ಕವಿತೆ: ಬದುಕೆಂದರೆ ಹೀಗೇನಾ…

– ಶ್ಯಾಮಲಶ್ರೀ.ಕೆ.ಎಸ್.

ಬದುಕೆಂದರೆ ಹೀಗೇನಾ
ವಿದಿಯೇ ನೀ ಬಲ್ಲೆಯಾ

ಆವ ಬಂದವಿಲ್ಲಿ ಚಿರಕಾಲ ಉಳಿವುದೋ
ಆವ ಪ್ರೀತಿಯಿಲ್ಲಿ ಅನುಗಾಲ ಅರಳುವುದೋ
ಆರ ಮನವು ಕಲ್ಲಾಗುವುದೋ
ಆರ ದ್ರುಶ್ಟಿ ಬೀಳುವುದೋ
ಅದಾವ ಮಾ‌ಯೆಯೋ ಏನೋ

ನಿತ್ಯ ಕಾಡಿವೆ ಹತ್ತು ಹಲವು ಪ್ರಶ್ನೆಗಳು
ದ್ವಂದ್ವ ಮೂಡಿಸಿವೆ ನಿರುತ್ತರಗಳು
ಬರೀ ಒಗಟಿನಿಂದ ತುಂಬಿವೆ ಎಲ್ಲಾ ಪುಟಗಳು
ಹೇಳಲೇನೋ ಹಾತೊರಿದೆವೆ ಬಾಳಿನ ಪರೀಕ್ಶೆಗಳು
ಆದರೂ ಎಲ್ಲಾ ನಿಗೂಡವಾಗಿವೆ

ಬದುಕೆಂದರೆ ಇಶ್ಟೇಯೇನು
ಶಾಶ್ವತವಾಗಿ ಅಳಿದಿದೆಯೇನು
ಮತ್ತೆ ಒಲವು ಮೂಡದೇನು
ವಿದಿಯೇ ನೀ ಬಂದು ತಿಳಿಸೆಯಾ
ಜೀವನ ಕೊನೆ ಮುಟ್ಟುವ ಮುನ್ನ
ಮನವರಿಕೆ ಮಾಡೆಯಾ

(ಚಿತ್ರ ಸೆಲೆ : instonebrewer.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications