ಮಾಡಿ ಸವಿಯಿರಿ ದಿಡೀರ್ ರಾಗಿ ದೋಸೆ

– ರೂಪಾ ಪಾಟೀಲ್.

ಏನೇನು ಬೇಕು?

ರಾಗಿ ಹಿಟ್ಟು – 1 ಕಪ್
ರವೆ – 1 ಕಪ್
ಅಕ್ಕಿ ಹಿಟ್ಟು – 1/2 ಕಪ್
ಮೊಸರು – 1/2 ಕಪ್
ಶುಂಟಿ – 1 ಇಂಚು
ಹಸಿ ಮೆಣಸಿನಕಾಯಿ – 45-6
ಕರಿಬೇವು – 4-5 ಎಲೆ
ಕೊತ್ತಂಬರಿ – 1/2 ಬಟ್ಟಲು
ಈರುಳ್ಳಿ – 1
ಜೀರಿಗೆ – 1 ಚಮಚ
ಅಜಿವಾಯಿನ್ – 1/2 ಚಮಚ
ಕಾಳು ಮೆಣಸಿನ ಪುಡಿ – 1/2 ಚಮಚ
ಉಪ್ಪು – 1 ಚಮಚ

ಮಾಡುವುದು ಹೇಗೆ?

ಮೊದಲಿಗೆ ಹಸಿ ಮೆಣಸಿನಕಾಯಿ, ಈರುಳ್ಳಿ ಸಣ್ಣಗೆ ಕತ್ತರಿಸಿಕೊಳ್ಳಿ. ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಶುಂಟಿಯನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ.

ಒಂದು ಪಾತ್ರೆಗೆ ರಾಗಿ ಹಿಟ್ಟು, ರವೆ, ಅಕ್ಕಿ ಹಿಟ್ಟು, ಮೊಸರು ಸೇರಿಸಿ ಇದಕ್ಕೆ ಸಣ್ಣಗೆ ಹೆಚ್ಚಿದ ತರಕಾರಿ ಮತ್ತು ಶುಂಟಿ ಪೇಸ್ಟ್ ಸೇರಿಸಿ ಕಲಸಿ. ಇದಕ್ಕೆ ಜೀರಿಗೆ, ಅಜಿವಾಯಿನ್, ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ 2 ಲೋಟ ನೀರು ಹಾಕಿ ಗಂಟುಗಳಿರದಂತೆ ನೋಡಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು 15 ನಿಮಿಶಗಳ ವರೆಗೆ ಹಾಗೆಯೇ ಬಿಡಿ. ಕೊಂಚ ಹೊತ್ತಿನ ಬಳಿಕ ರವೆ ನೀರನ್ನು ಹೀರಿಕೊಂಡು ಗಟ್ಟಿಯಾಗುತ್ತದೆ. ಇದಕ್ಕೆ ತೆಳ್ಳಗಾಗುವ ಹಾಗೆ ಇನ್ನಶ್ಟು ನೀರು ಸೇರಿಸಿಕೊಂಡು ಚೆನ್ನಾಗಿ ತಿರುವಿಕೊಳ್ಳಿ.

ಒಲೆಯ ಮೇಲೆ ದೋಸೆ ಹೆಂಚನ್ನು ಇಟ್ಟು ಬಿಸಿಮಾಡಿ, ಸ್ವಲ್ಪ ಎಣ್ಣೆ ಹಾಕಿಕೊಂಡು ದೋಸೆ ಹುಯ್ದುಕೊಳ್ಳಿ. 3-4 ನಿಮಿಶದ ಬಳಿಕ ತಿರುವಿ ಹಾಕಿ 2ನೇ ಬದಿಯನ್ನೂ ಚೆನ್ನಾಗಿ ಕೆಂಪಗಾಗುವವರೆಗೆ ಬೇಯಿಸಿಕೊಳ್ಳಿ. ಈಗ ರಾಗಿ ದೋಸೆ ಸವಿಯಲು ತಯಾರು. ಕೊಬ್ಬರಿ ಚಟ್ಟಿ ಇಲ್ಲವೇ ಟೊಮೇಟೋ ಚಟ್ನಿಯೊಂದಿಗೆ ಸವಿಯಬಹುದು.

(ಚಿತ್ರ ಸೆಲೆ: clearcals.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: