2015 ರ ಮ್ಯಾಗ್ಸೆಸ್ಸೆ ಪ್ರಶಸ್ತಿ ಗೆದ್ದವರು

ನಾಗರಾಜ್ ಬದ್ರಾ.

Magsaysayಬವ್ಯ ಬಾರತ, ಶ್ರೀಮಂತ ಬಾರತ, ಆದುನಿಕ ಬಾರತ, ಡಿಜಿಟಲ್ ಇಂಡಿಯಾ ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು, ಇಲ್ಲಿನ ಬಡವರ ಪರಿಸ್ತಿತಿಯ ಬಗ್ಗೆ ಒಂದು ಸಾರಿ ಆಲೋಚಿಸಿದರೆ ನಿಜವಾದ ಬಾರತದ ದರ‍್ಶನವಾಗುತ್ತದೆ. ದೇಶದಲ್ಲಿ ಪ್ರತಿವರ‍್ಶವು ಲಕ್ಶಾಂತರ ಬಡವರು ತೊಡಲು ಸರಿಯಾಗಿ ಬಟ್ಟೆ ಇಲ್ಲದೆ ಕೊರೆಯುವ ಚಳಿಯಿಂದ ಸಾಯುತ್ತಾರೆ. ಬಡವರು ರೈಲು, ಬಸ್ ನಿಲ್ದಾಣಗಳಲ್ಲಿ, ಬೀದಿಗಳಲ್ಲಿ ಕೊರೆಯುವ ಚಳಿಯಲ್ಲಿ ತೊಡಲು ಸರಿಯಾಗಿ ಬಟ್ಟೆಗಳಿಲ್ಲದೆ ನಡುಗುತ್ತಾ ಮಲಗಿರುವುದನ್ನು ನೀವು ನೋಡಿರುತ್ತಿರಿ.

ಬಡವರಿಗೆ ಬೇಕಾಗಿರುವುದು ಒಂದು ಹೊತ್ತು ಊಟ, ಇರಲು ಒಂದು ಸೂರು, ಹಾಕಲು ಬಟ್ಟೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಶ್ಟು ವರ‍್ಶಗಳಾದರು ನಮ್ಮ ಸರಕಾರಗಳು ಅವುಗಳನ್ನು ಒದಗಿಸುವಲ್ಲಿ ವಿಪಲವಾಗಿರುವುದು ದುರಂತವೆ ಸರಿ. ಸುಮಾರು 70ರ ದಶಕದಲ್ಲಿ ಬಾಲಿವುಡ್ ನಲ್ಲಿ “ರೋಟಿ, ಕಪಡಾ ಅವರ್ ಮಕಾನ್“ ಎಂಬ ಹೆಸರಿನ ಚಲನಚಿತ್ರವೊಂದು ಬಂದಿತ್ತು. ಆ ಚಲನಚಿತ್ರವು ದೇಶದಲ್ಲಿ ಬಡವರು ಅನುಬವಿಸುತ್ತಿರುವ ನರಕಯಾತನೆಯನ್ನು ಬಿಂಬಿಸುತ್ತಿತ್ತು. ದೇಶದ ಸರಕಾರಗಳು ಬಡವರಿಗೆ ಒಂದು ಮನೆ, ಒಂದು ಹೊತ್ತು ಊಟ, ಬಟ್ಟೆ ಒದಗಿಸುವಲ್ಲಿ ವಿಪಲವಾಗಿವೆ ಎಂಬ ಕತಾಸಾರಾಂಶವನ್ನು ಹೊಂದಿತ್ತು. ಕೆಲವರು ಅದನ್ನು ನೋಡಿ ಸ್ವಲ್ಪ ದಿನಗಳಾದ ಮೇಲೆ ಮರೆತು ಬಿಟ್ಟರು. ಬಡ ಜನರು ಬದುಕಲು ಒಂದು ಜೊತೆ ಬಟ್ಟೆಗಳ ಅವಶ್ಯಕತೆಯಿದೆ ಎಂದು ಯಾವ ಸರಕಾರದ ಕಣ್ಣಿಗೆ ಕಾಣಿಸಲಿಲ್ಲ.

ಕೆಲವು ವರ‍್ಶಗಳ ಹಿಂದೆ ಬಿಡುಗಡೆಗೊಂಡಿದ್ದ ಆಸ್ಕರ ಪ್ರಶಸ್ತಿ ವಿಜೇತ ಚಲನಚಿತ್ರ “ಸ್ಲಂ ಡಾಗ್ ಮಿಲೇನಿಯರ‍್”, ನಮ್ಮ ದೇಶದಲ್ಲಿ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡಜನರ ದಾರುಣ ಬದುಕನ್ನು ತೋರಿಸಿ, ಬಾರತದ ಮಾನವನ್ನು ಇಡೀ ವಿಶ್ವದ ಮುಂದೆ ಹರಾಜು ಹಾಕಿತ್ತು. ಇಂದಿನ ಆದುನಿಕ ಯುಗದಲ್ಲಿ ಹೆಚ್ಚು ಮೊತ್ತದ, ಪ್ರತಿಶ್ಟಿತ ಕಂಪನಿಯ ಬಟ್ಟೆಗಳನ್ನು ದರಿಸುವುದು ಜನರ ಪ್ರತಿಶ್ಟೆಯಾಗಿದೆ. ಬಾತರದ ಅದೆಶ್ಟೋ ಹಳ್ಳಿಗಳಲ್ಲಿ ಮಹಿಳೆಯರು ತಿಂಗಳ ರುತುಸ್ರಾವದ ಸಮಯದಲ್ಲಿ ಶುಚಿತ್ವವಿಲ್ಲದ ಬಟ್ಟೆಗಳನ್ನು ಉಪಯೋಗಿಸುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯದಲ್ಲಿ ಬಡ ಮಹಿಳೆಯೊಬ್ಬಳು ತಿಂಗಳ ರುತುಸ್ರಾವದ ಸಮಯದಲ್ಲಿ ಉಪಯೋಗಿಸಲು ಶುಚಿಯಾದ ಬಟ್ಟೆ ಇಲ್ಲದಿರುವುದರಿಂದ, ತನ್ನ ಹಳೆಯ ಬ್ಲೌಸ್ ಉಪಯೋಗಿಸಿದ ವೇಳೆ ಅದರಲ್ಲಿನ ತುಕ್ಕು ಹಿಡಿದ ಕಬ್ಬಿಣದ ಹುಕ್ ಅವಳ ದೇಹವನ್ನು ಪ್ರವೇಶಿಸಿ ‘ಟೆಟಾನಸ್’ ಎಂಬ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದಳು. ಇದು ನಮ್ಮ ದೇಶದಲ್ಲಿ ಬಡವರು ಎಂತಹ ದಾರುಣ ಪರಿಸ್ತಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದಕ್ಕೆ ಹಿಡಿದ ಕನ್ನಡಿ.

ಇಂತಹ ಹತ್ತಾರು ಸಮಸ್ಯೆಗಳನ್ನು ಕಣ್ಣಾರೆಕಂಡ ನಮ್ಮ ದೇಶದ ಒಬ್ಬ ಸಾಮಾನ್ಯ ಪ್ರಜೆ, ಕಾರ‍್ಪೊರೇಟ್ ಕಂಪನಿಯ ಉದ್ಯೋಗಿ ಅನ್ಶು ಗುಪ್ತಾ ಅವರು 1999 ರಲ್ಲಿ ದೆಹಲಿಯಲ್ಲಿ ಗೂಂಜ್ ಎಂಬ ಸ್ವಯಂ ಸೇವಾ ಸಂಸ್ತೆಯನ್ನು ಪ್ರಾರಂಬಿಸಿದರು. ಒಂದು ತುಂಡು ಬಟ್ಟೆಯಿಂದ ಎಂತಹ ಕ್ರಾಂತಿಕಾರಿ ಬದಲಾಣೆಯನ್ನು ತರಬಹುದೆಂದು ಹಾಗೂ ಅದೇ ತುಂಡು ಬಟ್ಟೆಯಿಂದ ಬಡವರ ಮಾನವನ್ನು ಹೇಗೆ ಮುಚ್ಚಬಹುದೆಂದು ತೋರಿಸಿಕೊಟ್ಟರು. ಈ ಉದ್ದೇಶಕ್ಕಾಗಿಯೇ ಅವರು “ನಾಟ್ ಜಸ್ಟ್ ಎ ಪೀಸ್ ಆಪ್ ಕ್ಲಾತ್” ಎಂಬ ಅಬಿಯಾನವನ್ನು ಆರಂಬಿಸಿದರು. ಅವರು ತಮ್ಮ ಈ ಉದ್ದೇಶವನ್ನು ಈಡೇರಿಸಲು ಅನುಸರಿಸಿದ ಮಾರ‍್ಗ ಯಾವುದು ಗೊತ್ತಾ? ಬಾರತೀಯ ಸಂಸ್ಕ್ರುತಿಯ ಹೆಮ್ಮೆಯ ಗುಣವಾದ ದಾನ. ನಗರ ಪ್ರದೇಶದಲ್ಲಿನ ಶ್ರೀಮಂತ ಜನರು ಉಪಯೋಗಿಸದ ಬಟ್ಟೆಗಳು ಮತ್ತು ತ್ಯಾಜ್ಯ ಎಂದು ಎಸೆಯುವ ವಸ್ತುಗಳನ್ನು ಪುನರ್ ಬಳಕೆ ಮಾಡಿ, ಹಳ್ಳಿಯ ಬಡವರಿಗೆ ವಿತರಿಸುವ ಮಹತ್ವದ ಕಾರ‍್ಯವನ್ನು ಪ್ರಾರಂಬಿಸಿದರು.

ಅನ್ಶು ಗುಪ್ತಾ ಅವರು ಮೊದಲು ತಮ್ಮ ಮನೆ, ಬಂದುಗಳ ಹಾಗೂ ಸ್ನೇಹಿತರ ಮನೆಗಳಿಂದಲೇ ಪ್ರಾರಂಬಿಸಿದರು. ಗೂಂಜ್ ಸಂಸ್ತೆಯು ದೆಹಲಿ ಒಂದರಲ್ಲೇ ತಿಂಗಳಿಗೆ ಸುಮಾರು 45 ಟನ್ ಗಳಶ್ಟು ಬಟ್ಟೆಗಳನ್ನು ವಿತರಿಸುತ್ತಿದೆ. ಮೊದಲು ದೆಹಲಿಯಲ್ಲಿ ಮಾತ್ರ ಕಾರ‍್ಯನಿರ‍್ವಹಿಸುತ್ತಿದ ಗೂಂಜ್ ಸಂಸ್ತೆಯು ಕೆಲವೇ ವರ‍್ಶಗಳಲ್ಲಿ ಕರ‍್ನಾಟಕ ಸೇರಿ ದೇಶದ 21 ರಾಜ್ಯಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ. ದೇಶಾದ್ಯಂತ ಹರಡಿರುವ ಗೂಂಜ್ ಸಂಸ್ತೆಯು, 250 ಸ್ತಳೀಯ ಸಂಸ್ತೆಗಳ ಕಾರ‍್ಯಕರ‍್ತರ ಮೂಲಕ ವರ‍್ಶವೊಂದಕ್ಕೆ ಸುಮಾರು ಒಂದು ಸಾವಿರ ಟನ್ ಬಟ್ಟೆಗಳನ್ನು ವಿತರಿಸುತ್ತಿದೆ. ಇನ್ನು ತಮ್ಮಲ್ಲಿ ಒಟ್ಟಾದ ಬಟ್ಟೆಗಳನ್ನು ವರ‍್ಗೀಗರಿಸಿ, ಸರಿಯಾಗಿ ಒಗೆದು, ಒಣಗಿಸಿ, ನಿರ‍್ದಿಶ್ಟ ಆಕಾರದಲ್ಲಿ ಕತ್ತರಿಸಿ, ನ್ಯಾಪಕಿನ್ ರೂಪದಲ್ಲಿ ಪರಿವರ‍್ತಿಸಿ, “ಮೈಪ್ಯಾಡ್” ಎಂಬ ಹೆಸರಿನಲ್ಲಿ ಹಳ್ಳಿಯ ಬಡ ಮಹಿಳೆಯರಿಗೆ ಮಾಸಿಕ ರುತುಸ್ರಾವದ ಸಮಯದಲ್ಲಿ ಉಪಯೋಗಿಸಲು ವಿತರಿಸುತ್ತಿದೆ. ಇಲ್ಲಿಯವರೆಗೆ ಸುಮಾರು 24 ಲಕ್ಶ ನ್ಯಾಪಕಿನ್ ಗಳನ್ನು ಗೂಂಜ್ ಸಂಸ್ತೆಯು ವಿತರಿಸಿದೆ.

ಮನೆಯಲ್ಲಿ ಹಳೆಯದಾದ ಗುಜರಿ ಎಂದು ಎಸೆಯುವ ವಸ್ತುಗಳನ್ನು ಗೂಂಜ್ ಸಂಸ್ತೆಯು ಸಂಗ್ರಹಿಸುತ್ತದೆ. ಸಂಗ್ರಹವಾದ ವಸ್ತುಗಳಲ್ಲಿ ಉಪಯೋಗಿಸಲು ಯೋಗ್ಯವಾದವುಗಳನ್ನು ತಮ್ಮ ವ್ಯವಸ್ತಿತ ಯೂನಿಟ್ ನಲ್ಲಿ ರಿಪೇರಿ ಮಾಡಿ ಮರುಬಳಕೆಗೆ ಸಿದ್ದವಾಗಿಸಿ ಬಡವರಿಗೆ ವಿತರಿಸುತ್ತಿದ್ದಾರೆ. ಇದನ್ನು “ರದ್ದಿ ಆದರಿಸಿದ ಪರ‍್ಯಾಯ ಆರ‍್ತಿಕತೆ” ಎಂದು ಅನ್ಶು ಗುಪ್ತಾರವರು ಕರೆದಿದ್ದಾರೆ. ಅವರ ಈ ಸಾಮಾಜಿಕ ಕಾರ‍್ಯಕ್ಕೆ ಹಲಾವರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಅವರ ಹಿರಿಮೆಯನ್ನು ಮತ್ತಶ್ಟು ಹೆಚ್ಚಿಸಿದ್ದು 2015 ನೇ ಸಾಲಿನ “ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ“.

ನಮ್ಮ ಸರಕಾರಗಳು ಆದಶ್ಟು ಬೇಗೆ ಎಚ್ಚೆತ್ತು ಸರಕಾರದ ಪ್ರಾತಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗು ಸಾರ‍್ವಜನಿಕ ಆಸ್ಪತ್ರೆಗಳಲ್ಲಿ ಬಡ ಮಹಿಳೆಯರಿಗೆ ಆರೋಗ್ಯಕ್ಕೆ ನೆರವಾಗುವ ಕೆಲಸಗಳನ್ನು ಮಾಡಲಿ ಎಂದು ಆಶಿಸೋಣ. ಗೂಂಜ್ ಸಂಸ್ತೆಯ ಸಂಸ್ತಾಪಕ  ಅನ್ಶು ಗುಪ್ತಾ ಮತ್ತು ಅವರ ಕಾರ‍್ಯಕರ‍್ತರ ಸಾಮಾಜಿಕ ಸೇವೆಯು ಹೀಗೆ ಮುಂದುವರೆಯಲಿ. ಯಾರಾದರೂ ಗೂಂಜ್ ಸಂಸ್ತೆಯ ಸಾಮಾಜಿಕ ಕಾರ‍್ಯದಲ್ಲಿ ಕೈ ಜೋಡಿಸಲು ಮನಸ್ಸಿದ್ದರೆ, ನಿಮ್ಮ ಹತ್ತಿರ ಹಳೆಯ ಉಪಯೋಗಿಸದೇ ಇರುವ ಬಟ್ಟೆಗಳು ಮತ್ತು ಇತರೆ ವಸ್ತುಗಳಿದ್ದರೆ ಗೂಂಜ್ ಸಂಸ್ತೆಗೆ ನೀಡಿ. ಹೆಚ್ಚಿನ ಮಾಹಿತಿಗೆ ಗೂಂಜ್ ಸಂಸ್ತೆಯ ಜಾಲತಾಣಕ್ಕೆ ಬೇಟಿ ನೀಡಿ. http://goonj.org/

2015 ನೇ ಸಾಲಿನ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಇನೊಬ್ಬ ಬಾರತೀಯ ಆಯ್ಕೆಯಾಗಿದ್ದಾರೆ ಅವರೇ ಬ್ರಶ್ಟಾಚಾರ ವಿರೋದಿ ಹೋರಾಟಗಾರ ಸಂಜೀವ್ ಚತುರ‍್ವೇದಿ. ಇವರ ದಿಟ್ಟ ಹೋರಾಟ, ದ್ರುಡನಿರ‍್ದಾರ, ಪ್ರಾಮಾಣಿಕತೆ, ಸಾಮಾಜಿಕ ಸೇವೆ, ಬ್ರಶ್ಟಾಚಾರದ ವಿರುದ್ದ ಹೋರಾಟ ಎಲ್ಲವನ್ನೂ ಆದರಿಸಿ 2015 ನೇ ಸಾಲಿನ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಂಜೀವ್ ಚತುರ‍್ವೇದಿಯವರು 2003 ನೇ ಸಾಲಿನ ಬಾರತೀಯ ಅರಣ್ಯ ಸೇವೆ ಪರೀಕ್ಶೆಯಲ್ಲಿ ಉತ್ತೀರ‍್ಣರಾಗಿ, ಬಾ.ಆ.ಸೇ ಶ್ರೇಣಿಯ ಅದಿಕಾರಿಯಾಗಿ ಸರಕಾರಿ ಸೇವೆಗೆ ಸೇರಿದರು. ಇವರು ಸರ‍್ಕಾರಿ ಕಚೇರಿಗಳಲ್ಲಿನ ಬ್ರಶ್ಟಾಚಾರವನ್ನು ಬಯಲಿಗೆಳೆಯುವಲ್ಲಿ ಬೆಂಬಿಡದೆ ಹೋರಾಡುತ್ತಿದ್ದಾರೆ. ಆದರೆ ನಮ್ಮ ಸರಕಾರ ಇಂತಹ ಪ್ರಾಮಾಣಿಕ ಅದಿಕಾರಿಗೆ ಬೆಂಬಲಿಸುವ ಬದಲಾಗಿ ವರ‍್ಗಾವಣೆ ಮೇಲೆ ವರ‍್ಗಾವಣೆ ಮಾಡುತ್ತಿರುವುದು ವಿಪರ‍್ಯಾಸವೆ ಸರಿ. ಇವರನ್ನು ನಮ್ಮ ಕೇಂದ್ರ ಸರಕಾರವು ಕಳೆದ ಐದು ವರ‍್ಶಗಳಲ್ಲಿ 12 ಬಾರಿ ವರ‍್ಗಾವಣೆ ಮಾಡಿದೆ.

ಇವರು ಪ್ರಸ್ತುತವಾಗಿ ಅಕಿಲ ಬಾರತ ವೈದ್ಯಕೀಯ ವಿಜ್ನಾನ ಸಂಸ್ತೆಯ (ಏಮ್ಸ್)ನಲ್ಲಿ ಉಪಕಾರ‍್ಯದರ‍್ಶಿಯಾಗಿ ಕಾರ‍್ಯನಿರ‍್ವಹಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರಾಮಾಣಿಕ ಅದಿಕಾರಿಗಳಿಗೆ ಬರೀ ವರ‍್ಗಾವಣೆ ಎಂಬ ಪ್ರಶಸ್ತಿಯನ್ನು ಸರಕಾರಗಳು ನೀಡುತ್ತವೆ. ಬೇರೆ ದೇಶದ ಸರಕಾರದ ಕಣ್ಣಿಗೆ ಕಾಣುವ ಪ್ರಾಮಾಣಿಕ ಅದಿಕಾರಿಗಳು ನಮ್ಮ ದೇಶದ ಸರಕಾರದ ಕಣ್ಣಿಗೆ ಕಾಣದೇ ಇರುವುದು ದೊಡ್ಡ ದುರಂತವೆ ಸರಿ. ಪ್ರಾಮಾಣಿಕ ಅದಿಕಾರಿಗಳಿಗೆ ನಮ್ಮ ದೇಶದ ಸರಕಾರಗಳು ನೀಡುವ ಬೆಲೆ ಇಶ್ಟೇ. ಇನ್ನು ಬ್ರಶ್ಟಾಚಾರ ಮುಕ್ತ ಬಾರತದ ಕನಸು ನನಸಾಗುವುದು ಯಾವಾಗ? ಸಂಜೀವ್ ಚತುರ‍್ವೇದಿಯವರು ತಮ್ಮ ಬ್ರಶ್ಟಾಚಾರ ವಿರುದ್ದ ಹೋರಾಟ, ಪ್ರಾಮಾಣಿಕ ಸೇವೆಯನ್ನು ಮುಂದುವರೆಸಲಿ ಎಂದು ಆಶಿಸೋಣ.

ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯ ಹಿನ್ನೆಲೆ:
ಪಿಲಿಪೈನ್ಸ್ ನ ಏಳನೇ ಅದ್ಯಕ್ಶರಾದ ರಾಮೋನ್ ಮ್ಯಾಗ್ಸೆಸ್ಸೆಯವರು 1957ರಲ್ಲಿ ಅದಿಕಾರದಲ್ಲಿದ್ದಾಗಲೇ ವಿಮಾನ ಅಪಗಾತದಲ್ಲಿ ನಿದನರಾದರು. ಅವರ ನೆನಪಿಗೋಸ್ಕರ ಪಿಲಿಪೈನ್ಸ ಸರಕಾರವು 1957 ರಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ತಾಪಿಸಿತ್ತು. ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಸರಕಾರಿ ಸೇವೆಯಲ್ಲಿನ ಕೊಡುಗೆ, ಸಾರ‍್ವಜನಿಕ ಸೇವೆ, ಸಾಮಾಜಿಕ ನಾಯಕತ್ವ, ಪತ್ರಿಕೋದ್ಯಮ, ಸಾಹಿತ್ಯ ಹೀಗೆ ಹಲವಾರು ವಿವಿದ ಕ್ಶೇತ್ರದಲ್ಲಿ ಸೇವೆಸಲ್ಲಿಸಿದವರನ್ನು ಪರಿಗಣಿಸಿ ಪಿಲಿಪೈನ್ಸ್ ಸರಕಾರವು ಪ್ರತಿ ವರ‍್ಶ ನೀಡುತ್ತದೆ. ಈ ಪ್ರಶಸ್ತಿಯು ಏಶ್ಯಾ ಕಂಡದ ರಾಶ್ಟ್ರಗಳ ಸಾದಕರಿಗೆ ಮತ್ತು ಸಂಸ್ತೆಗಳಿಗೆ ನೀಡುವುದರಿಂದ ಇದನ್ನು “ಏಶ್ಯಾ ಕಂಡದ ನೊಬೆಲ್” ಎಂದು ಕರೆಯುತ್ತಾರೆ.

(ಚಿತ್ರಸೆಲೆ: rediff.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: