ಆಶಿಕಾಗಾ ಹೂವಿನ ಉದ್ಯಾನ

– .


ವಸಂತ ಕಾಲ ಜಪಾನಿನಲ್ಲಿ ಅತ್ಯಂತ ಸುಂದರವಾದ ಸಮಯ. ಈ ದಿನಗಳಲ್ಲಿ ನೀವು ಎಲ್ಲಿ ನೋಡಿದರೂ ಮನಸ್ಸಿಗೆ ಮತ್ತು ಕಣ್ಣಿಗೆ ತಂಪು ನೀಡುವ ವರ‍್ಣರಂಜಿತ ಹೂವುಗಳು ಕಾಣ ಸಿಗುತ್ತವೆ. ಜಪಾನಿನ ರಾಜದಾನಿ ಟೋಕಿಯೊ ಸಹ ಇದಕ್ಕೆ ಹೊರತಲ್ಲ. ವಸಂತ ರುತುವಿನಲ್ಲಿ ಪ್ಯಾಬೇಸಿ (Fabaceae) ಕುಟುಂಬಕ್ಕೆ ಸೇರಿದ ವಿಸ್ಟೇರಿಯಾ, ಬಣ್ಣ ಬಣ್ಣದ ಟುಲಿಪ್ ಗಳು ಹಾಗೂ ಸಾಗರದಂತೆ ಹರಡಿರುವ ನೆಮೊಪಿಲಾ ಹೂವುಗಳನ್ನು ಟೋಕಿಯೊದಲ್ಲಿ ಕಾಣಬಹದು.

ಜಪಾನಿನ ಪ್ರವಾಸಿ ತಾಣಗಳಲ್ಲಿ ಆಶಿಕಾಗಾ ಹೂವಿನ ಉದ್ಯಾನ ಪ್ರಮುಕ ಸ್ತಾನವನ್ನು ಅಲಂಕರಿಸಿದೆ. ಈ ಉದ್ಯಾನವನದಲ್ಲಿ ಏಪ್ರಿಲ್ ಮದ್ಯದಿಂದ ಮೇ ಮದ್ಯದ ಅವದಿಯಲ್ಲಿ ಹೂ ಬಿಡುವ ಸುಮಾರು 350 ಗಿಡಗಳಿವೆ. ಈ ಗಿಡಗಳನ್ನು ಮರದ ಅಟ್ಟಣಿಗೆಯ ಸಹಾಯದಿಂದ ತೂಗು ಹಾಕಲಾಗಿದೆ. ಅದರಲ್ಲೇನು ಸೊಗಸು? ಎನ್ನಬಹುದು. ಆದರೆ ಇಲ್ಲಿ ಅರಳುವ ಅದ್ಬುತ ಹೂವುಗಳು ನೇರಳೆ, ನೀಲಿ, ಗುಲಾಬಿ, ಬಿಳಿ ಹಾಗೂ ಹಳದಿ ಬಣ್ಣಗಳಲ್ಲಿ ಕಂಗೊಳಿಸುವ ಕಾರಣ ಈ ಉದ್ಯಾನವನ ಜನಪ್ರಿಯತೆಯನ್ನು ಗಳಿಸಿದೆ. ಇದರಲ್ಲಿ ಮತ್ತೊಂದು ವಿಶೇಶತೆಯಿದೆ, ಅದೇನೆಂದರೆ ಮೇಲೆ ತಿಳಿಸಿದ ಎಲ್ಲಾ ಬಣ್ಣದ ಹೂವುಗಳೂ ಒಮ್ಮೆಲೆ ಅರಳುವುದಿಲ್ಲ. ಒಂದೊಂದು, ಒಂದೊಂದು ಸಮಯದಲ್ಲಿ ಅರಳುತ್ತವೆ. ಮೊದಲಿಗೆ ಗುಲಾಬಿ ಬಣ್ಣದ್ದು, ನಂತರ ನೇರಳೆ, ತದ ನಂತರ ಬಿಳಿ, ಕೊನೆಯಲ್ಲಿ ಹಳದಿ ಬಣ್ಣದ ವಿಸ್ಟೀರಿಯಾ ಹೂವುಗಳು ಅರಳುತ್ತವೆ.

ಆಶಿಕಾಗಾ ಉದ್ಯಾನವನದ ಒಳ ಹೊಕ್ಕರೆ ಅಲ್ಲಿರುವ 150 ವರ‍್ಶಗಳಶ್ಟು ಹಳೆಯದಾದ ವಿಸ್ಟೀರಿಯಾ ಗಿಡವನ್ನು ನೋಡಲೇಬೇಕು. ಅಶ್ಟು ವರ‍್ಶಗಳಿಂದ ಹೂವನ್ನು ಕೊಡುತ್ತಿರುವ ಈ ಗಿಡವನ್ನು ಸಂಜೆಯ ವೇಳೆಯಲ್ಲಿ ದೀಪಗಳಿಂದ ಬೆಳಗಿಸಲಾಗುತ್ತದೆ. ಇದರ ಅಡಿಯಲ್ಲಿರುವ ನೀರಿನಲ್ಲಿ ಅದರ ಪ್ರತಿಬಿಂಬ ನೋಡಲು ಎರಡು ಕಣ್ಣು ಸಾಲದು. 150 ವರ‍್ಶಗಳ ಈ ಗಿಡ ಸುಮಾರು 1000 ಚದರ ಮೀಟರ್ ಗಳಶ್ಟು ಅಟ್ಟಣಿಗೆಯನ್ನು ಆವರಿಸಿದೆ. ಇದರಲ್ಲಿ ಒಂದು ಅಂದಾಜಿನ ಪ್ರಕಾರ 80,000 ಪ್ರತ್ಯೇಕ ನೇರಳೆ ಬಣ್ಣದ ಹೂವುಗಳನ್ನು ಕಾಣಬಹುದು.

ಈ ಉದ್ಯಾನವನದಲ್ಲಿ 80 ಮೀಟ‍ರ್ ಉದ್ದದ ವಿಸ್ಟೇರಿಯಾ ನಡುಗೆಯ ಹಾದಿ ಇದೆ. ಈ ಹಾದಿಯಲ್ಲಿ ನಡೆದು ಹೋಗುತ್ತಿದ್ದರೆ, ಬಿಳಿ ಬಣ್ಣದ ಹೂವುಗಳು ಅಟ್ಟಣಿಗೆಯ ಮೇಲಿಂದ ನಿಮ್ಮ ಶಿರದ ಮೇಲೆ ತೂಗಾಡುತ್ತಿರುತ್ತದೆ. ಜಪಾನಿನ ಏಕೈಕ ಕಿಬಾನಾ ವಿಸ್ಟೀರಿಯಾ ಸುರಂಗ ಈ ಉದ್ಯಾನವನದಲ್ಲಿದೆ. ಇದರ ವಿಶೇಶತೆ ಏನೆಂದರೆ, ಕಮಾನಿನಾಕಾರದ ಈ ಸುರಂಗದಲ್ಲಿ ಮೇ ಪ್ರಾರಂಬದ ದಿನಗಳಲ್ಲಿ ಹಳದಿ ಬಣ್ಣದ ವಿಸ್ಟೀರಿಯಾ ಹೂವುಗಳು ತುಂಬಿರುತ್ತವೆ. ಅದ್ಬುತ ಪ್ರಕಾಶಮಾನವಾದ ಹಳದಿ ಬಣ್ಣದ ಹೂವುಗಳನ್ನು ನೋಡುವುದೇ ಕಣ್ಣಿಗೆ ಆನಂದ.

ಆಶಿಕಾಗಾ ಹೂವಿನ ಉದ್ಯಾನವನದಲ್ಲಿ ವಿಸ್ಟೇರಿಯಾ ಹೊರತಾಗಿ, ಅಜೇಲಿಯಾದ ಸಂಗ್ರಹ ಇದೆ. ವಿಸ್ಟೇರಿಯಾದ ಸುತ್ತಲೂ ಅಜೇಲಿಯಾದ ಪೊದೆಗಳನ್ನು ಕಾಣಬಹುದು. ಒಂದು ಅಂದಾಜಿನಂತೆ 5000ಕ್ಕೂ ಹೆಚ್ಚು ಅಜೇಲಿಯಾ ಗಿಡಗಳಿವೆ. ಇದರ ಹೂವಿನ ಬಣ್ಣ ಕೆಂಪು. ಇದು ಸಾಮಾನ್ಯವಾಗಿ ನೆರಳಿನ ಪ್ರದೇಶದಲ್ಲಿ ಬೆಳೆಯುವ ಗಿಡವಾಗಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಇದರ ಹೂವುಗಳು ಅರಳುತ್ತವೆ. ಹೀಗೆ ಅರಳಿದ ಅಜೇಲಿಯಾದ ಹೂವುಗಳು ಹಲವಾರು ವಾರಗಳ ಕಾಲ ನಳನಳಿಸುತ್ತಿರುತ್ತವೆ. ಈ ಗಿಡದ ಸುಮಾರು 1000 ಪ್ರಬೇದಗಳು ಈ ಉದ್ಯಾನವನದಲ್ಲಿವೆ. ಈ ಉದ್ಯಾನವನದ ವೈಶಿಶ್ಟ್ಯವೆಂದರೆ, ಹೂವುಗಳು ಅರಳುವ ಸಮಯದಲ್ಲಿ ಪುಜಿನೊವಾ ಮೊನೊಗಟಾರಿ ಓಪುಜಿ ಉತ್ಸವವನ್ನು ಅಯೋಜಿಸಲಾಗುತ್ತದೆ. ಮೇ 14ರ ವರೆಗೆ ನಡೆಯುವ ಈ ಉತ್ಸವಕ್ಕಾಗಿ ಇಡೀ ಉದ್ಯಾನವನವನ್ನು ಬಣ್ಣ ಬಣ್ಣದ ಪ್ರಕಾಶಮಾನವಾದ ದೀಪದ ವ್ಯವಸ್ತೆಯಿಂದ ಅಲಂಕರಿಸಲಾಗುತ್ತದೆ.

ದಿನದ ಸಮಯದಲ್ಲಿ ಈ ಉದ್ಯಾನವನವನ್ನು ನೋಡಲು ವಯಸ್ಕರಿಗೆ 900 ರಿಂದ 2100 ಯೆನ್ ಪ್ರವೇಶ ಶುಲ್ಕ ವಿದಿಸಲಾಗುತ್ತದೆ. ಮಕ್ಕಳಿಗೆ 500 ರಿಂದ 1100 ಯೆನ್ ಶುಲ್ಕವಿದೆ. ಹೂವಿನ ತಾಜಾತನದ ಮೇಲೆ ಪ್ರವೇಶ ಶುಲ್ಕ ಬದಲಾಗುತ್ತಿರುತ್ತದೆ. ದೀಪದ ಬೆಳಗುವಿಕೆ ಪ್ರತಿದಿನ 5.30 ಕ್ಕೆ ಪ್ರಾರಂಬವಾಗುತ್ತದೆ. ವೀಕ್ಶಕರ ಜನಸಂದಣಿ, ವಾರದ ದಿನ ಇವುಗಳ ಆದಾರದ ಮೇಲೆ ಮುಕ್ತಾಯದ ಸಮಯವನ್ನು ಉದ್ಯಾನವನದ ಆಡಳಿತ ಅದಿಕಾರಿಗಳು ನಿರ‍್ಣಯ ಮಾಡುತ್ತಾರೆ. ಸಾಮಾನ್ಯವಾಗಿ ಈ ಉದ್ಯಾನವನ ಏಪ್ರಿಲ್ 15ರಿಂದ ಏಪ್ರಿಲ್ 21 ರವರೆಗೆ ಮತ್ತು ಮೇ 8 ರಿಂದ ಮೇ 14ರವರೆಗೆ ರಾತ್ರಿ 8.30ರವರೆಗೂ ತೆರೆದಿರುತ್ತದೆ. ಏಪ್ರಿಲ್ 22 ರಿಂದ ಮೇ 7 ರವರೆಗೆ ಇನ್ನೂ ಅರ‍್ದ ಗಂಟೆ ಹೆಚ್ಚಿಗೆ, ಅಂದರೆ ರಾತ್ರಿ 9.00ರ ವರೆವಿಗೂ ನೋಡುಗರಿಗೆ ತೆರೆದಿರುತ್ತದೆ. ಟೊಕಿಯೋದಿಂದ ಆಶಿಕಾಗಾ ಹೂವಿನ ಉದ್ಯಾನವನವನ್ನು ರೈಲು ಪ್ರಯಾಣದ ಮೂಲಕ ತಲುಪಲು ಅಂದಾಜು ಎರಡು ಗಂಟೆಗಳು ಬೇಕು.

(ಮಾಹಿತಿ ಮತ್ತು ಚಿತ್ರಸೆಲೆ: jrailpass.com, japan-guide.com, tripadvisor.in, livejapan.com, instagram.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: