ಚಿರಪರಿಚಿತ ತಾಂಬೂಲದ ಹಿನ್ನೆಲೆ

– ಶ್ಯಾಮಲಶ್ರೀ.ಕೆ.ಎಸ್.

ಹಿಂದಿನ ಕಾಲದಿಂದಲೂ ಬಾರತೀಯರಿಗೆ ತಾಂಬೂಲವು ಚಿರಪರಿಚಿತವಾದುದು. ಹಿಂದೆ ಊಟದ ಬಳಿಕ ತಾಂಬೂಲ ತಿನ್ನುವುದು ಸರ‍್ವೇ ಸಾಮಾನ್ಯವಾಗಿತ್ತು. ಕಾಲ ಬದಲಾದಂತೆ ಇದು ಕಡಿಮೆಯಾಗತೊಡಗಿದೆ. ಬದಲಾಗಿ ಪಾನ್ ಬೀಡಾ, ಪಾನ್ ಪರಾಗ್ ಗಳು ತಲೆಯೆತ್ತಿವೆ. ಆದರೆ ತಾಂಬೂಲ ತಿನ್ನುವವರ ಸಂಕ್ಯೆ ಅಶ್ಟೇನು ಕಡಿಮೆಯಾಗಿಲ್ಲ. ಹಬ್ಬ, ಪೂಜೆ, ಮದುವೆ, ನಾಮಕರಣ ಹೀಗೆ ಯಾವುದಾದರು ಮಂಗಳ ಕಾರ‍್ಯದ ಸಂದರ‍್ಬಗಳಲ್ಲಿ ಅತಿತಿಗಳಿಗೆ ಊಟದ ನಂತರ ತಾಂಬೂಲ ನೀಡುವುದರ ಮೂಲಕ ಆತಿತ್ಯವನ್ನು ಪೂರ‍್ಣಗೊಳಿಸಲಾಗುತ್ತದೆ. ಪೂಜೆಗೆ ಇಡುವ ಕಳಸದಲ್ಲೂ ವೀಳ್ಯದೆಲೆಗೆ ಮೊದಲ ಸ್ತಾನ. ಮನೆಗೆ ಬರುವ ಮುತ್ತೈದೆಯರಿಗೆ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣನ್ನು ಜೊತೆಗಿಟ್ಟು ನೀಡುವ ಸಂಪ್ರದಾಯ ಇಂದಿಗೂ ಮರೆಯಾಗಿಲ್ಲ.

ವೀಳ್ಯದೆಲೆ ಲಕ್ಶ್ಮಿ ಸ್ವರೂಪಿ ಎಂಬ ಬಾವನೆ ನಮ್ಮಲ್ಲಿದೆ. ಆದ್ದರಿಂದಲೇ ಅದನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ, ಬೋರಲಾಗಿಡುವಂತಿಲ್ಲ, ತಟ್ಟೆಯಲ್ಲಿ ಜೋಡಿಸಿ ತಾಂಬೂಲಕ್ಕೆ ಇಡಬೇಕು ಎಂಬ ಅನಿಸಿಕೆ ನಮ್ಮ ಹಿರಿಯರದ್ದು. ವೀಳ್ಯದೆಲೆಯ ತೊಟ್ಟಿನ ಬಾಗದಲ್ಲಿ ಮ್ರುತ್ಯು ದೇವತೆ ಮತ್ತು ದಾರಿದ್ರ‍್ಯ ಲಕ್ಶ್ಮಿ ನೆಲೆಸಿರುತ್ತಾಳೆ ಎಂಬ ಕಾರಣಕ್ಕಾಗಿ ಸೇವಿಸುವ ಮುನ್ನ ತೊಟ್ಟನ್ನು ಮುರಿದು ಬಿಸಾಡಿ ತಿನ್ನುವ ಪದ್ದತಿ ಇಂದಿಗೂ ಅಳಿದಿಲ್ಲ. ಆಗೆಲ್ಲ ಯಾವುದೇ ಶುಬ ಸಮಾರಂಬಗಳಿಗೆ ಕರೆಯುವಾಗ ವೀಳ್ಯದೆಲೆ ಜೊತೆ ಅಡಿಕೆ ಇಟ್ಟು ಕರೆಯುತ್ತಿದ್ದರು. ಈಗಿನ ರೀತಿ ಆಹ್ವಾನ ಪತ್ರಿಕೆಗಳು ಆಗ ಬಳಕೆಯಲ್ಲಿರಲಿಲ್ಲ. ಇನ್ನು ಮದುವೆಗೆ ವದು ವರರ ಒಪ್ಪಿಗೆ ಮೇರೆಗೆ ತಾಂಬೂಲ ಬದಲಾಯಿಸಿಕೊಳ್ಳುವ ಶಾಸ್ತ್ರವನ್ನು ಈಗಲೂ ನೋಡುತ್ತಿರುತ್ತೇವೆ.

ತಾಂಬೂಲ ಸೇವನೆ ಎಂದರೆ ವೀಳ್ಯದೆಲೆ, ಅಡಿಕೆ ಹಾಗೂ ಸುಣ್ಣ ಸೇರಿಸಿ ಜಗಿದು ಸವಿಯುವುದು. ಇನ್ನೂ ಕೆಲವರು ಸ್ವಲ್ಪ ಸಕ್ಕರೆ, ಏಲಕ್ಕಿ ಸೇರಿಸುವುದುಂಟು. ತಾಂಬೂಲ ಜಗಿದಾಗ ಬಾಯೆಲ್ಲ ಕೆಂಪಗಾಗುವುದನ್ನು ಗಮನಿಸಿರಬಹುದು. ಅಡಿಕೆಯಲ್ಲಿರುವ ಅಲ್ಕೋಲಾಯಿಡ್ ಮತ್ತು ಟ್ಯಾನಿನ್ ಎಂಬ ರಾಸಾಯನಿಕ ಅಂಶಗಳು ಸುಣ್ಣದೊಡನೆ ಬೆರೆತಾಗ ಈ ರೀತಿ ಕೆಂಪಗಾಗುತ್ತದೆ.

ಎಲೆ ಅಡಿಕೆ ಅಂದರೆ ಆಗಿನ ಕಾಲದ ಅಜ್ಜಿಯರನ್ನು ಇಲ್ಲಿ ನೆನೆಯಬಹುದು. ಯಾವಾಗಲೂ ತಮ್ಮೊಂದಿಗೆ ಎಲೆ ಅಡಿಕೆ ಚೀಲವನ್ನು ಒಯ್ಯದೇ ಇರುತ್ತಿರಲಿಲ್ಲ. ಆ ಚೀಲವನ್ನು ಕೆಲವೆಡೆ ಎಲೆ ಅಡಿಕೆ ಸಂಚಿ, ಎಲೆ ಚಂಚಿ ಎಂದು ಕರೆಯುವ ವಾಡಿಕೆ ಇದೆ. ಸುಮಾರು ಒಂದು ಅಡಿ ಉದ್ದವಿರುತ್ತಿದ್ದ ಈ ಚೀಲದಲ್ಲಿ ಎಲೆ, ಅಡಿಕೆ, ಸುಣ್ಣ, ಕಡ್ಡಿಪುಡಿ, ಹೊಗೆಸೊಪ್ಪು, ದುಡ್ಡು, ಕುಟಾಣಿ ಹೀಗೆ ಅಗತ್ಯವಾದ ವಸ್ತುಗಳನ್ನು ಇಟ್ಟುಕೊಳ್ಳಲು ನಾಲ್ಕೈದು ಪದರಗಳು ಆ ಸಂಚಿಯಲ್ಲಿ ಇರುತ್ತಿದ್ದವು. ಈಗಿನ ಪರ‍್ಸ್ , ಹ್ಯಾಂಡ್ ಬ್ಯಾಗ್ ಗಳು ಇರುವಂತೆ ಅವರಿಗೆ ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳುವ ಸಾದನವಾಗಿತ್ತು ಸಂಚಿ.

17ನೇ ಶತಮಾನದ ಪ್ರಸಿದ್ದ ವಚನಗಾರ‍್ತಿ ಸಂಚಿ ಹೊನ್ನಮ್ಮನ ಹೆಸರು ಕೇಳಿದ್ದೇವೆ. ಸಂಚಿ ಎಂದರೆ ಚೀಲ. ಆಕೆ ಮೈಸೂರಿನ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ, ರಾಜ ರಾಣಿಯರ ಸಮೀಪವರ‍್ತಿಯಾಗಿ ಇದ್ದುಕ್ಕೊಂಡು, ಎಲೆ ಅಡಿಕೆ ಚೀಲವನ್ನು ಹಿಡಿದು ಅಗತ್ಯವಿದ್ದಾಗ ಸೇವಿಸಲು ಅವರಿಗೆ ಎಲೆ ಅಡಿಕೆ ನೀಡುವ ಕೆಲಸ ಮಾಡುತ್ತಿದ್ದಳಂತೆ. ಇದರೊಟ್ಟಿಗೆ ಕವಯಿತ್ರಿಯು, ವಚನಗಾರ‍್ತಿಯೂ ಆದ ಆಕೆ, ಸಂಚಿ ಹೊನ್ನಮ್ಮ ಎಂದೇ ಪ್ರಸಿದ್ದಿಯಾದವಳು.

ಅಂಬಾಡಿ ಎಲೆ, ಮೈಸೂರು ಎಲೆ, ಆಂದ್ರ ಬನಾರಸ್, ಮದ್ರಾಸ್, ಕಲ್ಕತ್ತಾ ಎಲೆ ಎಂಬ ವಿದಗಳಿವೆ. ಕಪ್ಪು ಎಲೆಯ ರುಚಿ ಸ್ವಲ್ಪ ಕಾರ. ಕೆಲವರಿಗೆ ಬಿಳಿ ಎಲೆ ಎಂದರೆ ಬಹಳ ಇಶ್ಟ. ತಾಂಬೂಲವನ್ನು ಸೇವನೆ ಮಾಡುವುದರಿಂದ ವಾತ, ಪಿತ್ತ, ಶೀತ, ಕಪ, ಅಜೀರ‍್ಣ, ಕೆಮ್ಮು, ನೆಗಡಿ ತಡೆಗಟ್ಟಬಹುದು ಎಂದು ಆಯುರ‍್ವೇದದಲ್ಲಿ ಹೇಳಲಾಗುತ್ತದೆ. ತಾಂಬೂಲ ಸೇವನೆ ಅತಿಯಾದರೆ ಆರೋಗ್ಯಕ್ಕೆ ಮಾರಕವಾಗಬಹುದು. ಆದ್ದರಿಂದ ಮಿತವಾಗಿದ್ದಲ್ಲಿ ಆರೋಗ್ಯಕ್ಕೂ ಹಿತ.

(ಚಿತ್ರಸೆಲೆ: ugaoo.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಆನಂದ್ says:

    ನೀವು ಕರ್ನಾಟಕ ಸಾಮ್ರಾಜ್ಯದ ಬಗ್ಗೆ ವಿದೇಶಿ ಪ್ರವಾಸಿಗರು ಬರೆದಿರುವ ಬರಹಗಳನ್ನು (ಪ್ರವಾಸಿ ಕಂಡ ವಿಜಯನಗರ) ಓದಿ. 16ನೆಯ ಶತಮಾನದ ಮಾಹಿತಿ ಸಿಗುತ್ತದೆ..

ಅನಿಸಿಕೆ ಬರೆಯಿರಿ: