ಗಣಪತಿ ಹಬ್ಬ

ಬೆನಕ ಬೆನಕ
ಏಕದಂತ
ಪಚ್ಚೆಕಲ್ಲು ಪಾಣಿಪೀಟ, ನುಚ್ಚಿನುಂಡೆ ಹೊನ್ನಗಂಟೆ
ಒಪ್ಪುವ ವಿಗ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು
ಚಿಕ್ಕವರಿದ್ದಾಗ ಗಣೇಶನ ಹಬ್ಬದಂದು ಈ ಶ್ಲೋಕವನ್ನು ಹೇಳುವಾಗ ಏನೋ ಒಂದು ಕುಶಿ ಹಾಗೂ ಸಂಬ್ರಮವಿರುತ್ತಿತ್ತು. ಆಗೆಲ್ಲಾ ಪುಟ್ಟ ಮಕ್ಕಳು 101 ಗಣಪನ ವಿಗ್ರಹಗಳನ್ನು ನೋಡಿ, ಅಕ್ಶತೆ ಹಾಕಿ ಬರುತ್ತಿದ್ದ ವಾಡಿಕೆಯಿತ್ತು. ತಮ್ಮ ಮನೆಗಿಂತ ನೆರೆಹೊರೆಯವರ ಮನೆ, ಬೀದಿಗಳಲ್ಲಿ ಕೂರಿಸುತ್ತಿದ್ದ ಗಣಪನೆಂದರೆ ಕುತೂಹಲದ ಜೊತೆ, ಬಕ್ತಿ ಬಾವಗಳು ಉಕ್ಕಿ ಬರುತ್ತಿತ್ತು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಎಲ್ಲಾ ರಸ್ತೆಗಳಲ್ಲೂ ಗಣಪನನ್ನು ಕೂರಿಸುವ ಕಾಲವೊಂದಿತ್ತು. ಗಣಪತಿಯನ್ನು ಬಿಡುವವರೆಗೂ, ಶಾಲೆಯಿಂದ ಬಂದ ಕೂಡಲೇ ಗಣಪನನ್ನು ಬೇಟಿ ಮಾಡುವುದೆಂದರೆ ಎಲ್ಲಿಲ್ಲದ ಸಡಗರ. ಇನ್ನು ಆತನನ್ನು ಬಿಡುವಾಗ ಜೈಕಾರ ಹಾಕೋದಕ್ಕೆ ಮಕ್ಕಳೆಲ್ಲ ಕಾತುರದಿಂದ ಕಾಯುತ್ತಿದ್ದೆವು. ಗಣೇಶನ ಆಕಾರದಿಂದಲೋ ಏನೋ ಪುಟ್ಟ ಮಕ್ಕಳಿಗೆ ಇನ್ನಿಲ್ಲದ ಪ್ರೀತಿ ಹಾಗೂ ಬಕ್ತಿ. ಈಗೆಲ್ಲ 101 ಗಣಪನಿಗೆ ಅಕ್ಶತೆ ಹಾಕುವ ಪದ್ದತಿ ಕಣ್ಮರೆಯಾಗಿರಬಹುದು, ಆದರೆ ಅದೇ ಬಕ್ತಿ ಪ್ರೀತಿ ಸಂಬ್ರಮವನ್ನು ಈಗಿನ ಮಕ್ಕಳಲ್ಲಿಯೂ ಕಾಣುತ್ತಿದ್ದೇವೆ. ಮಕ್ಕಳ ಅಚ್ಚು ಮೆಚ್ಚಿನ ದೇವತೆ ಈ ನಮ್ಮ ಗಣಪ.
ಯಾವುದೇ ದಾರ್ಮಿಕ ಆಚರಣೆಗೂ ಮುನ್ನ ಗಣಪನನ್ನು ಮೊದಲು ಆರಾದಿಸುವುದು ರೂಡಿ. ಪ್ರತಮ ಪೂಜಿತ ಗಣಪನ ಅನುಗ್ರಹವಿದ್ದರೆ ಕಾರ್ಯ ಸಿದ್ದಿಸುವುದು ಎಂಬ ನಂಬಿಕೆ ನಮ್ಮಲ್ಲಿ ದ್ರುಡವಾಗಿದೆ. ಗಣೇಶನೇ ಅಗ್ರಗಣ್ಯ ದೇವತೆ ಎನ್ನುವ ಬಾವ ನಮ್ಮದು. ಗಣೇಶನನ್ನು ಪಾರ್ವತಿಯ ಮೈ ಮಣ್ಣಿನಿಂದ ಸ್ರುಶ್ಟಿಯಾದ ಎಂಬ ಮಾತಿದೆ. ನಾವೆಲ್ಲಾ ಮಣ್ಣಿನ ಗಣೇಶ, ಪಿ. ಓ. ಪಿ (ಪ್ಲಾಸ್ಟರ್ ಆಪ್ ಪ್ಯಾರಿಸ್) ಗಣೇಶನ ಬಗ್ಗೆ ಕೇಳಿದ್ದೇವೆ, ಆದರೆ ಪಿಳ್ಳಾರಿ ಗಣಪನ ಪರಿಚಯ ಇದೆಯಾ? ನಮ್ಮ ಪೂರ್ವಿಕರು ಮೊದಲಿಗೆ ಹಸುವಿನ ಸಗಣಿಯ ಉಂಡೆಗೆ ಗರಿಕೆಯನ್ನು ಸಿಕ್ಕಿಸಿ, ಅದನ್ನು ಗಣಪನೆಂದು ಬಾವಿಸಿ ಆರಾದಿಸುತ್ತಿದ್ದರು, ಇದನ್ನೇ ನಾವು ಪಿಳ್ಳಾರಿ ಗಣಪನೆನ್ನುವುದು. ಹಳ್ಳಿ ಕಡೆ ಪಿಳ್ಳೆರಾಯ ಎಂದು ಕರೆಯುವುದು ವಾಡಿಕೆ.
ಎಶ್ಟೇ ದೊಡ್ಡ ಗಾತ್ರದ ಗಣೇಶನ ಮೂರ್ತಿ ತಂದರೂ, ಅದರ ಪಕ್ಕ ಸಗಣಿ ಮತ್ತು ಗರಿಕೆ ಹುಲ್ಲಿನ ಗಣಪನನ್ನ ಪೂಜೆ ಮಾಡಲಾಗುತ್ತದೆ. ಪ್ರಕ್ರುತಿ ಪ್ರಿಯ ಗಣೇಶನನ್ನ ಪ್ರಕ್ರುತಿ ಸ್ನೇಹಿ ಮಣ್ಣು ಮತ್ತು ಹಸುವಿನ ಸಗಣಿಯಿಂದ ಪೂಜಿಸಿದರೇನೆ ಶ್ರೇಶ್ಟ ಎನ್ನುವುದು ದಾರ್ಮಿಕ ಕ್ಶೇತ್ರದ ಹಿರಿಯರ ನಂಬಿಕೆ. ಸಂಕಶ್ಟಿ ವ್ರತವಾಗಲೀ, ಗಣೇಶನ ಹಬ್ಬದಲ್ಲಾಗಲೀ ಕಡೆ ಪಕ್ಶ 21 ಗರಿಕೆ ಇಟ್ಟಾದರೂ ಗಣೇಶನನ್ನು ಪೂಜಿಸಲಾಗುತ್ತದೆ.
ಗಣೇಶನಲ್ಲಿ ಬ್ರಹ್ಮಾಂಡವೇ ಅಡಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಲು ಆನೆಯ ರೂಪವನ್ನು ನೀಡಲಾಗಿದೆ. ವಾಸ್ತವದಲ್ಲಿ ಗಣೇಶನಿಗೆ ಆಕಾರವಿಲ್ಲ, ಗಣೇಶ ಶಬ್ದ ಸ್ವರೂಪಿ ಎಂಬುದು ಕೆಲವು ಚಿಂತಕರ ಅಬಿಪ್ರಾಯ. ಹಾಗೆ ನೋಡಿದರೆ ದೊಡ್ಡ ಗಾತ್ರದ ಮಣ್ಣಿನ ಗಣಪನನ್ನು ಪ್ರತಿಶ್ಟಾಪಿಸಿ ಪೂಜಿಸುವುದು ವ್ಯಾಪಕವಾಗಿ ನಮ್ಮ ದೇಶದಲ್ಲಿ ಪ್ರಾರಂಬವಾಗಿದ್ದು ಬ್ರಿಟೀಶರು ಬೇರೂರಿದ್ದಾಗ. ಆಗ ಬ್ರಿಟೀಶರ ಕಾಲವೊಂದಿತ್ತು. ಯಾವುದೇ ರಾಜಕೀಯ ಮೆರವಣಿಗೆಯಲ್ಲಿ ಬಾಗವಹಿಸಲು ಆಗಿನ ಮಂದಿ ಹಿಂದೇಟು ಹಾಕುತ್ತಿದ್ದರು. ಆದರೆ ದಾರ್ಮಿಕ ಕಾರ್ಯಗಳಲ್ಲಿ ಮಾತ್ರ ಜನಸಮೂಹ ಒಟ್ಟಾಗಿ ಇರುತ್ತಿತ್ತು. ಇದನ್ನು ಗಮನಿಸಿದ ಬಾಲಗಂಗಾದರ ತಿಲಕರು ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸಲು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ನಡೆಸಲು ಮುಂದಾದರು. ಹೋರಾಟಕ್ಕೆ ತಿಲಕರು ಗಣೇಶೋತ್ಸವವನ್ನು ಸಮರ್ತವಾಗಿ ಬಳಸಿಕೊಳ್ಳಲು ಆರಂಬಿಸಿದ ಮೇಲೆ, ಎಲ್ಲಾ ಪ್ರದೇಶದಲ್ಲೂ ಗಣಪನನ್ನು ಕೂರಿಸುವ ಪದ್ದತಿ ಮೊದಲಾಯಿತು.
ಕಾಲ ಕ್ರಮೇಣ ಜನರು ಮಣ್ಣಿನಲ್ಲಿ ಬಗೆಬಗೆಯ ಗಣಪತಿಗಳನ್ನು ಮಾಡಲು ಆರಂಬಿಸಿದರು. ಕ್ರಿಕೆಟ್ ಆಡುತ್ತಿರುವ ಬಂಗಿ, ಆದುನಿಕ ಶೈಲಿಯ ಗಣೇಶ, ಹೀಗೆ ತಮ್ಮ ತಮ್ಮ ಬಾವನೆಗಳಿಗೆ ತಕ್ಕಂತೆ ಗಣೇಶನನ್ನು ತಯಾರಿಸಲು ಆರಂಬಿಸಿದರು. ಗಣೇಶನ ವಿಗ್ರಹಗಳ ತಯಾರಿಕೆ ವಿಕಾಸಗೊಂಡಿದ್ದು ಸಾರ್ವಜನಿಕವಾಗಿ ಗಣೇಶೋತ್ಸವಗಳು ಪ್ರಾರಂಬವಾದ ಮೇಲೆಯೇ ಎಂದು ಹೇಳಬಹುದು. ಆಕಾರವೇ ಇಲ್ಲದ ಪಿಳ್ಳಾರಿ ಗಣಪತಿಯಿಂದ ಹಿಡಿದು, ಬ್ರುಹದಾಕಾರವಾದ ಇತ್ತೀಚಿನ ಬಹು ದೊಡ್ಡ ಮಾದರಿಯ ಗಣಪತಿವರೆಗೂ ಗಣೇಶನ ವಿಗ್ರಹಗಳು ವಿಕಾಸಗೊಂಡಿವೆ. ವಿಕಾಸಗೊಂಡಶ್ಟೂ ಗಣೇಶ ಹಬ್ಬದ ಚತುರ್ತಿಯ ಮೆರುಗು, ಸಂಬ್ರಮ ಹೆಚ್ಚುತ್ತಿದೆ. ಹಾಗೆಯೇ ಪರಿಸರ ಕಾಳಜಿಯೂ ಜಾಗ್ರುತಗೊಂಡಿದ್ದು, ಎಂದಿಗಿಂತ ಇತ್ತೀಚೆಗೆ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯೂ ಬಂದಿದೆ. ಈ ವರ್ಶವೂ ಪ್ರತೀ ವರ್ಶದಂತೆ ಬಾದ್ರಪದ ಮಾಸದ ಚೌತಿಯ ದಿನ ಗಣೇಶ ಹಬ್ಬದ ಆಚರಣೆ ಶುರುವಾಗಿದ್ದು, ಎಲ್ಲರ ಬೇಡಿಕೆಗಳು ಈಡೇರುವಂತೆ ನಮ್ಮೆಲ್ಲರ ಆರಾದ್ಯ ದೈವ ಗಣಪನಲ್ಲಿ ಪ್ರಾರ್ತಿಸೋಣ.
(ಚಿತ್ರಸೆಲೆ: pixabay.com )

ಇತ್ತೀಚಿನ ಅನಿಸಿಕೆಗಳು