ಮಾಡಿ ಸವಿಯಿರಿ ಪಾವ್ ಬಾಜಿ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ಪಾವ್ ಬ್ರೆಡ್ – 6
ಎಣ್ಣೆ – 2 ಚಮಚ
ಬೆಣ್ಣೆ – 2-3 ಚಮಚ
ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿ ಮೆಣಸಿನಕಾಯಿ – 2
ಟೊಮೆಟೋ – 3-4
ಈರುಳ್ಳಿ – 2
ಆಲೂಗಡ್ಡೆ – 2
ಪಾವ್ ಬಾಜಿ ಮಸಾಲೆ – 4 ಚಮಚ
ಅರಿಶಿಣ ಪುಡಿ – ಚಿಟಿಕೆ
ಒಣ ಕಾರದ ಪುಡಿ – 2 ಚಮಚ
ದೊಡ್ಡ ಮೆಣಸಿನಕಾಯಿ – 1
ಹಸಿ ಬಟಾಣಿ ಕಾಳು – 1/2 ಬಟ್ಟಲು
ಕೊತ್ತಂಬರಿ – 4-5 ದಂಟು
ನಿಂಬೆ ಹಣ್ಣು – 1/4
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ ಆಲೂಗಡ್ಡೆ ಕುದಿಸಿ ಸಿಪ್ಪೆ ಸುಲಿದುಕೊಳ್ಳಿ. ಈರುಳ್ಳಿ, ದೊಡ್ಡ ಮೆಣಸಿನಕಾಯಿ, ಟೊಮೆಟೋ ಮತ್ತು ಹಸಿ ಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿಕೊಳ್ಳಿ.

ಒಂದು ಬಾಣಲೆಗೆ 2 ಚಮಚ ಎಣ್ಣೆ, 2-3 ಚಮಚ ಬೆಣ್ಣೆ ಹಾಕಿ, ಬಿಸಿ ಮಾಡಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಈರುಳ್ಳಿ ಬೇಯುವವರೆಗೆ ಹುರಿಯಿರಿ. ಇದಕ್ಕೆ ಹಸಿ ಮೆಣಸಿನಕಾಯಿ ಮತ್ತು ದೊಡ್ಡ ಮೆಣಸಿನಕಾಯಿ, ಬಟಾಣಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ಇದಕ್ಕೆ ಒಣ ಕಾರದ ಪುಡಿ, ಅರಿಶಿಣ ಪುಡಿ ಸೇರಿಸಿ, ಬಳಿಕ ಇದಕ್ಕೆ ಕತ್ತರಿಸಿದ ಟೊಮೆಟೋ ಸೇರಿಸಿ ಕಲಸಿ ಬೇಯಿಸುವುದನ್ನು ಮುಂದುವರೆಸಿ. ಕೆಲ ನಿಮಿಶಗಳ ಮೇಲೆ ಟೊಮೆಟೋ ಮೆತ್ತಗಾದ ನಂತರ ಉಪ್ಪು, ಪಾವ್ ಬಾಜಿ ಮಸಾಲೆ, ಕುದಿಸಿದ ಆಲೂಗಡ್ಡೆಯನ್ನು ಸೇರಿಸಿ, ಪೇಸ್ಟ್ ಆಗುವ ಹಾಗೆ ಮ್ಯಾಶರ್ ಬಳಸಿ ಅರೆಯಿರಿ. ಇದಕ್ಕೆ ಸ್ವಲ್ಪ ನೀರು ಸೇರಿಕೊಂಡು ಕುದಿಸಿ. ಕೊನೆಯಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಮೇಲೆ ಒಂದು ಚಮಚ ಬೆಣ್ಣೆ ಹಾಕಿ ಒಲೆ ಆರಿಸಿ. ಈಗ ಪಾವ್ ಬಾಜಿ ಮಸಾಲೆ ತಯಾರು.

ಪಾವ್ ಬ್ರೆಡ್ ಅನ್ನು ನಡುವೆ ಕತ್ತರಿಸಿ, 1/2 ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಪಾವ್ ಬಾಜಿ ಮಸಾಲೆಗೆ ನಿಂಬೆ ಹಣ್ಣಿನ ರಸ ಸೇರಿಸಿ, ಸಣ್ಣಗೆ ಕತ್ತರಿಸಿದ ಈರುಳ್ಳಿಯೊಂದಿಗೆ ನೆಂಚಿಕೊಂಡು ಸವಿಯಿರಿ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications