹಿಸಿದವರನ್ನ ಆಯ್ಕೆ ಮಾಡಲಾಗುತ್ತದೆ.

ಯು.ಇ.ಎಪ್.ಎ ಯುರೋ 2000ದಲ್ಲಿ ಪ್ರತಿ ಪುಟ್ಬಾಲ್ ಆಟಗಾರರೊಂದಿಗೆ ಜೊತೆಗಾರ ಮಕ್ಕಳು ಕಾಣಿಸಿಕೊಂಡ ಮೊದಲ ಪ್ರಮುಕ ಗಟನೆಯಾಗಿದೆ. ಜೊತೆಗಾರರಾಗಿ ಬರುವ ಮಕ್ಕಳು ಸಾಮಾನ್ಯವಾಗಿ ಅದೇ ಕ್ಲಬ್ಬಿನ ಜ್ಯೂನಿಯರ್ ತಂಡದ ಸದಸ್ಯರುಗಳಾಗಿರುತ್ತಾರೆ. 2002ರಿಂದ, ವಿಶ್ವ್ವಕಪ್ ಅತವಾ ಯೂರೋಪಿಯನ್ ಚಾಂಪಿಯನ್ ಶಿಪ್ ಈವೆಂಟುಗಳ ಪ್ರಾಯೋಜಕರಾದ ಮಾಕ್ ಡೊನಾಲ್ಡ್, ಕೆಲವು ಸ್ಪರ‍್ದೆಗಳನ್ನು ಆಯೋಜಿಸಿ, ವಿಜೇತರನ್ನು ವಿಶ್ವಕಪ್ ಅತವಾ ಯುರೋಪಿಯನ್ ಕಪ್ ಪಂದ್ಯಗಳಿಗೆ ಜೊತೆಗಾರರಾಗಿ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಆಟಗಾರರು ಜೊತೆಗಾರ ಮಕ್ಕಳೊಂದಿಗೆ ನಡೆಯಲು ವಿವಿದ ಕಾರಣಗಳಿವೆ.
1. ಮಕ್ಕಳ ಹಕ್ಕುಗಳ ಅಬಿಯಾನವನ್ನು ಉತ್ತೇಜಿಸುವುದು
2. ಆಟಕ್ಕೆ ಮುಗ್ದತೆಯ ಅಂಶವನ್ನು ವಿಶದಪಡಿಸುವುದು.
3. ಮಕ್ಕಳ ಕನಸುಗಳನ್ನು ಈಡೇರಿಸುವುದು
4. ತಾವು ಕೈ ಹಿಡಿದು ಹೋಗುವ ಆಟಗಾರರಂತೆ ಪ್ರಕ್ಯಾತವಗುವ ಕನಸನ್ನು ಬಿತ್ತುವುದು

ವಿಶ್ವದ ಕೆಲವು ಪ್ರಮುಕ ಟೂರ‍್ನಿಗಳಲ್ಲಿ, ಪ್ರೀಮಿಯರ್ ಲೀಗ್ ನಂತಹ ಪುಟ್ ಬಾಲ್ನ ಪ್ರಮುಕ ಟೂರ‍್ನಿಗಳಲ್ಲಿ, ಮಕ್ಕಳ ಜೊತೆಗಾರ ಪಡೆಯನ್ನು ಮುಕ್ತವಾಗಿ ಆಯ್ಕೆ ಮಾಡಿದರೆ, ಮತ್ತೆ ಕೆಲವು ಟೂರ‍್ನಿಗಳ ಪ್ರಾಯೋಜಕರು 350 ರಿಂದ 500 ಪೌಂಡ್ ಶುಲ್ಕ ಸಹ ವಿದಿಸುತ್ತಾರೆ. ಮತ್ತೆ ಕೆಲವರು ದತ್ತಿ ಸಂಸ್ತೆಗಳ ಮೂಲಕ ಆಯ್ಕೆ ಮಾಡಿದರೆ, ಮತ್ತೆ ಕೆಲವು ಕ್ಲಬ್ಬುಗಳು ಯಾವುದೇ ಶುಲ್ಕ ವಿದಿಸದೆ ಆಯ್ಕೆ ಮಾಡುತ್ತವೆ. ಕೆಲವು ವಿಶೇಶ ಸಂದರ‍್ಬಗಳಲ್ಲಿ ಮಕ್ಕಳ ಜೊತೆಗಾರರು ಬದಲಾಗುವ ಸಾದ್ಯತೆ ಇದೆ. ವಿಶ್ವ ತಾಯಂದಿರ ದಿನದಂದು ಅಜಾಕ್ಸ್ ಅಂಸ್ಟರ್ ಡ್ಯಾಮ್ ಆಟಗಾರರು ತಮ್ಮ ತಾಯಂದಿರೊಂದಿಗೆ ಮೈದಾನಕ್ಕೆ ಇಳಿದಿದ್ದರು. ಮತ್ತೊಂದು ಕ್ಲಬ್, ಸಾವೋ ಪೋಲೋ ಆಟಗಾರರು, ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ಜಾಗ್ರುತಿ ಮೂಡಿಸಲು ನಾಯಿಗಳನ್ನು ಜೊತೆಗಾರರಾಗಿ ಹಿಡಿದುಕೊಂಡು ಮೈದಾನಕ್ಕೆ ಇಳಿದಿದ್ದರು. ಪ್ರಕ್ಯಾತ ಪುಟ್ಬಾಲ್ ಆಟಗಾರ ವೇಯ್ನ್ ರೂನಿ ತನ್ನ ಬಾಲ್ಯದಲ್ಲಿ ಆಟಗಾರರ ಜೊತೆಗಾರ ಪಡೆಯಲ್ಲಿದ್ದ, ಈತನಂತೆ ಹಲವಾರು ಪ್ರಕ್ಯಾತ ಆಟಗಾರರು ಸಹ ಆಟಗಾರರ ಜೊತೆಗಾರರಾಗಿ ಕೆಲಸ ನಿರ‍್ವಹಿಸಿದ್ದಿದೆ. ನಗು ಮುಕದ, ಪುಟ್ಟ ಪುಟ್ಟ ಮುಗ್ದ ಮಕ್ಕಳು ವಿಶ್ವ ವಿಕ್ಯಾತ ಆಟಗಾರರ ಜೊತೆ ಜೊತೆಯಾಗಿ ಹೆಜ್ಜೆ ಹಾಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

(ಮಾಹಿತಿ ಮತ್ತು ಚಿತ್ರಸೆಲೆ: wikipedia.org, wikiwand.com, popsugar.com, dnaindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: