ಅವಸರದ ರೇಕಣ್ಣನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಅವಸರದ  ರೇಕಣ್ಣ
ದೊರೆತಿರುವ ವಚನಗಳು: 104
ವಚನಗಳ ಅಂಕಿತನಾಮ: ಸದ್ಯೋಜಾತಲಿಂಗ

ದಾಕ್ಷಿಣ್ಯದ  ಭಕ್ತಿ
ಕಲಿಕೆಯ  ವಿರಕ್ತಿ
ಮಾತಿನ  ಮಾಲೆಯ  ಬೋಧೆ
ತೂತ  ಜ್ಞಾನಿಗಳ  ಸಂಸರ್ಗ
ಬೀತಕುಂಭದಲ್ಲಿ  ಅಮೃತವ  ಹೊಯಿದಿರಿಸಲಿಕ್ಕೆ
ಅದು  ಎಷ್ಟು  ದಿವಸ  ಇರಲಾಪುದು
ಇಂತಿವ  ಕಳೆದುಳಿದು
ನಡೆನುಡಿ  ಸಿದ್ಧಾಂತವಾಗಿ  ಕೂಡಬೇಕು
ಸದ್ಯೋಜಾತಲಿಂಗವ.

ವ್ಯಕ್ತಿಯು ತೋರಿಕೆಯ, ಕಪಟತನದ ಮತ್ತು ಚಂಚಲ ಮನಸ್ಸಿನ ಕೆಟ್ಟ ನಡೆನುಡಿಗಳನ್ನು ತೊರೆದು ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳಬೇಕೆಂಬ ಗಟ್ಟಿಯಾದ ನಿಲುವನ್ನು ತಳೆಯಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ದಾಕ್ಷಿಣ್ಯ=ಇನ್ನೊಬ್ಬರ ಮನಸ್ಸನ್ನು ಅನುಸರಿಸಿ ನಡೆದುಕೊಳ್ಳುವುದು; ಭಕ್ತಿ=ದೇವರಲ್ಲಿ ಒಲವು;

ದಾಕ್ಷಿಣ್ಯದ  ಭಕ್ತಿ=ಇತರರ ಮೆಚ್ಚುಗೆಯನ್ನು ಗಳಿಸಿಕೊಳ್ಳುವುದಕ್ಕಾಗಿ ದೇವರಲ್ಲಿ ಒಲವು ಉಳ್ಳವನಂತೆ ನಟಿಸುವುದು;

ಕಲಿಕೆ=ಮತ್ತೊಬ್ಬರಿಂದ ಹೇಳಿಸಿಕೊಂಡು ಪಡೆದ ವಿದ್ಯೆ; ವಿರಕ್ತಿ=ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವಂತಹ ಒಳಮಿಡಿತಗಳಲ್ಲಿ, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ತನ್ನ ಜೀವನದಲ್ಲಿ  ಅಳವಡಿಸಿಕೊಂಡು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿ;

ಕಲಿಕೆಯ  ವಿರಕ್ತಿ=ವ್ಯಕ್ತಿಗೆ ವಿರಕ್ತಿಯೆಂಬುದು ತನ್ನ ಅರಿವಿನಿಂದ ಮೂಡಿಬಂದಿಲ್ಲ. ಅಕ್ಕರದ ವಿದ್ಯೆಯಿಂದ  ತಿಳಿದ ಸಂಗತಿಗಳನ್ನು ಕಲಿತುಕೊಂಡು ಕಪಟತನದಿಂದ  ವಿರಕ್ತನ ರೀತಿಯಲ್ಲಿ   ನಟಿಸುವುದು;

ಮಾಲೆ=ಸರ/ಹಾರ ; ಮಾತಿನ ಮಾಲೆ=ಕೇಳುವವರಿಗೆ ಬೇಕಾಗಿರಲಿ ಇಲ್ಲವೇ ಬೇಡವಾಗಿರಲಿ  ಒಂದೇ ಸಮನೆ  ಮಾತನಾಡುತ್ತಿರುವುದು; ಬೋಧೆ=ಕಲಿಸುವಿಕೆ/ವಿದ್ಯೆ;

ಮಾತಿನ  ಮಾಲೆಯ  ಬೋಧೆ=ವ್ಯಕ್ತಿಯು ಸತ್ಯ ನೀತಿ ನ್ಯಾಯದ ವಿಚಾರಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳದೆ, ಇತರರನ್ನು ಮರುಳಗೊಳಿಸುವಂತೆ ಸೊಗಸಾದ ಮಾತುಗಳನ್ನಾಡುವುದು;

ತೂತು=ಕೊರತೆ/ಲೋಪ; ಜ್ಞಾನಿ=ಅರಿವುಳ್ಳವನು/ತಿಳುವಳಿಕೆಯುಳ್ಳವನು;

ತೂತ ಜ್ಞಾನಿ=ವಿದ್ಯಾವಂತನಾಗಿದ್ದರೂ ಒಳ್ಳೆಯ ನಡೆನುಡಿಯಲ್ಲಿ ಕೊರತೆಯುಳ್ಳ ವ್ಯಕ್ತಿ;  ಸಂಸರ್ಗ=ಒಡನಾಟ/ಸಹವಾಸ;

ತೂತ  ಜ್ಞಾನಿಗಳ  ಸಂಸರ್ಗ=ಒಳ್ಳೆಯ ನಡೆನುಡಿಯ ಕೊರತೆಯುಳ್ಳ ವಿದ್ಯಾವಂತರ ಒಡನಾಟ;

ಬೀತ=ಒಡೆದ/ಬಿರುಕುಬಿಟ್ಟ; ಕುಂಭ=ಕೊಡ/ಗಡಿಗೆ/ಮಣ್ಣಿನ ಪಾತ್ರೆ; ಬೀತಕುಂಭ=ಬಿರುಕುಬಿಟ್ಟ  ಮಡಕೆ; ಅಮೃತ=ಒಂದು ಬಗೆಯ ಪಾನೀಯ/ಹಾಲು/ನೀರು; ಹೊಯಿದು+ಇರಿಸಲಿಕ್ಕೆ; ಹೊಯ್=ಹಾಕು/ಸುರಿ; ಇರಿಸಲಿಕ್ಕೆ=ಇಟ್ಟರೆ; ಇರಲ್+ಆಪುದು; ಆಪುದು=ಆಗುವುದು; ಇರಲಾಪುದು=ಇರಲು ಆಗುವುದು. ಅಂದರೆ ಎಲ್ಲವೂ ಸೋರಿಹೋಗುತ್ತದೆ;

ಬೀತಕುಂಭದಲ್ಲಿ  ಅಮೃತವ  ಹೊಯಿದಿರಿಸಲಿಕ್ಕೆ ಅದು  ಎಷ್ಟು  ದಿವಸ  ಇರಲಾಪುದು=ಬಿರುಕುಬಿಟ್ಟ ಮಡಕೆಯಲ್ಲಿ ಹಾಲನ್ನು ಹಾಕಿಟ್ಟರೆ , ಸಮಯ ಕಳೆದಂತೆಲ್ಲಾ  ಹಾಲು ಸೋರಿ ಹೋಗುತ್ತದೆ. ಇದು ಒಂದು ರೂಪಕವಾಗಿ ಬಳಕೆಯಾಗಿದೆ. ಹೇಗೆ ಬಿರುಕುಬಿಟ್ಟ ಮಡಕೆಯಲ್ಲಿ ಹಾಕಿಟ್ಟ ಹಾಲು ತುಸು ಸಮಯದಲ್ಲಿಯೇ ಸೋರಿಹೋಗಿ ಇಲ್ಲವಾಗುವುದೋ ಅಂತೆಯೇ  ತೋರಿಕೆಯ ವ್ಯಕ್ತಿತ್ವವುಳ್ಳ, ಕಪಟತನವುಳ್ಳ, ಮಾತುಗಾರಿಕೆಯಿಂದಲೇ ಜನರನ್ನು ಮರುಳುಮಾಡುವ ಮತ್ತು ವಿದ್ಯಾವಂತನಾದರೂ ಒಳ್ಳೆಯತನವಿಲ್ಲದ  ವ್ಯಕ್ತಿಗಳ ಒಡನಾಟದಿಂದ ಯಾರಿಗೂ ಒಳ್ಳೆಯದಾಗುವುದಿಲ್ಲವೆಂಬುದನ್ನು ಈ ರೂಪಕ ಸೂಚಿಸುತ್ತದೆ;

ಇಂತು+ಇವ; ಇಂತು=ಈ ರೀತಿ; ಇವ=ಇವನ್ನು; ಕಳೆದು+ಉಳಿದು; ಕಳೆ=ಬಿಡು/ತೊರೆ/ತೆಗೆ; ಉಳಿ=ಮಿಗು;

ಇಂತಿವ  ಕಳೆದುಳಿದು=ಕೆಟ್ಟ ನಡೆನುಡಿಗಳನ್ನು ತೊರೆದುಒಳ್ಳೆಯದನ್ನು ಮಾತ್ರ ಅನುಸರಿಸಿ;  

 ನಡೆ=ಮಾಡುವ ಕೆಲಸ;  ನುಡಿ=ಆಡುವ ಮಾತು; ಸಿದ್ಧಾಂತ+ಆಗಿ; ಸಿದ್ಧಾಂತ=ತತ್ವ/ಗಟ್ಟಿಯಾದ ನಿಲುವು;  ಕೂಡಬೇಕು=ಸೇರಬೇಕು; ಸದ್ಯೋಜಾತ ಲಿಂಗ=ಶಿವನ ಮತ್ತೊಂದು ಹೆಸರು/ಅವಸರದ ರೇಕಣ್ಣನವರ ವಚನಗಳ ಅಂಕಿತನಾಮ;

ನಡೆ ನುಡಿ ಸಿದ್ಧಾಂತವಾಗಿ ಕೂಡಬೇಕು=ಒಳ್ಳೆಯ ನಡೆನುಡಿಗಳ ಪಾಲನೆಯೇ ವ್ಯಕ್ತಿಯ ಜೀವನದ ಗುರಿಯಾಗಬೇಕು;

(ಚಿತ್ರ ಸೆಲೆ: sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: