ಪಂಪ ಬಾರತ ಓದು – 13ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪ ಬಾರತದ ದ್ವಿತೀಯ ಆಶ್ವಾಸ – 88 ನೆಯ ಗದ್ಯದಿಂದ 92 ನೆಯ ಗದ್ಯದ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.)

ಪಾತ್ರಗಳು:

ದುರ್ಯೋಧನ – ಗಾಂದಾರಿ ಮತ್ತು ದ್ರುತರಾಶ್ಟ್ರನ ಹಿರಿಯ ಮಗ
ಭೀಮ – ಪಾಂಡು ಮತ್ತು ಕುಂತಿಯ ಮಗ
ಅರ್ಜುನ – ಪಾಂಡು ಮತ್ತು ಕುಂತಿಯ ಮಗ.
ಕರ್ಣ – ಕುಂತಿ ಮತ್ತು ಸೂರ್‍ಯದೇವನ ಮಗ
ಪಾಂಡು – ಅಂಬಾಲಿಕೆ ಮತ್ತು ವ್ಯಾಸನ ಮಗ
ಧೃತರಾಷ್ಟ್ರ – ಅಂಬಿಕೆ ಮತ್ತು ವ್ಯಾಸನ ಮಗ
ಪುರೋಚನ – ಹಸ್ತಿನಾವತಿಯಲ್ಲಿದ್ದ ಒಬ್ಬ ಹೆಗ್ಗಡೆ.

============================

ದುರ್ಯೋಧನನ ಒಳಸಂಚು

ಆಗಳ್ ದುರ್ಯೋಧನನ್ ಭೀಮಸೇನನ ಬಲ್ಲಾಳ್ತನದ ಅಳವುಮನ್, ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮನ್ ಕಂಡು, ತನ್ನ ಎರ್ದೆಯುಮ್ ಪೊಳ್ಳುಮರನಮ್ ಕಿರ್ಚು ಅಳುರ್ವಂತೆ ಒಳಗೊಳಗೆ ಅಳುರೆ, ಸೈರಿಸಲಾರದೆ ಕರ್ಣನನ್ ಕರೆದು ಆಳೋಚಿಸಿ. ತಮ್ಮಯ್ಯನಲ್ಲಿಗೆ ಪೋಗಿ ಪೊಡಮಟ್ಟು, ಕಟ್ಟೇಕಾಂತದೊಳ್ ಇಂತು ಎಂದನ್…

ದುರ್ಯೋಧನ: ಪಿರಿಯರ್ ನೀಮ್ ಇರೆ, ಮುನ್ ಪಟ್ಟಮಮ್ ಕಟ್ಟೆ, ಪಾಂಡುರಾಜನೆ ಭೂಭರಮನ್ ತಾಳ್ದಿದನ್ ವಲಮ್. ಈಗಳ್ ಆತನ ಸುತರ್ ತಾಮ್ ಆಗಳೇ ಪಟ್ಟಕ್ಕೆ ಯೋಗ್ಯರಾಗರೆ ತಗುಳ್ದು ಪಾವಿಂಗೆ ಪಾಲನ್ ಎರೆವಿರ್. ದಾಯಾದ್ಯರನ್ ಪಿರಿಯರ್ ಮಾಡಿದಿರ್. ಎಮ್ಮ ಸಾವುಮ್ ಉಳಿವುಮ್ ದೈವೇಚ್ಛೆಯಾಯ್ತು… ಆಗದೇ… ಅದಲ್ಲದೆಯುಮ್… ಮಲೆ ತಲೆದೋರದೆ ಎಂದುದನೆ ಕೊಟ್ಟುದು; ಡಂಗಮ್ ಅಡಂಗಿ ಬಂದುದು; ಕುರುಂಬು ಒಕ್ಕಲಿಗ ಪೆಸರ್ಗೆ ಪೂಣ್ದುದು; ಮಿಕ್ಕ ಶತ್ರು ಮಂಡಳಿಕರೆ ತರುಂಬದೆ ಮಿತ್ರ ಮಂಡಳಿಕರಾದರ್.; ಮಾರ್ಮಲೆದರನ್ ಇಕ್ಕಿ ಇಂದು ನಾಳೆ ಈ ನೆಲೆಯಿಮ್ ಅನಾಕುಳಮ್ ನಮ್ಮನ್ ಗುಣಾರ್ಣವನ್ ಎಳೆದಿಕ್ಕುಗಮ್ . ಅಂತು ವಿಕ್ರಮಾರ್ಜುನನ್ ಬಿಲ್ಗೊಳಲುಮ್, ಭೀಮಸೇನನ್ ಗದೆಗೊಳಲುಮ್ , ಆಂಪುದು ಅರಿದು. ಉಪಾಂಶುವಧದೆ ಕೆಯ್ಗೆ ಮಾಡುವುದು ಉತ್ತಮಪಕ್ಷಮ್. ಅಂತುಮ್ ಅಲ್ಲದೆಯುಮ್…

“ಸ್ವಾಮ್ಯಾರ್ಥಮ್ ಸ್ವಾಮ್ಯ ವಿಕ್ರಾಂತಮ್ ಮರ್ಮಜ್ಞಮ್ ವ್ಯವಸಾಯಿನಮ್; ಅರ್ಧರಾಜ್ಯಹರಮ್ ಭೃತ್ಯಮ್ ಯೋನ ಹನ್ಯಾತ್ಸ ಹನ್ಯತೇ” ಎಂಬುದು ಅರ್ಥಶಾಸ್ತ್ರ ಸದ್ಭಾವಮ್. ಮೇಣ್ ಕುಲಮಿಲ್ಲೆಯೋ…ನಮಗೆ ದಾಯಿಗರಲ್ಲರೋ … ಶಸ್ತ್ರವಿದ್ಯೆಯೊಳ್ ಪೂಣ್ಕೆಗಳಿಲ್ಲೆಯೋ…ಧರೆಗೆ ಮುನ್ನ ಅವರಯ್ಯನೆ ಮುಖ್ಯನಲ್ಲನೋ …ಅಯ್ಯ, ನಿಮಗೆ ಮನದಲ್ ಜಾಣ್ ಕಿರಿದಾಗವೇಡ…ವಿಧಾತೃಯೋಗದಿನ್ ಕಣ್ ಕುರುಡಾದಡೆ ಏನೋ… ನಿಮ್ಮ ಬುದ್ಧಿಯುಮ್ ಕುರುಡಾಗಲೆವೇಳ್ಪುದೆ…

(ಎಂದು ತನ್ನ ಮನದೊಳ್ ಒಡಂಬಡೆ ನುಡಿದ ಮಗನ ಮಾತನ್ ಧೃತರಾಷ್ಟ್ರನ್ ಮನದೆಗೊಂಡು..)

ಧೃತರಾಷ್ಟ್ರ: ಕಂದ, ಎರ್ದೆಗೊಂಡ ಕಜ್ಜಮನೆ ಏನ್ ಪೇಳ್ದೆಯೊ. ಅವರ್ಗಳ್ ನಿನಗೆ ಏನಾನುಮ್ ಅಪಾಯಮನ್ ಬಗೆವರೆಂದೆ ಆನುಮ್ ಚಿಂತಿಸುತಿರ್ಪೆನ್. ಪೇಳ್, ನೀನಿರೆ ವೈರಿಗಳ್ಗೆ ಪಟ್ಟಮುಮ್ ನೆಲನುಮ್ ಅಪ್ಪುದನ್ ಒಲ್ವೆನೆ. ಅದರ್ಕೆ ನೀನೇನುಮ್ ಚಿಂತಿಸದಿರ್. ಪಾಂಡುಪುತ್ರರನ್ ಇಲ್ಲಿ ಇರಲೀವೆನೆ…

(ಎಂದು ದುರ್ಯೋಧನನನ್ ಬೀಡಿಂಗೆ ಪೋಗಲ್ ಪೇಳ್ದು, ಪಾಂಡವರ್ ಅಯ್ವರುಮನ್ ಬರಿಸಿ ಧೃತರಾಷ್ಟ್ರನ್ ತೊಡೆಯನೇಱಿಸಿಕೊಂಡು…)

ಧೃತರಾಷ್ಟ್ರ: ದುರ್ಯೋಧನನಪ್ಪೊಡೆ ಪೊಲ್ಲ ಮಾನಸನ್ . ಆತನುಮ್ ನೀಮುಮ್ ಒಂದೆಡೆಯೊಳಿರೆ ಕಿಸುರುಮ್ ಕಲಹಮುಮ್ ಎಂದುಮ್ ಕುಂದದು. ಅದು ಕಾರಣಮ್ ಗಂಗಾ ನದಿಯ ದಕ್ಷಿಣ ತಟದೊಳ್ ವಾರಣಾವತಮ್ ಎಂಬುದು ಪೊಳಲ್ ಕುರುಜಾಂಗಣ ವಿಷಯಕ್ಕೆ ತಿಲಕಮಪ್ಪಂತೆ ಇರ್ದುದು. ಅಲ್ಲಿಗೆ ಪೋಗಿ ಸುಖಮ್ ಇರಿ.

(ಎಂದೊಡೆ…)

ಪಾಂಡವರು: ಅಂತೆ ಗೆಯ್ವೆಮ್.

(ಎಂದು ಬೀಳ್ಕೊಂಡು ಬೀಡಿಂಗೆ ವಂದು, ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಮ್ ಕುಂತಿಗಮ್ ತದ್ ವೃತ್ತಾಂತಮನ್ ಅರಿಪಿದರ್. ಅನ್ನೆಗಮ್ ಇತ್ತ ದುರ್ಯೋಧನನ್ ಅವರ ಪೋಗನ್ ಅರಿದು, ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮನ್ ಚರ್ಚಿಸಿ , ವಾರಣಾವತಮನ್ ಒಂದೇ ದಿವಸದೊಳ್ ಎಯ್ದುವಂತಾಗೆ ರಥಮನ್ ಸಮಕಟ್ಟಿ ನಾಲ್ಕು ಲಕ್ಕ ಬಲಮಮ್ ನೆರಂಬೇಳ್ದು ಕಳಿಪಿದನ್.)

============================

ಪದ ವಿಂಗಡಣೆ ಮತ್ತು ತಿರುಳು

ಆಗಳ್=ಆ ಸನ್ನಿವೇಶದಲ್ಲಿ; ಬಲ್ಲಾಳ್ತನ=ಪರಾಕ್ರಮ/ಶೂರತನ; ಅಳವು=ಕಸುವು/ಶಕ್ತಿ/ಬಲ; ದಿವ್ಯ+ಅಸ್ತ್ರ; ದಿವ್ಯ=ಉತ್ತಮವಾದುದು; ಅಸ್ತ್ರ=ಬಾಣ; ಕೌಶಲಮ್+ಉಮ್+ಅನ್; ಕೌಶಲ=ನಿಪುಣತೆ;

ಆಗಳ್ ದುರ್ಯೋಧನನ್ ಭೀಮಸೇನನ ಬಲ್ಲಾಳ್ತನದ ಅಳವುಮನ್ ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮನ್ ಕಂಡು=ಕುರುವಂಶದ ರಾಜಕುಮಾರರ ಶಸ್ತ್ರವಿದ್ಯಾ ಕುಶಲತೆಯು ಪ್ರದರ್‍ಶನಗೊಂಡ ಸನ್ನಿವೇಶದಲ್ಲಿ ಬೀಮಸೇನನ ಪರಾಕ್ರಮದ ಕಸುವನ್ನು ಮತ್ತು ಅರ್‍ಜುನನ ಬಿಲ್ವಿದ್ಯೆಯ ಕುಶಲತೆಯನ್ನು ನೋಡಿ;

ತನ್ನ=ಅವನ/ದುರ್‍ಯೋದನನ; ಎರ್ದೆ+ಉಮ್; ಎರ್ದೆ=ಮನಸ್ಸು; ಪೊಳ್ಳುಮರನ್+ಅಮ್; ಪೊಳ್ಳುಮರ=ಕಾಂಡದಲ್ಲಿ ತಿರುಳಿಲ್ಲದೆ ಡೊಗರುಬಿದ್ದಿರುವ ಮರ/ಟೊಳ್ಳಾಗಿರುವ ಮರ; ಕಿರ್ಚು=ಬೆಂಕಿ; ಅಳರ್+ಅಂತೆ; ಅಳುರ್=ಆವರಿಸು/ಹಬ್ಬು/ಸುಡು; ಅಂತೆ=ಹಾಗೆ/ಆ ರೀತಿ; ಅಳುರೆ=ಸುಡುತ್ತಿರಲು;

ತನ್ನ ಎರ್ದೆಯುಮ್ ಪೊಳ್ಳುಮರನಮ್ ಕಿರ್ಚು ಅಳುರ್ವಂತೆ ಒಳಗೊಳಗೆ ಅಳುರೆ=ಪೊಳ್ಳಾಗಿರುವ ಮರಕ್ಕೆ ತಗುಲಿದ ಬೆಂಕಿಯು ಕೂಡಲೇ ಕೊಂಬೆರೆಂಬೆಗಳೆಲ್ಲಕ್ಕೂ ಹತ್ತಿ ಉರಿಯುತ್ತಿರುವಂತೆ ತನ್ನ ಮಯ್ ಮನವನ್ನೆಲ್ಲಾ ಚಿಂತೆಯು ಆವರಿಸಿಕೊಂಡು ಸುಡುತ್ತಿರಲು;

ಸೈರಿಸಲ್+ಆರದೆ; ಸೈರಿಸು=ತಾಳು/ಸಹಿಸು/ತಡೆದುಕೊಳ್ಳು; ಆರದೆ=ಆಗದೆ;

ಸೈರಿಸಲಾರದೆ ಕರ್ಣನನ್ ಕರೆದು ಆಳೋಚಿಸಿ=ತನ್ನ ಮನದಲ್ಲಿ ಉಂಟಾದ ಪರಿತಾಪವನ್ನು ತಡೆದುಕೊಳ್ಳಲಾಗದೆ, ಕರ್‍ಣನನ್ನು ಕರೆದು, ಅವನೊಡನೆ ತನ್ನ ಮನದ ಸಂಕಟವನ್ನು ತೋಡಿಕೊಂಡು, ಮುಂದೆ ಏನು ಮಾಡಬೇಕೆಂಬುದನ್ನು ಚಿಂತಿಸಿ;

ತಮ್ಮ+ಅಯ್ಯನ್+ಅಲ್ಲಿಗೆ; ಅಯ್ಯ=ತಂದೆ/ಅಪ್ಪ; ಪೋಗಿ=ಹೋಗಿ; ಪೊಡಮಡು=ನಮಸ್ಕರಿಸು/ಅಡ್ಡಬೀಳು;

ತಮ್ಮಯ್ಯನಲ್ಲಿಗೆ ಪೋಗಿ ಪೊಡಮಟ್ಟು=ತಂದೆಯಾದ ದ್ರುತರಾಶ್ಟ್ರನ ಬಳಿಗೆ ಬಂದು, ಆತನಿಗೆ ನಮಸ್ಕರಿಸಿ;

ಕಟ್ಟೇಕಾಂತ+ಒಳ್; ಕಟ್ಟೇಕಾಂತ=ಅತ್ಯಂತ ರಹಸ್ಯ/ಗುಟ್ಟಾದ ಜಾಗ;

ಕಟ್ಟೇಕಾಂತದೊಳ್ ಇಂತು ಎಂದನ್=ತಂದೆಯೊಬ್ಬನೇ ಇರುವ ಎಡೆಯಲ್ಲಿ ಅವರೊಡನೆ ಈ ರೀತಿ ಹೇಳಲು ತೊಡಗಿದನು;

ಪಿರಿಯರ್=ಹಿರಿಯರು/ವಯಸ್ಸಿನಲ್ಲಿ ದೊಡ್ಡವರು; ಇರೆ=ಇರಲು; ಮುನ್=ಮೊದಲು; ಪಟ್ಟಮ್+ಅಮ್; ಪಟ್ಟ=ರಾಜಪದವಿ/ರಾಜಾಡಳಿತದ ಗದ್ದುಗೆ; ಪಟ್ಟಮಮ್ ಕಟ್ಟೆ=ರಾಜಪದವಿಯನ್ನು ನೀಡಲು/ರಾಜನನ್ನಾಗಿ ಮಾಡಲು; ಭೂ=ರಾಜ್ಯ/ಪ್ರಾಂತ್ಯ; ಭರ=ಹೊಣೆ/ಜವಾಬ್ದಾರಿ; ಭೂಭರಮನ್=ರಾಜ್ಯದ ಹೊಣೆಯನ್ನು; ತಾಳ್ದಿದನ್=ಹೊಂದಿದನು; ವಲಮ್=ನಿಶ್ಚಯವಾಗಿ/ದಿಟವಾಗಿ;

ಪಿರಿಯರ್ ನೀಮ್ ಇರೆ ಮುನ್ ಪಟ್ಟಮಮ್ ಕಟ್ಟೆ ಪಾಂಡುರಾಜನೆ ಭೂಭರಮನ್ ತಾಳ್ದಿದನ್ ವಲಮ್=ವಯಸ್ಸಿನಲ್ಲಿ ದೊಡ್ಡವರಾದ ನೀವು ಇದ್ದರೂ, ನಿಮ್ಮ ತಮ್ಮನಾದ ಪಾಂಡುರಾಜನಿಗೆ ಪಟ್ಟವನ್ನು ಕಟ್ಟಲು, ರಾಜ್ಯವನ್ನು ಆಳುವ ಹೊಣೆಗಾರಿಕೆಯು ಅವರ ಪಾಲಿಗೆ ದೊರಕಿತು;

ಸುತ=ಮಗ; ಯೋಗ್ಯ=ತಕ್ಕವನು/ಅರ್‍ಹನಾದವನು;

ಈಗಳ್ ಆತನ ಸುತರ್ ತಾಮ್ ಆಗಳೇ ಪಟ್ಟಕ್ಕೆ ಯೋಗ್ಯರಾಗರೆ=ಪಾಂಡುರಾಜನ ನಂತರ ಈಗ ಅವನ ಮಕ್ಕಳಾದ ಪಾಂಡವರು ತಾವಾಗಲೇ ಪಟ್ಟಕ್ಕೆ ಹಕ್ಕುದಾರರಂತೆ ನಡೆದುಕೊಳ್ಳುತ್ತಿದ್ದಾರೆ;

ತಗುಳ್=ಪ್ರೀತಿಸು/ಮೆಚ್ಚು; ಪಾವು=ಹಾವು; ಪಾಲ್=ಹಾಲು; ಎರೆ=ಸುರಿ/ಹೊಯ್ಯು;

ತಗುಳ್ದು ಪಾವಿಂಗೆ ಪಾಲನ್ ಎರೆವಿರ್=ಪ್ರೀತಿಯಿಂದ ಹಾವಿಗೆ ಹಾಲನ್ನು ಎರೆಯುತ್ತಿದ್ದೀರಿ;

ದಾಯಾದಿ=ಒಂದೇ ಮನೆತನದಲ್ಲಿ ಇಲ್ಲವೇ ಒಂದೇ ವಂಶದಲ್ಲಿ ಹುಟ್ಟಿ ಬೆಳೆದ ವ್ಯಕ್ತಿಗಳು/ಒಂದೇ ಕುಟುಂಬಕ್ಕೆ ಸೇರಿದ ಪೀಳಿಗೆಯವರು;

ದಾಯಾದ್ಯರನ್ ಪಿರಿಯರ್ ಮಾಡಿದಿರ್=ನಮ್ಮ ದಾಯಾದಿಗಳಾದ ಪಾಂಡವರನ್ನು ದೊಡ್ಡದಾಗಿ ಬೆಳೆಯಲು ಅವಕಾಶವನ್ನು ಮಾಡಿಕೊಟ್ಟಿರಿ;

ಎಮ್ಮ ಸಾವುಮ್ ಉಳಿವುಮ್ ದೈವೇಚ್ಛೆಯಾಯ್ತು ಆಗದೇ=ನೀವು ಹೀಗೆ ಮಾಡಿದ್ದರಿಂದ ಈಗ ನಿಮ್ಮ ಮಕ್ಕಳಾದ ಕೌರವರಾದ ನಮ್ಮ ಉಳಿವು ಅಳಿವು ದೇವರ ಇಚ್ಚೆಯಂತಾಗದೆ ಇರುವುದೇ. ಅಂದರೆ ನಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವ ಅವಕಾಶವು ಈಗ ನಮ್ಮ ಕಯ್ಯಲ್ಲಿ ಇಲ್ಲದಂತಾಯಿತು;

ಅದು+ಅಲ್ಲದೆ+ಉಮ್;

ಅದಲ್ಲದೆಯುಮ್=ದಾಯಾದಿಗಳಾದ ಪಾಂಡವರಿಗೆ ಈ ರೀತಿ ಬೆಳೆಯಲು ನೀವು ಅವಕಾಶ ನೀಡಿದ್ದರಿಂದ, ಇನ್ನೂ ಹಲವಾರು ಸಂಗತಿಗಳು ನಮ್ಮ ರಾಜ್ಯದಲ್ಲಿ ನಡೆದಿವೆ;

ಮಲೆ=ಬೆಟ್ಟ/ಪರ್‍ವತ; ತಲೆ+ತೋರು; ತಲೆದೋರು=ಕಂಡುಬರು/ಕಾಣಿಸು. ಯಾವುದೇ ರೀತಿಯಲ್ಲಿ ಎದುರಾಗದೇ ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು; ಎಂದುದನೆ=ಹೇಳಿದ್ದನ್ನೆ;

ಮಲೆ ತಲೆದೋರದೆ ಎಂದುದನೆ ಕೊಟ್ಟುದು=ಬೆಟ್ಟಗುಡ್ಡಗಳಲ್ಲಿರುವ ಬುಡಕಟ್ಟಿನ ಜನರು ಪಾಂಡವರಿಗೆ ಎದುರಾಗದೆ, ಅವರು ಕೇಳಿದ್ದನ್ನು ಕೊಡುತ್ತಾರೆ;

ಡಂಗ=ರಾಜ್ಯದ ಗಡಿ ಪ್ರದೇಶದಲ್ಲಿರುವ ಸುಂಕದ ಕಟ್ಟೆ; ಅಡಂಗು=ಹಿಂದಕ್ಕೆ ಸರಿ/ವಶವಾಗಿರು;

ಡಂಗಮ್ ಅಡಂಗಿ ಬಂದುದು=ಸುಂಕದ ಕಟ್ಟೆಗಳು ಪಾಂಡವರ ವಶವಾಗಿವೆ;

ಕುಱುಂಬು=ಪರ್‍ವತವಾಸಿ ಜನ/ಸಣ್ಣ ಪಾಳೆಯ ಪಟ್ಟು; ಪೆಸರ್=ಹೆಸರು; ಪೂಣ್=ಒಪ್ಪಿಕೊಳ್ಳು/ಸಮ್ಮತಿಸು/ ಕಯ್ ಕೊಳ್ಳು;

ಕುಱುಂಬು ಒಕ್ಕಲಿಗ ಪೆಸರ್ಗೆ ಪೂಣ್ದುದು=ಪಾಳೆಯಪಟ್ಟುಗಳ ಜನರು ಪಾಂಡವರ ಒಡೆತನಕ್ಕೆ ಸೇರಿದ ಒಕ್ಕಲುಗಳೆಂದು ಒಪ್ಪಿಕೊಂಡು ಅಡಿಯಾಳುಗಳಾಗಿದ್ದಾರೆ;

ಮಿಕ್ಕ=ಉಳಿದ; ಶತ್ರು=ಹಗೆ; ಮಂಡಲಿಕ=ಸಾಮಂತ/ವಿಸ್ತಾರದಲ್ಲಿ ದೊಡ್ಡದಾಗಿರುವ ರಾಜ್ಯದ ಒಂದು ಚಿಕ್ಕ ಪ್ರಾಂತ್ಯಕ್ಕೆ ಒಡೆಯನಾದವನು; ತರುಂಬು=ಎದುರಿಸು/ತಡೆ;

ಮಿಕ್ಕ ಶತ್ರು ಮಂಡಳಿಕರೆ ತರುಂಬದೆ ಮಿತ್ರ ಮಂಡಳಿಕರಾದರ್=ಇನ್ನುಳಿದಂತೆ ಈ ಮೊದಲು ಕುರುವಂಶಕ್ಕೆ ಹಗೆಗಳಾಗಿದ್ದ ಮಂಡಲಿಕರು ಎದುರಾಡದೆ ಇದೀಗ ಪಾಂಡವರಿಗೆ ಗೆಳೆಯರಾಗಿದ್ದಾರೆ;

ಮಾರ್ಮಲೆ=ಎದುರುಬೀಳು/ಎದುರಿಸಿ ನಿಲ್ಲು; ಇಕ್ಕು=ಬಡಿ/ಕೊಲ್ಲು/ಕೆಡಹು;

ಮಾರ್ಮಲೆದರನ್ ಇಕ್ಕಿ=ಪಾಂಡವರು ತಮ್ಮನ್ನು ಎದುರಿಸಿ ನಿಂತವರನ್ನು ಹೊಡೆದು ಕೊಂದು;

ನೆಲೆ+ಇಮ್; ನೆಲೆ=ಪ್ರಾಂತ್ಯ; ಇಮ್=ಇಂದ; ಅನಾಕುಲ=ನಿರಾಯಾಸವಾಗಿ/ಯಾವುದೇ ತೊಂದರೆಯಿಲ್ಲದೆ/ಸಲೀಸಾಗಿ;

ಗುಣ+ಅರ್ಣವ; ಗುಣ=ಒಳ್ಳೆಯ ನಡೆನುಡಿ; ಅರ್ಣವ=ಕಡಲು/ಸಮುದ್ರ/ಸಾಗರ; ಗುಣಾರ್ಣವ=ಅರ್‍ಜುನನಿಗೆ ಇದ್ದ ಮತ್ತೊಂದು ಬಿರುದು/ಒಳ್ಳೆಯ ನಡೆನುಡಿಯನ್ನು ದೊಡ್ಡ ಪ್ರಮಾಣದಲ್ಲಿ ಉಳ್ಳವನು; ಎಳೆದು+ಇಕ್ಕುಗುಮ್;

ಎಳೆದಿಕ್ಕುಗುಮ್= ಎಳೆದು ಹಾಕುತ್ತಾನೆ/ಇಲ್ಲಿಂದ ಹೊರಹಾಕುತ್ತಾನೆ;

ಇಂದು ನಾಳೆ ಈ ನೆಲೆಯಿಮ್ ಅನಾಕುಳಮ್ ನಮ್ಮನ್ ಗುಣಾರ್ಣವನ್ ಎಳೆದಿಕ್ಕುಗಮ್=ಇಂದಲ್ಲ ನಾಳೆ ಅರ್‍ಜುನನು ನಮ್ಮನ್ನು ಈ ಹಸ್ತಿನಾವತಿಯ ರಾಜಪದವಿಯಿಂದ ಎಳೆದು ಹೊರಹಾಕುತ್ತಾನೆ;

ಅಂತು=ಆ ರೀತಿ; ಬಿಲ್+ಕೊಳಲ್+ಉಮ್; ಕೊಳಲ್=ಹಿಡಿಯಲು; ಬಿಲ್ಗೊಳಲ್=ಬಿಲ್ಲನ್ನು ಹಿಡಿಯಲು; ಗದೆ+ಕೊಳಲ್+ಉಮ್; ಗದೆಕೊಳಲ್=ಗದೆಯನ್ನು ಹಿಡಿಯಲು; ಆಂಪುದು=ತಾಳುವುದು/ಸಹಿಸಿಕೊಳ್ಳುವುದು; ಅರಿದು=ಆಗುವುದಿಲ್ಲ;

ಅಂತು ವಿಕ್ರಮಾರ್ಜುನನ್ ಬಿಲ್ಗೊಳಲುಮ್ ಭೀಮಸೇನನ್ ಗದೆಗೊಳಲುಮ್ ಆಂಪುದು ಅರಿದು=ಆ ರೀತಿ ವಿಕ್ರಮಾರ್‍ಜುನನು ಬಿಲ್ಲನ್ನು ಮತ್ತು ಬೀಮಸೇನನು ಗದೆಯನ್ನು ಹಿಡಿದು ಹೋರಾಟಕ್ಕೆ ನಿಂತರೆ ಅವರನ್ನು ಸಹಿಸಿಕೊಳ್ಳಲು ಆಗದು. ಅಂದರೆ ಅವರನ್ನು ಯಾರು ತಾನೆ ಎದುರಿಸಿ ನಿಲ್ಲುತ್ತಾರೆ;

ಕುರುಡನಾಗಿದ್ದ ದ್ರುತರಾಶ್ಟ್ರನು ಹಸ್ತಿನಾವತಿಗೆ ರಾಜನಾಗಿದ್ದರೂ ಯುವರಾಜನಾಗಿದ್ದ ದುರ್‍ಯೋದನ ಮತ್ತು ಅವನ ತಮ್ಮಂದಿರು ಹಾಗೂ ಅಯ್ವರು ಪಾಂಡವರು ರಾಜ್ಯಾಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದ್ದರಿಂದಲೇ ದುರ್‍ಯೋದನನು ಶಸ್ತ್ರವಿದ್ಯೆಯ ಪ್ರದರ್‍ಶನ ಸಮಯದಲ್ಲಿ ತನ್ನ ಇಚ್ಚೆಯಂತೆಯೇ ಕರ್‍ಣನಿಗೆ ಅಂಗರಾಜ್ಯದ ಪಟ್ಟವನ್ನು ಕಟ್ಟಿದ. ಇದೇ ರೀತಿಯಲ್ಲಿ ಪಾಂಡವರು ರಾಜ್ಯದ ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದುದರಿಂದ ಬೀಮ ಮತ್ತು ಅರ್‍ಜುನರ ಪರಾಕ್ರಮದ ಮುಂದೆ ಮಂಡಲಿಕರು, ಅರಣ್ಯವಾಸಿಗಳು ಮತ್ತು ಇತರರು ತಲೆಬಾಗಿ ನಡೆದುಕೊಳ್ಳುತ್ತಿದ್ದರು. ರಾಜ್ಯದ ಆಡಳಿತದಲ್ಲಿ ಇದೇ ರೀತಿ ಪಾಂಡವರ ಅದಿಕಾರ ಮುಂದುವರಿದರೆ, ತನಗೆ ಕೇಡು ಉಂಟಾಗುತ್ತದೆ ಎಂಬುದನ್ನು ದುರ್‍ಯೋದನನು ತನ್ನ ತಂದೆಗೆ ಮನವರಿಕೆ ಮಾಡಿಕೊಡುತ್ತಿದ್ದಾನೆ;

ಉಪಾಂಶು=ಗುಟ್ಟು/ರಹಸ್ಯ; ವಧ=ಕೊಲೆ/ಕೊಲ್ಲುವುದು; ಉಪಾಂಶುವಧದೆ=ಗುಟ್ಟಾಗಿ ಕೊಲ್ಲುವುದರ ಮೂಲಕ; ಕೆಯ್=ಕೆಲಸ ಮಾಡು/ನೆರವೇರಿಸು; ಕೆಯ್ಗೆ ಮಾಡುವುದು=ಈಡೇರಿಸಿಕೊಳ್ಳುವುದು/ನೆರವೇರಿಸಿಕೊಳ್ಳುವುದು; ಉತ್ತಮಪಕ್ಷ=ಒಳ್ಳೆಯ ದಾರಿ;

ಉಪಾಂಶುವಧದೆ ಕೆಯ್ಗೆ ಮಾಡುವುದು ಉತ್ತಮಪಕ್ಷಮ್=ಗುಟ್ಟಾಗಿ ಅವರನ್ನು ಕೊಂದು ನಮ್ಮ ಹಗೆಯನ್ನು ಇಲ್ಲವಾಗಿಸುವುದೇ ಒಳ್ಳೆಯದು;

ಅಂತುಮ್ ಅಲ್ಲದೆಯುಮ್=ಅದೂ ಅಲ್ಲದೆ;

ಸ್ವಾಮ್ಯಾರ್ಥಮ್=ಸ್ವಾಮಿತ್ವವನ್ನು ಬಯಸುವವನು; ಸ್ವಾಮ್ಯ ವಿಕ್ರಾಂತಮ್=ಆಸ್ತಿಯನ್ನು ಅಪಹರಿಸುವವನು; ಮರ್ಮಜ್ಞಮ್=ರಹಸ್ಯಗಳನ್ನು ಬಲ್ಲವನು; ವ್ಯವಸಾಯಿನಮ್=ಕಾರ್‍ಯಶೀಲನಾದವನು; ಅರ್ಧರಾಜ್ಯಹರಮ್=ಅರ್ದ ರಾಜ್ಯವನ್ನು ಅಪಹರಿಸುವವನು; ಭೃತ್ಯಮ್=ಸೇವಕನನ್ನು; ಯೋನ ಹನ್ಯಾತ್=ಯಾರು ಕೊಲ್ಲುವುದಿಲ್ಲವೋ; ಸಃ=ಅವನು; ಹನ್ಯತೇ=ಕೊಲ್ಲಲ್ಪಡುವನು; ಎಂಬುದು=ಎಂದು ಹೇಳುತ್ತದೆ; ಅರ್ಥಶಾಸ್ತ್ರ=ರಾಜನೀತಿ/ದಂಡನೀತಿ; ಸದ್ಭಾವಮ್=ಒಳ್ಳೆಯ ಸಂಗತಿಗಳು;

“ಸ್ವಾಮ್ಯಾರ್ಥಮ್ ಸ್ವಾಮ್ಯ ವಿಕ್ರಾಂತಮ್ ಮರ್ಮಜ್ಞಮ್ ವ್ಯವಸಾಯಿನಮ್; ಅರ್ಧರಾಜ್ಯಹರಮ್ ಭೃತ್ಯಮ್ ಯೋನ ಹನ್ಯಾತ್ಸ ಹನ್ಯತೇ” ಎಂಬುದು ಅರ್ಥಶಾಸ್ತ್ರ ಸದ್ಭಾವಮ್= “ರಾಜ್ಯದ ಒಡೆತನವನ್ನು ಬಯಸುವ, ಆಸ್ತಿಯನ್ನು ದೋಚಲು ಯತ್ನಿಸುವ, ರಾಜನ ರಹಸ್ಯವನ್ನೆಲ್ಲ ತಿಳಿದುಕೊಂಡಿರುವ, ಕಾರ್‍ಯಶೀಲನಾಗಿರುವ ಮತ್ತು ಅರ್‍ದ ರಾಜ್ಯವನ್ನು ಅಪಹರಿಸಲು ಒಳಸಂಚನ್ನು ನಡೆಸುತ್ತಿರುವ ಸೇವಕನನ್ನು ರಾಜನು ಕೊಲ್ಲದೆ ಬಿಟ್ಟರೆ, ಅವನಿಂದ ತಾನೇ ಕೊಲೆಗೀಡಾಗುತ್ತಾನೆ” ಎಂದು ರಾಜ್ಯನೀತಿಶಾಸ್ತ್ರದಲ್ಲಿ ಒಳ್ಳೆಯ ಸಂಗತಿಗಳನ್ನು ಹೇಳಲಾಗಿದೆ;

ಮೇಣ್=ಮತ್ತು/ಹಾಗೂ; ಕುಲಮ್+ಇಲ್ಲೆಯೋ; ಕುಲ=ವಂಶ/ಮನೆತನ; ಕುಲಮಿಲ್ಲೆಯೋ

ಕುಲಮಿಲ್ಲೆಯೋ=ನಮಗೆ ಕುಲದ ಉತ್ತಮಿಕೆಯಿಲ್ಲವೋ;

ದಾಯಿಗ=ದಾಯಾದಿ;

ನಮಗೆ ದಾಯಿಗರಲ್ಲರೋ=ಪಾಂಡವರು ನಮಗೆ ದಾಯಾದಿಗಳಲ್ಲವೇ. ಅಂದರೆ ನಾವು ಅವರು ಒಂದೇ ಮನೆತನಕ್ಕೆ ಸೇರಿದವರಲ್ಲವೋ;

ಶಸ್ತ್ರವಿದ್ಯೆ+ಒಳ್; ಶಸ್ತ್ರವಿದ್ಯೆ=ಶಸ್ತ್ರಗಳನ್ನು ಚೆನ್ನಾಗಿ ಬಳಸುವ ವಿದ್ಯೆ; ಪೂಣ್ಕೆ+ಗಳ್+ಇಲ್ಲೆಯೋ; ಪೂಣ್ಕೆ=ಪರಿಶ್ರಮ/ಪರಿಣತಿ;

ಶಸ್ತ್ರವಿದ್ಯೆಯೊಳ್ ಪೂಣ್ಕೆಗಳಿಲ್ಲೆಯೋ=ಅವರಂತೆಯೇ ನಾವು ಕೂಡ ಶಸ್ತ್ರವಿದ್ಯೆಯಲ್ಲಿ ಪರಿಣತಿಯನ್ನು ಪಡೆದಿಲ್ಲವೋ;

ಧರೆ=ಭೂಮಿ/ರಾಜ್ಯ;

ಧರೆಗೆ ಮುನ್ನ ಅವರಯ್ಯನೆ ಮುಖ್ಯನಲ್ಲನೋ=ಈ ರಾಜ್ಯಕ್ಕೆ ಮೊದಲು ಅವರ ಅಪ್ಪನಾದ ಪಾಂಡು ರಾಜನಾಗಿರಲಿಲ್ಲವೋ; ಅಂದರೆ ರಾಜ್ಯವನ್ನು ಆಳುವ ಅವಕಾಶ ಈಗಾಗಲೇ ಒಂದು ಬಾರಿ ಪಾಂಡವರ ತಂದೆಗೆ ದೊರೆತಿದೆ. ಇನ್ನು ಮುಂದೆ ರಾಜ್ಯವನ್ನು ಆಳುವ ಅವಕಾಶ ಪಾಂಡವರಂತೆಯೇ ರಾಜಕುಲಕ್ಕೆ ಸೇರಿದ, ಶಸ್ತ್ರವಿದ್ಯೆಯಲ್ಲಿ ಪರಿಣತರಾದ ನಿನ್ನ ಮಕ್ಕಳಾದ ನಮಗೆ ದಕ್ಕಬೇಕು;

ಅಯ್ಯ=ತಂದೆ/ಅಪ್ಪ; ಮನದಲ್=ಮನಸ್ಸಿನಲ್ಲಿ; ಜಾಣ್=ಬುದ್ದಿವಂತಿಕೆ/ವಿವೇಕ; ಕಿರಿದು+ಆಗ+ಬೇಡ; ಕಿರಿದು=ಚಿಕ್ಕದು; ಆಗವೇಡ=ಆಗದಿರಲಿ;

ಅಯ್ಯ ನಿಮಗೆ ಮನದಲ್ ಜಾಣ್ ಕಿರಿದಾಗವೇಡ=ಅಪ್ಪ, ನಿಮ್ಮ ಮನದ ವಿವೇಕವನ್ನು ಸೀಮಿತಗೊಳಿಸಿಕೊಳ್ಳಬೇಡಿ. ಅಂದರೆ ದೊಡ್ಡದಾಗಿ ಆಲೋಚನೆ ಮಾಡಿ “ಯಾವುದು ಸರಿ-ಯಾವುದು ತಪ್ಪು” ಎಂಬುದನ್ನು ಒರೆಹಚ್ಚಿ ನೋಡಿ , “ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬುದನ್ನು ನಿಶ್ಚಯಿಸಿ;

ವಿಧಾತೃ+ಯೋಗ+ಇನ್; ವಿಧಾತೃ=ಬ್ರಹ್ಮ; ಯೋಗ=ಕೂಟ/ಜೋಡಿಸುವಿಕೆ; ಇನ್=ಇಂದ; ವಿಧಾತೃಯೋಗ=ಬ್ರಹ್ಮನು ಬರೆದ ಹಣೆಬರಹ; ಬುದ್ಧಿ+ಉಮ್; ಬುದ್ಧಿ=ಅರಿವು/ತಿಳುವಳಿಕೆ/ವಿವೇಕ; ಕುರುಡು+ಆಗಲ್+ವೇಳ್ಪುದೆ; ವೇಳ್ಪುದೆ=ಬೇಕೇನು; ಕುರುಡಾಗಲೆವೇಳ್ಪುದೆ=ಕುರುಡಾಗಲೇ ಬೇಕೇನು. ಬುದ್ಧಿಯುಮ್ ಕುರುಡಾಗಲೆ ವೇಳ್ಪುದೆ=ಈ ನುಡಿಗಳು ರೂಪಕವಾಗಿ ಬಳಕೆಗೊಂಡಿವೆ. ಅರಿವನ್ನು ಕಳೆದುಕೊಂಡು, ವಿವೇಕವಿಲ್ಲದಂತೆ ಬಾಳಬಾರದು;

ವಿಧಾತೃಯೋಗದಿನ್ ಕಣ್ ಕುರುಡಾದಡೆ ಏನೋ… ನಿಮ್ಮ ಬುದ್ಧಿಯುಮ್ ಕುರುಡಾಗಲೆವೇಳ್ಪುದೆ ಎಂದು=”ಹುಟ್ಟಿನಿಂದ ನಿಮ್ಮ ಕಣ್ಣುಗಳು ಕುರುಡಾಗಿದ್ದರೆ ಏನಾಯಿತು…ಇದೀಗ ನಿಮ್ಮ ತಿಳುವಳಿಕೆಯು ಕುರುಡಾಗಬೇಕೆ. ಅಂದರೆ ಈಗ ನೀವು ವಿವೇಕವನ್ನು ಕಳೆದುಕೊಳ್ಳಬಾರದು ಎಂದು ದುರ್‍ಯೋದನನು ತನ್ನ ತಂದೆಯಾದ ದ್ರುತರಾಶ್ಟ್ರನನ್ನು ಎಚ್ಚರಿಸುತ್ತಿದ್ದಾನೆ;

ಒಡಂಬಡು=ಒಪ್ಪು/ಹೊಂದಿಕೆಯಾಗು; ಮನದೆಗೊಂಡು=ಮನಸ್ಸಿಗೆ ತೆಗೆದುಕೊಂಡು/ಮನಸ್ಸಿಗೆ ಹಚ್ಚಿಕೊಂಡು;

ತನ್ನ ಮನದೊಳ್ ಒಡಂಬಡೆ ನುಡಿದ ಮಗನ ಮಾತನ್ ಧೃತರಾಷ್ಟ್ರನ್ ಮನದೆಗೊಂಡು=ತನ್ನ ಮನಸ್ಸಿಗೆ ಒಪ್ಪುವಂತಹ ನುಡಿಗಳನ್ನಾಡಿದ ಮಗನ ಮಾತನ್ನು ಮನಸ್ಸಿಗೆ ತಂದುಕೊಂಡು, ಅಂದರೆ ಆ ದಿಸೆಯಲ್ಲಿ ಏನನ್ನಾದರೂ ಮಾಡಲೇಬೇಕು ಎಂದು ನಿಶ್ಚಿಯಿಸಿಕೊಂಡು;

ಎರ್ದೆಗೊಂಡ=ನನ್ನ ಮನದಲ್ಲಿ ಮಿಡಿಯುತ್ತಿದ್ದ/ನಾನು ಚಿಂತಿಸುತ್ತಿದ್ದ; ಕಜ್ಜ=ಕಾರ್‍ಯ/ಕೆಲಸ; ಕಂದ=ಮಗ;

ಕಂದ… ಎರ್ದೆಗೊಂಡ ಕಜ್ಜಮನೆ ಏನ್ ಪೇಳ್ದೆಯೊ=ಮಗನೇ, ನನ್ನ ಮನದಲ್ಲಿ ಪಾಂಡವರ ಬಗ್ಗೆ ಏನನ್ನು ಮಾಡಬೇಕೆಂದು ನಾನು ನಿಶ್ಚಿಯಿಸಿಕೊಂಡಿದ್ದೆನೋ ಆ ಕೆಲಸವನ್ನೇ ನೀನು ಹೇಳುತ್ತಿರುವೆ;

ಏನಾನುಮ್=ಒಂದಲ್ಲ ಒಂದು ರೀತಿಯಲ್ಲಿ; ಬಗೆವರ್+ಎಂದೆ; ಬಗೆ=ಎಣಿಸು/ಬಯಸು; ಆನುಮ್=ನಾನು ಕೂಡ; ಚಿಂತಿಸುತ+ಇರ್ಪೆನ್; ಇರ್ಪೆನ್=ಇರುವೆನು;

ಅವರ್ಗಳ್ ನಿನಗೆ ಏನಾನುಮ್ ಅಪಾಯಮನ್ ಬಗೆವರೆಂದೆ ಆನುಮ್ ಚಿಂತಿಸುತಿರ್ಪೆನ್= “ ಅವರು ನಿನಗೆ ಒಂದಲ್ಲ ಒಂದು ರೀತಿಯಲ್ಲಿ ಕೇಡನ್ನು ಮಾಡುವರು ” ಎಂದು ನಾನು ಸದಾಕಾಲ ಚಿಂತಿಸುತ್ತಲೇ ಇದ್ದೇನೆ;

ನೀನ್+ಇರೆ; ಇರೆ=ಇರಲು; ನೀನಿರೆ=ಮಗನಾದ ನೀನು ಇರುವಾಗ; ಅಪ್ಪುದನ್=ಆಗುವುದನ್ನು/ಸೇರುವುದನ್ನು; ಒಲ್=ಬಯಸು/ಒಪ್ಪು; ಒಲ್ವೆನೆ=ಬಯಸುತ್ತೇನೆಯೆ/ಒಪ್ಪುತ್ತೇನೆಯೆ;

ಪೇಳ್, ನೀನಿರೆ ವೈರಿಗಳ್ಗೆ ಪಟ್ಟಮುಮ್ ನೆಲನುಮ್ ಅಪ್ಪುದನ್ ಒಲ್ವೆನೆ=ಹೇಳು… ಮಗನಾದ ನೀನು ಇರುವಾಗ ಹಗೆಗಳಿಗೆ ರಾಜ್ಯದ ಪಟ್ಟ ಕಟ್ಟುವುದನ್ನು ಮತ್ತು ಬೂಮಿಯು ಅವರ ಪಾಲಾಗುವುದನ್ನು ನಾನು ಬಯಸುತ್ತೇನೆಯೇ;

ನೀನ್+ಏನುಮ್;

ಅದರ್ಕೆ ನೀನೇನುಮ್ ಚಿಂತಿಸದಿರ್=ಆ ಸಂಗತಿಯನ್ನು ಕುರಿತು ನೀನೇನು ಚಿಂತಿಸಬೇಡ;

ಇರಲ್+ಈವೆನೆ; ಈ=ಕೊಡು/ಅವಕಾಶ ನೀಡು;

ಪಾಂಡುಪುತ್ರರನ್ ಇಲ್ಲಿ ಇರಲೀವೆನೆ ಎಂದು=ಪಾಂಡುಪುತ್ರರು ಹಸ್ತಿನಾವತಿಯಲ್ಲಿದ್ದುಕೊಂಡು ರಾಜ್ಯವನ್ನು ಆಳಲು ನಾನು ಅವಕಾಶವನ್ನು ನೀಡುವುದಿಲ್ಲ ಹಾಗೂ ಅವರು ಹಸ್ತಿನಾವತಿಯಲ್ಲಿ ತಳವೂರಲು ಬಿಡುವುದಿಲ್ಲ ಎಂದು ನುಡಿದು;

ಬೀಡು=ಮನೆ;

ದುರ್ಯೋಧನನನ್ ಬೀಡಿಂಗೆ ಪೋಗಲ್ ಪೇಳ್ದು=ದುರ್‍ಯೋದನನ್ನು ಅವನ ಅರಮನೆಗೆ ಹೋಗಲು ಹೇಳಿ;

ಬರಿಸಿ=ಕರೆಸಿಕೊಂಡು/ಬರುವಂತೆ ಮಾಡಿ;

ಪಾಂಡವರ್ ಅಯ್ವರುಮನ್ ಬರಿಸಿ=ಅಯ್ವರು ಪಾಂಡುಪುತ್ರರನ್ನು ತನ್ನ ಬಳಿಗೆ ಕರೆಸಿಕೊಂಡು;

ತೊಡೆ+ಅನ್+ಏರಿಸಿಕೊಂಡು; ಏರು=ಹತ್ತು/ಮೇಲಕ್ಕೆ ಹೋಗು; ತೊಡೆಯನೇರಿಸಿಕೊಂಡು=ತೊಡೆಗಳು ಸೋಕುವಂತೆ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು;

ಧೃತರಾಷ್ಟ್ರನ್ ತೊಡೆಯನೇರಿಸಿಕೊಂಡು=ಅವರಿಗೆ ಅಪಾರವಾದ ಪ್ರೀತಿಯನ್ನು ತೋರಿಸುವಂತೆ ತನ್ನ ತೊಡೆಗಳು ಸೋಂಕುವಂತೆ ಅಕ್ಕಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು;

ದುರ್ಯೋಧನನ್+ಅಪ್ಪೊಡೆ; ಅಪ್ಪೊಡೆ=ಆದರೆ; ಪೊಲ್=ಕೆಟ್ಟುದು/ಹೀನವಾದುದು; ಪೊಲ್ಲ=ಕೆಟ್ಟ; ಮಾನಸ=ವ್ಯಕ್ತಿ;

ದುರ್ಯೋಧನನಪ್ಪೊಡೆ ಪೊಲ್ಲ ಮಾನಸನ್=ನನ್ನ ಮಗ ದುರ್‍ಯೋದನನು ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯಾಗಿದ್ದಾನೆ;

ಒಂದು+ಎಡೆ+ಒಳ್+ಇರೆ; ಎಡೆ=ಜಾಗ; ಕಿಸುರು=ಹಗೆತನ; ಕಲಹ=ಜಗಳ/ಹೊಡೆದಾಟ; ಎಂದುಮ್=ಯಾವಾಗಲೂ; ಕುಂದು=ಕಡಿಮೆಯಾಗು;

ಆತನುಮ್ ನೀಮುಮ್ ಒಂದೆಡೆಯೊಳಿರೆ ಕಿಸುರುಮ್ ಕಲಹಮುಮ್ ಎಂದುಮ್ ಕುಂದದು=ಅವನು ನೀವು ಒಂದು ಊರಿನಲ್ಲಿ ಇದ್ದರೆ, ಅಂದರೆ ಹಸ್ತಿನಾವತಿಯಲ್ಲಿಯೇ ಇದ್ದರೆ ಪರಸ್ಪರ ಅಸೂಯೆ ಹಗೆತನ ಜಗಳ ಹೊಡೆದಾಟ ಎಂದಿಗೂ ತಪ್ಪುವುದಿಲ್ಲ;

ಅದು ಕಾರಣಮ್=ನಿಮ್ಮಗಳ ನಡುವೆ ಹೊಂದಾಣಿಕೆಯಿಲ್ಲದಿರುವುದರಿಂದ;

ದಕ್ಷಿಣ=ತೆಂಕಣ; ತಟದ+ಒಳ್; ತಟ=ದಡ; ಒಳ್=ಅಲ್ಲಿ; ಪೊಳಲ್=ಪಟ್ಟಣ/ನಗರ; ಕುರುಜಾಂಗಣ=ಕುರುವಂಶದ ರಾಜರ ಆಳ್ವಿಕೆಗೆ ಒಳಪಟ್ಟ ನಾಡಿನ ಹೆಸರು; ವಿಷಯ=ನಾಡು/ದೇಶ; ತಿಲಕಮ್+ಅಪ್ಪ+ಅಂತೆ; ತಿಲಕ=ಹಣೆಯ ಮೇಲೆ ಇಟ್ಟುಕೊಳ್ಳುವ ಬೊಟ್ಟು; ಇರ್ದುದು=ಇರುವುದು;

ಗಂಗಾ ನದಿಯ ದಕ್ಷಿಣ ತಟದೊಳ್ ವಾರಣಾವತಮ್ ಎಂಬುದು ಪೊಳಲ್ ಕುರುಜಾಂಗಣ ವಿಷಯಕ್ಕೆ ತಿಲಕಮಪ್ಪಂತೆ ಇರ್ದುದು=ಗಂಗಾ ನದಿಯ ತೆಂಕಣ ದಿಕ್ಕಿನ ದಡದಲ್ಲಿ ವಾರಣಾವತ ಎಂಬ ಪಟ್ಟಣವಿದೆ. ಈ ಪಟ್ಟಣವು ಕುರುಜಾಂಗಣ ನಾಡಿಗೆ ತಿಲಕಪ್ರಾಯವಾಗಿದೆ. ಅಂದರೆ ಕುರುಜಾಂಗಣ ನಾಡಿನಲ್ಲಿಯೇ ತುಂಬಾ ಹೆಸರುವಾಸಿಯಾದ ಪಟ್ಟಣವಾಗಿದೆ;

ಅಲ್ಲಿಗೆ ಪೋಗಿ ಸುಖಮ್ ಇರಿ..ಎಂದೊಡೆ=ನೀವು ಅಲ್ಲಿಗೆ ಹೋಗಿ ಆನಂದ ಮತ್ತು ನೆಮ್ಮದಿಯಿಂದ ಬಾಳಿರಿ ಎಂದು ದ್ರುತರಾಶ್ಟ್ರನು ಪಾಂಡವರಿಗೆ ಹೇಳಿದಾಗ;

ಬೀಳ್ಕೊಂಡು=ಅಲ್ಲಿಂದ ಹೊರಟು; ಅಂತೆ ಗೆಯ್ವೆಮ್=ಅದೇ ರೀತಿ ಮಾಡುತ್ತೇವೆ;

ಅಂತೆ ಗೆಯ್ವೆಮ್ ಎಂದು ಬೀಳ್ಕೊಂಡು ಬೀಡಿಂಗೆ ವಂದು=“ನೀವು ಹೇಳಿದಂತೆಯೇ ಮಾಡುತ್ತೇವೆ” ಎಂದು ದ್ರುತರಾಶ್ಟ್ರನಿಗೆ ಹೇಳಿ, ಅಲ್ಲಿಂದ ಹೊರಟು ತಾವು ಇದ್ದ ಅರಮನೆಗೆ ಬಂದು :

ವಿದುರ+ಅರ್+ಕಳ್+ಅಮ್; ಕಳ್=ಬಹುವಚನ ಪ್ರತ್ಯಯ; ತದ್=ಆ/ಅಲ್ಲಿನ; ವೃತ್ತಾಂತಮ್+ಅನ್; ವೃತ್ತಾಂತ=ಸುದ್ದಿ/ಸಮಾಚಾರ; ಅರಿಪು=ತಿಳಿಸು;

ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಮ್ ಕುಂತಿಗಮ್ ತದ್ ವೃತ್ತಾಂತಮನ್ ಅರಿಪಿದರ್=ಗಾಂಗೇಯ, ದ್ರೋಣ, ಕೃಪ, ವಿದುರ ಮತ್ತು ಕುಂತಿಗೆ ದೊಡ್ಡಪ್ಪನಾದ ದ್ರುತರಾಶ್ಟ್ರನೊಡನೆ ನಡೆದ ಮಾತುಕತೆಯನ್ನು ತಿಳಿಸಿದರು;

ಅನ್ನೆಗಮ್=ಆ ವೇಳೆಗೆ/ಅದೇ ಸಮಯಕ್ಕೆ; ಇತ್ತ=ಈ ಕಡೆ;

ಅನ್ನೆಗಮ್ ಇತ್ತ=ಅದೇ ಸಮಯಕ್ಕೆ ಸರಿಯಾಗಿ ಈ ಕಡೆಯಲ್ಲಿ;

ಪೋಗು=ಹೋಗು/ತೆರಳು; ಪೋಗನ್=ಹೋಗುವಿಕೆಯನ್ನು; ಅರಿದು=ತಿಳಿದುಕೊಂಡು;

ದುರ್ಯೋಧನನ್ ಅವರ ಪೋಗನ್ ಅರಿದು=ದುರ್‍ಯೋದನನು ಪಾಂಡವರು ವಾರಣಾವತಕ್ಕೆ ಹೋಗಿ ನೆಲಸಲು ಒಪ್ಪಿಕೊಂಡಿರುವ ಸುದ್ದಿಯನ್ನು ತಿಳಿದುಕೊಂಡು;

ಪುರೋಚನನ್+ಎಂಬ; ಮನದನ್ನನ್+ಅಪ್ಪ; ಮನದನ್ನ=ಬಹಳ ಆತ್ಮೀಯನಾದ ವ್ಯಕ್ತಿ/ಮನಸ್ಸಿಗೆ ತುಂಬಾ ಮೆಚ್ಚುಗೆಯಾದವನು; ಪೆರ್ಗಡೆ+ಒಳ್; ಪೆರ್ಗಡೆ=ಹೆಗ್ಗಡೆ/ರಾಜನ ಬಳಿ ದೊಡ್ಡ ಹುದ್ದೆಯಲ್ಲಿರುವವನು; ಲಾಕ್ಷಾಗೃಹ+ಉಪಾಯಮ್+ಅನ್; ಲಾಕ್ಷ=ಅರಗು; ಗೃಹ=ಮನೆ; ಲಾಕ್ಷಾಗೃಹ=ಅರಗಿನ ಮನೆ; ಉಪಾಯ=ಯುಕ್ತಿ/ಸಂಚು;

ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮನ್ ಚರ್ಚಿಸಿ=ದುರ್‍ಯೋದನನನು ತನಗೆ ತುಂಬಾ ಆತ್ಮೀಯನಾಗಿದ್ದ ಪುರೋಚನ ಎಂಬ ಹೆಸರಿನ ಹೆಗ್ಗಡೆಯ ಜೊತೆಯಲ್ಲಿ ಮಾತನಾಡಿ, ಅರಗಿನ ಮನೆಯಲ್ಲಿ ಪಾಂಡವರನ್ನು ಕೊಲ್ಲುವ ಸಂಚನ್ನು ರೂಪಿಸಿ;

ಎಯ್ದುವಂತೆ+ಆಗೆ; ಎಯ್ದು=ಸೇರು; ಸಮಕಟ್ಟಿ=ಏರ್‍ಪಾಡು ಮಾಡಿ; ಲಕ್ಕ=ಒಂದು ನೂರು ಸಾವಿರ; ಬಲಮ್+ಅನ್; ಬಲ=ಸೇನೆ; ನೆರಮ್+ಪೇಳ್ದು; ನೆರ=ಬೆಂಬಲ/ಸಹಾಯ; ಪೇಳ್ದು=ಗೊತ್ತುಪಡಿಸಿ;

ವಾರಣಾವತಮನ್ ಒಂದೇ ದಿವಸದೊಳ್ ಎಯ್ದುವಂತಾಗೆ ರಥಮನ್ ಸಮಕಟ್ಟಿ ನಾಲ್ಕು ಲಕ್ಕ ಬಲಮನ್ ನೆರಂಬೇಳ್ದು ಕಳಿಪಿದನ್=ಪಾಂಡವರು ವಾರಣಾವತಕ್ಕೆ ಹೋಗುವುದಕ್ಕೆ ಮುಂಚಿತವಾಗಿಯೇ ಒಂದೇ ದಿನದಲ್ಲಿ ಪುರೋಚನನು ವಾರಣಾವತವನ್ನು ತಲುಪುವಂತೆ ದುರ್‍ಯೋದನನು ಏರ್‍ಪಾಡು ಮಾಡಿ, ಹೆಗ್ಗಡೆಗೆ ಬೆಂಬಲವಾಗಿರಲು ನಾನೂರು ಸಾವಿರ ಕಾದಾಳುಗಳನ್ನು ಒಳಗೊಂಡ ಸೇನೆಯನ್ನು ಕಳುಹಿಸಿದನು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: