ರವೀಂದ್ರನಾತ ಟ್ಯಾಗೋರರ ಕವನಗಳ ಓದು – 5 ನೆಯ ಕಂತು

– ಸಿ.ಪಿ.ನಾಗರಾಜ.

(ಕ್ರಿ.ಶ. 1930 ರಲ್ಲಿ ರವೀಂದ್ರರು ಬಂಗಾಳಿ ನುಡಿಯಲ್ಲಿ ರಚಿಸಿ ಪ್ರಕಟಿಸಿದ ‘ಪುನಶ್ಚ’ ಎಂಬ ಕವನ ಸಂಕಲನಕ್ಕೆ  ಮುನ್ನುಡಿಯಾಗಿ ‘ಕವಿಯ ಆತಂಕ’ ಎಂಬ ಈ  ಕವನವನ್ನು ರಚಿಸಿದ್ದರು.)

*** ಕವಿಯ ಆತಂಕ ***

ನನ್ನ ಕವಿತೆಗಳನು ನಿನಗೆ ಕಳುಹುತಿರುವೆ ಓದುಗ
ಅಚ್ಚುಮೊಳೆಗಳನು ಒತ್ತಿ ಪುಸ್ತಕದಲಿ ತುಂಬುತ
ಹಿಂಡು ಹಕ್ಕಿಗಳನು ಪಂಜರದಲಿ ತುಂಬುವಂತೆಯೆ
ಉಸಿರುಗಟ್ಟುವಂತೆ ತುಂಬಿ ರಟ್ಟು ಹೊದಿಸಿ ಕಟ್ಟುತ

ನನ್ನ ಗೀತ ಈ ಅನಂತ ವಿಶ್ವದಲ್ಲಿ ತಿರುಗುತ
ನೀಲ ಬಾನಿನಲ್ಲಿ ಚಂದ್ರತಾರೆಗಳನು ಸುತ್ತುತ
ನಲಿಯುತಿರಲು ಕೆಳಗೆ ಸೆಳೆದು ಅಚ್ಚುಕೂಟ ಚುಂಬಕ
ನೀನು ಓದಲೆಂದೆ ಇಂದು ಪ್ರಕಟವಾಯ್ತು ಪುಸ್ತಕ

ಇಂದಿನೀ ಅಶಾಂತ ಯುಗದಿ ಓಡುತಿಹರು ಮನುಜರು
ಇನಿತು ಕವಿಯ ವಾಣಿ ಕೇಳುವಂಥ ಸಮಯವಿಲ್ಲವು
ಇಂದು ಭೋಜರಾಜನಿಲ್ಲ ನಾನು ಕಾಳಿದಾಸನಲ್ಲ
ಬರಿದೆ ಹಗಲುಗನಸ ಕಂಡು ವ್ಯರ್ಥವಾಯ್ತು ಸಮಯವು

ಹೃದಯವಂತ ಓದುಗರನು ಕಂಡು ನಲ್ಮೆದೋರಲು
ಕಾವ್ಯಕನ್ನೆ ಓಡುತಿಹಳು ಬಸ್ಸು ರೈಲು ಹತ್ತಲು.

ಕಣ್ಣ ಮುಂದಿನ ಲೋಕದಲ್ಲಿ ಕಂಡ ವಾಸ್ತವ  ಸಂಗತಿಗಳಿಗೆ, ತನ್ನ ಮನದ  ಕಲ್ಪನೆ ಮತ್ತು ಚಿಂತನೆಯ ಅಂಶಗಳನ್ನು ಕಲಾತ್ಮಕವಾಗಿ ಹೆಣೆದು ರಚಿಸಿರುವ  ಕವಿತೆಯನ್ನು,  ಓದಿ ಆನಂದಿಸುವ  ಓದುಗರಿಗಾಗಿ ಹಂಬಲಿಸುತ್ತಿರುವ  ಕವಿಯ ಮನದ ತಳಮಳವನ್ನು  ಈ ಕವನದಲ್ಲಿ ಚಿತ್ರಿಸಲಾಗಿದೆ.

ಕವಿ=ಕಾವ್ಯವನ್ನು ರಚಿಸುವವನು; ಆತಂಕ=ತಳಮಳ/ಕಳವಳ;  ಕವಿತೆ=ಕಾವ್ಯ/ಕವನ; ಓದುಗ=ಓದುವವನು; ಅಚ್ಚುಮೊಳೆ=ಅಕ್ಕರದ ರೂಪದಲ್ಲಿ ಲೋಹದಿಂದ ತಯಾರಿಸಿರುವ  ಮೊಳೆಗಳು. ಇವನ್ನು ಒಂದರ ಪಕ್ಕ ಮತ್ತೊಂದನ್ನು ಪದರೂಪದಲ್ಲಿ ಜೋಡಿಸಿ, ಕವಿಯ ಕಯ್ ಬರಹದಲ್ಲಿದ್ದ  ಕವಿತೆಯನ್ನು ಪುಸ್ತಕ ರೂಪದಲ್ಲಿ ಮುದ್ರಿಸುತ್ತಿದ್ದರು; ಕಂಪ್ಯೂಟರ್ ತೆರೆಯಲ್ಲಿ ಅಕ್ಕರಗಳು ಮೂಡುವುದಕ್ಕೆ ಮುನ್ನ ಪುಸ್ತಕ ಮುದ್ರಣಕ್ಕಾಗಿ ಬಳಸುತ್ತಿದ್ದ ತಂತ್ರಜ್ನಾನವಿದು;  ಒತ್ತಿ=ಜತೆಗೂಡಿಸಿ; ಪುಸ್ತಕದಲಿ ತುಂಬುತ=ಮುದ್ರಣರೂಪದ ಪುಸ್ತಕದಲ್ಲಿ ಜೋಡಿಸಿಟ್ಟು;

ಹಿಂಡು=ಗುಂಪು/ಸಮೂಹ; ಪಂಜರ=ಹಕ್ಕಿಗಳನ್ನು ಒಂದೆಡೆ ಕೂಡಿಡುವುದಕ್ಕಾಗಿ ಬಳಸುವ ಉಪಕರಣ;

ಹಿಂಡು  ಹಕ್ಕಿಗಳನು  ಪಂಜರದಲಿ  ತುಂಬುವಂತೆಯೆ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಇಂಪಾದ ದನಿಯನ್ನು ಮಾಡುವ ನೂರಾರು ಹಕ್ಕಿಗಳನ್ನು ಒಂದು ಪಂಜರದಲ್ಲಿ ತುಂಬುವಂತೆಯೇ ಕವಿಯು ತನ್ನ ಮನದಲ್ಲಿ ಮಿಡಿದ  ಮಾನವ ಸಮುದಾಯದ ನೋವು ನಲಿವಿನ ನೂರಾರು ಬಗೆಯ ಒಳಮಿಡಿತಗಳನ್ನು ಕವನದ ರೂಪದಲ್ಲಿ  ತುಂಬಿಟ್ಟಿದ್ದಾನೆ;

ಉಸಿರು+ಕಟ್ಟುವಂತೆ; ಉಸಿರು=ಪ್ರಾಣ/ಜೀವ;

ಉಸಿರುಗಟ್ಟುವಂತೆ  ತುಂಬಿ… ರಟ್ಟು  ಹೊದಿಸಿ  ಕಟ್ಟುತ=ಈ ನುಡಿಗಳು ರೂಪಕವಾಗಿ ಬಳಕೆಗೊಂಡಿವೆ. ಕವಿಯ ಮನದಲ್ಲಿ ಇಡಿಕಿರಿದಿದ್ದ  ಒಳಮಿಡಿತಗಳೆಲ್ಲವೂ ಇದೀಗ ಪುಸ್ತಕರೂಪವನ್ನು ಪಡೆಯುತ್ತಿವೆ;

 ಗೀತ=ಕವನ; ಅನಂತ=ಅಂತ್ಯವನ್ನೇ ಕಾಣದ/ಕೊನೆಗಾಣದ; ವಿಶ್ವ=ಜಗತ್ತು/ಲೋಕ/ಪ್ರಪಂಚ; ನೀಲ=ನೀಲಿಯ ಬಣ್ಣದ; ಬಾನು+ಅಲ್ಲಿ; ಬಾನು=ಆಕಾಶ/ಗಗನ; ತಾರೆ=ಚುಕ್ಕಿ; ನಲಿ=ಆನಂದಿಸು;

ನನ್ನ  ಗೀತ… ಈ  ಅನಂತ  ವಿಶ್ವದಲ್ಲಿ  ತಿರುಗುತ ನೀಲ  ಬಾನಿನಲ್ಲಿ  ಚಂದ್ರತಾರೆಗಳನು  ಸುತ್ತುತ ನಲಿಯುತಿರಲು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಕವಿಯ ಕವನದಲ್ಲಿ ಚಿತ್ರಣಗೊಂಡಿರುವ ಸಂಗತಿಗಳು ಜೀವಿಗಳ  ಜಗತ್ತನ್ನು ಮಾತ್ರವಲ್ಲ, ಆಕಾಶಕಾಯಗಳಾದ ಚಂದ್ರ ತಾರೆಗಳೆಲ್ಲವನ್ನೂ ಒಳಗೊಂಡಿವೆ;

ಸೆಳೆ=ಜಗ್ಗು/ಎಳೆ; ಅಚ್ಚುಕೂಟ=ಮುದ್ರಣಾಲಯ; ಚುಂಬಕ=ಸೂಜಿಗಲ್ಲು/ಕಬ್ಬಿಣವನ್ನು ತನ್ನತ್ತ ಸೆಳೆದುಕೊಳ್ಳುವ ಒಂದು ಬಗೆಯ ಲೋಹ;

ಕೆಳಗೆ  ಸೆಳೆದು  ಅಚ್ಚುಕೂಟ  ಚುಂಬಕ… ನೀನು  ಓದಲೆಂದೆ  ಇಂದು  ಪ್ರಕಟವಾಯ್ತು  ಪುಸ್ತಕ=ಗಗನಮಂಡಲದಲ್ಲಿರುವ  ಆಕಾಶಕಾಯಗಳ ಎಡೆಯಲ್ಲಿ ಹರಡಿಕೊಂಡು ನಲಿದಾಡುತ್ತಿದ್ದ ನನ್ನ ಕವಿತೆಯ ಒಳಮಿಡಿತಗಳನ್ನು ಬೂಮಂಡಲದಲ್ಲಿದ್ದ ಮುದ್ರಣಾಲಯವೆಂಬ ಸೂಜಿಗಲ್ಲು ತನ್ನತ್ತ ಸೆಳೆದು ಪುಸ್ತಕರೂಪದಲ್ಲಿ  ಓದುಗರಿಗೆ  ನೀಡುತ್ತಿದೆ;

ಇಂದಿನ+ಈ; ಈ=ನಮ್ಮ ಕಣ್ಣ ಮುಂದಿನ ಜಗತ್ತಿನಲ್ಲಿ; ಅಶಾಂತ=ವ್ಯಕ್ತಿಯು ಮನದಲ್ಲಿ ನೆಮ್ಮದಿಯಿಲ್ಲದೆ ತೊಳಲಾಡುತ್ತಿರುವುದು; ಯುಗ=ಕಾಲ; ಓಡುತ+ಇಹರು; ಇಹರು=ಇರುವರು; ಮನುಜ=ಮಾನವ ಜೀವಿ;

ಇಂದಿನೀ  ಅಶಾಂತ  ಯುಗದಿ  ಓಡುತಿಹರು  ಮನುಜರು=ಇಂದಿನ ಕಾಲಮಾನದಲ್ಲಿ ಜೀವಿಸುತ್ತಿರುವ ವ್ಯಕ್ತಿಗಳೆಲ್ಲರೂ  ಒಂದಲ್ಲ ಒಂದು ಬಗೆಯ ಮಾನಸಿಕ ಒತ್ತಡದಿಂದ ತೊಳಲಾಡುತ್ತಿದ್ದಾರೆ. ಸಿರಿವಂತರು ಇನ್ನು… ಇನ್ನು… ಇನ್ನೂ ಹೆಚ್ಚಿನ ಪ್ರಮಾಣದ ಸಂಪತ್ತನ್ನು ಕೂಡಿಡಬೇಕೆಂಬ ದುರಾಶೆಯಿಂದ ಪರಿತಪಿಸುತ್ತಿದ್ದಾರೆ, ಬಡವರು ಜೀವನಕ್ಕೆ ಅತ್ಯಗತ್ಯವಾದ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ ಮತ್ತು ಆರೋಗ್ಯವನ್ನು ಪಡೆಯಲಾಗದೆ ಒದ್ದಾಡುತ್ತಿದ್ದಾರೆ. ಇನ್ನುಳಿದವರು ಅತ್ತ ಸಿರಿವಂತಿಕೆಯ ಏಣಿಯನ್ನು ಹತ್ತಲಾಗದೆ, ಇತ್ತ ಬಡತನದ ಗುಂಡಿಗೆ ಬೀಳಬಹುದೆಂಬ  ಹೆದರಿಕೆಯಿಂದ ಕಂಗಾಲಾಗಿದ್ದಾರೆ. ಈ ರೀತಿ ಪ್ರತಿಯೊಬ್ಬರ ಜೀವನದಲ್ಲಿಯೂ ನೆಮ್ಮದಿಯೆಂಬುದು ಇಲ್ಲವಾಗಿದೆ;

ಇನಿತು=ಸ್ವಲ್ಪ/ತುಸು; ವಾಣಿ=ನುಡಿ/ಮಾತು; ಕವಿಯ ವಾಣಿ=ಕವಿಯು ತನ್ನ ಕವಿತೆಯ ಮೂಲಕ ಹೇಳಿರುವ  ವಿಚಾರಗಳು;  ಸಮಯ+ಇಲ್ಲವು;

ಇನಿತು  ಕವಿಯ ವಾಣಿ  ಕೇಳುವಂಥ  ಸಮಯವಿಲ್ಲವು=ಕವಿತೆಯನ್ನು ಓದಿ, ಕವಿತೆಯಲ್ಲಿ ಚಿತ್ರಣಗೊಂಡಿರುವ ಮಾನವ ಸಮುದಾಯದ ಬದುಕಿನ ನೋವು ನಲಿವನ್ನು , ಲೋಕದ ವಾಸ್ತವವನ್ನು ಮತ್ತು ಕವಿಕಲ್ಪಿತ  ಜಗತ್ತಿನ ಸಂಗತಿಗಳನ್ನು ಸ್ವಲ್ಪವಾದರೂ ಕೇಳುವ ಆಸಕ್ತಿಯಾಗಲಿ,  ತಿಳಿಯಬೇಕೆಂಬ ಕುತೂಹಲವಾಗಲಿ ,  ಆಸೆಯಾಗಲಿ  ಇಲ್ಲವಾಗಿದೆ. ಆದ್ದರಿಂದಲೇ “ ಓದಲು ಬಿಡುವಿಲ್ಲ ” ಎಂಬ ನೆಪವನ್ನು ಹೇಳಿ, ಕವಿತೆಯ ಓದಿನಿಂದ ಇಂದಿನ ಜನರು ದೂರವಾಗಿದ್ದಾರೆ;

ಭೋಜರಾಜನ್+ಇಲ್ಲ; ಕಾಳಿದಾಸನ್+ಅಲ್ಲ;

ಇಂದು  ಭೋಜರಾಜನಿಲ್ಲ… ನಾನು  ಕಾಳಿದಾಸನಲ್ಲ=ಈ ನುಡಿಗಳು ಒಂದು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಇಂಡಿಯಾ ದೇಶದ ಪ್ರಾಚೀನ ಕವಿಗಳಲ್ಲಿ ಕಾಳಿದಾಸನ ಹೆಸರು ಬಹು ದೊಡ್ಡದು. ಸಂಸ್ಕ್ರುತ ನುಡಿಯಲ್ಲಿ ಮಹಾಕವಿ ಕಾಳಿದಾಸ ರಚಿಸಿರುವ ‘ಅಭಿಜ್ಞಾನ ಶಾಕುಂತಳಮ್’ ನಾಟಕ ಮತ್ತು ‘ಮೇಘದೂತ’ ಕಾವ್ಯಗಳು ಜಗತ್ತಿನ ಎಲ್ಲೆಡೆಯಲ್ಲಿಯೂ ಓದುಗರಿಂದ ಮೆಚ್ಚುಗೆಯನ್ನು ಪಡೆದಿವೆ. ಮಹಾಕವಿ ಕಾಳಿದಾಸನು ಇದ್ದ ಕಾಲ ಮತ್ತು ಪ್ರಾಂತ್ಯಗಳ ಬಗ್ಗೆ ನಿಶ್ಚಿತವಾದ ಮಾಹಿತಿಗಳು ದೊರಕಿಲ್ಲ. ಸಾಹಿತ್ಯ ಚರಿತ್ರಕಾರರ ಊಹೆಯಂತೆ ಕಾಳಿದಾಸನ ಜೀವಿತದ ಕಾಲ ಸುಮಾರು ಕ್ರಿ.ಶ.5 ನೆಯ ಶತಮಾನ. ಕಾಳಿದಾಸನು ದಾರಾಪುರದ ಅರಸನಾದ ಬೋಜರಾಜನ ಒಡ್ಡೋಲಗದಲ್ಲಿ ಕವಿಯಾಗಿ, ರಾಜನಿಗೆ ಆತ್ಮೀಯನಾದ ಗೆಳೆಯನಾಗಿದ್ದನು;

ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರಲ್ಲಿ ಹಲವರು  ತಮ್ಮ ಒಡ್ಡೋಲಗದಲ್ಲಿ ಕವಿಗಳಿಗೆ ಆಶ್ರಯವನ್ನು ನೀಡಿ, ಕವಿಗಳ ಕಾವ್ಯ ರಚನೆಗೆ ಒತ್ತಾಸೆಯಾಗಿದ್ದರು. ಕವಿಯು ತಾನು ರಚಿಸಿದ ಹೊಸ ಕಾವ್ಯವನ್ನು ಒಡ್ಡೋಲಗದಲ್ಲಿ ನೆರೆದಿದ್ದ ಇತರ ಕವಿಗಳ, ವಿದ್ವಾಂಸರ ಮತ್ತು ಕಾವ್ಯಪ್ರೇಮಿಗಳ ಮುಂದೆ ಓದುತ್ತಿದ್ದನು. ಕವಿಯ ಹೊಸಕಾವ್ಯದ  ರಚನೆಗೆ  ಹೊಗಳಿಕೆ ಇಲ್ಲವೇ ತೆಗಳಿಕೆಯು ನೇರವಾಗಿ ದೊರೆಯುತ್ತಿತ್ತು. ಅಂತಹ ಕಾವ್ಯಪರಿಸರವು  ಈಗ ತನ್ನ ಕಾಲದಲ್ಲಿ ಇಲ್ಲವೆಂದು ಕವಿಯು ಹೇಳುತ್ತಿದ್ದಾನೆ;

ಬರಿದೆ=ಸುಮ್ಮನೆ; ಹಗಲು+ಕನಸು; ಹಗುಲುಗನಸ=ಹಗಲು ಕನಸನ್ನು; ಹಗಲುಗನಸು=ಇದೊಂದು ನುಡಿಗಟ್ಟು. ವ್ಯಕ್ತಿಯು  ಮುಂದಿನ ಜೀವನದ ಬಗ್ಗೆ ತನ್ನ ಮನದಲ್ಲಿಯೇ ಊಹಿಸಿಕೊಳ್ಳುವ ಒಲವು ನಲಿವು ನೆಮ್ಮದಿಯ ಸುಂದರ ಸಂಗತಿಗಳು; ವ್ಯರ್ಥ+ಆಯ್ತು; ವ್ಯರ್ಥ=ಪ್ರಯೋಜನವಿಲ್ಲದ್ದು;

ಬರಿದೆ  ಹಗಲುಗನಸ  ಕಂಡು  ವ್ಯರ್ಥವಾಯ್ತು  ಸಮಯವು=ಕವಿಯು ತನ್ನ ಕವಿತೆಯ ಓದಿಗೆ ಸಮಾನ ಮನಸ್ಕರಾದ ಓದುಗರು ದೊರೆಯುತ್ತಾರೆಯೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗಿ, ನಿರಾಶೆಯಿಂದ ಈ ನುಡಿಗಳನ್ನಾಡಿದ್ದಾನೆ;

ಹೃದಯವಂತ=ಒಳ್ಳೆಯ ಮನಸ್ಸುಳ್ಳವನು;

ಹೃದಯವಂತ ಓದುಗರು=ಕವಿತೆಯ ಬಗ್ಗೆ ಅಪಾರವಾದ ಒಲವುಳ್ಳ,  ಕವಿತೆಯ ಒಂದೊಂದು ನುಡಿಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂಬ ಹಂಬಲವುಳ್ಳ, ಕವಿತೆಯ ನುಡಿಗಳಲ್ಲಿ ಹೊರಹೊಮ್ಮುತ್ತಿರುವ ನೋವು ನಲಿವಿನ ಸಂಗತಿಗಳ ಮೂಲಕ ಮಾನವ ಸಮುದಾಯದ ಜೀವನದ ಒಳಿತು ಕೆಡುಕನ್ನು ಅರಿತುಕೊಳ್ಳಬೇಕು ಎಂಬ ಎಚ್ಚರವುಳ್ಳ ಮತ್ತು ಕವಿಯ ಮನಸ್ಸಿನ ಒಳಮಿಡಿತಗಳ ಜತೆಜತೆಗೆ ಸಮಾನವಾಗಿ ಮಿಡಿಯುವಂತಹ ಮನಸ್ಸುಳ್ಳ ಓದುಗರು; ಇಂತಹವರನ್ನು ಸಂಸ್ಕ್ರುತ ನುಡಿಯಲ್ಲಿ “ ಕವಿಯ ಹ್ರುದಯಕ್ಕೆ ಸಮಾನವಾದ ಹ್ರುದಯವುಳ್ಳವರು ಎಂಬ ತಿರುಳಿನಲ್ಲಿ—ಸಹ್ರುದಯರು ” ಎಂದು ಕರೆಯುತ್ತಾರೆ;

ಕಾವ್ಯಕನ್ನೆ=ಇದೊಂದು ನುಡಿಗಟ್ಟು. ನೋಡುವವರ ಕಣ್ಮನಕ್ಕೆ ಆನಂದ ಮತ್ತು ಉತ್ಸಾಹವನ್ನು ನೀಡುವ ತರುಣಿಯ ಮಯ್ ಮನದ ಸೊಬಗಿನಂತೆ ಕಾವ್ಯದ ನುಡಿರಚನೆಯ ಸೊಬಗು ಮತ್ತು ಸಂಗತಿಯು ಓದುಗರ ಮನಕ್ಕೆ ಮುದವನ್ನು ನೀಡುವಂತಿರುತ್ತದೆ;

 ನಲ್ಮೆ+ತೋರಲು; ನಲ್ಮೆ=ಪ್ರೀತಿ/ಒಲವು/ಅನುರಾಗ;

ಹೃದಯವಂತ  ಓದುಗರನು  ಕಂಡು  ನಲ್ಮೆದೋರಲು ಕಾವ್ಯಕನ್ನೆ  ಓಡುತಿಹಳು  ಬಸ್ಸು  ರೈಲು  ಹತ್ತಲು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಕವಿಯ ಮನಸ್ಸಿಗೆ ಸಮಾನವಾದ ಮನಸ್ಸುಳ್ಳ ಓದುಗರನ್ನು ಅಂದರೆ ಹೇಗೆ ಕವಿಯು ಕವಿತೆಯನ್ನು ರಚಿಸುವುದಕ್ಕೆ ಮೊದಲು ಯಾವ ಯಾವ ಬಗೆಯ ವಾಸ್ತವ, ಕಲ್ಪನೆ ಮತ್ತು ಚಿಂತನೆಗಳ ಏರಿಳಿತಗಳಿಗೆ ಮಾನಸಿಕವಾಗಿ  ಒಳಗಾಗಿದ್ದನೋ ಅಂತೆಯೇ  ಮತ್ತೊಮ್ಮೆ,  ಕವಿಯಂತೆಯೇ ಕಾವ್ಯ ಪ್ರಪಂಚದಲ್ಲಿ ವಿಹರಿಸಬಲ್ಲ  ಓದುಗರನ್ನು ಕಾವ್ಯಕನ್ನೆಯು ಅರಸುತ್ತ , ಅವರ ಬಳಿಸಾರಲು ಪುಸ್ತಕ ರೂಪದಲ್ಲಿ  ಪಯಣಸುತ್ತಿದ್ದಾಳೆ;

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: