ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 3 ನೆಯ ಕಂತು – ವಿಶ್ವಾಮಿತ್ರನ ಒಳಸಂಚು
– ಸಿ.ಪಿ.ನಾಗರಾಜ.
*** ವಿಶ್ವಾಮಿತ್ರನ ಒಳಸಂಚು ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಮೃಗಯಾ ಪ್ರಸಂಗ’ ಮೂರನೆಯ ಅಧ್ಯಾಯದ 7 ರಿಂದ 11 ರ ವರೆಗಿನ ಅಯ್ದು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು
ವಿಶ್ವಾಮಿತ್ರ: ಒಬ್ಬ ಮುನಿ.
ಹರಿಶ್ಚಂದ್ರನ ಪ್ರಜೆಗಳು.
*** ವಿಶ್ವಾಮಿತ್ರನ ಒಳಸಂಚು ***
ಕೊಂಡ ಹೊಸ ಹೊನ್ನ ರಾಸಿಯನ್ ಅವನಿಪಾಲಕನ ಭಂಡಾರದೊಳಗೆ ಇರಿಸಿ, ತನ್ನಾಶ್ರಮಕೆ ಮರಳಿ…
ವಿಶ್ವಾಮಿತ್ರ: (ತನ್ನಲ್ಲಿಯೇ ಆಲೋಚಿಸತೊಡಗುತ್ತಾನೆ.)
ಚಂಡಕರನ ಅರುಣ ಕಿರಣಮ್ ಹೊಗುವ ಠಾವೆಲ್ಲಮಮ್ ಅವನ ಸತ್ಯ ತೀವಿತು. ಭೂಪತಿಯಲಿ ಅನೃತವನ್ ಇಲ್ಲಿ ಕಂಡೆನಾದಡೆ ದೇವೇಂದ್ರನಿದಿರಲಿ ಪಂಡಿತರ ಮುಂದೆ ಮುನಿಯ ಭಂಡನನ್ ಮಾಳ್ಪೆ…ಕಾಣ್ಬ ತೆರನ್ ಆವುದು?
(ಎಂದು ವಿಶ್ವಾಮಿತ್ರನು ಚಿಂತಿಸಿದ. ವಸಿಷ್ಠ ಮುನಿಯ ಬಗ್ಗೆ ಮುಳಿದಿರುವ ವಿಶ್ವಾಮಿತ್ರನುಹರಿಶ್ಚಂದ್ರನು ಸುಳ್ಳನ್ನಾಡುವಂತೆ ಮಾಡಲು ಒಂದು ಸಂಚನ್ನು ಹೂಡುತ್ತಾನೆ.)
ವಿಶ್ವಾಮಿತ್ರ: (ತನ್ನಲ್ಲಿಯೇ ಹೇಳಿಕೊಳ್ಳತೊಡಗುತ್ತಾನೆ.)
ಮೃಗಸಂಕುಳಂಗಳನು ಹುಟ್ಟಿಸಿ…ನಾಡ ಬೆಳೆಗಳಮ್ ಕೆಡಿಸಿ…ಕೇಡಿಂಗೆ ಬೆಂಡಾಗಿ ಜನವು ಅಳವಳಿದು ಬಾಯ್ವಿಟ್ಟು ದೂರಿದಡೆ…ಕೇಳ್ದು, ಸೈರಿಸಲಾರದೆ…ಆ ಹುಯ್ಯಲ ಬಳಿವಿಡಿದು ಬೇಂಟೆಗೆ ಎಯ್ತಂದ
ಭೂಪಾಲಕನನ್ ಎಳತಟಮ್ ಮಾಡಿ ತೆಗೆದು ಎನ್ನ ಆಶ್ರಮಕ್ಕೆ ಒಯ್ದು, ಬಳಿಕ ಅವನ ಸತ್ಯಗಿತ್ಯದ ಬಲುಹನ್ ನೋಡುವೆನ್.(ಎಂದ ವಿಶ್ವಾಮಿತ್ರನು, ಒಳಸಂಚನ್ನು ರೂಪಿಸುತ್ತಾನೆ.)
ವಿಶ್ವಾಮಿತ್ರ: ಅನುವುಳ್ಳ ಬುದ್ಧಿಯಮ್ ಕಂಡೆನ್.
(ಎಂದು ಅತಿ ಮೆಚ್ಚಿ ತನಗೆ ತಾ ತೂಪಿರಿದುಕೊಂಡು ಕಣ್ಮುಚ್ಚುತಮ್…ಮನದೊಳ್ ಉತ್ಪತ್ತಿಮಂತ್ರವ ಮಂತ್ರಿಸಿದ ಜಲವನ್ ಒಸೆದು… ದೆಸೆದೆಸೆಗೆ ತಳಿದು… ವಿನಯದಿಮ್ ನೋಡನೋಡಲು…
ದಿಕ್ಕು ಧರಣಿ ತೆಕ್ಕನೆ ತೀವಿ ನಿಂದ ನಾನಾ ಪಕ್ಷಿಮೃಗ ಕುಲಕೆ ಕೊನೆವೆರಳನ್ ಅಲುಗಿ ತಲೆದೂಗಿ ದೇಶಮಮ್ ಗೋಳಿಡಿಸಲು ಕೈವೀಸಿದನ್… ಮೊಳೆವ ಬೀಜವನು ಕ್ರಿಮಿಕೀಟಕಂಗಳು;
ಸಸಿಯಮ್ ಎಳಹುಲ್ಲೆಗಳು; ಹೊಡೆಯನ್ ಎರಳೆಗಳು; ಸವಿದಂಟುಗಳನ್ ಆವುಗಳು;
ತೆನೆಗಳಮ್ ಗಿಳಿ ನವಿಲು ಕೊಂಚೆ ಮೊದಲಾದ ಖಗತತಿಗಳು; ಉಳಿದ ಬೆಳೆಯಮ್ ನಕುಲ ಹೆಗ್ಗಣಂಗಳು;
ಕಾವ ಬಳವಂತರೆಲ್ಲರಮ್ ಸರ್ಪಸಂತತಿ ತಿಂದು ತಳಪಟಮ್ ಮಾಡಿ ನಾಡೆಲ್ಲಮಮ್ ಗೋಳಿಡಿಸುತಿರ್ದುವು. ಏನ್ ಬಣ್ಣಿಸುವೆನು.
ಬೆಳೆಯ ದೆಸೆಯಿಂತಾಯ್ತು; ಉಳಿದ ತೋಟದ ಗೆಡ್ಡೆ ಗೆಳಸು ಹಂದಿಗೆ ಹವಣು; ಹಣ್ಣು ಕಾಯ್ ಕಬ್ಬುಗಳನ್ ಅಳಿಲು ನಿಲಲೀಯವು;
ಉದಕದೊಳ್ ಆವೆ ಮೀನ್ ಮೊಸಳೆಗಳ ಭಯಮ್ ಘನವಾದುದು;
ಎಳಗರುಗಳಮ್ ತೋಳನ್; ಆಕಳಮ್ ಹುಲಿ; ಮೀರಿ ಸುಳಿವವರಮ್ ಅಮ್ಮಾವು ಕರಡಿ ಕಾಳ್ಕೋಣಂಗಳ್ ಉಳಿಯಲೀಯದಿರೆ;
ನಾಡೆಯ್ದೆ ಬಾಯ್ವಿಟ್ಟು ದೂಱಲು ಅವನಿಪತಿಗೆ ಹರಿದರು).
ತಿರುಳು: ವಿಶ್ವಾಮಿತ್ರನ ಒಳಸಂಚು
ಕೊಂಡ ಹೊಸ ಹೊನ್ನ ರಾಸಿಯನ್ ಅವನಿಪಾಲಕನ ಭಂಡಾರದೊಳಗೆ ಇರಿಸಿ ತನ್ನಾಶ್ರಮಕೆ ಮರಳಿ=ಬಹುಸುವರ್‍ಣಯಾಗದಲ್ಲಿ ದಾನವಾಗಿ ಪಡೆದ ಹೊಸ ಹೊನ್ನ ರಾಸಿಯನ್ನು ರಾಜನ ಕಜಾನೆಯಲ್ಲಿಯೇ ಇರಿಸಿ, ವಿಶ್ವಾಮಿತ್ರನು ತನ್ನ ಆಶ್ರಮಕ್ಕೆ ಹಿಂತಿರುಗಿ ಬಂದು;
ಚಂಡಕರನ ಅರುಣ ಕಿರಣಮ್ ಹೊಗುವ ಠಾವೆಲ್ಲಮಮ್ ಅವನ ಸತ್ಯ ತೀವಿತು=ಸೂರ್‍ಯನ ಕೆಂಪನೆಯ ಕಿರಣಗಳು ಪ್ರವೇಶಿಸುವ ಎಲ್ಲೆಡೆಯಲ್ಲಿಯೂ ಹರಿಶ್ಚಂದ್ರನ ಸತ್ಯದ ನಡೆನುಡಿಯು ಆವರಿಸಿಕೊಂಡಿದೆ. ಅಂದರೆ ಇಡೀ ರಾಜ್ಯದಲ್ಲಿ ರಾಜ ಹರಿಶ್ಚಂದ್ರನು ಸತ್ಯವಂತನೆಂಬ ಹೆಸರನ್ನು ಪಡೆದಿದ್ದಾನೆ;
ಭೂಪತಿಯಲಿ ಅನೃತವನು ಇಲ್ಲಿ ಕಂಡೆನಾದಡೆ=ಆಡಳಿತವನ್ನು ನಡೆಸುತ್ತಿರುವ ರಾಜನಲ್ಲಿ ಸುಳ್ಳನ್ನು ನಾನು ಕಂಡೆನಾದರೆ;
ದೇವೇಂದ್ರನಿದಿರಲಿ ಪಂಡಿತರ ಮುಂದೆ ಮುನಿಯ ಭಂಡನನ್ ಮಾಳ್ಪೆ= ದೇವೇಂದ್ರನ ಎದುರಿನಲ್ಲಿ ಮತ್ತು ಪಂಡಿತರ ಮುಂದೆ ವಸಿಷ್ಟ ಮುನಿಯನ್ನು ಲಜ್ಜೆಗೇಡಿಯನ್ನಾಗಿ ಮಾಡುತ್ತೇನೆ;
ಕಾಣ್ಬ ತೆರನ್ ಆವುದು ಎಂದು ವಿಶ್ವಾಮಿತ್ರನು ಚಿಂತಿಸಿದ=“ಹರಿಶ್ಚಂದ್ರನ ನಡೆನುಡಿಯಲ್ಲಿ ಸುಳ್ಳನ್ನು ಕಾಣುವ ಬಗೆ ಯಾವುದು” ಎಂದು ವಿಶ್ವಾಮಿತ್ರನು ಚಿಂತಿಸತೊಡಗಿದ;
ಮೃಗಸಂಕುಳಂಗಳನು ಹುಟ್ಟಿಸಿ=ಪ್ರಾಣಿ ಪಕ್ಶಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗುಂಪುಗುಂಪಾಗಿ ಹುಟ್ಟಿಸಿ;
ನಾಡ ಬೆಳೆಗಳಮ್ ಕೆಡಿಸಿ=ನಾಡಿನಲ್ಲಿ ಜನರು ಒಡ್ಡಿರುವ ಬೆಳೆಗಳನ್ನು ಪ್ರಾಣಿ ಪಕ್ಶಿಗಳಿಂದ ಹಾಳುಮಾಡಿಸಿ;
ಕೇಡಿಂಗೆ ಬೆಂಡಾಗಿ ಜನವು ಅಳವಳಿದು ಬಾಯ್ವಿಟ್ಟು ದೂರಿದಡೆ=ಬೆಳೆಗಳ ನಾಶದ ಕೇಡಿನಿಂದ ತತ್ತರಿಸುವ ಜನರು ಬಲಹೀನರಾಗಿ ಗೋಳಾಡುತ್ತ ರಾಜನ ಬಳಿಬಂದು ತಮ್ಮನ್ನು ಕಾಪಾಡುವಂತೆ ಮೊರೆಯಿಟ್ಟರೆ;
ಕೇಳ್ದು, ಸೈರಿಸಲಾರದೆ= ಜನರಿಗೆ ಬಂದ ಸಂಕಟವನ್ನು ಕೇಳಿ, ರಾಜನಾದ ಹರಿಶ್ಚಂದ್ರನು ಸುಮ್ಮನಿರಲಾಗದೆ;
ಆ ಹುಯ್ಯಲ ಬಳಿವಿಡಿದು ಬೇಂಟೆಗೆ ಎಯ್ತಂದ ಭೂಪಾಲಕನನ್=ಸಂಕಟದಿಂದ ಪರಿತಪಿಸುತ್ತಿರುವ ಜನರ ಮೊರೆಯನ್ನು ಕೇಳಿ, ಜನತೆಯ ಗೋಳಿಗೆ ಕಾರಣವಾಗುವ ಪ್ರಾಣಿಪಕ್ಶಿಗಳನ್ನು ಬೇಟೆಯಾಡಿ ಕೊಲ್ಲಲೆಂದು ಕಾಡಿನತ್ತ ಬರುವ ರಾಜನನ್ನು;
ಎಳತಟಮ್ ಮಾಡಿ ತೆಗೆದು=ಒಂದಲ್ಲ ಒಂದು ಬಗೆಯ ತೊಂದರೆಯನ್ನು ನೀಡಿ ಎಳೆದಾಡಿ;
ಎನ್ನ ಆಶ್ರಮಕ್ಕೆ ಒಯ್ದು=ನನ್ನ ಆಶ್ರಮದೊಳಕ್ಕೆ ಬರುವಂತೆ ಮಾಡಿ;
ಬಳಿಕ ಅವನ ಸತ್ಯಗಿತ್ಯದ ಬಲುಹನ್ ನೋಡುವೆನ್ ಎಂದ ವಿಶ್ವಾಮಿತ್ರನು=ಅನಂತರ ಅವನ ಸತ್ಯದ ನಡೆನುಡಿಯ ಬಲವನ್ನು ಒರೆಹಚ್ಚಿ ನೋಡುತ್ತೇನೆ ಎಂದು ತನ್ನಲ್ಲಿಯೇ ಹೇಳಿಕೊಂಡ ವಿಶ್ವಾಮಿತ್ರನು;
ಅನುವುಳ್ಳ ಬುದ್ಧಿಯಮ್ ಕಂಡೆನ್ ಎಂದು ಅತಿ ಮೆಚ್ಚಿ ತನಗೆ ತಾ ತೂಪಿರಿದುಕೊಂಡು=ಅಂದುಕೊಂಡಿರುವ ಕೆಲಸವನ್ನು ಮಾಡಲು ಒಳ್ಳೆಯ ದಾರಿಯನ್ನು ಕಂಡುಕೊಂಡೆನು ಎಂದು ಅತಿ ಮೆಚ್ಚುಗೆಯಿಂದ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಅಂದರೆ ಹೆಮ್ಮೆಪಟ್ಟುಕೊಂಡು;
ಕಣ್ಮುಚ್ಚುತಮ್… ಮನದೊಳ್ ಉತ್ಪತ್ತಿಮಂತ್ರವ ಮಂತ್ರಿಸಿದ ಜಲವನ್ ಒಸೆದು… ದೆಸೆದೆಸೆಗೆ ತಳಿದು… ವಿನಯದಿಮ್ ನೋಡನೋಡಲು=ಕಣ್ಣುಗಳನ್ನು ಮುಚ್ಚಿಕೊಂಡು… ಮನದಲ್ಲಿ ಪ್ರಾಣಿಪಕ್ಶಿಗಳನ್ನು ಹುಟ್ಟಿಸುವ ಮಂತ್ರವನ್ನು ಜಪಿಸುತ್ತ, ನೀರಿಗೆ ಮಂತ್ರದ ಬಲವನ್ನು ತುಂಬಿ… ದಿಕ್ಕುದಿಕ್ಕಿಗೆ ಮಂತ್ರಿಸಿದ ನೀರನ್ನು ಚಿಮುಕಿಸಿ… ಪ್ರಾಣಿಪಕ್ಶಿಗಳು ರೂಪುಗೊಳ್ಳುತ್ತಿರುವುದನ್ನು ಗಮನವಿಟ್ಟು ನೋಡುತ್ತಿರಲು;
ತೆಕ್ಕನೆ ದಿಕ್ಕು ಧರಣಿ ತೀವಿ ನಿಂದ ನಾನಾ ಪಕ್ಷಿಮೃಗ ಕುಲಕೆ=ಮಂತ್ರಬಲದಿಂದ ಮರುಗಳಿಗೆಯಲ್ಲಿಯೇ ಬೂಮಂಡಲದ ಎಲ್ಲ ದಿಕ್ಕುಗಳಲ್ಲಿಯೂ ಕಿಕ್ಕಿರಿದು ನೆರೆದಿರುವ ನಾನಾ ಬಗೆಯ ಪ್ರಾಣಿಪಕ್ಶಿಗಳ ಗುಂಪಿಗೆ;
ಕೊನೆವೆರಳನ್ ಅಲುಗಿ ತಲೆದೂಗಿ=ತನ್ನ ಕಿರುಬೆರಳನ್ನು ವಿಜಯದ ಸಂಕೇತವಾಗಿ ಅತ್ತಿತ್ತ ಆಡಿಸುತ್ತ, ತನ್ನ ಜಾಣತನದ ತಂತ್ರಕ್ಕೆ ತಾನೇ ಮೆಚ್ಚುಗೆಯಿಂದ ತಲೆತೂಗುತ್ತ;
ದೇಶಮಮ್ ಗೋಳಿಡಿಸಲು ಕೈವೀಸಿದನ್= “ ಹರಿಶ್ಚಂದ್ರನ ರಾಜ್ಯದಲ್ಲಿರುವ ಜನರನ್ನು ಬಹುಬಗೆಯ ಸಂಕಟಕ್ಕೆ ಗುರಿಮಾಡಿ ಗೋಳಿಡುವಂತೆ ಮಾಡಿರಿ ” ಎಂದು ಪ್ರಾಣಿಪಕ್ಶಿಗಳ ಗುಂಪಿಗೆ ಆದೇಶವನ್ನು ನೀಡುವಂತೆ ಕಯ್ಗಳನ್ನು ಬೀಸಿದನು;
ಮೊಳೆವ ಬೀಜವನು ಕ್ರಿಮಿಕೀಟಕಂಗಳು=ಹೊಲಗದ್ದೆಗಳಲ್ಲಿ ಮೊಳೆಯುತ್ತಿರುವ ಬೀಜವನ್ನು ಹುಳುಗಳು;
ಸಸಿಯನ್ ಎಳಹುಲ್ಲೆಗಳು=ಕುಡಿಯೊಡೆದು ಬೆಳೆಯುತ್ತಿರುವ ಸಸಿಗಳನ್ನು ಮರಿಜಿಂಕೆಗಳು;
ಹೊಡೆಯನ್ ಎರಳೆಗಳು=ತೆನೆಕಚ್ಚಿರುವ ದೊಡ್ಡ ಪಯಿರುಗಳನ್ನು ಜಿಂಕೆಗಳು;
ಸವಿದಂಟುಗಳನ್ ಆವುಗಳು=ರುಚಿಕರವಾದ ಸೊಪ್ಪಿನಿಂದ ಕೂಡಿದ ಕಾಂಡಗಳನ್ನು ಹಸುಗಳು;
ತೆನೆಗಳಮ್ ಗಿಳಿ ನವಿಲು ಕೊಂಚೆ ಮೊದಲಾದ ಖಗ ತತಿಗಳು=ಕಾಳುಗಳಿಂದ ತುಂಬಿರುವ ತೆನೆಗಳನ್ನು ಗಿಳಿ ನವಿಲು ಕೊಂಚೆ ಮೊದಲಾದ ಹಕ್ಕಿಗಳ ಗುಂಪುಗಳು;
ಉಳಿದ ಬೆಳೆಯಮ್ ನಕುಲ ಹೆಗ್ಗಣಂಗಳು=ಇಶ್ಟೆಲ್ಲ ಪ್ರಾಣಿಪಕ್ಶಿಗಳು ತಿಂದು, ಉಳಿದ ಬೆಳೆಯನ್ನು ಮುಂಗುಸಿ ಮತ್ತು ಹೆಗ್ಗಣಗಳು;
ಕಾವ ಬಳವಂತರೆಲ್ಲರಮ್ ಸರ್ಪಸಂತತಿ ತಿಂದು ತಳಪಟಮ್ ಮಾಡಿ=ಹೊಲಗದ್ದೆತೋಟಗಳಲ್ಲಿ ಒಡ್ಡಿದ ಬೆಳೆಯನ್ನು ಕಾಪಾಡಿಕೊಳ್ಳಲೆಂದು ಹಗಲಿರುಳು ಕಾಯುತ್ತಿದ್ದ ಬೇಸಾಯಗಾರರನ್ನು ಹಾವುಗಳು ಕಚ್ಚಿ ಕೊಂದು, ಬೆಳೆದಿದ್ದ ಬೆಳೆಯೆಲ್ಲವನ್ನು ಸಂಪೂರ್‍ಣವಾಗಿ ಹಾಳುಮಾಡಿ;
ನಾಡೆಲ್ಲಮನ್ ಗೋಳಿಡಿಸುತಿರ್ದುವು ಏನ್ ಬಣ್ಣಿಸುವೆನು=ನಾಡೆಲ್ಲವನ್ನೂ ದುರಂತಕ್ಕೆ ದೂಡಿ, ಪ್ರಜೆಗಳೆಲ್ಲರನ್ನು ಗೋಳಾಡುವಂತೆ ಮಾಡುತ್ತಿದ್ದವು. ವಿಶ್ವಾಮಿತ್ರನು ಕೆಟ್ಟ ಉದ್ದೇಶದಿಂದ ಮಾಡುತ್ತಿರುವ ಈ ದುರಂತವನ್ನು ಏನೆಂದು ಬಣ್ಣಿಸಲಿ;
ಬೆಳೆಯ ದೆಸೆಯಿಂತಾಯ್ತು=ಬೇಸಾಯಗಾರರು ಒಡ್ಡಿದ ಬೆಳೆಯೆಲ್ಲವೂ ಈ ರೀತಿ ನೆಲಕಚ್ಚಿದವು;
ಉಳಿದ ತೋಟದ ಗೆಡ್ಡೆ ಗೆಳಸು ಹಂದಿಗೆ ಹವಣು=ತೋಟದಲ್ಲಿ ಬೆಳೆದಿದ್ದ ಬೂಮಿಯೊಳಗಿನ ಗೆಡ್ಡೆಗೆಣಸುಗಳೆಲ್ಲವೂ ಹಂದಿಗಳ ಪಾಲಾದವು;
ಹಣ್ಣು ಕಾಯ್ ಕಬ್ಬುಗಳನ್ ಅಳಿಲು ನಿಲಲೀಯವು=ಹಣ್ಣು ಕಾಯಿ ಕಬ್ಬಿನ ಪಯಿರುಗಳನ್ನು ಬೆಳೆಯಲು ಬಿಡದೆ ಅಳಿಲುಗಳು ತಿಂದುಹಾಕಿದವು;
ಉದಕದೊಳ್ ಆವೆ ಮೀನ್ ಮೊಸಳೆಗಳ ಭಯಮ್ ಘನವಾದುದು=ನೀರಿನ ತಾಣಗಳಾದ ನದಿಗಳಲ್ಲಿ ಆಮೆ ಮೀನು ಮೊಸಳೆಗಳ ಕಾಟ ಹೆಚ್ಚಾಯಿತು;
ಎಳಗರುಗಳಮ್ ತೋಳನ್=ಕೊಟ್ಟಿಗೆಗಳಲ್ಲಿದ್ದ ಎಳೆಯ ಕರುಗಳನ್ನು ತೋಳಗಳು;
ಆಕಳಮ್ ಹುಲಿ=ಹಸುಗಳನ್ನು ಹುಲಿಗಳು;
ಮೀರಿ ಸುಳಿವವರಮ್=ಪ್ರಾಣಿಪಕ್ಶಿಗಳ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ತಿರುಗುವವರನ್ನು;
ಅಮ್ಮಾವು ಕರಡಿ ಕಾಳ್ಕೋಣಂಗಳ್ ಉಳಿಯಲೀಯದಿರೆ=ಕಾಡು ದನ, ಕರಡಿ, ಕಾಡಿನ ಕೋಣಗಳು ಜೀವಂತವಾಗಿ ಉಳಿಯಲು ಬಿಡದೆ ಹಿಂಸಿಸುತ್ತಿರಲು;
ನಾಡೆಯ್ದೆ ಬಾಯ್ವಿಟ್ಟು ದೂರಲು ಅವನಿಪತಿಗೆ ಹರಿದರು=ನಾಡಿನ ಪ್ರಜೆಗಳೆಲ್ಲರೂ ಗೋಳಾಡುತ್ತ, ಕಾಡು ಪ್ರಾಣಿಪಕ್ಶಿಗಳ ಕಾಟದಿಂದ ತಮ್ಮನ್ನು ಕಾಪಾಡುವಂತೆ ಮೊರೆಯಿಡಲು ಹರಿಶ್ಚಂದ್ರ ಬಳಿಗೆ ಬಂದರು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು