ಬ್ರೆಕ್ಟ್ ಕವನಗಳ ಓದು – 4 ನೆಯ ಕಂತು

– ಸಿ.ಪಿ.ನಾಗರಾಜ.

ನಿಮ್ಮ ಮಾತು ನಿಮಗೂ ಕೇಳಲಿ

(ಕನ್ನಡ ಅನುವಾದ: ಕೆ.ಪಣಿರಾಜ್)

ಯಾವಾಗಲೂ ನೀವೇ ಸರಿ
ಎನ್ನದಿರಿ ಗುರುವೇ
ಶಿಷ್ಯಂದಿರಿಗೆ ಅದು
ಅರಿವಾಗಲಿ ಬಿಡಿ
ಸತ್ಯವನ್ನು ಒತ್ತಿ ತುರುಕುತ್ತಿರೇಕೆ
ಅದರಿಂದ್ಯಾರಿಗೂ ಒಳಿತಿಲ್ಲ
ನಿಮ್ಮ ಮಾತುಗಳು ನಿಮಗೂ ಕೇಳಲಿ ಗುರುವೇ.

ಯಾವುದೇ ವ್ಯಕ್ತಿಯು ತಾನು ಹೇಳುತ್ತಿರುವ ವಿಚಾರಗಳನ್ನು ಇತರರು ಒರೆಹಚ್ಚಿ ನೋಡಿ, ಅದರಲ್ಲಿರುವ ನಿಜ ಇಲ್ಲವೇ ಸುಳ್ಳನ್ನು; ಸರಿ ಇಲ್ಲವೇ ತಪ್ಪನ್ನು; ವಾಸ್ತವ ಇಲ್ಲವೇ ಕಟ್ಟುಕತೆಯನ್ನು ತಾವಾಗಿಯೇ ಅರಿತುಕೊಳ್ಳುವುದಕ್ಕೆ ಅವಕಾಶವನ್ನು ನೀಡಬೇಕೆ ಹೊರತು, ತಾನು ಹೇಳುತ್ತಿರುವುದೇ ಸರಿಯೆಂದು ಒತ್ತಾಯ ಮಾಡಬಾರದು ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಗುರು=ತನ್ನ ಬಳಿ ಬಂದ ವ್ಯಕ್ತಿಗಳಿಗೆ ಲೋಕದ ಬಗ್ಗೆ ಅರಿವನ್ನು ನೀಡಿ, ಅವರ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವವನು; ಶಿಷ್ಯ=ವಿದ್ಯೆಯನ್ನು ಕಲಿಯಲೆಂದು ಗುರುವಿನ ಬಳಿಗೆ ಬಂದಿರುವ ವ್ಯಕ್ತಿ/ಗುಡ್ಡ; ಅದು=ಗುರು ಹೇಳಿರುವ ವಿಚಾರ; ಅರಿವು+ಆಗಲಿ; ಅರಿ=ತಿಳಿ/ಗ್ರಹಿಸು; ಅರಿವು=ತಿಳುವಳಿಕೆ;

ಶಿಷ್ಯಂದಿರಿಗೆ ಅದು ಅರಿವಾಗಲಿ ಬಿಡಿ=ನೀವು ಹೇಳಿರುವ ವಿಚಾರಗಳ ಬಗ್ಗೆ ಸ್ವತಂತ್ರವಾಗಿ ಆಲೋಚಿಸಿ, ತಮ್ಮದೇ ಆದ ನಿಲುವನ್ನು ಹೊಂದಲು ನಿಮ್ಮ ಗುಡ್ಡರಿಗೆ ಅವಕಾಶವನ್ನು ಕಲ್ಪಿಸಿಕೊಡಿ;

ಸತ್ಯ=ದಿಟ/ನಿಜ/ವಾಸ್ತವ; ಒತ್ತು=ಹೇರು/ಆಕ್ರಮಿಸು/ಅದುಮು; ತುರುಕುತ್ತೀರಿ+ಏಕೆ; ತುರುಕು=ಒತ್ತಿತುಂಬು/ಅಡಕು;

ಸತ್ಯವನ್ನು ಒತ್ತಿ ತುರುಕುತ್ತಿರೇಕೆ=ಅರಿವನ್ನು ಪಡೆಯಲು ಬಂದವರಿಗೆ ಸತ್ಯದ ಸಂಗತಿಗಳನ್ನು ಸರಳವಾಗಿ ಮನದಟ್ಟಾಗುವಂತೆ ಹೇಳುವುದನ್ನು ಬಿಟ್ಟು, ಒತ್ತಾಯಪೂರ್‍ವವಕವಾಗಿ ಏಕೆ ಹೇರುತ್ತಿರುವಿರಿ. ಸತ್ಯವೆಂಬುದು ಯಾವಾಗಲೂ ಸರಳವಾಗಿರುತ್ತದೆಯೇ ಹೊರತು ಗೋಜಲು ಗೋಜಲಾಗಿರುವುದಿಲ್ಲ;

ಅದರಿಂದ+ಯಾರಿಗೂ; ಒಳಿತು+ಇಲ್ಲ; ಒಳಿತು=ಒಳ್ಳೆಯದು;

ಅದರಿಂದ್ಯಾರಿಗೂ ಒಳಿತಿಲ್ಲ=ಒತ್ತಾಯಪೂರ್‍ವಕವಾಗಿ ಕಲಿಸುವ ವಿದ್ಯೆಯಿಂದ ಗುರುವಿಗಾಗಲಿ ಇಲ್ಲವೇ ಕಲಿಯುವ ವ್ಯಕ್ತಿಗಾಗಲಿ ಒಳಿತಾಗುವುದಿಲ್ಲ. ಅಂದರೆ ಸತ್ಯ ಯಾವುದು ಎಂಬುದನ್ನು ಇಬ್ಬರೂ ಅರಿಯಲಾರರು;

ನಿಮ್ಮ ಮಾತುಗಳು ನಿಮಗೂ ಕೇಳಲಿ ಗುರುವೇ=ನೀವು ಆಡಿದ/ಆಡುವ ಮಾತುಗಳು ದಿಟವೋ/ಸುಳ್ಳೋ/ಕಟ್ಟುಕತೆಯೋ ಎಂಬುದನ್ನು ನೀವೇ ಒರೆಹಚ್ಚಿ ನೋಡುವುದರ ಜೊತೆಜೊತೆಗೆ ನಿಮ್ಮ ಮಾತುಗಳನ್ನು ಆಲಿಸುವ ವ್ಯಕ್ತಿಗಳ ಮನಸ್ಸಿನ ಮೇಲೆ ಮತ್ತು ನಿಮ್ಮ ಮಾತುಗಳಿಂದ ಸಮಾಜದ ಜನಜೀವನದಲ್ಲಿ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಗಮನಿಸಿ;

ಗುರುವಾದವನು ಇಲ್ಲವೇ ಇತರರಿಗೆ ತಿಳುವಳಿಕೆಯನ್ನು ಹೇಳುವ ನೆಲೆಯಲ್ಲಿರುವ ವ್ಯಕ್ತಿಯು ಪ್ರಾಚೀನ ಪುಸ್ತಕಗಳಲ್ಲಿ ಬರೆದಿರುವ ವಿಚಾರಗಳೆಲ್ಲವೂ ಇಲ್ಲವೇ ಪರಂಪರೆಯಿಂದ ಬಂದ ಸಂಗತಿಗಳೆಲ್ಲವೂ ಉತ್ತಮವೆಂಬ ಮೋಹದಿಂದ ವಾಸ್ತವಕ್ಕೆ ದೂರವಾದ ಕಲ್ಪಿತ ಸಂಗತಿಗಳನ್ನು ಹೇಳಬಾರದು. ತನ್ನ ಬದುಕಿಗೆ ಒಲವು ನಲಿವು ನೆಮ್ಮದಿಯನ್ನು ತಂದುಕೊಡುವಂತೆಯೇ ಸಹಮಾನವರ ಬದುಕಿಗೂ ಒಳಿತನ್ನು ಉಂಟುಮಾಡುವಂತಹ ವಿಚಾರಗಳನ್ನು ಹೇಳಬೇಕು.

ಇತರರಿಗೆ ತಿಳುವಳಿಕೆಯನ್ನು ಹೇಳುವ ವ್ಯಕ್ತಿಯ ವ್ಯಕ್ತಿತ್ವದಲ್ಲಿ “ತಾನು ಎಲ್ಲವನ್ನೂ ಬಲ್ಲವನು; ತನಗೆ ತಿಳಿಯದಿರುವುದು ಯಾವುದೂ ಇಲ್ಲ.” ಎಂಬ ಅಹಂಕಾರವಿರಬಾರದು. “ಸುಳ್ಳಿಗೆ ಸಾವಿರ ರೂಪಗಳಿದ್ದರೆ, ನಿಜಕ್ಕೆ ಒಂದೆ ರೂಪ” ಎಂಬುದನ್ನು ಅರಿತಿರಬೇಕು ಎಂಬ ಆಶಯವನ್ನು ಈ ಕವನದಲ್ಲಿ ಸೂಚಿಸಲಾಗಿದೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: