ಕವಿತೆ: ನವಿಲು ಕುಣಿದಾಗ

– ದ್ವಾರನಕುಂಟೆ ಪಿ. ಚಿತ್ತನಾಯಕ.ನವಿಲು, Peacock

ಅಯ್ಯೋ ಬುವಿಯೇ ಬಿರಿಯುವ ಬರವು
ಬಂದಿತು ಒಂದು ಕಾಲದಲಿ
ಜನಗಳ ಮೊಗದಲಿ ನಗುವೇ ಇಲ್ಲ
ಹರಡಿತು ಹಸಿವಿನ ಬಿರುಗಾಳಿ

ಎಲೆಗಳು ಒಣಗಿ ಮರಗಳು ಸೊರಗಿ
ಮನಗಳ ಒಳಗೆ ಮರುಕದನಿ
ಕಣ್ಣಿಯ ಕಳಚಿ ಬಿಟ್ಟರು ದನಕರು
ಊರಿನ ಹೊರಗೆ ಜೀವ ದನಿ

ಕುಡಿಕೆಯ ಹೊನ್ನು ಕರಗುತಲಿತ್ತು
ಮಣ್ಣಿನ ಮಡಿಕೆಯು ಒಣಗುತ್ತ
ವಾಡೆಯ ದಾನ್ಯವು ಮುಗಿಯುತಲಿತ್ತು
ಕೆಲವರ ಮನೆಗಳು ಹಸಿರಾಗಿ

ಹಟ್ಟಿಯ ಸಾಮಿಗೆ ಹೂವುಗಳಿಲ್ಲದೆ
ಹೊತ್ತಿನ ಪೂಜೆಯು ನಿಂತಿತ್ತು
ಹೊತ್ತಿಗೆ ಹೊತ್ತು ಕಳೆಯುವ ಕತ್ತಿನ
ಮೇಲೆಯೆ ಮೋಡವು ತೋಗಿತ್ತು

ದಿನದಿನ ಹೀಗೆಯೇ ಆದರೆ ಹೇಗೋ
ಊರಿನ ಕಟ್ಟೆಯ ಮಾತುಕತೆ
ಮಳೆಯೇ ಬಗ್ಗದು ಬೂಮಿಯ ಕಡೆಗೆ
ಜೀವಗಳಿನ್ನು ಅದೋಗತಿ

ಒಣಬಯಲಿನ ಒಳಗೆ ಕುಣಿಯುವ
ನವಿಲಿನ ಹಿಂಡನು ಕಂಡನು ರಂಗಜ್ಜ
ಇಂದೇ ಸಂಜೆ ಮಳೆರಾಯನು ಬರುವನು
ನೋಡಿರೋ ದೂತರ ನರ‍್ತನವೆಂದ

ಬಿಟ್ಟ ಕಣ್ಣುಗಳ ಬಿಟ್ಟಂತೆಯೇ
ಕಣ್ಮನ ತುಂಬಿತು ಊರಜನ
ಅಜ್ಜನ ಮಾತನು ಅಲ್ಲಗಳೆಯುವ
ಹೊತ್ತಿಗೆ ಬಿತ್ತು ಜೋರು ಮಳೆ

ಮರಗಳ ನೆಟ್ಟರು ವನಗಳ ಬಿಟ್ಟರು
ಗೋಮಾಳವು ಇತ್ತು ಊರಿನಲಿ
ಬರವು ಬರದೇ ಸಾಕುತಲಿದ್ದವು
ಸಂತ್ರುಪ್ತಿಯ ಕೆರೆಕಟ್ಟೆಗಳ ತುಂಬುತಲಿ

ಜನಗಳ ಹೆಜ್ಜೆ ನದಿಕೆರೆಗಳ ಮುಚ್ಚಿ
ಜೀವಿಸುವವರೆದುರು ಮರ ಕಾಣೆ
ದುಡ್ಡಿನ ಬಡಾಯಿ ಬಾಳುವವರಲಿ
ನವಿಲು ನರ‍್ತನದ ಮನಕಾಣೆ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications