ಬಾಂಗುಡೆ ಮೀನು ಸಾರು
ಏನೇನು ಬೇಕು
- ಬಾಂಗುಡೆ ಮೀನು – 3
- ತೆಂಗಿನಕಾಯಿ ತುರಿ – 1 ಕಪ್
- ಬ್ಯಾಡಗಿ ಒಣ ಮೆಣಸಿನಕಾಯಿ – 10
- ಬೆಳ್ಳುಳ್ಳಿ ಎಸಳು – 8
- ಜಜ್ಜಿದ ಬೆಳ್ಳುಳ್ಳಿ ಎಸಳು – 4
- ಕೊತ್ತಂಬರಿ ಬೀಜ (ದನ್ಯಾ) – ½ ಚಮಚ
- ಕಾಳು ಮೆಣಸು – 7
- ಓಂ ಕಾಳು – ¼ ಚಮಚ
- ಅರಿಶಿಣದ ಪುಡಿ -½ ಚಮಚ
- ಹುಣಸೆಹಣ್ಣು – ರುಚಿಗೆ ಬೇಕಾದಶ್ಟು
- ಅಡುಗೆ ಎಣ್ಣೆ – 3 ಚಮಚ
- ಈರುಳ್ಳಿ – 1
- ಹಸಿಮೆಣಸಿನಕಾಯಿ – 4
ಮಾಡುವ ಬಗೆ
ಬಾಂಗುಡೆ ಮೀನನ್ನು ಚೆನ್ನಾಗಿ ತೊಳೆದು, ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ. ಒಂದು ಜಾರ್ ಗೆ ತೆಂಗಿನ ತುರಿ, ಬ್ಯಾಡಗಿ ಒಣ ಮೆಣಸಿನಕಾಯಿ, 4 ಬೆಳ್ಳುಳ್ಳಿ ಎಸಳು, ಕೊತ್ತಂಬರಿ ಬೀಜ, ಓಂ ಕಾಳು, ಅರಿಶಿಣದ ಪುಡಿ, ಹುಣಸೆಹಣ್ಣು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಪಾತ್ರೆಗೆ 3 ಚಮಚ ಅಡುಗೆ ಎಣ್ಣೆ ಹಾಕಿ, ಇದಕ್ಕೆ ಜಜ್ಜಿದ 4 ಬೆಳ್ಳುಳ್ಳಿ ಎಸಳು ಹಾಕಿ ಕೆಂಪಗಾಗುವವರೆಗೂ ಹುರಿಯಿರಿ ನಂತರ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಹುರಿಯಿರಿ. ಇದಕ್ಕೆ ರುಬ್ಬಿಟ್ಟುಕೊಂಡಿದ್ದ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ. ಈಗ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕುದಿಯಲು ಬಿಡಿ. ಇದಕ್ಕೆ ಕತ್ತರಿಸಿಟ್ಟುಕೊಂಡಿದ್ದ ಬಾಂಗುಡೆ ತುಂಡುಗಳನ್ನು ಹಾಕಿ. ಮದ್ಯಮ ಉರಿಯಲ್ಲಿ ಬೇಯಿಸಿ. ಈಗ ಬಾಂಗುಡೆ ಮೀನು ಪ್ರೈ ರೆಡಿ.
(ಸಾಂದರ್‍ಬಿಕ ಚಿತ್ರಸೆಲೆ: instagram.com )
ಇತ್ತೀಚಿನ ಅನಿಸಿಕೆಗಳು