ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ದ್ರೌಪದಿಯ ಸ್ವಯಂವರ-ಮೂರನೆಯ ಹಂತ-ನೋಟ-28

ಸಿ. ಪಿ. ನಾಗರಾಜ.

ಪ್ರಸಂಗ-28
ದ್ರೌಪದಿಯ ಸ್ವಯಂವರ–ಮೂರನೆಯ ಹಂತ

(ಆದಿ ಪರ‍್ವ: ಹದಿನಾಲ್ಕನೆಯ ಸಂದಿ: ಪದ್ಯ 34 ಮತ್ತು ಹದಿನೈದನೆಯ ಸಂದಿಯ ಪದ್ಯ 1-37)

ಪಾತ್ರಗಳು:

ದ್ರುಶ್ಟದ್ಯುಮ್ನ: ದ್ರುಪದ ರಾಜನ ಮಗ.
ಅರ‍್ಜುನ: ಪಾಂಡುರಾಜ ಮತ್ತು ಕುಂತಿಯ ಮಗ.
ಕ್ರಿಶ್ಣ: ದ್ವಾರಾವತಿ ಪಟ್ಟಣದ ಒಡೆಯ. ಪಾಂಡವರ ಹಿತಚಿಂತಕ.
ಬಲರಾಮ: ದ್ವಾರಾವತಿ ಪಟ್ಟಣದ ಒಡೆಯ. ಕ್ರಿಶ್ಣನ ಅಣ್ಣ.
ಕಂಚುಕಿಗಳು: ರಾಣಿವಾಸದ ಅದಿಕಾರಿಗಳು.
ಡಂಗುರದವರು: ರಾಜನ ಆದೇಶವನ್ನು ಡಂಗುರ ಹೊಡೆದು ಸಾರುವವರು.
ಬ್ರಾಹ್ಮಣರು: ಮದುವೆಯ ಮಂಟಪದಲ್ಲಿದ್ದವರು.
ರಾಜ ಪರಿವಾರ: ಮದುವೆಯ ಮಂಟಪದಲ್ಲಿದ್ದ ರಾಜರ ಗುಂಪು.
ಸಕಿಯರು: ದ್ರೌಪದಿಯ ಸೇವಕಿಯರು.

*** ದ್ರೌಪದಿಯ ಸ್ವಯಂವರ-ಮೂರನೆಯ ಹಂತ ***

ಧೃಷ್ಟದ್ಯುಮ್ನ: ಅವನಿಪತಿಗಳು ಹೊಳ್ಳುವಾರಿದರು  ಇವರೊಳಿಲ್ಲಲೆ… ದಕ್ಷಿಣೆಯ ಹಾರುವ ಅ ಮಹಾಜನವಿದೆ…ಸಮುದ್ರಕೆ ಪಡಿ ಸಮುದ್ರವು  ಎನೆ…ಇವರೊಳಗೆ ಮುಂಗೈಯ ಬಲುಹುಳ್ಳವರು ಈ ಧನುವನು ನೆಗಹಲಿ…ಈ ಯಂತ್ರವನು ಜಯಿಸಲಿ.
(ಎಂದು  ಧೃಷ್ಟದ್ಯುಮ್ನ ಸಾರಿಸಿದ. ಕೇಳು ಜನಮೇಜಯ ಧರಿತ್ರೀಪಾಲ, ಪಾಂಚಾಲಿಯ ಮನೋರಥ ಶಾಲೆಯಲಿ ಡಂಗುರವ ಹೊಯ್ದು ಮಹೀಸುರರ ಸಭೆಯಲಿ ಸಾರಿದರಲೈ…)

ಡಂಗುರದವರು:  ವಿಪ್ರಾಳಿಯಲಿ ಭುಜಬಲವುಳ್ಳವರು ಏಳಿ…ಬಿಲುವಿಡಿದು ಯಂತ್ರದ ಕೋಲುಗಳ ಕೇವಣಿಪುದು…ಪಾರ್ಥಿವರು ಪಾರ್ಥಿವರೊಡನೆ ಬೆರಸುವರು…ತದಲಾಭ ಪಕ್ಷಾಂತರಕೆ ಪಾರ್ಥಿವ ಸುತೆಯನು ವಿಪ್ರಜಾತಿಯಲಿ ಈವುದು…ಪುರುಷರು ಅನುಲೋಮದಲಿ  ವಿಲೋಮದಲಿ ಕನ್ಯಾವರಣವಹುದು…ಇದ ವಿಸ್ತರಿಸಲೇಕೆ ಶಾಸ್ತ್ರನಿರ್ಣಯವ ನೀವು ಬಲ್ಲಿರಿ.
(ಎಂದು ಸಾರಿದ ದನಿಯನು ಆ ದ್ವಿಜವೃಂದವು ಆಲಿಸಿ…)

ಬ್ರಾಹ್ಮಣರ ಗುಂಪು-1: ನಮಗೆ ಇದೇಕೆ ಅರವಿಂದವದನೆಯ ತೊಡಕು…ತೆಗೆ ನಾವಾರು ಧನುವು ಆರು…ಬಂದ ದಕ್ಷಿಣೆ ಮೃಷ್ಟಭೋಜನದಿಂದ ನಾವು ತುಷ್ಟರು…ನಮಗೆ ಇದರಿಂದ ಅಪಕೀರ್ತಿಯು  ಬಹುದು.
(ಎಂದುದು ಭೂಸುರವ್ರಾತ.)

ಬ್ರಾಹ್ಮಣರ ಗುಂಪು-2: ನಾವು ವಚನ ಶೂರರು…ಪಾರ್ಥಿವ ನಿಚಯವೇ ಭುಜ ಶೂರರು…ಅಚಲ ಧನು ಅನಿಬರನು ಭಂಗಿಸಿತು…ನಮಗೆ ಈ ವಿದ್ಯೆ ವೈದಿಕವೆ…ಇದು ಉಚಿತವಲ್ಲ…ನಮ್ಮ ಸಾಹಸರಚನೆಯನು ನೋಡುವರೆ…ಪಂಡಿತ ನಿಚಯವು ಇದಿರಲಿ ನಿಲಲಿ…ಅಲ್ಲಿ ವಿಸ್ಮಯವ ತೋರುವೆವು.
 ಬ್ರಾಹ್ಮಣರ ಗುಂಪು-3: ಈ ದ್ರೌಪದಿಯನು ಸಾಂಗ ವೇದ ಪದಕ್ರಮದ ಸರ್ವಾಂಗ ವಿಷಯದಲಿ… ಅಖಿಳ ಪೌರಾಣಂಗಳಲಿ…ಮೀಮಾಂಸೆಯೊಳ್…ಸ್ಮೃತಿ ತರ್ಕ ಶಾಸ್ತ್ರದಲಿ ಭಂಗಿಸುವೆವು…ವಾತ್ಸ್ಯಾಯನಾದಿ  ಉಪಾಂಗ ವಿದ್ಯೆದಲಿ… ಆವಂಗದಲಿ ಎಮ್ಮ ನೋಡು.
(ಎಂದುದು ಬುಧಸ್ತೋಮ.)ಬ್ರಾಹ್ಮಣರ ಗುಂಪು-1: ಭರತದಲಿ…ವೈದ್ಯದಲಿ…ಕಾವ್ಯ ಸುವಿರಚಿತ ಅಲಂಕಾರದಲಿ…ಗಜ ತುರಗ ಲಕ್ಷಣದಲಿ…ಸಮಾಹಿತ ಮಂತ್ರ ತಂತ್ರದಲಿ…ಸರಸ ಕವಿತಾರಚನೆಯಲಿ…ವಿಸ್ತರದ  ಉಪನ್ಯಾಸದಲಿ ಭೂಪತಿ ನಮ್ಮನು ಕರೆಸಿ ನೋಡಲಿ.
(ಎಂದರು ದ್ವಿಜರು ತಮತಮಗೆ…)
ಬ್ರಾಹ್ಮಣರ ಗುಂಪು-4:: ಅಲ್ಲದಿರ್ದರೆ…ಶೋಧಿಸಿದ ತನಿ ಬೆಲ್ಲವಿಕ್ಕಿದ ಹೂರಿಗೆಯ ಮೆದೆಯಲ್ಲಿ…ಪರಡಿ ಶಾವಿಗೆಯ ಪರಿಪರಿಯ ಪಾಯಸದ ಪುಲ್ಲಿಗೆಯ ತತ್ ಸವಿಯ ಮಂಡಿಗೆಯಲ್ಲಿ…ನವ ಘೃತ ಸೂಪದಂಶಕದಲ್ಲಿ ನಮ್ಮನು ನೋಡಲಿ.
                  (ಎಂದುದು ಧೂರ್ತ ವಟು ನಿಕರ…ರಸದ ಹೊರಲೇಪದಲಿ ಹುದುಗಿದ ಮಿಸುನಿಯಂತಿರೆ…ಜೀವಭಾವ ಪ್ರಸರದೊಳಗೆ  ಅವಲಂಬಿಸಿದ ಪರಮಾತ್ಮನ ಅಂದದಲಿ ಎಸೆವ ವಿಪ್ರಾಕಾರದಲಿ ರಂಜಿಸುವ ಭೂಪತಿ…ತತ್ಸಭಾ ಸದ್ವಿಸರ ಮಧ್ಯದೊಳಿರ್ದು…ಈ ಮಹಾಧ್ವನಿಯ ಕೇಳಿದನು. ತಮ್ಮನನು ನೋಡಿದನು…ಸನ್ನೆಯ ಮಾಡಿದಡೆ…ಆ ಪಾರ್ಥ ಕೈಕೊಂಡನು…  ಅವನಿಪಗೂಡಿ ಕುಂತಿಗೆ ಭೀಮಸೇನಂಗೆ ಮನದೊಳಗೆ ಎರಗಿ…ಕೂಡೆ ಕುಳ್ಳಿರ್ದ  ಅಖಿಳ ವಿಪ್ರರ ನೋಡಿ…ಮೆಲ್ಲನೆ ಧೋತ್ರ ದರ್ಭೆಯ ಗೂಡ ಸಂವರಿಸುತ್ತ ಸಭೆಯಿಂದ ಎದ್ದನು.)
ಬ್ರಾಹ್ಮಣರ ಗುಂಪು-4: ಏನು ಸಿದ್ಧಿಯ ಉಪಾಧ್ಯರೆ ಎದ್ದಿರಿ…ಇದೇನು ಧನುವಿಂಗಲ್ಲಲೇ…ಮನದ ಅಂಘವಣೆ ತಾನೇನು…ನಿತಂಬಿನಿಯ ಬಯಸಿದಿರೇ…ವೈನತೇಯನ ವಿಗಡಿಸಿದ ವಿಷವು  ಹಾವಡಿಗರಿಗೆ ಏನು ಸದರವೊ…ಇದೇನು ನಿಮ್ಮ ಉತ್ಸಾಹ.
(ಎಂದುದು ಧೂರ್ತ ವಟುನಿಕರ.)
 ಬ್ರಾಹ್ಮಣರ ಗುಂಪು-1:: ಮದುವೆ ಬೇಕೇ…ಶ್ರೋತ್ರಿಯ ಸ್ತೋಮದಲಿ ನಾವು ಕನ್ಯಾರ್ಥಿಗಳು ಎಂಬುದು… ನಿಜಾನ್ವಯ ವಿದ್ಯೆಯಲಿ ಪರೀಕ್ಷೆಗಳ ಕೊಡುವುದು… ಮದುವೆ  ಅಹುದು…ಇದು ಭೂದೇವರಿಗೆ ಸೌಖ್ಯ ಪುಣ್ಯಪ್ರದವು…ನೀ ನೆನೆದುದು ಭಗೀರಥಯತ್ನ.
(ಎಂದುದು ಭೂಸುರ ವ್ರಾತ.)
ಅರ್ಜುನ:  ನೀವು ಸೈರಿಸಿ…ನಿಮ್ಮ ಸದ್ಭಾವದಲಿ ಕಾರುಣ್ಯ ಅವಲೋಕನವುಂಟಲೇ…ನೀವ್ ರಚಿಸಿದ ಆಶೀರ್ವಾದ ಶಕ್ತಿಯಲಿ ನಾವು ವಿಜಯರು…ಚಾಪಯಂತ್ರವಿದು  ಆವ ಘನ. 
(ಎಂದ ಅರ್ಜುನನ ಸಂಭಾವನೋಕ್ತಿಗೆ ನಿಲ್ಲದೆ…ಅವರು ತಮತಮಗೆ ಒದರಿದರು.)
ಬ್ರಾಹ್ಮಣರ ಗುಂಪು-2: ಕ್ರಮಿತರು  ಶುದ್ಧ ಭ್ರಮಿತ ಮೂಲನ ಅವಧರಿಸಿದಿರೆ…ಹಿರಿಯ ವಿಷ್ಣು ಕ್ರಮಿತರೇ…ದೀಕ್ಷಿತರೆ, ತಾನು ಧನುವಿಗೆ ಯತ್ನ ಮಾಡಿದಿರೆ…ಕ್ರಮವೆ ಇದು…ಕ್ಷತ್ರಿಯರನು  ಆಕ್ರಮಿಸುವುದು ಸದ್ಧರ್ಮವೇ…ಉದ್ಭ್ರಮಿತನು ಇವ…ಈ ಶ್ರೋತ್ರಿಯರ ಸಭೆಗೆ ನೆರೆ ಹಳಿವ ತಹನು.
 ಬ್ರಾಹ್ಮಣರ ಗುಂಪು-1: ಹೋಗದಿರು
(ಎಂದು ಜರೆದರು)

ಬ್ರಾಹ್ಮಣರ ಗುಂಪು-2: ತಾನೇ ಬಲ್ಲನು
(ಎಂದರು.)

ಬ್ರಾಹ್ಮಣರ ಗುಂಪು-3: ವಿಪ್ರ ಸಭೆಗೆ  ಅಪಹಾಸ್ಯವಹುದು

(ಎಂದು ನುಡಿದರು.)
ಬ್ರಾಹ್ಮಣರ ಗುಂಪು-5:  ತಪ್ಪೇನು.
(ಎಂದು ಕಳೆದರು.)
ಬ್ರಾಹ್ಮಣರ ಗುಂಪು-6:  ಭದ್ರಾಕಾರನು  ಈತಂಗೆ  ಧನು ಅಳುಕುವುದು ಭಾಗ್ಯಮುಖನು.
(ಎಂದುದು ಬುಧಸ್ತೋಮ…ತೊಟ್ಟ ಹೊಸ ಯಜ್ಞೋಪವೀತದ…ನೊಸಲಲಿ ಮಟ್ಟಿ…ಕುಶೆಯ ಕರಡಿಗೆ…ಕಟ್ಟಿಯಿರುಕಿದ ಕಕ್ಷೆ…ಬೆರಳಲಿ ಮುರಿದ ದರ್ಭೆಗಳ…ಉಟ್ಟ ಬಾಸರ ಬಳಲುಗಚ್ಚೆಯಲಿ  ನಟ್ಟವಿಗನು…ಅಟ್ಟಹಾಸದ ಜನದ ನಗೆಗಳ ಸಭೆಯಲಿ  ಒಸರಿಸಿ ಮೆಲ್ಲನೈತಂದ…ಸಕಲ ಪೃಥ್ವೀಶ್ವರರು ತಿರುಗಿ ಕಂಡರು…ಗಹಗಹಿಸಿದರು.)
ರಾಜ ಪರಿವಾರ-1: ಇದೇನು ಅರೆಮರುಳೊ…ಜಡನೋ…ವಿಪ್ರವೇಷಚ್ಛನ್ನ ಸುರಪತಿಯೊ…ತಾವು ಮರುಳುಗಳು…ಅಕಟ, ಮದನನ ಸರಳ ಮರುಮೊನೆಗೆ ಆವನ ಅಂತಃಕರಣ ನೆರೆ ಕಳವಳಿಸದೆ.
(ಎಂದರು ನೆರೆದ ಸಭೆಯೊಳಗೆ.)
ರಾಜ ಪರಿವಾರ-2: ತನಗೆ ನೆಗಹಲ್ಕೆ…ಧನು ಕೃಷ್ಣಾಜಿನವೊ… ಸಾಲಗ್ರಾಮದೇವರೊ…ವಿನುತ ತುಳಸಿಯೊ…ಕುಶವೊ…ದರ್ಭೆಯೊ…ಸಮಿಧೆಗಳ   ಹೊರೆಯೊ…ನೆನೆದ ತಿಲವೋ ಮೇಣ್  ಇದು  ಔಪಾಸನದ ಕೊಳವಿಯೊ…ಬಣಗು ವಿಪ್ರನ ನೆನಹ ನೋಡಿರೆ…ದ್ರೌಪದಿಯ ಸೌಭಾಗ್ಯ ಘನವಲಾ.
ರಾಜ ಪರಿವಾರ-3 : ನಮಗೆ ಗಜ ತುರಗ ಶಸ್ತ್ರಾಸ್ತ್ರಂಗಳ  ಅಂಗವಿದು ಅರಿತವು…ವಿಪ್ರಂಗೆ ಅಂಗ ವೇದಪುರಾಣ ತರ್ಕಸ್ಮೃತಿ ಸುವಿದ್ಯೆಗಳು…  ಅಂಗವಂಗಿಗೆ ಅಸಾಧ್ಯವಾದುದನು  ಅಂಗಿಗೆ ಒಡಬಡುವುದೆ…ದ್ವಿಜಾತಿಗೆ ಸಂಗತ ಅನುಷ್ಠಾನಪರ.
(ಎಂದುದು  ನೃಪಸ್ತೋಮ…ಅತ್ತ ಕಾಂತಾ ಬಹಳ ಪಾರಾವಾರ ಹುಬ್ಬಿನ ವಿಹೃತಿಗಳ ಲಹರಿ ಮಸಗಿದುದು…ತೆರೆಮಾಲೆಗಳ ಬೆಳುನಗೆಯ ಬುದಬುದದ ಗಹಗಹಿಕೆ…ಮಿಗೆ ಅಟ್ಟಹಾಸದ ರಹಣಿಗಳ ರಭಸದ ವಿಡಂಬದ ವಿಹರಣದ  ಅಚಲ ದೃಷ್ಟಿಗಳ ಮರಿಮೀನ ಹೊಳಹುಗಳ…)
ಸಖಿಯರು-1 :  ಇತ್ತ ನೋಡೌ ತಾಯೆ, ಹಾರುವರತ್ತ…ಗಡ್ಡದ  ಉಪಾಧ್ಯರನು…ತಾವು  ಧನುವನು ಎತ್ತುವರು ಗಡ…ತಿಮಿಂಗಿಲನ  ಎಸುವರು ಗಡ…ಹೊತ್ತುಗಳೆವರೆ ಲೇಸು… ಬಳಿಕ ವಿಪ್ರರು ಇನ್ನು  ಉತ್ತಮರಲಾ.
(ಎನೆ…ತಲೆಗುತ್ತಿ ಮಹೀತಳವ ಉಂಗುಟದೊಳು ಔಕುತ ನಾಚಿದಳು.)
ಸಖಿಯರು-2 : ಎಲವೊ ಮಟ್ಟಿಯ ಮದನ…ದರ್ಭೆಯ ತಿಲದ ಮನ್ಮಥ…ವಿಮಲ ಧೋತ್ರದ ತಳಿರುಗಾಸೆಯ ಕಾಮ…ಕೃಷ್ಣಾಜಿನದ ಕಂದರ್ಪ… ನಳಿನಮುಖಿಯನು ವರಿಸು ಬಾ…ಎಲೆಯಕ್ಕ ಕೇಳೌ, ನಿನಗೆ ಅಳವಡುವನು…ಆವು ತಲೆವಿಡಿವೆವು  ನೋಡು.
(ಎಂದರು ನಗುತ ಚಪಲೆಯರು. )
ಕೃಷ್ಣ:  ಹಲಾಯುಧ, ಅದೆ ನೋಡು…ವಿಪ್ರ ಓಘದಲಿ…ಮೇಘದ ಹೊದರುಗಳ ಹರಿದಶ್ವನಂತಿರೆ ವಿಪ್ರವೇಷದಲಿ ಪಾರ್ಥನ ಬರವು… ವಸುದೇವನ  ಆಣೆ ಎಂದುದಕೆ ತಪ್ಪದಲೈ ವಿದಿತವೇ…ಸಭಾ ಮಧ್ಯದಲಿ ಬರುತಿರ್ಪಾತನು ಅರ್ಜುನನು… ಜನಪನೋ… ಭೀಮಾದಿಗಳೊ…ತಜ್ಜನನಿಯೋ…ತಾವೆಲ್ಲ ಭೂಸುರ ಜನದ ಸಾಮೀಪ್ಯದಲ ಸಭೆಯೊಳಗೆ ಇರ್ದರು.
(ಎನೆ ಕೇಳ್ದು…)
ಬಲರಾಮ:  ನಿನಗೆ ಇದು ಎಂತು ಅರಿತೆ…ಅವರು ಎಂತು ಅರಗಿನಮನೆಗೆ ತಪ್ಪಿದರು…ಶಿವ…ನೀನು ಎನಿತು ಮಾಯಾಸಿದ್ಧನು.
(ಎಂದನು ನಗುತ ಬಲರಾಮ…ಅವನಿಪತಿ ಕೇಳು,  ಇತ್ತಲು ಈ ಪಾರ್ಥಿವರ ಪರಿಹಾಸವನು…ಕಾಂತಾ ನಿವಹದಲಿ ನಿಬ್ಬರದ ನುಡಿಗಳನು…ಆ ಮಹೀಸುರಠ ವಿವಿಧ ಕಟುಮಧುರೋಕ್ತಿ ವಿನ್ಯಾಸವನು ಕೇಳುತ…ಮುಗುಳು ನಗೆಯಲಿ ನವ ಮದ ದ್ವಿಪ  ಗತಿಯ ಗರುವಾಯಿಯಲಿ ನಡೆತಂದ.)
ರಾಜ ಪರಿವಾರ-3:  ಇವನ ಗತಿ…ಮುಖಚೇಷ್ಟೆ…ಭಾವೋತ್ಸವ ವಿಲಾಸ… ಉಪೇಕ್ಷೆಭರ… ಅಂಘವಣೆ… ಗರುವಿಕೆ…ಗಮಕ ಭಾವ…ಅಭೀತಿ ಭುಲ್ಲವಣೆ…ಇವನ ವಿಮಲಕ್ಷತ್ರ ವಿಕ್ರಮ…ಇವನ ಕೊಂಡಯತನವು…ಇವೇ ಸಾಕು…  ಇವನು  ಅಘಾಟದ ವೀರನು.
(ಎಂದರು…ಬರುತ ಭೀಷ್ಮ…ದ್ರೋಣ..ಕೃಪರಿಂಗೆ ಮನದೊಳಗೆ ಎರಗಿದನು…ಯಾದವರ ಅರಸ ಹಂತಿಯ ಹರಿಯನು ಅಕ್ಷಿಯಲಿ ಅಭಿವಂದಿಸಿದನು…ಸುರಪತಿಗೆ..ಗುಹ..ಗಣಪ..ದಿಕ್ಪಾಲರಿಗೆ..ರುದ್ರಾದಿತ್ಯ..ವಸು ಮುಖ್ಯರಿಗೆ ಮಣಿದನು…ಅಗ್ಗದ ಚಾಪವಿದ್ದ ಎಡೆಗೆ ಬಂದನು…ಮೊದಲಲಿ ಅಂಬುಜಭವನನ…ಆ ಮಧ್ಯದಲಿ ಮಧುಸೂದನನನ…ಆ ಬಿಲು ತುದಿಯಲಿ  ಅಗ್ಗದ ನೀಲಲೋಹಿತನ ಆಹ್ವಾನಿಸಿದನು.)
ಅರ್ಜುನ:  ಇದು ಮಹಾಭೂಮಿಪರ ಬಿಂಕವನು  ಒದೆದ ಧನುವೇ ಪೂತುರೆ.
(ಎನುತ ಎತ್ತಿದನು…ಬಾಗೊತ್ತಿದನು…ಕೊರಳಿಗೆ ತಿರುವ ತೊಡಿಸಿದನು…ಹೊಯ್ದು ತಿರುವನು ಕಿವಿವರೆಗೆ ಸೆಳೆದು ಒಯ್ದನು.)
ಅರ್ಜುನ:  ಇದು ಹದವಿಲ್ಲಲಾ ಬಲು ಹೊಯ್ದುದು…ಅಕಟಾ, ಮಾಗಧಾದಿಗಳು ಬರಿದೆ ಹೆದರಿತು…ಎನಗೆ ಹೆಸರು  ಐದಬೇಕೆಂದು ಇದರೊಳಗೆ ಕೈದೆಗೆದರೈಸಲೇ.
(ಎನುತ…ಐದು ಬಾಣವ ಕೊಂಡು ಯಂತ್ರದ ಹೊಳಹನು  ಈಕ್ಷಿಸಿದ…ತೂಗಿ ಕಿವಿವರೆಗೆ ಉಗಿದು ಅಂಬಿನಲಿ ಯಂತ್ರವ ತಾಗಿಸಿದನು….ಯಂತ್ರಭೇದದಲಿ ಪಾರ್ಥನ ಲಾಗು ವೇಗವನು ಆರು ಬಲ್ಲರು.)
ಸಭಿಕರು: ಜಾಗು…ಧಣು…ಧಣು…ಪೂತು…ಕಾರ್ಮುಕ ಯೋಗ ಸಿದ್ಧನೆ…ಮಝರೆ…ಕೋದಂಡ ಆಗಮ ತ್ರಿಪುರಾರಿ.
(ಎಂದುದು ವಂದಿ ಸಂದೋಹ…ವಿಪ್ರ ನಿಕಾಯ…ಆಯ್ ಎನುತ ಬೊಬ್ಬಿರಿದು)
ಬ್ರಾಹ್ಮಣರೆಲ್ಲರು: ಕಮಲಮುಖಿ ನಿರ್ದಾಯದಲಿ ಹಾರುವಗೆ ಸೇರಿದಳು.
(ಎನುತ ಹರುಷದಲಿ ಕುಣಿದುದು…ಆ ಯುವತಿಜನ ಜಲಧಿ ಮಸಗಿತು…ರಾಯರು ಬಾಯ ಮೌನದ…ಬೆರಳ ಮೂಗಿನ…ಬಿಗಿದ ಬೆರಗಿನ… ಹೊತ್ತ ದುಗುಡದಲಿ ಇದ್ದರು…ಅಲ್ಲಿ ನಿಸ್ಸಾಳ ತತಿ ಹೆಕ್ಕಳದ ಪೆರ್ಚಿನೊಳು ಮೊಳಗಿದವು…ದಿವಿಜಾವಳಿಯ ದುಂದುಭಿ ರವದಲಿ…ಉಬ್ಬಿದ ಸಾಧುವಾದಗಳ ಕಳಕಳದ ಕೊಲ್ಲಣಿಗೆಯಲಿ…ಪೂವಳೆಯ ಪೂರದ ಹರಹಿನಲಿ ಜನ ಮುಳುಗಿತು…ಅದ್ಭುತ ರಭಸವು ಜಗತ್ರಯವ ಅಳ್ಳಿರಿದುದು…ಅರಸನ ಆಜ್ಞೆಯಲಿ…ಅಂಗ ರಕ್ಷಣೆಗೆ ಕಿತ್ತ ಸುರಗಿಯ ವೀರ ಭಟರು…ಅರುವತ್ತು ಸಾವಿರವೈದಿ ಪಾರ್ಥನ ಸುತ್ತು ಮುತ್ತಿದರು…ಇತ್ತ ಮಹಿಳಾಜನದ ಮೌಳಿಯ ಮುತ್ತು…ಕುಸುಮಾಯುಧನ ಥಟ್ಟಿನ ಮತ್ತ ಗಜ ದ್ರೌಪದಾದೇವಿ ಅಲ್ಲಿಗೆ ಐತಂದಳು…ಕಂಚುಕಿ ನಿಕರ ಮುಂದೆ ಸಂದಣಿಯ…)
ಕಂಚುಕಿಗಳು: ತೊಲತೊಲಗು…ಮನ್ಮಥನ ಹೊಗರಿಟ್ಟ ಅಲಗು ಬರುತಿದೆ ಸಾರು ಸಾರು…
(ಎಂದು ಉಲಿದು ಹೊಯ್ದುದು…ನಳಿನಮುಖಿ ದಂಡಿಗೆಯೊಳು ಐತಂದು…ಈತನ ಹೊರೆಯೊಳು ಇಳಿದಳು…ಆಗಳೆ ಕಳಕಳದಲಿ  ಹರುಷ ಲಜ್ಜೆಯಲಿ ಒಳತೋಟಿ ಮಸಗಿತು…ಲಲಿತ ಮಧುರಾಪಾಂಗದಲಿ ಮುಕ್ಕುಳಿಸಿ ಕಂಗಳು ತಣಿಯವು…ಉಬ್ಬಿದ ಪುಳಕಜಲದಲಿ ನಿತಂಬಿನಿಯ ಮೈ ಮುಳುಗಿ ಮೂಡಿತು…ತಳಿತ ಲಜ್ಜಾಭರಕೆ ಕುಸಿದು ಅಂತಃಕರಣ ಅವ್ವಳಿಸಿತು…ಆಂಗಿಕ ಲುಳಿತ ಸಾತ್ವಿಕ ಭಾವವು ಮಾನಿನಿಯ ಅವಗಡಿಸಿತ್ತು…ಧರಣಿಪತಿ ಕೇಳ್, ಬಹಳ ಲಜ್ಜಾಭರದ ಭಯದಲಿ ಬೆಮರಿಡುತ…ಕುಚ ಭರದಿ ಮೇಲುದು ಜಾರೆ ಜೋಡಿಸಿ ನಿಮಿರಿ… ನಡನಡುಗಿ ತರುಣಿ ನಿಜತನು ಪರಿಮಳದಲಿ ಉರೆ ಹೊರೆದ ಹೂವಿನ ದಂಡೆಯನು ನಿಜವರನ ಕೊರಳಲಿ ಹಾಯ್ಕಿದಳು…ಸುರಸ್ತೋಮ ಜಯವೆನೆ…ಕೊರಳ ಹೂವಿನ ದಂಡೆಯಲಿ…ನಿಜಕರದ ಭಾರಿಯ ಧನುವಿನಲಿ…ತನು ಪರಿಮಳದ…ನಿಟ್ಟೆಸಳುಗಂಗಳ ಕೆಲದ ಯುವತಿಯಲಿ…ವರನ ಪರಿ ಹೊಸತಾಯ್ತು…)
ಸಖಿಯರು-3:  ಹರನ ಹಗೆ ಹಾರುವಿಕೆಯನು ಹೊತ್ತನು…ನಮ್ಮ ಅರಸಿ ನೆರೆ ಹಾರುವಿತಿ.

(ಎಂದರು ಚಪಲೆಯರು ನಗುತ…ಜನಪ ಕೇಳೈ,  ಯುವತಿಯೊಡನೆ  ಅರ್ಜುನನ ರಾಜಮಂದಿರಕೆ  ತಂದರು)

ಹೊಸಗನ್ನಡ ಗದ್ಯ

“ರಾಜರುಗಳು ವಿಪಲರಾದರು..ರಾಜರ ಗುಂಪಿನಲ್ಲಿ ಯಂತ್ರವನ್ನು ಬೇದಿಸುವವರು ಇಲ್ಲವಾಗಿದ್ದಾರೆ..ದಕ್ಶಿಣೆಯನ್ನು ಬಯಸುವ ಬ್ರಾಹ್ಮಣ ಮಹಾಜನರಿದ್ದಾರೆ..ಸಮುದ್ರಕ್ಕೆ ಇನ್ನೊಂದು ಸಮುದ್ರ ಎನ್ನುವಂತೆ.. ಇವರಲ್ಲಿ ಮುಂಗೈಯ ಶಕ್ತಿಯಿರುವವರು…ಬಿಲ್ಲನ್ನು ಎತ್ತಲಿ…ಈ ಯಂತ್ರವನ್ನು ಜಯಿಸಲಿ” ಎಂದು ದ್ರುಶ್ಟದ್ಯುಮ್ನನು ಡಂಗುರ ಸಾರಿಸಿದನು.

ದ್ರೌಪದಿಯ ಮನಸ್ಸಿನ ಬಯಕೆಯನ್ನು ಈಡೇರಿಸುವ ಸ್ವಯಂವರ ಮಂಟಪದಲ್ಲಿದ್ದ ವಿಪ್ರರ ಸಬೆಯಲ್ಲಿ ಡಂಗುರ ಹೊಡೆದು…ಈ ರೀತಿ ಸಾರಿದರು….“ಎದ್ದೇಳಿ, ಬ್ರಾಹ್ಮಣರ ಗುಂಪಿನÀಲ್ಲಿ ಬಾಹುಬಲವುಳ್ಳವರು ಎದ್ದೇಳಿ…ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿ ಯಂತ್ರದಲ್ಲಿ ಕೀಲಿಸ ಬಹುದು…ಕ್ಶತ್ರಿಯರು ಕ್ಶತ್ರಿಯರೊಡನೆ ಮದುವೆಯ ನಂಟನ್ನು ಹೊಂದುವರು…ವರನು ದೊರೆಯದಿದ್ದಾಗ…ಕ್ಶತ್ರಿಯ ಪುತ್ರಿಯನ್ನು ಬ್ರಾಹ್ಮಣ ವರನಿಗೆ ಕೊಡುವುದು…ಪುರುಶರು ಅನುಲೋಮಕ್ರಮದಲ್ಲಿಯೂ…ಕನ್ಯೆಯರು ವಿಲೋಮಕ್ರಮದಲ್ಲಿಯೂ ವಿವಾಹ ಮಾಡಿಕೊಳ್ಳಬಹುದು. ಇದನ್ನು ವಿವರಿಸುವ ಅಗತ್ಯವಿಲ್ಲ. ಬ್ರಾಹ್ಮಣರಾದ ನೀವೇ ಈ ಸಂಗತಿಯನ್ನು ಬಲ್ಲಿರಿ.”

ಹೀಗೆಂದು ಸಾರಿದ ಡಂಗುರದ ದನಿಯನ್ನು ಬ್ರಾಹ್ಮಣರು ಕೇಳಿ…“ನಮಗೆ ದ್ರೌಪದಿಯ ತೊಡಕು ಏತಕ್ಕೆ…ನಾವು ಯಾರು…ಬಿಲ್ಲು ಎಲ್ಲಿಯದು…ಸಿಕ್ಕಿದ ದಕ್ಶಿಣೆ ಮತ್ತು ದೊರಕಿದ ರುಚಿಕರವಾದ ಊಟದಿಂದ ನಾವು ನೆಮ್ಮದಿಯಿಂದಿರುವೆವು….ನಮಗೆ ಇದರಿಂದ ಕೆಟ್ಟ ಹೆಸರು ಬರುವುದು” ಎಂದು ಬ್ರಾಹ್ಮಣರು ತಮ್ಮಲ್ಲಿಯೇ ಬಗೆಬಗೆಯಾಗಿ ಮಾತುಗಳನ್ನು ಆಡಿಕೊಳ್ಳತೊಡಗಿದರು…

“ನಾವು ಮಾತಿನಲ್ಲಿ ಶೂರರು…ಕ್ಶತ್ರಿಯರು ಬಾಹುಬಲ ಪರಾಕ್ರಮಿಗಳು… ಆ ಕ್ಶತ್ರಿಯರನ್ನೆಲ್ಲಾ ಅಚಲವಾದ ಬಿಲ್ಲು ಸೋಲಿಸಿತು…ನಮಗೆ ಇದೇನು ವೇದ ವಿದ್ಯೆಯೆ…ಇದು ನಮಗೆ ಯೋಗ್ಯವಲ್ಲ…ನಮ್ಮ ಸಾಹಸವನ್ನು ನೋಡುವುದಾದರೆ…ಪಂಡಿತ ಸಮೂಹವು ಎದುರು ನಿಂತು ವಾದಿಸಲಿ… ಅಲ್ಲಿ ಅಚ್ಚರಿಯನ್ನು ತೋರಿಸುತ್ತೇವೆ ”

“ಆರು ಅಂಗಗಳಿಂದ ಕೂಡಿರುವ ವೇದದ ಪದಕ್ರಮಾದಿ ಎಲ್ಲ ಪಾಟಕ್ರಮಗಳಲ್ಲಿ…ಎಲ್ಲ ಪುರಾಣಗಳಲ್ಲಿ… ಮೀಮಾಂಸೆಯಲ್ಲಿ…ಸ್ಮ್ರುತಿ…ತರ‍್ಕಶಾಸ್ತ್ರಗಳಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಪರೀಕ್ಶಿಸಲಿ…. ಎದುರಿಸುತ್ತೇವೆ. ಕಾಮಶಾಸ್ತ್ರ ಮುಂತಾದ ಉಪಾಂಗ ವಿದ್ಯೆಯಲ್ಲಿ ಬೇಕಾದರೆ ನಮ್ಮನ್ನು ಪರೀಕ್ಶಿಸಲಿ…ನಾವು ದ್ರೌಪದಿಯನ್ನು ಗೆಲ್ಲುತ್ತೇವೆ. ನಾಟ್ಯಶಾಸ್ತ್ರದಲ್ಲಿ…ವೈದ್ಯಶಾಸ್ತ್ರದಲ್ಲಿ…ಕಾವ್ಯರಚನೆಯಲ್ಲಿ…ಆನೆ ಕುದುರೆಗಳ ಲಕ್ಶಣ ಶಾಸ್ತ್ರಗಳಲ್ಲಿ…ಸಕ್ರಮಗೊಳಿಸಿದ ಮಂತ್ರ ತಂತ್ರಗಳಲ್ಲಿ…ಸೊಗಸಾದ ಕವಿತೆಗಳ ರಚನೆಯಲ್ಲಿ…ವಿಸ್ತಾರವಾಗಿ ಉಪನ್ಯಾಸ ಮಾಡುವುದರಲ್ಲಿ ಮಹಾರಾಜ ನಮ್ಮನ್ನು ಕರೆಸಿ ನೋಡಲಿ” ಎಂದು ಬ್ರಾಹ್ಮಣರು ತಮ್ಮತಮ್ಮಲ್ಲೇ ಅಂದುಕೊಂಡರು.

“ಅದು ಬೇಡವಾದರೆ ಶುಚಿಗೊಳಿಸಿದ ಮಾಡಿದ ಸಿಹಿಬೆಲ್ಲವನ್ನು ಒಳಗಿಟ್ಟ ಪೂರಿಯ ರಾಶಿಯಲ್ಲಿ…ಪರಡಿಯ ಶಾವಿಗೆ ಮೊದಲಾದ ಬಗೆ ಬಗೆಯ ಪಾಯಸಗಳಲ್ಲಿ…ಹೋಳಿಗೆಯ ಹಾಗೂ ಅದೇ ಬಗೆಯಾದ ಸವಿಸವಿಯಾದ ಮಂಡಿಗೆಗಳಲ್ಲಿ…ಹೊಸದಾದ ತುಪ್ಪ, ಸಾರು, ತೊವ್ವೆ, ಮುಂತಾದ ವ್ಯಂಜನ ವಸ್ತುಗಳಲ್ಲಿ…ಉಪ್ಪಿನಕಾಯಿಯಲ್ಲಿ ನಮ್ಮ ಪರಾಕ್ರಮವನ್ನು ನೋಡಲಿ” ಎಂದು ತುಂಟ ವಟುಗಳ ಸಮೂಹವು ಹೇಳಿತು.

ಹೊರಗಿನ ಪಾದರಸದ ಲೇಪನದ ಒಳಗೆ ಸೇರಿಕೊಂಡಿರುವ ಬಂಗಾರದಂತೆಯೂ…ಜೀವಬಾವದೊಳಗೆ ಅದನ್ನವಲಂಬಿಸಿ ನೆಲೆಸಿರುವ ಪರಮಾತ್ಮನಂತೆಯೂ ಕಂಗೊಳಿಸುವ ಬ್ರಾಹ್ಮಣ ವೇಶದಲ್ಲಿ ತೇಜೋರೂಪಿ ದರ‍್ಮರಾಯನು ಆ ಸ್ವಯಂವರ ಮಂಟಪದಲ್ಲಿದ್ದ ಬ್ರಾಹ್ಮಣರ ನಡುವೆಯಿದ್ದು ಈ ಡಂಗುರದ ಸುದ್ದಿಯ ಮಹಾದ್ವನಿಯನ್ನು ಕೇಳಿದನು.

ದರ‍್ಮರಾಯನು ತಮ್ಮ ಅರ‍್ಜುನನ್ನು ನೋಡಿದನು. ಮದುವೆಗೆ ಒಡ್ಡಿರುವ ಪಂದ್ಯವನ್ನು ಸ್ವೀಕರಿಸುವಂತೆ ಸಂಕೇತ ಮಾಡಿದಾಗ ಅದನ್ನರಿತುಕೊಂಡು ಅರ‍್ಜುನನು ಕುಂತಿ, ದರ‍್ಮರಾಯ, ಬೀಮಸೇನರಿಗೆ ಮನಸ್ಸಿನಲ್ಲೆ ನಮಸ್ಕಾರ ಮಾಡಿದನು. ಜೊತೆಗೆ ಕುಳಿತಿದ್ದ ಎಲ್ಲ ಬ್ರಾಹ್ಮಣರನ್ನು ನೋಡಿ, ಮೆಲ್ಲನೆ ದೋತ್ರವನ್ನೂ ದರ‍್ಬೆಯ ಕಟ್ಟನ್ನೂ ಸರಿಪಡಿಸಿಕೊಳ್ಳುತ್ತಾ ಅರ‍್ಜುನನು ಸಬೆಯಲ್ಲಿ ಎದ್ದನು.

ಅರ‍್ಜುನನು ಎದ್ದುದನ್ನು ಕಂಡ ಕಿಡಿಗೇಡಿಗಳಾದ ವಟುಗಳು “ಏನು…ಸಿದ್ದಿಯ ಉಪಾದ್ಯರೇ…ಎದ್ದು ಬಿಟ್ಟಿರಿ…ಬಿಲ್ಲಿಗೋಸ್ಕರ ಅಲ್ಲವಶ್ಟೆ…ಮತ್ತೆ ತಮ್ಮ ಮನಸ್ಸಿನಲ್ಲಿನ ಆಸೆಯಾದರು ಏನು…ಸುಂದರಿಯನ್ನು ಬಯಸಿದಿರಾ…ಗರುಡನನ್ನೇ ಹೆದರಿಸುವ ನಂಜು ಸಾಮಾನ್ಯ ಹಾವಾಡಿಗರಿಗೆ ಸದರವೇ …ಇದೇನು ನಿಮ್ಮ ಉತ್ಸಾಹ” ಎಂದು ಅಣಕವಾಡಿದರು..

“ನಿಮಗೆ ಮದುವೆ ಬೇಕೆ….ಬೇಕಾಗಿದ್ದರೆ… ವೇದವನ್ನರಿತ ಬ್ರಾಹ್ಮಣ ಸಮೂಹದಲ್ಲಿ ` ನಮಗೆ ಹೆಣ್ಣು ಬೇಕು ” ಎಂದು ತಿಳಿಸುವುದು. ವಂಶಾನುಗತವಾಗಿ ಬಂದ ಬ್ರಾಹ್ಮಣೋಚಿತ ವಿದ್ಯೆಗಳ ಪರೀಕ್ಶೆಗಳಿಗೆ ಒಳಗಾಗುವುದು….ಹಾಗೆ ಮಾಡಿದರೆ ಮದುವೆಯಾಗುತ್ತದೆ… ಇದು ಬ್ರಾಹ್ಮಣರಿಗೆ ನೆಮ್ಮದಿ ಹಾಗೂ ಪುಣ್ಯವನ್ನು ಉಂಟು ಮಾಡುತ್ತದೆ….ಅದು ಬಿಟ್ಟು ನೀವು ಯೋಚಿಸಿರುವುದು ಬಗೀರತಯತ್ನವೇ ಸರಿ” ಎಂದು ಕೆಲವರು ಬ್ರಾಹ್ಮಣರು ಹೇಳಿದರು.

ಈ ಮಾತುಗಳನ್ನು ಕೇಳಿ ಅರ‍್ಜುನನು “ನೀವು ತಾಳ್ಮೆಯಿಂದಿರಿ…ನಿಮ್ಮ ಬಾವನೆಗಳಲ್ಲಿ ನನ್ನ ಬಗ್ಗೆ ಕರುಣೆಯ ನೋಟವಿದೆಯಲ್ಲವೇ…ನೀವು ಮಾಡುವ ಆಶೀರ‍್ವಾದದ ಶಕ್ತಿಯಿಂದ ನಾವು ಜಯಶಾಲಿಗಳಾಗುತ್ತೇವೆ…ಈ ಬಿಲ್ಲು ಯಾವ ದೊಡ್ಡದು” ಎಂದು ನುಡಿದ ಒಲುಮೆಯ ನುಡಿಗಳಿಗೆ ಬ್ರಾಹ್ಮಣರು ಸುಮ್ಮನಾಗದೆ ತಮ್ಮ ತಮ್ಮಲ್ಲೆ ಕೂಗಾಡಿದರು.

“ಹಿರಿಯ ವಿಶ್ಣು ಕ್ರಮಿತರೇ, ನೀವು ವೇದಗಳನ್ನು ಓದಿದವರು…ಬರಿಯ ಬ್ರಮೆಗೊಳಗಾದವನ ಮಾತನ್ನು ಕೇಳಿದಿರಾ…ದೀಕ್ಶಿತರೇ, ಇವನು ಬಿಲ್ಲು ಹಿಡಿಯಲು ಪ್ರಯತ್ನ ಮಾಡುತ್ತಿದ್ದಾನಲ್ಲ…ಇದು ಕ್ರಮವೇ…ಕ್ಶತ್ರಿಯರಿಗೆ ಮೀಸಲಾದ ರಂಗವನ್ನು ಆಕ್ರಮಿಸುವುದು ಒಳ್ಳೆಯ ದರ‍್ಮವೇ… ಬ್ರಾಂತಿಗೊಂಡಿರುವ ಇವನು…ವೇದಗಳನ್ನು ಓದಿದವರ ಸಮೂಹಕ್ಕೆ ಕಳಂಕವನ್ನು ತರುತ್ತಾನೆ ” ಎಂದು ದೂರಿದರು.

ಬ್ರಾಹ್ಮಣರಲ್ಲಿ ಕೆಲವರು ಹೋಗಬೇಡ ಎಂದು ನಿಂದಿಸಿದರು. ಕೆಲವರು ನಾವು ಹೇಳುವುದೇನು…ಅವನು ತಾನೇ ಬಲ್ಲ…ಬೇಕಾದ್ದು ಮಾಡಿಕೊಳ್ಳಲಿ ಎಂದರು. ಕೆಲವರು ಇವನಿಂದ ಬ್ರಾಹ್ಮಣರ ಗುಂಪೇ ಅಪಹಾಸ್ಯಕ್ಕೀಡಾಗುತ್ತದೆ ಎಂದರು. ಕೆಲವರು ಇದರಲ್ಲೇನು ತಪ್ಪು ಎಂದು ತಟಸ್ತರಾದರು. ಕೆಲವರು ಇವನು ಕಟ್ಟುಮಸ್ತಾದ ದೇಹವುಳ್ಳವನಾಗಿದ್ದಾನೆ…ಇವನಿಗೆ ಬಿಲ್ಲು ಒಲಿಯುತ್ತದೆ. ಇವನು ಬಾಗ್ಯಶಾಲಿಯಂತೆ ಕಾಣುತ್ತಾನೆ ಎಂದುಕೊಂಡರು.

ಹೀಗೆ ಎಲ್ಲರೂ ಮಾತನಾಡುತ್ತಿರುವಾಗ…ಅರ‍್ಜುನನು ಸಬೆಯಲ್ಲಿ ಗಂಬೀರವಾಗಿ ಮುಂದಕ್ಕೆ ನಡೆಯತೊಡಗಿದನು….ಅವನು ಹೊಸ ಜನಿವಾರವನ್ನು ತೊಟ್ಟಿದ್ದಾನೆ…ಹಣೆಯಲ್ಲಿ ವಿಬೂತಿ ಹಚ್ಚಿಕೊಂಡಿದ್ದಾನೆ…ದರ‍್ಬೆಯ ಬುಟ್ಟಿಯನ್ನು ಕಟ್ಟಿ ಕಂಕುಳಲ್ಲಿ ತುರುಕಿಕೊಂಡಿದ್ದಾನೆ…ಬೆರಳಲ್ಲಿ ದರ‍್ಬೆಗಳ ಪವಿತ್ರ ಉಂಗುರ ಮೆರೆಯುತ್ತಿದೆ…ಅಂದವಾಗಿ ಕಟ್ಟಿದ ಕಚ್ಚೆ ಜೋತಾಡುತ್ತಿದೆ…ಈ ವೇಶದಿಂದ ಬಿಲ್ಲನ್ನು ಎತ್ತಲು ಹೋಗುತ್ತಿರುವ ಇವನನ್ನು ಕಂಡು…ಸುತ್ತಮುತ್ತಲ ಜನರು ತುಂಬ ಗಟ್ಟಿಯಾಗಿ ನಗುತ್ತಿದ್ದರೆ… ಅದನ್ನು ಗಮನಿಸದೆ ಬ್ರಾಹ್ಮಣ ವೇಶದಾರಿಯಾದ ಅರ‍್ಜುನನು ಮೆಲ್ಲನೆ ಮುಂದುವರಿದನು.

ಎಲ್ಲ ದೊರೆಗಳು ಇತ್ತ ತಿರುಗಿ ನೋಡಿದರು…ಅರ‍್ಜುನನು ಬಿಲ್ಲನ್ನು ಎತ್ತಲು ಹೋಗುತ್ತಿರುವುದನ್ನು ನೋಡಿ ಗಹಗಹಿಸಿ ನಕ್ಕರು…“ಇದೇನಿದು…. ಇವನೇನು ಅರೆ ಮರುಳನೋ… ತಿಳಿಗೇಡಿಯೋ… ಬ್ರಾಹ್ಮಣ ವೇಶದಿಂದ ಮಯ್ ಮರೆಸಿಕೊಂಡಿರುವ ದೇವೇಂದ್ರನೋ…ಅಯ್ಯೋ…ನಮಗೆ ಹುಚ್ಚು..ಮನ್ಮತನ ಬಾಣಕ್ಕೆ ಗುರಿಯಾದರೆ…ಯಾರ ಮನಸ್ಸು ತಾನೆ ಕಳವಳಿಸದೆ ಇರುತ್ತದೆ” ಎಂದು ಸಬೆಯಲ್ಲಿ ಮಾತಾಡಿಕೊಂಡರು.

“ಇವನಿಗೆ ಬಿಲ್ಲು ಎತ್ತುವುದಕ್ಕೆ…ಅದೇನು ಜಿಂಕೆಯ ತೊಗಲೋ…ಸಾಲಗ್ರಾಮ ದೇವರೋ…ಉತ್ತಮವಾದ ತುಳಸಿಯೋ…ದರ‍್ಬೆಯೋ… ಸಮಿತ್ತುಗಳ ಕಟ್ಟೋ…ನೆನಸಿದ ಎಳ್ಳೋ…ಇಲ್ಲವೇ…ಇದು ಉಪಾಸನೆಯ ಕೊಳವಿಯೋ…ಏನೆಂದು ತಿಳಿದುಕೊಂಡಿದ್ದಾನೆ….ಈ ದರಿದ್ರ ಬ್ರಾಹ್ಮಣನ ಆಲೋಚನೆ ನೋಡಿದಿರಾ…ಆಹಾ…ದ್ರೌಪದಿಯ ಪುಣ್ಯ ದೊಡ್ಡದು.” ಎಂದುಕೊಂಡರು.

“ಕ್ಶತ್ರಿಯರಾದ ನಮಗೆ ಆನೆ..ಕುದುರೆ..ಶಸ್ತ್ರಗಳ ಜ್ನಾನ ಕರಗತವಾಗಿದೆ…ಬ್ರಾಹ್ಮಣರಿಗೆ ವೇದ…ಪುರಾಣ…ತರ‍್ಕ…ಶ್ರುತಿಯ ವಿದ್ಯೆಗಳು ಕರಗತವಾಗಿವೆ…ಯಾರಿಗೆ ಯಾವುದು ಸೂಕ್ತವಾದುದೋ…ಅದೇ ಅವರಿಗೆ ಅಸಾದ್ಯವಾಗಿರುವಾಗ…ಇನ್ನು ಸೂಕ್ತವಲ್ಲದ್ದನ್ನು ಮಾಡುವುದಕ್ಕೆ ಹೊರಟರೆ ಅದು ಈಡೇರುವುದೇ…ಬಿಲ್ ವಿದ್ಯೆಯ ಈ ಪಂತವಿದು…ಬ್ರಾಹ್ಮಣರಿಗೆ ಸರಿಹೊಂದದ ನಡವಳಿಕೆ ” ಎಂದು ರಾಜರುಗಳು ಟೀಕಿಸಿದರು.

ಅತ್ತ ಕಡೆ ದೊಡ್ಡ ಸಮುದ್ರದಂತಿರುವ ಸ್ತ್ರೀಸಮೂಹದ ಹುಬ್ಬಿನ ವಿಕಾರದ ಅಲೆಗಳು ವ್ಯಾಪಿಸಿದವು…ನೀರ ಮೇಲಿನ ಗುಳ್ಳೆಗಳಂತೆ…ಅವರ ಮುಕದಲ್ಲಿ ಪ್ರಸನ್ನ ನಗೆ ಉಂಟಾಯಿತು…ಗಹಗಹಿಕೆಯ ನಗುವಿನ ಮೊರೆತ ಕೇಳಿಸಿತು…ಹೊಳೆಯುವ ಚಂಚಲ ನೋಟಗಳಲ್ಲಿ ಮರಿಮೀನುಗಳ ಕಣ್ಣುಗಳ ಕಾಂತಿ ಗೋಚರಿಸಿತು.

“ಈ ಕಡೆಗೆ ತಿರುಗಿ ನೋಡು ತಾಯಿ…ಬ್ರಾಹ್ಮಣರ ಕಡೆಗೆ…ಗಡ್ಡದ ಉಪಾದ್ಯರನ್ನು…ಅವರು ಬಿಲ್ಲು ಎತ್ತುತ್ತಾರಂತೆ…ಮೀನನ್ನು ಹೊಡೆಯುತ್ತಾರಂತೆ…ಕಾಲ ಕಳೆಯುವುದಕ್ಕೆ ಒಳ್ಳೆಯದಾಯಿತು… ಬ್ರಾಹ್ಮಣರು ಈ ಕಾರ‍್ಯಕ್ಕೆ ಯೋಗ್ಯರಾದರಲ್ಲವೇ” ಎಂದು ಸಕಿಯರು ಹಾಸ್ಯ ಮಾಡಿದರು. ಅದಕ್ಕೆ ದ್ರೌಪದಿ ತಲೆತಗ್ಗಿಸಿ ಕಾಲ ಹೆಬ್ಬೆಟ್ಟಿನಲ್ಲಿ ನೆಲವನ್ನು ಒತ್ತುತ್ತ ನಾಚಿಕೊಂಡಳು.

ಮತ್ತೆ ಕೆಲವು ಚಪಲಚಿತ್ತದ ಸಕಿಯರು ನಗುನಗುತ್ತ ಅರ‍್ಜುನನನ್ನು ಕುರಿತು “ಎಲವೋ ವಿಬೂತಿ ಬಳಿದಿರುವ ಮನ್ಮತ…ದರ‍್ಬೆಯ ಎಳ್ಳಿನ ಮದನ…ಶುಚಿಯಾದ ದೋತ್ರವನ್ನುಟ್ಟು ಅಂದವಾಗಿ ಕಚ್ಚೆ ಹಾಕಿರುವ ಕಾಮದೇವ…ಜಿಂಕೆಯ ತೊಗಲನ್ನು ತೊಟ್ಟಿರುವ ಕಂದರ‍್ಪ…ತಾವರೆ ಮೊಗದವಳನ್ನು ವರಿಸು ಬಾ…ಎಲೆ ಅಕ್ಕ ಕೇಳವ್ವ, ನಿನಗೆ ಇವನು ಸರಿ ಹೊಂದುತ್ತಾನೆ…ನಾವು ನಿಮ್ಮಿಬ್ಬರನ್ನು ಜತೆಗೂಡಿಸುತ್ತೇವೆ… ನೋಡು” ಎಂದು ದ್ರೌಪದಿಯ ಸಕಿಯರು ಚೇಶ್ಟೆಯ ಮಾತನ್ನಾಡಿದರು.

ಆಗ ಕ್ರಿಶ್ಣನು ಅಣ್ಣನನ್ನು ಕುರಿತು “ಬಲರಾಮಾ, ಅದೋ ನೋಡು. ಮೋಡಗಳ ಗುಂಪಿನೊಳಗಿನ ಸೂರ‍್ಯನಂತೆ ಬ್ರಾಹ್ಮಣರ ಸಮೂಹದಿಂದ ವಿಪ್ರವೇಶದಲ್ಲಿ ಮೈಮರೆಸಿಕೊಂಡು ಅರ‍್ಜುನನು ಬರುತ್ತಿದ್ದಾನೆ….ನಾನು ವಸುದೇವನಾಣೆಗೂ ಎಂದು ನಿನಗೆ ಆಗ ಹೇಳಿದ್ದು ಸುಳ್ಳಾಗಲಿಲ್ಲ ತಾನೆ…ಸಬಾಮದ್ಯದಲ್ಲಿ ಬರುತ್ತಿರುವವನು ಅರ‍್ಜುನ… ಇನ್ನುಳಿದ ದರ‍್ಮರಾಯನೊ…ಬೀಮನೊ…ಅವರ ತಾಯಿಯೊ ಮೊದಲಾದವರೆಲ್ಲಾ ವಿಪ್ರ ಜನರ ನಡುವೆ ಸ್ವಯಂವರ ಮಂಟಪದಲ್ಲಿದ್ದಾರೆ” ಎಂದು ಕ್ರಿಶ್ಣನು ಹೇಳಲು…

“ನಿನಗೆ ಅವರ ಬಗ್ಗೆ ಇದೆಲ್ಲ ಹೇಗೆ ತಿಳಿಯಿತು…ಅವರು ಅರಗಿನ ಮನೆಯಿಂದ ಹೇಗೆ ತಪ್ಪಿಸಿ ಕೊಂಡರು…ಶಿವ ಶಿವಾ…ನೀನು ಮಾಯಾ ವಿದ್ಯೆಯಲ್ಲಿ ಅದೆಶ್ಟು ನಿಪುಣನಿದ್ದೀಯೋ” ಎಂದನು ನಗುತ್ತ ಬಲರಾಮ.

ಇತ್ತ ಕ್ಶತ್ರಿಯರ ಅಣಕದ ಮಾತುಗಳನ್ನು…ಹೆಂಗಸರ ವ್ಯಂಗ್ಯದ ನುಡಿಗಳನ್ನೂ…ಬ್ರಾಹ್ಮಣರ ಪರಿಪರಿಯ ಕಟುನುಡಿಗಳು ಹಾಗೂ ಹಿತಕರವಾದ ಮಾತುಗಳನ್ನು ಕೇಳುತ್ತ…ಮುಗುಳುನಗುತ್ತ…ಹೊಸದಾಗಿ ಮದವೇರಿದ ಆನೆಯ ನಡಿಗೆಯ ಗತ್ತಿನಲ್ಲಿ ಅರ‍್ಜುನನು ನಡೆದುಬಂದನು….

ವೀರರಾದ ಕೆಲವು ರಾಜರು ಅರ‍್ಜುನನನ್ನು ಗಮನಿಸಿ ನೋಡಿ…ಇವನ ನಡಿಗೆ… ಮೊಗಸನ್ನೆ…ಸಂಬ್ರಮ…ಚೆಲುವು…ಯಾವುದನ್ನೂ ಲೆಕ್ಕಿಸದ ಬಾವ… ಶಕ್ತಿಯ ಹೆಚ್ಚಳ…ಹಿರಿಮೆ…ಗತ್ತು…ಹೆದರಿಕೆಯಿಲ್ಲದ ನಿಲುವು…ಉತ್ಸಾಹ, ಇವನ ಪವಿತ್ರವಾದ ಕ್ಶತ್ರಿಯ ಸಹಜವಾದ ಪರಾಕ್ರಮ…ಇವನ ದರ‍್ಪ-ಇವುಗಳೇ ಸಾಕು…ಇವನು ಅತಿಶಯದ ವೀರ ಎಂದು ಹೇಳಲು ಎಂದರು.

ಬರುತ್ತಿರುವಾಗ ಅರ‍್ಜುನನು ಬೀಶ್ಮ..ದ್ರೋಣ..ಕ್ರುಪರಿಗೆ ಮನಸ್ಸಿನಲ್ಲೇ ನಮಸ್ಕರಿಸಿದನು….ಯಾದವರ ಅರಸರ ಸಾಲಿನಲ್ಲಿದ್ದ ಕ್ರಿಶ್ಣನಿಗೆ ನೋಟದಲ್ಲಿಯೇ ನಮಸ್ಕರಿಸಿದನು…ಇಂದ್ರ…ಶಣ್ಮುಕ…ಗಣಪತಿ… ದಿಕ್ಪಾಲಕರು…ರುದ್ರ…ಆದಿತ್ಯ…ವಸುಗಳು ಇವರೇ ಮೊದಲಾದ ದೇವತೆಗಳಿಗೆ ನಮಸ್ಕರಿಸಿ.. ಅತಿಶಯವಾದ ಬಿಲ್ಲನ್ನು ಇಟ್ಟಿದ್ದ ಕಡೆಗೆ ಬಂದನು.

ಬಿಲ್ಲಿನ ಮೊದಲಲ್ಲಿ ಬ್ರಹ್ಮನನ್ನು…ಮದ್ಯದಲ್ಲಿ ವಿಶ್ಣುವನ್ನು…ತುದಿಯಲ್ಲಿ ಶಿವನನ್ನು ಆಹ್ವಾನಿಸಿದನು….ಇದು ಬಲವುಳ್ಳ ರಾಜರ ಸೊಕ್ಕನ್ನು ಮೆಟ್ಟಿದ ಬಿಲ್ಲು…ಪೂತುರೆ ಎನುತ್ತ…ಅದನ್ನು ಕೈಗೆತ್ತಿಕೊಂಡು…ಅದು ಬಾಗುವಂತೆ ಒತ್ತಿ…ಅದರ ಕೊರಳಿಗೆ ಹೆದೆಯನ್ನು-ಬಿಲ್ಲಿಗೆ ಹೂಡುವ ಬಾಣಕ್ಕೆ ಆದಾರವಾದ ದಾರವನ್ನು-ಕಟ್ಟಿದನು.

ಕಟ್ಟಿದ ಹೆದೆಯನ್ನು ಸೆಳೆದು ಕಿವಿಯವರೆಗೆ ಎಳೆದನು …ಇದು ಹದವಾಗಿರುವ ಬಿಲ್ಲು…ಬಲು ಜೋರಾಗಿ ಹೊಡೆತ ಕೊಟ್ಟಿತು…“ಸುಮ್ಮನೆ ಮಾಗದಾದಿಗಳು ಹೆದರಿಬಿಟ್ಟರು…ನನಗೆ ಹೆಸರು ಬರಬೇಕೆಂದು ಅವರೆಲ್ಲ ಇದರಲ್ಲಿ ಹಿಮ್ಮೆಟ್ಟಿದರೆಂದು ಕಾಣುತ್ತದೆಯಲ್ಲವೇ” ಎನ್ನುತ್ತ…ಅಲ್ಲಿದ್ದ ಅಯ್ದು ಬಾಣಗಳನ್ನು ತೆಗೆದುಕೊಂಡು ಹೊಳೆಯುತ್ತಿದ್ದ ಯಂತ್ರವನ್ನು ನೋಡಿದನು.

ಗುರಿಯನ್ನು ನೋಡಿ ಬಾಣವನ್ನು ಕಿವಿಯವರೆಗೆ ಸೆಳೆದು…ಬಾಣವನ್ನು ಬಿಟ್ಟು…ಯಂತ್ರದಲ್ಲಿ ಬಾಣವನ್ನು ನಾಟಿಸಿದನು. ಯಂತ್ರ ಬೇದಿಸುವುದರಲ್ಲಿ ಅರ‍್ಜುನನ ಗುರಿಯ ಅತಿಶಯವಾದ ಕುಶಲತೆಯನ್ನು ಯಾರು ತಾನೆ ಬಲ್ಲರು…ಜಾಗು…ದಣು…ದಣು…ಪೂತು… ಬಿಲ್ ವಿದ್ಯೆಯ ಸಿದ್ದನೇ…ಮಜುರೆ…ಕೋದಂಡ ಆಗಮದ ಶಿವನೇ ” ಎಂದು ಹೊಗಳುಬಟ್ಟರ ಗುಂಪು ಕೊಂಡಾಡಿತು.

ಬ್ರಾಹ್ಮಣರ ಗುಂಪು ಇದನ್ನು ನೋಡಿ ದೊಡ್ಡ ದನಿಯಲ್ಲಿ“ಆಯ್ ” ಎಂದು ಹೆಮ್ಮೆಯಿಂದ ಕೂಗುತ್ತ…”ತಾವರೆಮೊಗದವಳು ನಿರಾಯಾಸವಾಗಿ ಬ್ರಾಹ್ಮಣನಿಗೆ ದೊರೆತಳು” ಎನ್ನುತ್ತ ಆನಂದದಿಂದ ಕುಣಿದಾಡಿದರು… ಅಲ್ಲಿದ್ದ ಯುವತಿಯರು ಉತ್ಸಾಹಗೊಂಡರು. ಸ್ವಯಂವರ ಮಂಟಪದಲ್ಲಿದ್ದ ರಾಜರು ಮಾತಾಡದೆ ಸುಮ್ಮನಾಗಿ…ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟು……ಚಿಂತೆಯನ್ನು ಹೊತ್ತು ಕುಳಿತಿದ್ದರು.

ಸ್ವಯಂವರ ಮಂಟಪದಲ್ಲಿ ತುಂಬಾ ಸಡಗರದಿಂದ ಮಂಗಳ ವಾದ್ಯಗಳು ಮೊಳಗತೊಡಗಿದವು…ದೇವತೆಗಳ ಸಮೂಹ ನಗಾರಿಗಳನ್ನು ನುಡಿಸಿತು…. “ಒಳ್ಳೆಯದಾಗಲಿ” ಎಂಬ ಕಲಕಲರವ ಸಬಾಂಗಣದಲ್ಲಿ ತುಂಬಿತು…ಹೂಮಳೆಯ ಹೊನಲಿನಲ್ಲಿ ಜನ ಮುಳುಗಿತು…ಅತಿಶಯದ ಅಬ್ಬರವು ಮೂರು ಲೋಕವನ್ನು ವ್ಯಾಪಿಸಿತು.

ದ್ರುಪದ ರಾಜನ ಅಪ್ಪಣೆಯಂತೆ…ಅರವತ್ತು ಸಾವಿರ ವೀರರ ಪಡೆ ಕತ್ತಿಯನ್ನು ಹಿಡಿದು ಅರ‍್ಜುನನ ರಕ್ಶಣೆಗಾಗಿ…ಅವನ ಸುತ್ತ ನಿಂತರು…ಇತ್ತ ಕಡೆ…ಹೆಣ್ಣುಕುಲದ ಕಿರೀಟದ ರತ್ನವಾದ ಹಾಗೂ ಮನ್ಮತನ ಸೇನೆಯ ಮದಿಸಿದ ಗಜ ಎನ್ನಿಸಿಕೊಂಡ ದ್ರೌಪದಿಯು…ಅರ‍್ಜುನನ ಬಳಿಗೆ ಬಂದಳು.

“ದೂರ ಸರಿಯಿರಿ…ಕಾಮದೇವನ ಕಾಂತಿಯುಕ್ತ ಕತ್ತಿ ಬರುತ್ತಿದೆ…ಅತ್ತ ಪಕ್ಕಕ್ಕೆ ಹೋಗಿ” ಎಂದು ರಾಣಿವಾಸದ ಕಂಚುಕಿಗಳ ಸಮೂಹ ಮುಂದಿನ ಗುಂಪನ್ನು ಚದುರಿಸಿತು…ದ್ರೌಪದಿಯು ಪಲ್ಲಕ್ಕಿಯಲ್ಲಿ ಬಂದು…ಅರ‍್ಜುನನ ಪಕ್ಕದಲ್ಲಿ ಇಳಿದಳು. ಆಗ ಅವಳ ಮನಸ್ಸಿನಲ್ಲಿ ಹರುಶ…ನಾಚಿಕೆಗಳು ಒಂದೇ ಕಾಲದಲ್ಲಿ ಮೂಡಿದವು….

ತನ್ನ ಸುಂದರವಾದ…ಮನೋಹರವಾದ ಕಡೆಗಣ್ಣಿನಲ್ಲಿ ಅವನನ್ನು ಎಶ್ಟು ನೋಡಿದರೂ…ಅವಳ ಕಣ್ಣುಗಳಿಗೆ ತ್ರುಪ್ತಿಯಾಗಲಿಲ್ಲ…ಉತ್ಸಾಹಗೊಂಡ ರೋಮಾಂಚನ ಜಲದಲ್ಲಿ ಸುಂದರಿಯ ಮಯ್ ಮೂಡಿ ಮುಳುಗಿತು…ಒತ್ತರಿಸಿ ಬಂದ ನಾಚಿಕೆಯ ರಬಸಕ್ಕೆ ಮನಸ್ಸು ತವಕಿಸಿತು…ಆಕೆಯ ಶರೀರದಲ್ಲೆಲ್ಲಾ ಸಾತ್ವಿಕ ಬಾವನೆಯು ತುಂಬಿತು.

ನಾಚಿಕೆಯ ತೀವ್ರವಾದ ಹಿಂಜರಿಯಿಕೆಯಿಂದ ಬೆವರಿಡುತ್ತ…ಮೊಲೆಗಳ ಅಲುಗಾಟದಲ್ಲಿ ಜಾರುವ ಸೆರಗನ್ನು ಸರಿಪಡಿಸಿಕೊಳ್ಳುತ್ತ…ನೆಟ್ಟಗೆ ನಿಂತು…ಬಾವನೆಗಳ ಒತ್ತಡದಿಂದ ಕಂಪಿಸುತ್ತ ದ್ರೌಪದಿಯು ತನ್ನ ದೇಹದ ಪರಿಮಳವನ್ನೂ ಜತೆಯಲ್ಲಿಯೇ ಕೂಡಿಸಿಕೊಂಡಿರುವ ಹೂವಿನ ಮಾಲೆಯನ್ನು…ತನ್ನ ವರನ ಕೊರಳಲ್ಲಿ ಹಾಕಿದಳು…ದೇವತೆಗಳ ಸಮೂಹ ಜಯ ಜಯವೆಂದು ಒಳಿತನ್ನು ಹರಸಿತು.

ತನ್ನ ಕೊರಳಲ್ಲಿ ದ್ರೌಪದಿಯ ತೊಡಿಸಿದ ಹೂವಿನ ಮಾಲೆ…ತನ್ನ ಕೈಯಲ್ಲಿ ದೊಡ್ಡ ಬಿಲ್ಲು…ಪಕ್ಕದಲ್ಲಿ ಪರಿಮಳ ಸೂಸುವ ಶರೀರದ ವಿಶಾಲ ಹೂವಿನ ದಳದಂತಹ ಕಣ್ಣುಳ್ಳ ಯುವತಿ-ಈ ಮೂರೂ ಸೇರಿ ವರನಾದ ಅರ‍್ಜುನನ ರೀತಿ ಅತಿಶಯವಾದ ಚೆಲುವಿನಿಂದ ಕೂಡಿತ್ತು. ಹರನ ಶತ್ರುವಾದ ಮನ್ಮತನು ಹಾರುವನಾದನು…“ನಮ್ಮ ರಾಣಿ ಹಾರುವಿತಿಯಾದಳು” ಎಂದು ಚಪಲೆಯರು ನಕ್ಕರು.

ದ್ರೌಪದಿಯೊಡನೆ ಅರ‍್ಜುನನನ್ನು ಅರಮನೆಗೆ ಕರೆತಂದರು.

(ಚಿತ್ರ ಸೆಲೆ:
quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *