ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ…

– ಅಜಯ್ ರಾಜ್.

self-centred

( ಬರಹಗಾರರ ಮಾತು:  ಸ್ಪರ‍್ದಾತ್ಮಕ ಜಗತ್ತಿನಲ್ಲಿ ಮನುಶ್ಯರು ಯಂತ್ರಗಳಾಗಿದ್ದಾರೆ. ತಮ್ಮದೇ ಸಹಪಾಟಿಗಳು ಬದುಕಿನಲ್ಲಿ ಬಿದ್ದಾಗ ಮೇಲೆತ್ತುವ ಸೌಜನ್ಯ ತೋರದೆ ಮಾನವೀಯತೆಯನ್ನು ಮರೆತಿದ್ದಾರೆ. ಅಂತಾ ಮನಸ್ತಿತಿ ಕುರಿತು ಬರೆದ ಕವಿತೆಯಿದು)

ಬೆಳಗಾಗುತ್ತಲೇ ಎದ್ದು
ಗಂಗೆಯಲಿ ಮಿಂದು
ಸೂಟುಬೂಟುಗಳ ದರಿಸಿ ಆಪೀಸಿನೆಡೆಗೆ
ನಾಗಾಲೋಟವೇ ಪ್ರತಿನಿತ್ಯವಿಂದು

ಮನವೆಂಬ ಮರ‍್ಕಟದೊಳಗೆ
ನೂರೊಂದು ಸಂಕಟ
ಕೌಟುಂಬಿಕ ಕಲಹ, ನಿತ್ಯ ನೂರು ವಿರಹ
ಹಾ…! ಬದುಕು ಜಿಗುಪ್ಸೆಯ ವಿಶಿಶ್ಟ ಬರಹ

ಆಪೀಸಿನ ಗೋಡೆಗಳ ನಡುವೆ
ಯಂತ್ರ ತೊಟ್ಟಿಲುಗಳೊಳಗೆ
ಸಿಗಬಹುದೆ ಶಾಂತಿ…?
ಏನಯ್ಯ ನೀನು…? ಬಯಸಿದರಿದನು ಇನ್ನು
ಬ್ರಾಂತಿಯೊಂದೇ ಕಟ್ಟಿಟ್ಟ ಬುತ್ತಿ

ಹತಾಶೆ ಬೆನ್ನಟ್ಟಿ ಬರುತಿದೆ
ಆಶಾಕಿರಣ ತೊಡರುತ್ತಿದೆ
ಕುಸಿದು ಬಿದ್ದೆ ನಾನು, ತಡೆಯಲಾರದಿನ್ನು
ಕ್ಲಿಶ್ಟತೆಯಲಿ ಕನಸು ಕಮರಿಹೋಗುತ್ತಿದೆ

ಸಾಮಾನ್ಯ ಸ್ಪಂದನೆಗೆ ನನ್ನೊಳ ಬಯಕೆ
ಚೀತ್ಕರಿಸುತ್ತಿದೆ
ಪರಮನೋ, ಪಾಮರನೋ
ದಾವಿಸಿ ಬಾರಯ್ಯಾ
ನಾ ನಿನ್ನದೇ ಕಚೇರಿಯ
ಸಹೊದ್ಯೋಗಿ ಗೆಳೆಯ

ಕೈ ಹಿಡಿದು ಮೇಲೆತ್ತಿ ರುಣಿಯಾಗಿಸು
ಜೋತು ಬಿದ್ದು ಜಡವಾಗಿಹ ದೇಹದಲಿ
ಸಂಚಲನ ಮೂಡಿಸು
ಹೆಗಲು ಕೊಟ್ಟು ಸಾಂತ್ವನಿಸುವುದೇ
ನೈಜ ಮಾನವೀಯತೆ
ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ!!

( ಚಿತ್ರ ಸೆಲೆ: buzzle.com )

ನಮ್ಮೂರಿನ ನೆನಪ ತೋಟದಲ್ಲಿ

– ಅಮರ್.ಬಿ.ಕಾರಂತ್.

DSC_0031

ಏಡು ಮೂವತ್ತಾಗಲಿ ಮತ್ತೊಂದಾಗಲಿ
ಸಲಸಲವು ಇಲ್ಲಿ ಬಂದಾಗ ಅರಿವು ಅಳಿಯುವುದು
ಮೊಟ್ಟೆಯಿಂದೊಡೆದು ಬರುವ ಮರಿಯಂತೆ
ಮಗುವಾಗಿ ಹೊರಳುವೆನು ಕೊಸರುವೆನು
ಈ ಊರ ಚೆಲುವ ಮಡಿಲಿನಲ್ಲಿ.

ಹೊಕ್ಕೊಡೆ ಊರಕೇರಿಯ ಎಡತಿರುವಿನಲಿ
ಕಮರಿದ ನೆನಪು ಮೈಕೊಡವಿ ಹರಡುವುದು
ಕದಡದ ಕೊಳದೊಳ್ ಅಲೆ ಅಲೆಯುವಂತೆ
ಹರೆಯೆಳೆಯ ಬದುಕ ಬೆದಕುವೆನು
ಈ ಬಳಿಯ ಬೆಡಗ ಕಾಣ್ಮೆಯಲ್ಲಿ.

ಹುಲ್ಲು ಹಾಸಿನ ಮನೆಯ ಅಂಗಳದಲಿ
ಮುದುಡಿ ಕೂತೊಡೆ ಮನದ ಕದ ತೆರೆಯುವುದು
ಹಸಿದ ಹಸುಗೂಸಿನ ಚೆಂದುಟಿಗಳಂತೆ
ಬಾಳ್ವಾಲ ಹನಿಗೆ ಹಾತೊರೆಯುವೆನು
ಬಂದ ಬಾನಾಡಿಗಳ ಉಲಿಪಿನಲ್ಲಿ.

ಗುಡ್ಡ ಹಾಡಿಯ ನೆರಳಿನಲಿ
ದಾರಿ ಸಮೆದೊಡೆ ಅಮಲು ಮುಸುಕುವುದು
ಹಳೆಯ ಹುಳಿಹೆಂಡವ ಗಟಗಟನೆ ಕುಡಿದಂತೆ
ಮುಳ್ಳುಪೊದೆಯೊಳು ತೂರಿ ನಡೆಯುವೆನು
ತೆರೆಯ ಕಾಲ್ಸುಳಿಯ ತವಕದಲ್ಲಿ.

ಕಿರುಮಲೆಯ ಮೇಲ್ ಹರವಿನಲಿ
ಕಡಲನಪ್ಪಿದ ಬಾನು ಕೆಂಪೇರುವುದು
ಗಾಳಿಗದುರಿದ ಚವುಳಿಯ ಕೊಟ್ಟೆಯಂತೆ
ಕದಲಿಕೆಯ ದೂಸರೆಗಳ ಅರಸುವೆನು
ಕೊನೆಗಾಣುವ ಮುಗಿಲ ಅಂಚಿನಲ್ಲಿ.

ಮರುದಿನದ ಮುಂಬಗಲಿನ ಮಬ್ಬಿನಲಿ
ತೆರಳಲು ಅಗಲಿಕೆಯ ನೋವು ಇರಿಯುವುದು
ಕೊಯ್ಮಾಂಜುಗನ ಹರಿತಾದ ಕಯ್ದಿನಂತೆ
ನೋಟದಿರಿತವ ಮರಮರಳಿ ಸವಿಯುವೆನು
ನಮ್ಮೂರಿನ ನೆನಪ ತೋಟದಲ್ಲಿ.

(ಚಿತ್ರಸೆಲೆ: ಅಮರ್.ಬಿ.ಕಾರಂತ್)

ನೆನಪಿನಂಗಳ

ಸುನಿತಾ ಹಿರೇಮಟ.

ಒಂದು ಎರಡು ಬಾಳೆಲೆ ಹರಡು ಎಂದು ಶಾಲೆ ಮೆಟ್ಟಿಲು ಹತ್ತಿದವಳಿಗೆ ಕಾಲೇಜು ವಿದ್ಯಾಬ್ಯಾಸ ಮುಗಿಸಿ ಕೆಲಸ, ಮದುವೆ, ಮನೆ, ಮಕ್ಕಳು ಎನ್ನುವ ಪ್ರಪಂಚದಲ್ಲಿ ಮುಳುಗಿದವಳಿಗೆ ಮತ್ತೆ ಶಾಲೆ ನೆನಪಾದದ್ದು ಮಗಳು ಶಾಲೆ ಸೇರುವಾಗಲೇ. ಅಬ್ಬಾ ಇಂದಿನ ಶಾಲೆಗು ಅಂದಿನ ನನ್ನ ಹೆಂಚಿನ ಶಾಲೆಗೂ ಇರುವ ಅಂತರ ……….. ಬಹಳ.

ಕಾಲ ತರುವ ಬದಲಾವಣೆಗಳಲ್ಲಿ ಕಳೆದು ಹೋಗಿರುವ ಆ ದಿನಗಳನ್ನು, ಕೊಂಡಿಗಳನ್ನು ಮತ್ತೆ ಕೂಡಿಸಲಾಗದೆ ಕಳೆಯಲು ಆಗದೆ, ಹಾಗೆಯೇ ಗುಣಿಸಿ ಮನಸ್ಸು ಚಡಪಡಿಸಿ ಆ ಸಮಯಕ್ಕೆ ಹಣಕ್ಕಿದ್ದಂತೂ ನಿಜ, ಬದುಕಿನ ಆ ದಿನಗಳನ್ನ ಮೆಲುಕು ಹಾಕಿಕೊಂಡಾಗ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವ ನನ್ನ ಆ ಶಾಲಾ ದಿನಗಳು.

ಎಂತಹ ಕುಶಿ ಇತ್ತು ಆ ದಿನಗಳಲ್ಲಿ. ಕಾಕಿ ಬಣ್ಣದ ದಪ್ಪ ನೂಲಿನ ಆ ಚೀಲದಲ್ಲಿ ಒಂದು ಸ್ಲೇಟು ಬಳಪ ಇಟ್ಟು ಹೊರಟರೆ ಬೇರೆ ಯಾವ ನೆನಪು ಇರತ್ತಿರಲಿಲ್ಲ. ಬೇರೆ ಮಕ್ಕಳು ಅಳುವುದನ್ನ ಕಂಡಾಗ ‘ಯಾಕ್ ಅಳ್ತಾರಪ್ಪ ಇವ್ರು?’ ಅನ್ನೋ ಪಶ್ನೆಗೆ ಉತ್ತರ ‘ಆಟ ಆಡಾಕೆ ಆಗಲ್ಲ ಮಾಸ್ತರ ಪಾಟ ಬರಿಯಾಕ ಹೇಳ್ತಾರಲ್ಲ’ ಅನ್ನೋ ಮಾತು. ಆದ್ರೆ ಅದನ್ನೆಲ್ಲಾ ಕೆಲವೇ ದಿನಗಳಲ್ಲಿ ಮರೆತು ಎಲ್ಲರು ಕುಣಿಯುತ್ತ ಶಾಲೆಗೆ ಹೋಗುವ ಆ ಹೊತ್ತು ಈಗಲೂ ನೆನಪಿದೆ.

ಸಮಯ ಸರಿಯುತ್ತಿದ್ದಂತೆ ನಾವು ಯಂತ್ರದಂತೆ ಕೆಲಸ ಮಾಡುತ್ತಿದ್ದೇವೆ ಅನ್ನುವ ಮನಸ್ತಿತಿ. ನಡುನಡುವೆ ಏನೋ ಒಂದನ್ನು ಕಳೆದುಕೊಂಡಂತೆ ಅನ್ನಿಸುವ ಆ ಕ್ಶಣ. ಅದೇ ನಮ್ಮ ಶಾಲೆಯ ಆ ದಿನಗಳು, ನೀಲಿ ಬಣ್ಣದ ಲಂಗ, ಬಿಳಿ ಅಂಗಿ, ಹೆಗಲ ಮೇಲೊಂದು ಉದ್ದನೆ ಓಲಾಡುವ ಆ ಚೀಲ, ಅದರಲ್ಲೊಂದು ಮತ್ತೆ ಮತ್ತೆ ಮರೆತು ಹೋಗುವ ಮತ್ತು ಕದ್ದು ತಿನ್ನುತ್ತಿದ್ದ ಆ ಬಳಪ, ಸ್ಲೇಟು, ಇಶ್ಟೇ.

ನಾನು 1 ನೇ ತರಗತಿಗೆ ಸೇರಿದ ದಿನ ಈಗಲು ನೆನಪಿದೆ …

GovtSchool_EPS

ನಿಜ ಹೇಳಬೇಕು ಎಂದರೆ ನನಗೆ ಶಾಲೆಗೆ ಸೇರುವ ವಯಸ್ಸೇನು ಆಗಿರಲಿಲ್ಲ. ನಾನು ಜಾಣೆ ಅನ್ನುವ ಎಲ್ಲರ ಮಾತಿಗೆ ಉಬ್ಬಿ ನನ್ನಪ್ಪ ಶಾಲೆಗೆ ಬಿಟ್ಟು ಬಂದ ದಿನವದು. ಮೊದಲ ದಿನದ ತರಗತಿಯ ನೆನಪು ಇನ್ನು ಅಶ್ಪಶ್ಟವಾಗಿ ನನ್ನ ಕಣ್ಣ ಮುಂದೆ ಇದೆ. ಶಾಲೆಗೆ ಅಪ್ಪ ಕರೆದುಕೊಂಡು ಬಂದು ಬಿಟ್ಟಿದ್ದರು. ಹಿಂದಿನ ಸಾಲಿನಲ್ಲಿ ನೆಲದ ಮೇಲೆ ನಾನು ಮುದುಡಿ ಕುಳಿತಿದ್ದೆ. ಅವರು ಏನು ಹೇಳಿದರೋ ನಾನು ಏನು ಬರೆದೆನೋ ನೆನೆಪಿಲ್ಲ.

ಮೂಲಬೂತ ಸೌಕರ‍್ಯ – ಆ ಶಾಲೆ ಕಂಡು ಕೇಳರಿಯದ ವ್ಯವಸ್ತೆ, ನಾಲ್ಕು ಗೋಡೆಗಳ ಮೇಲೆ ಹೆಂಚು ಹೊದಿಸಿದ ಗೂಡು. ಕಲ್ಲು ಹಾಸಿದ ನೆಲ ಟೀಚರ್ ಕುಳಿತುಕೊಳ್ಳಲು ಒಂದು ಮರದ ಕುರ‍್ಚಿ ಕೈಯಲ್ಲಿ ಒಂದು ಕಟ್ಟಿಗೆ. ಕರಿ ಬಣ್ಣದ ಬೋರ‍್ಡ್, ಚಾಕ್ ಪೀಸ್, ಇಶ್ಟೇ ತರಗತಿಯಲ್ಲಿ ಕಾಣುವ ಸಾಮಾನುಗಳು. ಶಾಲೆಯಲ್ಲಿ ಕಸ ಗುಡಿಸುವುದು, ಟೀಚರ್ ಊಟದ ಡಬ್ಬಿ ತೊಳೆಯುವುದು ದಿನಕ್ಕೊಬ್ಬರ ಸರದಿ, ಬೇಗ ಬಂದು ಶಾಲೆಯ ಬೀಗ ತೆಗೆಯುವವರು ನಮ್ಮಗಿಂತಲೂ ದೊಡ್ಡ ವಿದ್ಯಾರ‍್ತಿಗಳು, ಸಮಯಕ್ಕೆ ಸರಿಯಾಗಿ ಬೆಲ್ ಹೊಡೆಯುವುದೂ ಅವರೇ. ಅದೆಲ್ಲ ಹುಡುಗರು ನಾ ಮುಂದು ತಾ ಮುಂದು ಎಂದು ಮಾಡುತ್ತಿದ್ದ ಕೆಲಸಗಳು. ಅದು ಒಂದು ರೀತಿಯ ಹಿರೋಯಿಸಂ.

ಇನ್ನು ಶಾಲೆ ಬಿಡುವ ಆ ಸಮಯಕ್ಕಾಗಿ ಕಾಯುತ್ತಿದ್ದ ನಮಗೆ ಕಿವಿಗಳಲ್ಲೆವೂ ಆ ಗಂಟೆಯ ಸದ್ದಿಗೆ ಕಾತರಿಸುತ್ತಿದ್ದವು. ಗಂಟೆ ಹೊಡೆದಾಕ್ಶಣ ಹೊರಗೆ ಓಡಿ ಹೋಗುತ್ತಿದ್ದ ಆ ಕ್ಶಣ ಯಾವುದೋ ಪದಕ ಗೆದ್ದ ಸಂತಸ, ಪಂಜರದಿಂದ ಹಾರಿ ಹೋಗುವ ಆ ಹಕ್ಕಿಯ ಹಾಗೆ, ಸಂಜೆ ಗೂಡು ಸೇರಲು ಗುಂಪಾಗಿ ಹಾರುವ ಹಕ್ಕಿಯ ಹಾಗೆ ಹಾರಾಡುತ್ತ ಮನೆ ಸೇರುವ ತವಕ. ದಾರಿಯಲ್ಲಿ ಸಿಗುವ ಪೇರಲ ಹಣ್ಣಿನ ಆಸೆ, ಮಲ್ಲಿಗೆ ಮೊಗ್ಗು ಕಿತ್ತಿ ಉಡಿಯಲ್ಲಿ ತುಂಬಿಕೊಳ್ಳುವ ಹಂಬಲ ಇನ್ನು ಏನೇನೋ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇದೇ ಹಾದಿಯಲ್ಲಿ ಸಾಗುತ್ತಿದ್ದ ಸಮಯ.

ಎಂತಹ ಹುರುಪಿತ್ತು ಅಂದಿನ ದಿನಗಳಲ್ಲಿ

27SDL3ep
ಈಗಿನ ದಿನಗಳು ಸಪ್ಪೆ ಅನ್ನಿಸುವ ಹಾಗೆ. ಅಂದಿನ ದಿನಗಳಲ್ಲಿ ಶಿಕ್ಶಕರು ಇದ್ದದ್ದೇ ಕಡಿಮೆ. ಇದ್ದಶ್ಟು ಮಂದಿ ತಾವು ಪಡೆಯುತ್ತಿದ್ದ ಸಂಬಳಕ್ಕೆ ಪ್ರಾಮಾಣಿಕರಾಗಿರಲು ಪ್ರಯತ್ನಿಸುತ್ತಿದ್ದರು, ಅಂತಾ ಕೆಲವರಿಂದಲೇ ನಾವು ಈ ಮಟ್ಟದಲ್ಲಿ ಇದ್ದೇವೆ ಎನ್ನುವುದು ವಾಸ್ತವ. ಇಂದು ವಿಪರೀತವಾಗಿರುವ ವಿದ್ಯಾಬ್ಯಾಸದ ವಾಣಿಜ್ಯೀಕರಣದ ನಡುವೆ ತಟ್ಟನೇ ನೆನಪಿಗೆ ಬಂದ ನನ್ನ ಶಾಲೆಯ ಆ ನೆನಪು ಮನ ಕಲಕಿತು, ಇಂದಿಗೂ ಅಂದಿಗೂ ಇರುವ ವ್ಯವಸ್ತೆಯ ಅಂತರದ ಆಳ ಬಹಳ. ಇಂದಿನ ಅಂತರರಾಶ್ಟ್ರೀಯ ಮಟ್ಟದ ಶಾಲೆಗಳು ಅನ್ನುವ ಈ ವ್ಯವಸ್ತಯಲ್ಲಿ ಸಂಕೀರ‍್ಣವಾದ ವಿದ್ಯಾಬ್ಯಾಸದ ಜೊತೆಗೆ ಇತರ ಸ್ಪರ‍್ದೆಗಳು ಆಟೋಟಗಳನ್ನು ಕಲಿಸಿಕೊಟ್ಟರೆ ನಮ್ಮ ಶಾಲೆ ನಮಗೆ ಬದುಕಿನ ಮೌಲ್ಯಗಳನ್ನ, ಕುಶಲತೆಗಳನ್ನ ಕಲಿಸಿತೇನೋ ಅನ್ನಿಸುತ್ತಿದೆ.

ಬಾಲ್ಯದ ಜೀವನ ಅದ್ಯಾಕೋ ಈಗೀಗ ಮತ್ತೆ ಮತ್ತೆ ನೆನಪಾಗುತ್ತಿದೆ. ಸೀದಾ ನಾ ಓದುತ್ತಿದ್ದ ಶಾಲೆಗೆ ಹೋಗಿ ಮುಕ್ಯೋಪಾದ್ಯಾಯರಿಗೆ, ಉಪಾದ್ಯಾಯರಿಗೆ, ವಂದಿಸಿ ಅವರ ಜೊತೆ ಮಾತುಕತೆ ನಡೆಸಿ, ಶಾಲೆಯ ಸುತ್ತ ನಾವಾಟವಾಡುತ್ತಿದ್ದ ಮೈದಾನಕ್ಕೆ ಒಂದು ಸುತ್ತುಹಾಕಿ ಕುಣಿದಾಡಿ ಬರುವ ಆಸೆ ಚಿಗುರೊಡೆಯತೊಡಗಿದೆ.

ಕಣ್ಣಾ ಮುಚ್ಚೆ, ಕಾಡೇ ಗೂಡೇ
ಉದ್ದಿನ ಮೂಟೆ, ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ…

(ಚಿತ್ರಸೆಲೆ: mustbethistalltoride.comnewindianexpress.comsidlaghatta.com)

ಹಸಿರು ಮನೆ ಮತ್ತು ಪರಿಣಾಮಗಳು-2ನೇ ಕಂತು

ಡಾ. ರಾಮಕ್ರಿಶ್ಣ ಟಿ.ಎಮ್.

global warming

ಈ ಹಿಂದಿನ ಬರಹದಲ್ಲಿ ತಿಳಿದುಕೊಂಡಂತೆ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು ಇನ್ನೂ ಇವೆ.ಅವುಗಳನ್ನು ತಿಳಿಯೋಣ ಬನ್ನಿ.

ನೈಟ್ರಸ್ ಆಕ್ಸೈಡ್‍ಗಳು:  ವಾತಾವರಣದಲ್ಲಿ  ಶೇಕಡ 6% ಅಂದರೆ  ವಾತಾವರಣದಲ್ಲಿ 301 ಪಿಪಿಬಿಗಳು (ಪಾರ‍್ಟ್ಸ್ ಪರ್ ಬಿಲಿಯನ್). ಬೂಮಿಯ ಮೇಲ್ಮಯ್ ಮತ್ತು ಸಮುದ್ರಗಳಿಂದ ನೈಸರ‍್ಗಿಕವಾಗಿ ನೈಟ್ರಸ್ ಆಕ್ಸೈಡ್ ಉತ್ಪಾದನೆಯ ಮೂಲಗಳು. ಬೇಸಾಯದಲ್ಲಿ ಬಳಸುವ ರಸಾಯನಿಕ ಗೊಬ್ಬರ, ನೈಲಾನ್ ತಯಾರಿ ಕಾರ‍್ಕಾನೆ, ಅವಯವ ವಸ್ತುಗಳು, ಪಳಿಯುಳಿಕೆ ಇಂದನಗಳ ಉರಿಯುವಿಕೆ, ಅಮೋನಿಯಮ್‍ನ್ನು ಕಾಯಿಸಿದಾಗ ನೈಟ್ರಸ್ ಆಕ್ಸೈಡ್‍ಗಳು ತಯಾರಾಗುತ್ತವೆ.

ಹ್ಯಾಲೋ ಕಾರ‍್ಬನ್‍ಗಳು: ಇವು ಮಾನವ ತಯಾರಿಸಿದ ರಸಾಯನಿಕ ಸಂಯುಕ್ತ ವಸ್ತುಗಳು ಉದಾಹರಣೆಗೆ ಬ್ರೋಮಿನ್, ಕ್ಲೋರಿನ್, ಪ್ಲೋರಿನ್ ಮತ್ತು ಕಾರ‍್ಬನ್ ಹ್ಯಾಲೋಕಾರ‍್ಬನ್‍ಗಳು, ಕಾರ‍್ಕಾನೆಗಳಲ್ಲಿ ಮತ್ತು ಮನೆಗಳಲ್ಲಿ ಉತ್ಪತ್ತಿಯಾಗುವ ಕ್ಲೋರೋ ಪ್ಲೊರೋ ಕಾರ‍್ಬನ್‍ಗಳು(CFC) ಸಾಮಾನ್ಯವಾದ ಹ್ಯಾಲೋಕಾರ‍್ಬನ್‍ಗಳು. ಈ ಸಿ.ಎಪ್.ಸಿ.ಗಳು(CFC) ಹೆಚ್ಚು ಶಾಕವನ್ನು ಹಿಡಿದಿಡುವ ಪರಿಣಾಮಕಾರಿ ಹಸಿರು ಮನೆ ಅನಿಲಗಳೆಂದೆ ಪ್ರಸಿದ್ದಿಯಾಗಿವೆ. ಕೆಲವು ಸಿ.ಎಪ್.ಸಿ.ಗಳು ಕಾರ‍್ಬನ್ ಡೈಯಾಕ್ಸೈಡ್‌ಗಿಂತ 7000 ಪಟ್ಟು ಹೆಚ್ಚು ಪರಿಣಾಮಕಾರಿ ಹಸಿರು ಮನೆ ಅನಿಲಗಳೆಂದು ತಿಳಿದಿದೆ. ಸಾಮಾನ್ಯ ಸಿ.ಎಪ್.ಸಿ.ಗಳು ಕಾರ‍್ಬನ್ ಡೈಯಾಕ್ಸೈಡ್‌ಗಿಂತ 40 ಪಟ್ಟು ಶಾಕವನ್ನು ಹೀರಿಕೊಳ್ಳುತ್ತವೆ. ಈ ಸಿ.ಎಪ್.ಸಿ.ಗಳನ್ನು ಪ್ರಿಡ್ಜ್‌ಗಳಲ್ಲಿ ಶೀತಕ(ಕೂಲಂಟ್), ಹವಾನಿಯಂತ್ರಿಕಗಳಲ್ಲಿ, ಎರೋಸಾಲ್‍ಗಳು, ಪೋಮ್‍ನಂತ ಪ್ಯಾಕೇಜಿಂಗ್ ವಸ್ತುಗಳಲ್ಲಿ ಬಳಸುವುದನ್ನು ನೋಡಿರಬಹುದು.ಇದರ ಬಗೆಗಳಾದ ಸಿ.ಎಪ್.ಸಿ-11 ಮತ್ತು ಸಿ.ಎಪ್.ಸಿ-12 ವಾತಾವರಣದಲ್ಲಿ 384 ಪಿಪಿಎಮ್‌ಗಳಶ್ಟು ಇವೆ.

1997ರ ಕ್ಯೊಟೋ ಅದಿಕ್ರುತ ಸೂತ್ರದ ಪ್ರಕಾರ ಮೂರು ಅನಿಲಗಳು ಎಂದರೆ ಹೈಡ್ರೋಪ್ಲೊರೋಕಾರ‍್ಬನ್‍ಗಳು (ಎಚ್.ಎಪ್.ಸಿ.), ಪರ್‌ಪ್ಲೊರೋಕಾರ‍್ಬನ್‍ಗಳು (ಪಿ.ಎಪ್.ಸಿ.) ಮತ್ತು ಸಲ್ಪರ್ ಹೆಕ್ಸಾಕ್ಲೋರೈಡ್‍ಗಳು (ಎಸ್.ಎಪ್ 6) ಬಹು ಮುಕ್ಯವಾದ ಹಸಿರು ಮನೆ ಅನಿಲಗಳೆಂದು ಪರಿಗಣಿಸಲಾಗಿದೆ.

ಓಜೋನ್: ಟ್ರೊಪೋಸ್ಪಿಯರ್‍ನ ಓಜೋನ್ ಮತ್ತೊಂದು ಮುಕ್ಯವಾದ ಹಸಿರು ಮನೆ ಅನಿಲ. ಕಾರ‍್ಕಾನೆಗಳಲ್ಲಿ ಬಳಸುವ ವಿವಿದ ರಸಾಯನಿಕಗಳಿಂದ ತಯಾರಾಗುತ್ತದೆ. ನೈಸರ‍್ಗಿಕವಾಗಿ ಅಲ್ಲದೆ ನೈಟ್ರಜನ್ ಆಕ್ಸೈಡ್‌ಗಳು ಮತ್ತು ಹೈಡ್ರೊಕಾರ‍್ಬನ್‍ಗಳು ಮೊಟಾರು ವಾಹನಗಳು ಹೊರಹಾಕುತ್ತವೆ. ಅವುಗಳಲ್ಲಿ ಕಾರ‍್ಬನ್ ಮೊನಾಕ್ಸೈಡ್ ಅನಿಲ, ಆಮ್ಲಜನಕ ಸಂಯೊಜನೆಯಿಂದ (ಉತ್ಕರ‍್ಶಣದಿಂದ) ತಯಾರಿಸುತ್ತವೆ. ಹಸಿರು ಮನೆ ವಾತಾವರಣದಲ್ಲಿ ಓಜೋನ್‍ನ ಕೊಡುಗೆಯ ಪ್ರಮಾಣ ಎಶ್ಟು ಎಂಬುದನ್ನು ತಿಳಿಯಲಿಕ್ಕೆ ಅಸಾದ್ಯ. ಇದಕ್ಕೆ ಕಾರಣ ಓಜೋನ್ ವಾತಾವರಣದಲ್ಲಿರುವುದು ಕೇವಲ ಕೆಲವು ಕ್ಶಣಗಳು  ಮಾತ್ರ.

ನೀರಿನ ಆವಿ: ನೀರಿನ ಆವಿ ಇದನ್ನು ಸಾಮಾನ್ಯವಾಗಿ ಎಲ್ಲಾ ಜೀವಿಗಳು ಉಸಿರಾಟ ಪ್ರಕ್ರಿಯೆಯಿಂದ, ಸಸ್ಯಗಳು ಬಾಶ್ಪೀಕರಣದಿಂದ ಹೊರಹಾಕುತ್ತವೆ. ಜತೆಗೆ, ಹೆಚ್ಚಿದ ಬೂಮಿಯ ತಾಪಮಾನದಿಂದಾದ ನೀರಿನ ಆವಿಯಾಗಿ ವಾತಾವರಣವನ್ನು ಸೇರುತ್ತವೆ.

ಹಸಿರುಮನೆ ಅನಿಲಗಳು ಹೇಗೆ ಬೂಮಿಯ ಶಾಕ ಹೆಚ್ಚಿಸುತ್ತಿವೆ ನೋಡಿ!

ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಇಲ್ಲಿಯವರೆಗೆ ಕಾರ‍್ಬನ್ ಡೈಯಾಕ್ಸೈಡ್ ತೀವ್ರತೆ ಶೇಕಡ 30%, ಮೀತೆನ್ ತೀವ್ರತೆ ಶೇಕಡ ಎರಡರಶ್ಟು ಮತ್ತು ನೈಟ್ರಸ್ ಆಕ್ಸೈಡ್‍ಗಳ ಕೇಂದ್ರೀಕರಣ ಶೇಕಡ 15% ಹೆಚ್ಚಾಗಿದೆ. ಮೋಟಾರು ವಾಹನಗಳಲ್ಲಿ ಶಕ್ತಿಯ ಇಂದನ ಬಳಕೆ, ಹಾಗೇಯೇ, ಮನೆಯ ತಾಪಮಾನ ಹೆಚ್ಚಿಸಲು ಬಳಸಿದ ಇಂದನ ಶೇಕಡ 80% ಕಾರ‍್ಬನ್ ಡೈಯಾಕ್ಸೈಡ್ ಹೊರಹಾಕುತ್ತವೆ. ಉತ್ತರ ಅಮೇರಿಕಾದಿಂದ ಮಾತ್ರ ಶೇಕಡ 25% ಮೀತೆನ್ ಹೊರಬರುತ್ತಿದೆ. ಒಟ್ಟಾರೆ ಪ್ರಪಂಚದಲ್ಲೆಡೆಯ ನಾಡು ಶೇಕಡ 20% ನೈಟ್ರಸ್‌ಆಕ್ಸೈಡ್‍ಗಳನ್ನು ಹೊರಹಾಕುತ್ತಿವೆ. ಆಹಾರ ತಯಾರಿಕೆಯನ್ನು ದ್ವಿಗುಣಗೊಳಿಸಲು ಹೆಚ್ಚಿದ ಬೇಸಾಯ, ಅಡೆತಡೆಯಿಲ್ಲದ ಕಾಡಿನ ನಾಶ, ಕೈಗಾರಿಕೆ ಮತ್ತು ಗಣಿಗಾರಿಕೆಗಳಿಂದ ಹಸಿರು ಮನೆ ಅನಿಲಗಳ ಹೊರಹಾಕುವಿಕೆ ಹೆಚ್ಚುತ್ತ ಸಾಗಿದೆ.

ಕಾರ‍್ಬನ್ ಡೈಯಾಕ್ಸೈಡ್ ಅಣುಗಳನ್ನು ಇನ್ನೆರಡು ಮುಕ್ಯವಾದ ಅನಿಲಗಳಾದ ಸಿ.ಎಪ್.ಸಿ.-11, ಸಿ.ಎಪ್.ಸಿ.-12 ಹೋಲಿಸಿದರೆ, ಅವು 4300 ರಿಂದ 7100ರಶ್ಟು ಹೆಚ್ಚು ಶಾಕವನ್ನು ಹೀರಿಕೊಳ್ಳುತ್ತವೆ. ಓಜೋನ್ ಸುಮಾರು 2000 ಪಟ್ಟು, ನೈಟ್ರಸ್‌ ಆಕ್ಸೈಡ್‍ಗಳು ಸುಮಾರು 270ಪಟ್ಟು, ಮೀತೆನ್ 30ಪಟ್ಟು ಶಾಕ ಹೀರಬಲ್ಲವು. ಆದುದರಿಂದ ಕಾರ‍್ಬನ್ ಡೈಯಾಕ್ಸೈಡ್‌ಗಿಂತ ಇತರೆ ಅಣುಗಳು ಹೆಚ್ಚು ಶಾಕ ಹೀರಿಕೊಳ್ಳುವ ಪರಿಣಾಮಕಾರಿ ಅನಿಲಗಳೆಂದು  ತಿಳಿಯುತ್ತದೆ. ಒಂದು ಮೀತೆನ್ ಅಣು 10 ವರ‍್ಶಗಳ ಕಾಲ, ಸಿ. ಎಪ್. ಸಿ.ಗಳು 70-170 ವರ‍್ಶಗಳು ಮತ್ತು ನೈಟ್ರಸ್ ಆಕ್ಸೈಡ್‍ಗಳು 170 ವರ‍್ಶಗಳ ಕಾಲ ವಾತಾವರಣದಲ್ಲಿ ಯಾವ ಬದಲಾವಣೆಯಿಲ್ಲದೆ ಉಳಿದಿರುತ್ತವೆ. ಆದಕಾರಣ ವಾತಾವರಣ ವಿಜ್ಞಾನಿಗಳು ಈ ಮೇಲೆ  ತಿಳಿಸಿದ ಅನಿಲಗಳನ್ನು ಬಳಸಬಾರದೆಂದು ಒತ್ತಡ ಹಾಕಿದ್ದಾರೆ.

1987ರ ಮಾಹಿತಿ ಪ್ರಕಾರ ಯು.ಎಸ್.ಎ. ಶೇಕಡ 18% ರಶ್ಟು ಇಂತ ಅನಿಲಗಳನ್ನು ವಾತಾವರಣಕ್ಕೆ ವಿಸರ‍್ಜಿಸಿ ಮೊದಲನೆ ಸ್ತಾನ ಪಡೆದಿತ್ತು. ನಂತರದ ಸ್ತಾನ ಅನುಕ್ರಮವಾಗಿ ರಶ್ಯ ಮತ್ತು ಸೋವಿಯತ್ ದೇಶಗಳು (ಶೇಕಡ 12%), ಬ್ರೆಜಿಲ್ (ಶೇಕಡ 10.5%) ಪಾಲಾಗಿತ್ತು. ಒಟ್ಟಾರೆಯಾಗಿ ಪ್ರಗತಿಹೊಂದಿದ ದೇಶಗಳು 73% ಮತ್ತು ಪ್ರಗತಿ ಹಾದಿಯಲ್ಲಿರುವ ದೇಶಗಳು 27% ಕಾರ‍್ಬನ್ ಡೈಯಾಕ್ಸೈಡ್ ಹೊರಹಾಕುತ್ತವೆ ಎಂದು ಅಂದಾಜಿಸಲಾಗಿದೆ. 2035ಕ್ಕೆ ಪ್ರಪಂಚದಲ್ಲಿ ಪ್ರಗತಿಯಲ್ಲಿರುವ ದೇಶಗಳು ಶೇಕಡ 50% ರಶ್ಟು ಬೂಮಂಡಲದ ಹಸಿರು ಮನೆ ಅನಿಲಗಳಿಗೆ ಕಾರಣವಾಗುತ್ತವೆಂದು ತಿಳಿದಿದೆ.

ಪ್ರಪಂಚದಲ್ಲಿ ಹೆಚ್ಚುತ್ತಿರುವ ಶಾಕದ ಪರಿಣಾಮಗಳು:

ಕೆಲವೇ ಸೆಲ್ಸಿಯಸ್ ತಾಪಮಾನದ ಏರಿಕೆ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಯುನೈಟೆಡ್ ನೇಶನ್ಸ್ ಎನ್‍ವಿರೋನ್‍ಮೆಂಟ್ ಪ್ರೊಗ್ರಾಮ್ ಸ್ತಾಪಿಸಿದ ಇಂಟರ್ ಗೌರ‍್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೆಟ್ ಚೇಂಜ್(IPCC) ಎನ್ನುವ ಸಂಸ್ತೆ ಶಾಕ ಏರಿಕೆಗೆ ಕಾರಣ ತಿಳಿಯಲು ಅಂತರಾಶ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ಪರಿಸರ ಬದಲಾವಣೆ ಬಗ್ಗೆ ವಿಶಯಗಳನ್ನು ಸಂಗ್ರಹಿಸಲು ನೇಮಿಸಿದ ಒಂದು ಸಂಸ್ತೆ. 1990ರ ಈ ಸಂಸ್ತೆ ಐಪಿಸಿಸಿ(IPCC) ತಪಾಸಣೆಯಿಂದ ತಿಳಿದ ವಿಶಯಗಳು ಹೀಗಿವೆ- 1) ಹಸಿರು ಮನೆ ಅನಿಲಗಳ ಇರುವಿಕೆ ಮತ್ತು 2) ಅನಿಲಗಳ ಶೇಕರಣೆ ಹೆಚ್ಚಾಗುತ್ತಿದ್ದಂತೆ ಹವಾಮಾನ ಕೂಡ ಬದಲಾಗುತ್ತದೆ. 3) ಪರಿಸರದ ಮೇಲೆ ಮಾನವನ ಹಸ್ತಕ್ಶೇಪವಿದೆ ಎಂಬುದು ತಿಳಿಯುತ್ತದೆ. ಈ ವಿಶಯವನ್ನು 1996ರ ವರದಿಯು ದ್ರುಡಪಡಿಸುತ್ತದೆ. ಇತ್ತಿಚೀನ ವೈಜ್ಞಾನಿಕ ತಪಾಸಣೆಯಿಂದ ತಿಳಿದ ವಿಶಯವೆಂದರೆ ಪ್ರಪಂಚದಲ್ಲಿ ಹೆಚ್ಚಿದ ಸರಾಸರಿ ಶಾಕವು ಅನೇಕ ಕೆಟ್ಟ ಪರಿಣಾಮ ಬೀರಿದೆ. ಇದರಲ್ಲಿ ಪ್ರಮುಕವು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಅ) ಬೂಮಂಡಲದ ಶಾಕದ ಏರಿಕೆ: 19ನೇ ಶತಮಾನದಿಂದ ಈಚೆಗೆ 0.6 ರಿಂದ 1.2 ಡಿಗ್ರಿ ಪ್ಯಾರನ್ ಹೀಟ್‍ನಶ್ಟು ಬೂಮಂಡಲದ ಶಾಕ ಏರಿಕೆಯಾಗಿದೆ. ಕಳೆದ 15 ವರುಶಳಲ್ಲಿ ಸುಮಾರು 10 ವರುಶಗಳು ಇಲ್ಲಿಯವರೆಗೆ ಹೆಚ್ಚು ತಾಪಮಾನ ಹೊಂದಿದ ವರುಶಗಳೆಂದು ದಾಕಲೆಯಾಗಿವೆ. ಅದರಲ್ಲಿ 2005 ಸಹ ಹೆಚ್ಚು ತಾಪಮಾನದ ವರ‍್ಶವಾಗಿದೆ. 1850ರ ನಂತರದ ವರ‍್ಶಗಳಲ್ಲಿ ಬೂಮಂಡಲದ ಸರಾಸರಿ ಮೇಲ್ಮಯ್ ತಾಪವು 1.0 ಯಿಂದ 3.5 ಡಿಗ್ರಿ ಪ್ಯಾರನ್ ಹೀಟ್ ಹೆಚ್ಚಾಗಿದೆ (ಇದು 2100ನೇ ವರ‍್ಶಕ್ಕೆ 2-6 ಡಿಗ್ರಿ ಪ್ಯಾರನ್ ಹೀಟ್ ಆಗುತ್ತದೆ). ಇದು ಜೀವಿಗಳ ಬದುಕಿಗೆ ತೊಂದರೆ ಮಾಡುವುದು ಕಚಿತ.

Temperature increase(ಬೂಮಂಡಲದಲ್ಲಿ ಹೆಚ್ಚುಗೊಂಡ ಶಾಕದ ವಿವರ ತೋರಿಸುವ ಮಾರ‍್ಪುತಿಟ್ಟ)

ಆ) ಸಮುದ್ರ ಮಟ್ಟದ ಏರಿಕೆ: ಹೆಚ್ಚಿದ ತಾಪಮಾನದಿಂದ ಉತ್ತರಾರ‍್ದ ಕಂಡದಲ್ಲಿ ಹಿಮದ ರಾಶಿಗಳು ಮತ್ತು ಆರ‍್ಕಿಟಿಕ್ ಸಮುದ್ರದಲ್ಲಿ ತೇಲುವ ಹಿಮಗಡ್ಡೆಗಳು ಕಡಿಮೆಯಾಗುತ್ತ ಸಾಗಿವೆ ಅಂದರೆ ಹಿಮದ ರಾಶಿಗಳು ನೀರಾಗಿ ಕರಗುತ್ತಿವೆ. ಹಿಂದಿನ ಶತಮಾನಕ್ಕಿಂತ ಸಮುದ್ರ ಮಟ್ಟ 4-6 ಇಂಚುಗಳು ಏರಿಕೆ ಕಂಡಿವೆ.  2050ಕ್ಕೆ ಶೀಗ್ರ ಗತಿಯಲ್ಲಿ ಮೂರು ಪಟ್ಟು ತಾಪಮಾನ ಹೆಚ್ಚಾಗುತ್ತದೆ ಎಂದು ಹೇಳಲಾಗಿದ್ದು ಇದರ ಜತೆಗೆ ಸಮುದ್ರ ಮಟ್ಟ ಎಂಟು ಇಂಚು ಏರಲಿದೆ. ಆದಕಾರಣ, ಸಮುದ್ರದ ಕೆಳಮಟ್ಟದಲ್ಲಿರುವ ಪ್ರದೇಶಗಳು ಮತ್ತು ಸಮುದ್ರ ದಡದಲ್ಲಿ ವಾಸಮಾಡುವ ಜನಸಂದಣಿಗೆ ವಾಸಿಸಲು ಸ್ತಳವಿಲ್ಲದಾಗುತ್ತದೆ. ಬಾಂಗ್ಲಾದೇಶ, ಇಂಡೊನೇಶ್ಯ, ಪಾಕಿಸ್ತಾನ, ತೈಲ್ಯಾಂಡ್, ಮಾಲ್ಡೀವ್ಸ, ಮೋಜಾಂಬಿಕ್, ಸೆನೆಗಲ್, ಈಜಿಪ್ಟ್, ಸೂರಿನಾಮ್ ದೇಶಗಳು ಇದರ ಬಾರಿ ಪರಿಣಾಮ ಏದುರಿಸಲಿವೆ. ಬಾರತದ ಚೆನ್ನೈ, ಕೋಲ್ಕತ್ತಾ, ಕೇರಳ,  ಸೀಮಾಂದ್ರ, ಕರ‍್ನಾಟಕ, ಗೋವಾ ಮತ್ತು ಗುಜರಾತ್ ರಾಜ್ಯಗಳ ತೀರಗಳು ಇದರ ಪ್ರಬಾವ ಅನುಬವಿಸಲಿವೆ.

ಇ) ಜಲಚಕ್ರದಲ್ಲಿ ಅಡಚಣೆ: ಬೂಮಂಡಲದ ಎಲ್ಲಾ ದೇಶಗಳಲ್ಲಿ ಶೇಕಡ ಒಂದು ಬಾಗ ಮಳೆ ಮತ್ತು ಮಂಜು ಬೀಳುವುದು ಸಾಮಾನ್ಯವಾಗುತ್ತದೆ, ಶಾಕದ ಏರಿಕೆಯಿಂದ ನೀರಿನ ಆವಿ ವಾತಾವರಣ ಸೇರುವುದು ಹೆಚ್ಚಾಗುತ್ತದೆ.  ಆದ್ದರಿಂದ ಪ್ರಪಂಚದ ವಿವಿದ ಬಾಗಗಳಲ್ಲಿ ಅದಿಕ ಪ್ರಮಾಣದಲ್ಲಿ ಮಳೆ ಬೀಳುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಮಳೆಯ ರಬಸದಿಂದ ಅತಿವ್ರುಶ್ಟಿಯಾಗುತ್ತ ನದಿಗಳು ಉಕ್ಕಿ ಹರಿದು,ಪ್ರವಾಹಗಳು ಸಾಮಾನ್ಯವಾಗುತ್ತವೆ. ಪ್ರವಾಹಗಳಿಂದ ನೀರು ಕಲುಶಿತವಾಗಿ ರೋಗಾಣುಗಳು ಎಲ್ಲ ಕಡೆ ಹರಡಿಕೊಳ್ಳುತ್ತವೆ.

ಈ) ಆರೋಗ್ಯದ ಮೇಲೆ ದುಶ್ಟ ಪರಿಣಾಮಗಳು: ವಾತಾವರಣ ಬದಲಾವಣೆಯು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚಿದ ತಾಪ, ಶಾಕದ ಅಲೆಗಳ ಕಂಪನವನ್ನು ಹೆಚ್ಚು ಮಾಡುತ್ತದೆ. ಇಂತಹ ಶಾಕದ ಪ್ರಹಾರಕ್ಕೆ ತುತ್ತಾಗಿ ಲಕ್ಶಾಂತರ ಜನ ಸಾಯಬಹುದು. ಶಾಕ ಹೆಚ್ಚಾದಂತೆ ಮನುಶ್ಯರು ಹ್ರುದ್ರೋಗ ಮತ್ತು  ಹ್ರುದಯಾಗಾತಗಳಿಗೆ ತುತ್ತಾಗುತ್ತಾರೆ. ಹೆಚ್ಚಿದ ಉಶ್ಣತೆಯಿಂದ ಜನತೆ ಒಂದು ಪ್ರದೇಶದಲ್ಲಿ ವಾಸ ಮಾಡಲಿಕ್ಕೆ ಸಾದ್ಯವಾಗದೇ ಬೇರೆ ಸ್ತಳಗಳಿಗೆ ವಲಸೆ  ಹೋಗಬೇಕಾದ ಸಮಸ್ಯೆ ತಲೆದೋರುತ್ತದೆ.

ಶಾಕ ಚಲಿಸದೇ ನಿಂತಾಗ, ಗಾಳಿಯಲ್ಲಿರುವ ಹೊಗೆ ಕಣಗಳು, ವಿಶದ ಅನಿಲಗಳು ಸೇರಿ ರಸಾಯನಿಕ ಕ್ರಿಯೆಗಳು ವೇಗವಾಗಿ ನಡೆದು ಕಲುಶಿತ ರಸಾಯನಿಕ ವಸ್ತುಗಳನ್ನು ತಯಾರಿಸುತ್ತವೆ. ಇಂತಹ ಕಲುಶಿತ ವಸ್ತುಗಳು ಮಾನವರ ಶ್ವಾಶಕೋಶಗಳಿಗೆ ಸೇರಿ ಬ್ರಾಂಕೈಟಿಸ್ ಮತ್ತು ಆಸ್ತಮ ರೋಗಗಳಿಗೆ ಕಾರಣವಾಗುತ್ತದೆ. ಇನ್ನೂ ಹೆಚ್ಚಿದ ಶಾಕದಲ್ಲಿ ಇಂತಹ ರೋಗಾಣುಗಳು ದ್ವಿಗುಣಗೊಳ್ಳುವ ಸಾದ್ಯತೆ ಹೆಚ್ಚು ಅಲ್ಲದೇ ಇವುಗಳು ವ್ಯಾಪಕವಾಗಿ ಎಲ್ಲ ಕಡೆ ಹರಡುತ್ತವೆ. ಬಾರತದಲ್ಲಿ 1998ರ ಬೇಸಿಗೆಯ ಶಾಕದ ಬೇಗೆಗೆ ಸತ್ತ ಜನರು 1300 (6).

ಉ) ರೋಗ ಮತ್ತು ರೋಗಾಣುಗಳ ಹರಡುವಿಕೆ: ವಾತಾವರಣ ಬದಲಾದಂತೆ ಶಕ್ತಿಯುತ ರೋಗಾಣುಗಳ ವರ‍್ಗಾವಣೆ ಹೆಚ್ಚುತ್ತದೆ. ಶಕ್ತಿಯುತ ರೋಗಗಳಾದ ಮಲೇರಿಯ, ಡೆಂಗ್ಯು ಮತ್ತು ಎಲ್ಲೊ ಪಿವರ್‍ಗಳು ಕೀಟಗಳಿಂದ ಅಮೇರಿಕ ಮತ್ತು ಯುರೋಪ್‌ನಂತ. ಶೀತವಲಯದ ದೇಶಗಳಲ್ಲಿ ಸಹ ಹರಡಲು ಮೊದಲಿಡುತ್ತವೆ. 21ನೇ ಶತಮಾನದಲ್ಲಿ 45% ರಿಂದ 65% ಜನರಲ್ಲಿ ಕಾಯಿಲೆ ಕಾಣಿಸುತ್ತದೆ. ಅಂದರೆ ಪ್ರತಿ ವರ‍್ಶ 50-80 ಮಿಲಿಯನ್ ಜನರು ಮಲೇರಿಯಾಗೆ ತುತ್ತಾಗಿ ಸಾಯುತ್ತಾರಂತೆ.

ಊ) ಕಾಡು ಮತ್ತು ಕಾಡುಜೀವಿ ವ್ಯವಸ್ತೆಗಳಲ್ಲಿ ಏರುಪೇರು: ವಾತಾವರಣ ಬದಲಾದಂತೆ ಜೀವತಾಣ ವ್ಯವಸ್ತೆಯು ತೊಂದರೆಗೀಡಾಗುತ್ತವೆ. ಅನೇಕ ಜೀವಿಗಳು ಉಳಿಯಲು ಕಶ್ಟವಾಗಿ ಸತ್ತು ಹೋಗುತ್ತವೆ. ಹಲವಾರು ಸ್ಪೀಶೀಸ್‍ಗಳು (ಪ್ರಬೇದಗಳು species) ಸ್ತಳಾಂತರಗೊಳ್ಳುತ್ತವೆ ಅತವಾ ಹೇಳಿ ಹೆಸರಿಲ್ಲದಂತೆ ನಿರ‍್ನಾಮವಾಗುತ್ತವೆ.

ಎ) ಬೇಸಾಯದ ಮೇಲೆ ಪ್ರಬಾವ: ಬೇಸಾಯ ಮಾಡುವುದು ಕಶ್ಟವಾಗುತ್ತದೆ ಮತ್ತು ಪ್ರಪಂಚದಲ್ಲಿ ಆಹಾರ ಪದಾರ‍್ತಗಳ ಬೇಡಿಕೆ ಹೆಚ್ಚಾಗುತ್ತದೆ. ಮುಂದಿನ 50 ರಿಂದ 100 ವರ‍್ಶಗಳವರೆಗೆ ಆಹಾರ ಬೇಡಿಕೆಯು ಹೆಚ್ಚುತ್ತಾ ಹೋಗುತ್ತದೆ. ಅದನ್ನು ಸರಿದೂಗಿಸಲು ಸಾದ್ಯವಾಗುವುದಿಲ್ಲ. ಕಾರಣ, ಬೇಸಾಯದಲ್ಲಿ ಇಳುವರಿ ಕಡಿಮೆಯಾಗುತ್ತದೆ. ವರ‍್ಶ ಪೂರ‍್ತಿ ಮಳೆ ಬೀಳುವ ಬೂಮದ್ಯ ರೇಕೆಯ ಅಕ್ಕಪಕ್ಕದ ಪ್ರದೇಶದಲ್ಲಿ ಮಳೆಯೇ ಅಪರೂಪವಾಗುತ್ತದೆ. ಮಳೆ ಬರದೇ, ಬರಗಾಲ ತಲೆದೋರುತ್ತದೆ.

 

(ತಿಟ್ಟ ಸೆಲೆ: yr.no, churchmilitant.com)

“ನನ್ನ ತಂದೆ ನೆನಪಾದರು”

– ಸುರೇಶ್ ಗೌಡ ಎಂ.ಬಿ.

doddoru
ನಾನು ಬಿಎಂಟಿಸಿ ಡ್ರೈವರ್. ಇದು ಸುಮಾರು ದಿನಗಳ ಹಿಂದೆ ನಡೆದ ಗಟನೆ. ಎಂದಿನಂತೆ ನಾನು ಕೆಲಸಕ್ಕೆ ಹೋಗಿದ್ದೆ. ಮದ್ಯಾಹ್ನ ಊಟದ ಸಮಯ, ನಾನು ಹಾಗೂ ನಮ್ಮ ಕಂಡಕ್ಟರ್, ಇಬ್ಬರು ಊಟಕ್ಕೆಂದು ಮಾರತಹಳ್ಳಿ ಬ್ರಿಡ್ಜ್ ಬಳಿ ಬಸ್ ನಿಲ್ಸಿ, ಹೋಟೆಲ್ ಗೆ ಬಂದೊ. ಇಬ್ಬರು ಊಟ ಮಾಡ್ತಾ ಇದ್ದೋ. ಎದುರುಗಡೆ ಕಟ್ಟೆಯ ಮೇಲೆ, ಒಬ್ಬರು ವಯಸ್ಸಾದ ವ್ಯಕ್ತಿ ಕುಳಿತಿದ್ದರು.

ಸುಮಾರು 65 ವರ‍್ಶ ಇರಬೇಕು ವಯಸ್ಸು. ಶೇವಿಂಗ್ ಮಾಡಿಕೊಂಡು, ಬಿಳಿ ಶರ‍್ಟ್, ಬಿಳಿ ಪಂಚೆ ಹಾಕಿದ್ದರು. ನೋಡಿದ ತಕ್ಶಣ ತಿಳಿಯುತ್ತಿತ್ತು “ಯಾವುದೋ ಹಳ್ಳಿಯ ಯಜಮಾನ, ಚೆನ್ನಾಗಿ ಬಾಳಿ ಬದುಕಿದ ಜೀವ” ಎಂದು. ನಾವು ಊಟಕ್ಕೆ ಬಂದಾಗಿನಿಂದ ಮುಗಿಯುವವರೆಗೂ ನಾನು ಅವರನ್ನ ಗಮನಿಸುತ್ತಿದ್ದೆ. ಹೋಟೆಲ್ ಕಡೆ ನೋಡ್ತಾ ಕುಳಿತಿದ್ರು, ಮುಕ ಬಾಡಿತ್ತು. ಯಾವುದೋ ನೋವನ್ನು ಅನುಬವಿಸುತ್ತಿರುವ ಹಾಗೆ ಕಾಣುತ್ತಿತ್ತು. ಊಟ ಮುಗಿಸಿ, ಹೊರಡಬೇಕೆಂದು ಕೊಂಡೆ, ಆದರೆ ಮನಸ್ಸು ಯಾಕೋ ತಡೆಯಲಿಲ್ಲ. ಹೋಗಿ ಮಾತನಾಡಿಸೋಣ ಎಂದು ಕೊಂಡು, ಕಂಡಕ್ಟರ್ ಗೆ ನಾನು ಆಮೇಲೆ ಬರ‍್ತಿನಿ, ನೀವು ಗಾಡಿ ಹತ್ತಿರ ಹೋಗಿ ಅಂತ ಹೇಳಿ, ಆ ಯಜಮಾನರ ಬಳಿ ಹೋದೆ. ಮಾತನಾಡಿಸಿದೆ.

“ಯಾರು ನೀವು? ಯಾಕೆ ಹೀಗೆ ಕುಳಿತಿದ್ದೀರ” ಅಂತ ಕೇಳಿದೆ. ಅಶ್ಟೆ. ತುಂಬಿ ನಿಂತ ಕಟ್ಟೆಯ ಕೋಡಿ ಒಡೆದು ಹರಿದ ಹಾಗೆ, ಅವರ ಕಣ್ಣಲ್ಲಿ ನೀರು, ಗಳ ಗಳ ಅಂತ ಹರಿಯೋಕೆ ಶುರು ಆಯ್ತು. “ಅಳಬೇಡಿ, ಏನ್ ಆಯ್ತು ಹೇಳಿ” ಅಂದೆ. ತಮ್ಮ ಕತೆ ಹೇಳೋಕೆ ಶುರು ಮಾಡಿದರು.

“ನನ್ನದು ಮಂಡ್ಯ ಬಳಿಯ ಸಂಕನಹಳ್ಳಿ ಅನ್ನೋ ಊರು, ನಾನು ಆ ಊರಿನ ಹಿರಿಯ. ಊರಿನಲ್ಲಿ ನ್ಯಾಯ, ಪಂಚಾಯ್ತಿ ಮಾಡೋದು ನಾನೆ. ಮಗ ಸಾಪ್ಟ್ ವೇರ್ ಇಂಜಿನಿಯರ್. ಇಲ್ಲೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಾನೆ. ಹೋದ ವರ‍್ಶ ಮದುವೆಯಾಯ್ತು. ಮಗ, ಸೊಸೆ ಇಬ್ರು ಬೆಂಗಳೂರಲ್ಲೇ ಇದ್ದಾರೆ. ನನ್ನಾಕೆ ಹೋದ್ ತಿಂಗಳು ತೀರಿಕೊಂಡ್ಲು. ಊರಲ್ಲಿ ನಂಗೆ ಆಡುಗೆ ಮಾಡಿಕ್ಕೋರಿಲ್ಲ. ಅಲ್ಲಿ ಇದ್ದು ಏನ್ ಮಾಡ್ತಿರ, ಬೆಂಗಳೂರಿಗೆ ಬಂದುಬಿಡಿ ಅಂತ ಮಗ ಅಂದ. ಸರಿ ಅಂತ ಇಲ್ಲೇ ಇರೋಣ ಅಂತ ಅಲ್ಲಿಂದ ಬಂದಿದ್ದೆ”

“ಯಾಕೋ ಸೊಸೆ ಸರಿಯಾಗಿ ಮಾತನಾಡಿಸಲಿಲ್ಲ. ನಾನು ಇರೋದು ಇಶ್ಪ ಇಲ್ಲ ಅಂತ ಕಾಣುತ್ತೆ. ಉಂಡಿದ್ದಕ್ಕು, ತಿಂದಿದ್ದಕ್ಕೂ, ಹಂಗುಸೋಳು. ಮಗ ಬೆಳಿಗ್ಗೆ, ಮನೆಯಿಂದ ಕೆಲಸಕ್ಕೆ ಹೋದ ಮೇಲೆ, ಬಾಯಿಗೆ ಬಂದಂತೆ ಬೈದಳು. ಮನಸ್ಸು ತಡೆಯಲಿಲ್ಲ. ತಿಂಡಿ ತಿನ್ನೋಕೆ ಆಗಲಿಲ್ಲ. ಮನೆಯಿಂದ ಆಚೆ ಬಂದುಬಿಟ್ಟೆ. ಊರಿಗೆ ಹೋಗಿ, ನನ್ ಪಾಡಿಗೆ ನಾನು ಗಂಜಿ, ಗಿಂಜಿ ಬೇಸಿಕೊಂಡು, ತಿನ್ಕಂಡು, ಜೀವನ ಮಾಡ್ತಿನಿ”

“ರಾತ್ರಿ ಬೇರೆ ಊಟ ಮಾಡಿರ‍್ಲಿಲ್ಲ. ಬೆಳಿಗ್ಗೆಯಿಂದ ನಾಶ್ಟ ಮಾಡೋಕೆ ಕಾಸಿಲ್ಲ. ಯಾರತ್ರಾನಾದ್ರು ಕೇಳೋಣ ಅಂತ ಅಂದ್ರೆ, ನೂರಾರು ಜನಕ್ಕೆ ಅನ್ನ ಹಾಕಿದ ಕೈ, ಬೇಡೋಕೆ ನಾಚಿಕೆ ಆಯ್ತು. ಅದಕ್ಕೆ ಸುಮ್ನೆ ಕುಂತಿದ್ದೆ” ಅಂದ್ರು.

ನನಗೆ ಕಣ್ಣಲ್ಲಿ ನೀರು ಬಂತು. ಸರಿ ನೀವು ಮೊದಲು ಊಟ ಮಾಡಿ ಅಂತ ಹೇಳಿ, ಊಟ ಕೊಡಿಸಿದೆ. ಆ ವಯಸ್ಸಾದ ಕಣ್ಣುಗಳು ಸಂತೋಶದಿಂದ ಅರಳಿದ್ದನ್ನು ನೋಡೋಕೆ ತುಂಬಾ ಕುಶಿ ಆಯ್ತು. ನಾವು ಬಿಎಂಟಿಸಿ ಡ್ರೈವರ್ ಹಾಗೂ ಕಂಡಕ್ಟರ್ ಗಳು, ದುಡ್ಡು ಇಟ್ಟಿಕೊಳ್ಳುವ ಹಾಗಿಲ್ಲ. ಹಾಗಾಗಿ ಎಟಿಎಂ ನಿಂದ 500 ರೂ ತೊಗೊಂಡು ಬಂದೆ. ಅದನ್ನ ಆ ಯಜಮಾನರ ಕೈಗಿತ್ತೆ. ಒಂದು ಕ್ಶಣ ಅವರ ಕಣ್ಣಾಲಿಗಳು ತುಂಬಿ ಬಂದೋ. ನಾನು ಊರು ತಲುಪಿದ ತಕ್ಶಣ ಕಾಸನ್ನ ಮನಿ ಆರ‍್ಡರ್ ಮಾಡುತ್ತೇನೆ ಅಂದ್ರು. ಬೇಡ, ನೀವು ಕ್ಶೇಮವಾಗಿ ಊರು ಸೇರಿಕೊಳ್ಳಿ ಅಂದೆ. ಅಶ್ಟರಲ್ಲಿ ಕಂಡಕ್ಟರ್ ಟೈಂ ಆಯ್ತು ಬಾರಪ್ಶ ಅಂದ. ಅವರನ್ನ ಬನಶಂಕರಿ ಬಸ್ ಹತ್ತಿಸಿದೆ. ಅಲ್ಲಿಂದ ನಾಯಂಡಹಳ್ಳಿಗೆ ಹೋಗಿ, ಅಲ್ಲಿಂದ ಮಂಡ್ಯ ಬಸ್ ಹತ್ತಿ ಅಂತ ಹೇಳಿ ಹೊರಟೆ.

ಅವರ ಕಣ್ಣಾಲಿಗಳು ತೇವದಿಂದ ನನ್ನನ್ನೇ ನೋಡುತಿತ್ತು. ನನ್ನ ತಂದೆ ನೆನಪಾದರು.

( ಚಿತ್ರ ಸೆಲೆ: en.wikipedia.org )

 

ಇಲ್ಲಿವೆ 8 ಬಗೆಯ ಆರೋಗ್ಯಕರವಾದ ಬೆಳಗಿನ ತಿಂಡಿಗಳು

ಶ್ರುತಿ ಚಂದ್ರಶೇಕರ್.

healthy-breakfast-120516
ಬೆಳಗಾದರೆ ತಿಂಡಿ ಏನಪ್ಪ ಮಾಡೋದು ಅನ್ನುವ ಚಿಂತೆ ಒಂದೆಡೆಯಾದರೆ. ಮೈಕೈ ಎಲ್ಲಾ ಗಟ್ಟಿಮುಟ್ಟಾಗಿ ಆರೋಗ್ಯದಿಂದ ಇರಲು ಯಾವ ಬಗೆಯ ತಿಂಡಿ ತಿನ್ನಬೇಕು ಎನ್ನುವ ಪ್ರಶ್ನೆ ಇನ್ನೊಂದು ಕಡೆ. ಅದರಲ್ಲೂ ಈಗಿನ ತಿಂಡಿಗಳಲ್ಲಿ ಅಕ್ಕಿ, ಗೋದಿ, ಸಕ್ಕರೆಯಂತಹ ಪದಾರ‍್ತಗಳನ್ನು ಹೆಚ್ಚಾಗಿ ನಯಗೊಳಿಸಿ (refined carbs) ಅದನ್ನು ತಿಂಡಿಮಾಡಲು ಬಳಸುತ್ತಾರೆ. ಇದರಲ್ಲಿ ನಾರಿನ ಅಂಶ ಮತ್ತು ಇತರೆ ಪೊರೆತ(nutrient)ಗಳು ಕಡಿಮೆ ಇರುತ್ತವೆ. ಇದನ್ನು ದಿನಾ ತಿಂದರೆ ಯಾವ ಉಪಯೋಗವಿಲ್ಲ.

ಒಂದು ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು, ಅಜ್ಜ ಅಜ್ಜಿ ಹೀಗೆ ಬೇರೆ ಬೇರೆ ವಯಸ್ಸಿನವರು ಇರುತ್ತಾರೆ. ಎಲ್ಲರಿಗೂ ಅವರವರ ವಯಸ್ಸು ಮತ್ತು ಚಟುವಟಿಕೆಗಳಿಗೆ ತಕ್ಕಂತೆ ತಿಂಡಿಯನ್ನು ನೀಡುವುದು ಒಳ್ಳೆಯದು. ಅದಕ್ಕೆ ಕೆಳಗೆ ನೀಡಿರುವ ತಿಂಡಿಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿ.

ಕೆಲಸಕ್ಕೆ ಹೋಗುವವರು ಇದನ್ನೆಲ್ಲಾ ತಿನ್ನಬಹುದು

ಕಚೇರಿಗೆ ಕೆಲಸಕ್ಕೆ ಹೋಗುವವರು ಕಿರುದಾನ್ಯಗಳು, ಕೆಂಪಕ್ಕಿ, ಕಿನ್ವ(quinoa), ನಯಗೊಳಿಸದ ಗೋದಿ(whole wheat), ವಾಲ್ನಟ್, ಬೆರ‍್ರಿ ಹಣ್ಣುಗಳು ಮತ್ತು ಮೊಸರನ್ನು ಬಳಸಿ ಮಾಡುವ ತಿಂಡಿಗಳನ್ನು ತಿನ್ನಬಹುದು. ಇಡೀ ಓಟ್ಸ್ (whole oat groats) ಅನ್ನು ತಿನ್ನಬಹುದು, ಆದರೆ ಪುಡಿಮಾಡಿದ ಓಟ್ಸ್(milled oatmeal) ಅನ್ನು ಬಳಸುವುದು ಒಳ್ಳೆಯದಲ್ಲ ಏಕೆಂದರೆ ಇದರಲ್ಲಿರುವ ಸತ್ವಗಳನ್ನು ತೆಗೆದಿರುತ್ತಾರೆ.

ತೂಕ ಇಳಿಸಿಕೊಳ್ಳಲು ಬಯಸುವವರು ಚೂರು ಇಲ್ಲಿನೋಡಿ

hypothyroidism-weight-loss-722x406

ತೂಕವನ್ನು ಇಳಿಸಬೇಕು ಎಂದು ಪ್ರಯತ್ನಿಸುತ್ತಿದ್ದರೆ ಬೆಳಗಿನ ತಿಂಡಿಯಲ್ಲಿ ಒಳ್ಳೆಯ ಕೊಬ್ಬನ್ನು ತಿನ್ನಬೇಕು ಅಂದರೆ ಬೆಣ್ಣೆಹಣ್ಣು, ಸಾಲ್ಮನ್ ಮೀನು, ನಟ್ಸ್ ಮತ್ತು ಗಟ್ಟಿ ಮೊಸರನ್ನು ತಿನ್ನಬೇಕು. ಇದರ ಜೊತೆ ಹಣ್ಣು ಮತ್ತು ಸೊಪ್ಪಿನ ಜೊತೆ ಮೊಟ್ಟೆಯನ್ನು ಬೇಯಿಸಿಕೊಂಡು ತಿನ್ನಬಹುದು. ಆಲಿವ್ ಎಣ್ಣೆ, ಚೆಡ್ಡಾರ್ ಚೀಸ್ ಗಳನ್ನು ಅಡುಗೆಗೆ ಬಳಸುವುದು ಒಳ್ಳೆಯದು.

ನೀವು ಕಸರತ್ತು ಮಾಡುವವರಾ? ಹಾಗಾದರೆ ಮೊಟ್ಟೆಯನ್ನು ಮರೆಯಬೇಡಿ

ತುಂಬಾ ಓಡುವವರು ಹಾಗು ಜಿಮ್ ನಲ್ಲಿ ಹೆಚ್ಚಾಗಿ ಕಸರತ್ತು ಮಾಡುವವರು ಮೇಲೆ ಹೇಳಿದ ತಿಂಡಿಯೊಂದಿಗೆ ಮೊಟ್ಟೆಯನ್ನು ತಿನ್ನಬಹುದು. ಇದು ಅವರ ಕಸರತ್ತಿಗೆ ಬೇಕಾದ ಪ್ರೋಟೀನ್ ಅನ್ನು ಒದಗಿಸುತ್ತದೆ.

ಸಸ್ಯಹಾರಿಗಳೇ ಸೊಪ್ಪನ್ನು ಮರೆಯದಿರಿ

kale-and-spinach

ಸಸ್ಯಹಾರಿಗಳು ಹಸಿರು ತರಕಾರಿ ಅತವ ಸೊಪ್ಪಿನ ರಸವನ್ನು ಕುಡಿಯಬಹುದು. ಹೆಚ್ಚು ಪೊರೆತಗಳು(nutrients) ಇರುವ ಪಾಲಾಕ್ ಹಾಗು ಕೇಲ್(kale)ನಂತಹ ಸೊಪ್ಪಿನ ರಸವನ್ನು ಕುಡಿಯಬೇಕು. ಹಸುವಿನ ಹಾಲು ಇಲ್ಲವೇ ಬಾದಾಮಿ ಹಾಲನ್ನು ತಿಂಡಿಯೊಂದಿಗೆ ಕುಡಿಯುವುದು ಒಳ್ಳೆಯದು. ನೀವು ಸಸ್ಯಹಾರಿಯಾಗಿದ್ದು ನಿಮಗೆ ಹೆಚ್ಚಾಗಿ ಪ್ರೊಟೀನ್ ಬೇಕಾಗಿದ್ದರೆ, ಮಾಂಸ, ಮೊಟ್ಟೆ ಮತ್ತು ಹಾಲನ್ನು ಬಿಟ್ಟು, ಕಾಳುಗಳನ್ನು ಮತ್ತು ಕಿರುದಾನ್ಯಗಳನ್ನು ಒಟ್ಟಾಗಿ ತಿನ್ನುವುದರಿಂದ ಮೈಗೆ ಬೇಕಾದ ಎಲ್ಲ ಪ್ರೊಟೀನ್ ಮತ್ತು ಅಮೈನೋ ಆಸಿಡ್ ಗಳು ಸಿಗುತ್ತವೆ.

ವೇಗನ್‍ಗಳಿಗೂ ತಿಂಡಿಯ ಹಲವಾರು ಆಯ್ಕೆಗಳಿವೆ

ವೇಗನ್(vegan – ಪ್ರಾಣಿಗಳ ಕೊಬ್ಬು, ಬಾಡು ಮುಂತಾದ ಅಂಶವನ್ನು ಯಾವ ರೂಪದಲ್ಲಿಯೂ ತಿನ್ನದವರು) ಅವರು ಈ ರೀತಿ ತಿಂಡಿ ಮಾಡಿಕೊಡು ತಿನ್ನಬಹುದು; ಮೊಳಕೆ ಬರಸಿದ ದಾನ್ಯದ ಬ್ರೆಡ್ ಅನ್ನು ಬಾಡಿಸಿ(toast)ಕೊಂಡು ಅದರ ಜೊತೆಗೆ ಕಲಸಿದ ಬೆಣ್ಣೆಹಣ್ಣು ಮತ್ತು ಹಮ್ಮಸ್ (hummus) ಹಚ್ಚಿಕೊಂಡು ತಿನ್ನಬಹುದು. ಮೊಳಕೆ ಬರಸಿದ ದಾನ್ಯದ ಬ್ರೆಡ್ ನಲ್ಲಿ ನಾರಿನ ಅಂಶಗಳು ಮತ್ತು ಬಿ ವಿಟಮಿನ್ ಇರುತ್ತದೆ, ಇವು ಹೊಟ್ಟೆಯಲ್ಲಿ ಚೆನ್ನಾಗಿ ಅರಗುತ್ತವೆ. ಹಾಗೆಯೇ ಕಲಸಿದ ಬೆಣ್ಣೆಹಣ್ಣು ಮತ್ತು ಹಮ್ಮಸ್ ತಿನ್ನುವುದರಿಂದ ಮೈಗೆ ಬೇಕಾದ ಪ್ರೊಟೀನ್ ಹಾಗು ಕೊಬ್ಬು ಸಿಗುತ್ತದೆ.

ಮಕ್ಕಳ ತಿಂಡಿ ಚೆನ್ನಾಗಿದ್ದರೆ ಅವರು ಚುರುಕಾಗಿರುತ್ತಾರೆ

kids

ಮಕ್ಕಳಿಗೆ ಬೆಳಗಿನ ತಿಂಡಿ ಬಹಳ ಮುಕ್ಯ. ಮಕ್ಕಳು ಬೆಳಗಿನ ತಿಂಡಿ ತಿನ್ನುವುದರಿಂದ ಅವರು ಚುರುಕಾಗಿ ಇರಲು ಸಹಾಯ ಮಾಡುತ್ತದೆ. ಬೇಯಿಸಿದ ಮೊಟ್ಟೆ ಅತವ ಮೊಟ್ಟೆ ಪಲ್ಯವನ್ನು ಇಡಿ ದಾನ್ಯದ (whole grain) ಬ್ರೆಡ್ ಟೊಸ್ಟ್ ಜೊತೆಗೆ ತಿನ್ನಬಹುದು ಮತ್ತು ಹಣ್ಣನ್ನು ತಿನ್ನುವುದು ಒಳ್ಳೆಯದು. ಮೊಸರಿನ ಜೊತೆಗೆ ಹಣ್ಣು, ಹಸಿರು ತರಕಾರಿ ಮತ್ತು ನೀರು ಅತವ ಹಾಲು ಇದರ ಮಿಶ್ರಣವನ್ನು ಮಾಡಿಕೊಂಡು ತಿನ್ನಬಹುದು. ಬೆಣ್ಣೆಹಣ್ಣು, ನಟ್ಸ್, ಕಾಳುಗಳು, ಆಲಿವ್ ಎಣ್ಣೆ ಇವುಗಳನ್ನು ಕೊಡುವುದರಿಂದ ಒಳ್ಳೆಯ ಕೊಬ್ಬಿನ ಅಂಶ ಮಕ್ಕಳಿಗೆ ಸಿಗುತ್ತದೆ.

ವಯಸ್ಸಾದವರಿಗೆ ಹೆಚ್ಚು ಪ್ರೊಟೀನ್ ಇರುವ ತಿಂಡಿಗಳನ್ನು ಕೊಡಬೇಕು

ವಯಸ್ಸಾಗಿರುವರು ಊಟವನ್ನು ತುಂಬಾ ಗಮನವಿಟ್ಟು ತಿನ್ನಬೇಕು. ಅವರ ಮಾಂಸಕಂಡದ ಶಕ್ತಿ ಕುಂದಿರುತ್ತದೆ ಹಾಗಾಗಿ ಬಹಳಶ್ಟು ಪ್ರೊಟೀನ್ ತಿನ್ನಬೇಕು, ಎರಡು ಮೊಟ್ಟೆ ಜೊತೆಗೆ ಕಪ್ಪುಕಾಳುಗಳು (Black beans) ಹಾಗು ಮೊಸರು ಅತವ ಹಾಲನ್ನು ತಿಂಡಿಗೆ ಬಳಸುವುದು ಒಳ್ಳೆಯದು.

ತಿಂಡಿಯ ಜೊತೆ ಕುಡಿಯುವುದನ್ನು ಮರೆಯಬೇಡಿ

fresh-pressed-juices-1920x1080veb

ನೀರು ಕುಡಿಯುವುದು ಯಾವಾಗಲು ಆರೋಗ್ಯಕರವಾದದ್ದು. ಕಾಪಿ ಹಾಗು ಟೀ ಕುಡಿಯುವುದರಿಂದ ಉಲ್ಲಾಸ ಸಿಗುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಹೆಚ್ಚಿನ ಜನ ಕಾಪಿ, ಟೀಯನ್ನು ಕುಡಿಯುವ ಅಬ್ಯಾಸ ಮಾಡಿಕೊಂಡಿರುತ್ತಾರೆ. ಇದನ್ನು ಮುಂದುವರಿಸಬಹುದು ಆದರೆ ಕಾಪಿ ಹಾಗು ಟೀ ಹಿತಮಿತವಾಗಿರಬೇಕು. ಬೆಳಗಿನ ತಿಂಡಿಯ ಜೊತೆ ಕುಡಿಯಲು ಹಣ್ಣಿನ ರಸ ಅದರಲ್ಲೂ ಕಿತ್ತಲೆ ಹಣ್ಣಿನ ರಸವನ್ನು ಕುಡಿಯುವುದರಿಂದ ವಿಟಮಿನ್ ಸಿ ಸಿಗುತ್ತದೆ, ಇದು ಮೈಗೆ ಒಳ್ಳೆಯದು. ಇತರೆ ಹಣ್ಣಿನ ಹಣ್ಣಿನ ರಸಗಳನ್ನು ಕುಡಿಯುವುದರಿಂದ ಅದರಲ್ಲಿರುವ ಪೊರೆತಗಳು ಮತ್ತು ವಿಟಮಿನ್ ಗಳು ಮೈಗೆ ಸಿಗುತ್ತವೆ. ಹಾಗಾಗಿ ಬೆಳಗಿನ ತಿಂಡಿಯೊಂದಿಗೆ ಹಣ್ಣಿನ ರಸ ಸೇರಿಸಿದರೆ ಒಳ್ಳೆಯದು.

(ಮಾಹಿತಿ ಸೆಲೆ: time.com)
(ಚಿತ್ರ ಸೆಲೆ: fitnessnhealthtips.comeuyansang.commedicaldaily.comctmomaha.comdietoflife.com)

 

ಟೊರೆಂಟ್: ಏನಿದು? ಅದು ಹೇಗೆ ಕೆಲಸಮಾಡುತ್ತೆ?

– ವಿಜಯಮಹಾಂತೇಶ ಮುಜಗೊಂಡ.

BitTorrent_big

ನೀವು ಮಿಂಬಲೆಯ(internet) ಬಳಸುಗರಾಗಿದ್ದಲ್ಲಿ ಆನ್‍ಲೈನ್ ಸಿನೆಮಾ ನೋಡುವುದು ಮತ್ತು ಇಳಿಸಿಕೊಳ್ಳುವುದು ನಿಮ್ಮ ಆನ್‍ಲೈನ್ ಚಟುವಟಿಕೆಗಳ ಬಾಗ ಆಗಿರಲೇಬೇಕು. ಮಿಂಬಲೆಯಿಂದ ಸಿನೆಮಾಗಳನ್ನು ಇಳಿಸಿಕೊಳ್ಳುವುದು ಹೇಗೆಂದು ನಿಮಗೆ ಗೊತ್ತಿರಬಹುದು. ಹಲವರು ಟೊರೆಂಟ್ ತಾಣಗಳಿಂದ ಸಿನೆಮಾ ಅತವಾ ಪುಕ್ಕಟೆ ಮೆದುಸರಕುಗಳನ್ನು(software) ಇಳಿಸಿಕೊಂಡು ಬಳಸಿರಬಹುದು. ಅದು ಎಶ್ಟರ ಮಟ್ಟಿಗೆ ಸರಿ-ತಪ್ಪು ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಇತ್ತೀಚಿಗೆ ಟೊರೆಂಟ್ ಮಿಂದಾಣಗಳು ಒಂದರ ಹಿಂದೊಂದು ಮುಚ್ಚುತ್ತಿರುವ ಸುದ್ದಿಯನ್ನು ನೀವು ಕೇಳಿರಬಹುದು. ಏನಿದು ಟೊರೆಂಟ್? ಅದರ ಕೆಲಸ ಮಾಡುವ ಬಗೆ ಏನು? ಅದರ ಬಳಕೆಯ ಮೇಲೆ ಕಡಿವಾಣ ಇದೆಯೇ? ಅದರ ಬಳಕೆ ಕಾನೂನಿನ ಕಟ್ಟಲೆಗಳಿಗೆ ಮೀರಿದ್ದೇ? ಅದರ ಬಳಕೆ ಎಶ್ಟು ನಂಬಿಕೆಗೆ ಅರ್‍ಹವಾದುದು? ಇಂತಹ ಹತ್ತು ಹಲವು ಕೇಳ್ವಿಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

‘ಟೊರೆಂಟ್’ ಹಾಗೆಂದರೇನು?

ಟೊರೆಂಟ್ ಅತವಾ ಬಿಟ್‍ಟೊರೆಂಟ್(BitTorrent) ಎನ್ನುವುದು ಮಿಂಬಲೆಯಲ್ಲಿ ಕಡತಗಳನ್ನು ಹಂಚಿಕೊಳ್ಳಲು ಇರುವ ಒಂದು ಮಿಂಕಟ್ಟಲೆ(protocol) ಆಗಿದೆ. ನೀವು ಮಿಂಬಲೆಯಲ್ಲಿ ಈಗಾಗಲೇ ಕಡತಗಳನ್ನು ಇನ್ನೊಬ್ಬರೊಂದಿಗೆ ಗೂಗಲ್ ಡ್ರೈವ್‍ ಅತವಾ ಮಿಂಚೆಯ ಮೂಲಕ ಹಂಚಿಕೊಂಡಿರುತ್ತೀರಿ. ಇದೇ ರೀತಿ ಟೊರೆಂಟ್ ಕೂಡ ಕಡತಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಬೇರೆ ಬಗೆಯ ಮಿಂಕಟ್ಟಲೆ ಆಗಿದೆ. ಕಡತಗಳನ್ನು ಮಂದಿಯ ನಡುವೆ ಹಂಚಿ ಮಂದಿಯನ್ನೇ ಕಡತಗಳ ನೀಡುಗರು ಮತ್ತು ಪಡೆಯುಗರನ್ನಾಗಿ ಮಾಡಲಾಗುತ್ತದೆ. ಅಂದರೆ ಇಲ್ಲಿ ಕಡತವನ್ನು ನೀಡುವ ಕೆಲಸವನ್ನು ಬಳಸುಗರೇ ಮಾಡುತ್ತಾರೆ.

ಟೊರೆಂಟ್‍ ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಬಿಟ್‍ಟೊರೆಂಟ್ ಮಿಂಕಟ್ಟಲೆಯನ್ನು ಕಡತಗಳನ್ನು ಹಂಚಿಕೊಳ್ಳಲು ಮಂದಿಯ ನಡುವೆ ಇರುವ ಒಂದು ಬಗೆಯ ಬೆಸುಗೆ ಎಂದೇ ಹೇಳಬಹುದು. ಟೊರೆಂಟ್ ಬಳಸಿ ಕಡತಗಳನ್ನು ಪಡೆಯಲು ಅತವಾ ಹಂಚಲು ಟೊರೆಂಟ್-ಕೊಳ್ವೆಣಿ(torrent client) ಎನ್ನುವ ಸಣ್ಣ ಮೆದುಸರಕನ್ನು ಬಳಸಲಾಗುತ್ತದೆ. ಇದು ಎಣ್ಣುಕಗಳ ನಡುವೆ ಬಿಟ್‍ಟೊರೆಂಟ್ ಮಿಂಕಟ್ಟಲೆಯನ್ನು ಅಣಿಗೊಳಿಸಲು ನೆರವಾಗುತ್ತದೆ.

ಕಡತಗಳನ್ನು ಇಳಿಸಿಕೊಳ್ಳಲು ಅತವಾ ಹಂಚಿಕೊಳ್ಳಲು ಮೊದಲು ಟೊರೆಂಟ್ ಕಡತವೊಂದು ಬೇಕಾಗುತ್ತದೆ. ಇದು ಸಣ್ಣ ಅಳತೆಯ ಕಡತವಾಗಿದ್ದು ಸಾಮಾನ್ಯವಾಗಿ .torrent ಬಗೆಯದಾಗಿರುತ್ತದೆ. ಟೊರೆಂಟ್ ಕಡತದಲ್ಲಿ ನೀವು ಹಂಚಿಕೊಳ್ಳಬೇಕಾಗಿರುವ ಕಡತದ ಕುರಿತಾದ ಮಾಹಿತಿ ಮತ್ತು ಟ್ರ್ಯಾಕರ್ ವಿವರಗಳು ಇರುತ್ತವೆ.

ಬಿಟ್‍ಟೊರೆಂಟಿಂಗ್ ಒಪ್ಪೆಸಕದಲ್ಲಿ(BitTorrenting process) ಪಾಲ್ಗೊಳ್ಳುವ ಎಣ್ಣುಕಗಳನ್ನು ಅವುಗಳ ಕೆಲಸಗಳ ಆದಾರದ ಮೇಲೆ ಮೂರು ಬಗೆಯಲ್ಲಿ ಬೇರ್‍ಪಡಿಸಬಹುದಾಗಿದ್ದು, ಅವು ಹೀಗಿವೆ.

  1. ಇಂಡೆಕ್ಸರ್‍ಗಳು(Indexers) ಅತವಾ ಟೊರೆಂಟ್ ಮಿಂದಾಣಗಳು – ಇಂಡೆಕ್ಸರ್‍ಗಳು ಟೊರೆಂಟ್ ಕಡತಗಳನ್ನು ಒಟ್ಟಾಗಿ ಕಲೆಹಾಕಿರುವ ಮಿಂದಾಣಗಳಾಗಿದ್ದು, ಸಾಮಾನ್ಯವಾಗಿ ಬಳಸುಗರು ಕಟ್ಟಿರುವ ಕೂಟಗಳಂತೆ ಕೆಲಸಮಾಡುತ್ತವೆ. ಇಲ್ಲಿ ಬಳಸುಗರು ತಮ್ಮದೇ ಆದ ಹೊಸ ಟೊರೆಂಟ್ ಕಡತಗಳನ್ನು ಸೇರಿಸಬಹುದು ಮತ್ತು ಇಳಿಸಿಕೊಳ್ಳಬಹುದು. ಈ ಕೂಟಗಳಿಗೆ ತಮ್ಮದೇ ಆದ ಕಟ್ಟಲೆಗಳಿರುತ್ತವೆ.
  2. ನೀಡುಗ(Seeders) – ಬಿಟ್‍ಟೊರೆಂಟಿಂಗ್ ಒಪ್ಪೆಸಕದಲ್ಲಿ ನೀಡುಗರು ಕಡತಗಳನ್ನು ಹಂಚುತ್ತಾರೆ.
  3. ಪಡೆಯುಗರು(Leechers) – ಬಿಟ್‍ಟೊರೆಂಟಿಂಗ್ ಒಪ್ಪೆಸಕದಲ್ಲಿ ಕಡತವನ್ನು ಇಳಿಸಿಕೊಳ್ಳುವವರಾಗಿದ್ದಾರೆ.
  4. ಟ್ರ್ಯಾಕರ್‍ಗಳು(Trackers) – ಇವು ಒಂದು ವಿಶೇಶ ಬಗೆಯ ಊಳಿಕಗಳಾಗಿದ್ದು( Server) ಕಡತ ಹಂಚಿಕೆಯಲ್ಲಿ ಪಾಲ್ಗೊಂಡ ಎಣ್ಣುಕಗಳ ನಡುವೆ ಅರುಹು(communication) ಉಂಟುಮಾಡುತ್ತವೆ. ಇವು ಬಳಸುಗರ ಎಣ್ಣುಕದಲ್ಲಿರುವ ಕಡತದ ತುಣುಕುಗಳ ಮಾಹಿತಿಯನ್ನು ಕಲೆಹಾಕುತ್ತವೆ.

ಬಿಟ್‍ಟೊರೆಂಟ್ ಒಪ್ಪೆಸಕ ಈ ಹಂತಗಳಲ್ಲಿ ನಡೆಯುತ್ತದೆ.

  • ಮೊದಲು ಮಂದಿಯ ನಡುವೆ ಹಂಚಬೇಕಾಗಿದ್ದ ಕಡತವನ್ನು ಸಣ್ಣ ಸಣ್ಣ ತುಣುಕುಗಳಾಗಿ ಪಾಲ್ಗೊಳ್ಳುಗರ ನಡುವೆ ಹಂಚಲಾಗುತ್ತದೆ. ಯಾವ ಬಳಸುಗರ ಬಳಿ ಕಡತದ ಯಾವ ತುಣುಕು ಇದೆ ಎನ್ನುವುದರ ಮಾಹಿತಿಯನ್ನು ಟ್ರಾಕರ್‍ಗಳು ಹಿಡಿದಿಟ್ಟಿರುತ್ತವೆ.
  • ಪಡೆಯುಗರಿಗೆ ಬೇಕಾದ ಕಡತದ ತುಣುಕು ಒಪ್ಪೆಸಕದಲ್ಲಿ ಪಾಲ್ಗೊಂಡ ಯಾವ ಬಳಸುಗರ ಬಳಿ ಇದೆ ಎಂದು ತಿಳಿದ ಟ್ರ್ಯಾಕರ್‍ಗಳು ಅವರಿಗೆ ಸರಿಯಾದ ನೀಡುಗರತ್ತ ದಾರಿತೋರುತ್ತವೆ. ಅಲ್ಲಿಂದ ತಮಗೆ ಬೇಕಾದ ತುಣುಕುಗಳನ್ನು ಪಡೆಯುಗರು ಇಳಿಸಿಕೊಳ್ಳುತ್ತಾರೆ.
  • ಹಲವು ಬಳಸುಗರಿಂದ ಕಡತಕ್ಕೆ ಬೇಕಾದ ಎಲ್ಲ ತುಣುಕುಗಳನ್ನು ಪಡೆಯುವ ಪಡೆಯುಗರು ತಮ್ಮಲ್ಲಿರುವ ತುಣುಕುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ನೀಡುಗರಾಗುತ್ತಾರೆ.

Torrentcomp_small

ಟೊರೆಂಟ್ ಹೇಗೆ ಬೇರೆಯಾಗಿದೆ?

ನೀವು ಗೂಗಲ್ ಡ್ರೈವ್ ಅತವಾ ಬೇರೆ ಮಿಂದಾಣಗಳಿಂದ ಕಡತಗಳನ್ನು ಇಳಿಸಿಕೊಳ್ಳುವಾಗ ನಿಮಗೆ ಬೇಕಾಗಿರುವ ಕಡತವನ್ನು ಮಿಂಬಲೆಯ ಊಳಿಕಗಳು(servers) ಬಿಟ್‍ಗಳೆಂಬ ಸಣ್ಣ ಸಣ್ಣ ತುಣುಕುಗಳಲ್ಲಿ ನಿಮ್ಮ ಎಣ್ಣುಕಕ್ಕೆ(computer) ಸಾಗಿಸುತ್ತವೆ(transfer). ಮಿಂದಾಣಗಳನ್ನು ಹಲವು ಬಳಸುಗರು ಜಗತ್ತಿನ ಬೇರೆಬೇರೆ ಕಡೆಯಿಂದ ತಲುಪುಬಹುದು ಮತ್ತು ಒಂದೇ ಕಡತವನ್ನು ಹಲವು ಮಂದಿ ಇಳಿಸಿಕೊಳ್ಳಬಹುದಾಗಿದೆ.  ಎಲ್ಲರಿಗೂ ಬೇಕಾದ ಮಾಹಿತಿಯನ್ನು ನೀಡುವುದು ಮತ್ತು  ಕಡತವನ್ನು ಎಲ್ಲರಿಗೆ ತಲುಪಿಸುವ ಕೆಲಸವನ್ನು ಮಿಂದಾಣ ಒಟ್ಟೊಟ್ಟಿಗೇ ಮಾಡುತ್ತಿರುತ್ತದೆ. ಕೆಲವೊಮ್ಮೆ ಮಿಂದಾಣದ ಊಳಿಕದ ಸೊಮ್ಮುಗಳಿಗೆ(resources) ಮೀರಿದಶ್ಟು ಮಂದಿ ಅದನ್ನು ಒಟ್ಟಿಗೆ ಬಳಸುತ್ತಿದ್ದರೆ ಅತವಾ ಕಡತಗಳನ್ನು ಇಳಿಸಿಕೊಳ್ಳುತ್ತಿದ್ದರೆ ಅಂತಹ ಹೊತ್ತಿನಲ್ಲಿ ಮಿಂಬಲೆಯಲ್ಲಿರುವ ತಾಣಗಳು ಮಂಕಾಗುವ(hang) ಅತವಾ ನಿಂತುಹೋಗುವ(crash) ಸಾದ್ಯತೆಗಳಿರುತ್ತವೆ. ಹೀಗೆ ತಾಣಗಳು ನಿಂತುಹೋದಾಗ ಕಡತವನ್ನು ಇಳಿಸಿಕೊಳ್ಳುವ ಎಲ್ಲ ಬಳಸುಗರೂ ಕೆಟ್ಟ ಕಡತಗಳನ್ನು ಪಡೆಯಬಹುದು ಅತವಾ ಇಳಿಕೆ ನಿಂತುಹೋಗಬಹುದು.

image277

ಟೊರೆಂಟ್‍ನಲ್ಲಿ ಕಡತವನ್ನು ಸಣ್ಣ ತುಣುಕುಗಳಲ್ಲಿ ಒಡೆದು ಬಳಸುಗರಿಗೆ ಹಂಚಿ, ಬಳಿಕ ಎಲ್ಲ ಬಳಸುಗರು ಅದನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಇಲ್ಲಿ ಕಡತವನ್ನು ಹಂಚುವ ಹೊಣೆ ಒಂದೇ ಊಳಿಕದ ಬದಲು ಹಲವು ಬಳಸುಗರ ನಡುವೆ ಹಂಚಿಹೋಗಿರುತ್ತದೆ. ಇದರಿಂದಾಗಿ ಊಳಿಕದ ಮೇಲಿನ ಹೊರೆ ತಪ್ಪುತ್ತದೆ. ನೀಡುಗರ ಮತ್ತು ಪಡೆಯುಗರ ನಡುವೆ ಕಡತದ ಹಂಚಿಕೆ ಆಗುವುದರಿಂದ ಕಡತವನ್ನು ಹಂಚುವ ಊಳಿಕದ ಕೆಲಸ ಕೊಳ್ವೆಣಿಗಳೇ ಮಾಡುತ್ತವೆ. ಇದರಿಂದ ಮಿಂದಾಣದ ಊಳಿಕಗಳು ನಿಂತುಹೋಗುವ ಅತವಾ ಮಂಕಾಗುವ ತಲೆನೋವು ಇರುವುದಿಲ್ಲ.

ಟೊರೆಂಟ್‍ಗಳ ಬಳಕೆ ಕಾನೂನಿನ ಪ್ರಕಾರ ತಪ್ಪೇ?

ಟೊರೆಂಟ್ ಮಿಂಕಟ್ಟಲೆಯ ಬಳಕೆಗೆ ಕಾನೂನಿನ ಕಟ್ಟಲೆಯಲ್ಲಿ ಯಾವುದೇ ತಡೆವುಗಳಿಲ್ಲ. ಇದು ಕಡತಗಳ ಹಂಚಿಕೆ ಮಾಡಲು ಇರುವ ಸುಲಬದ ಮತ್ತು ಹೆಚ್ಚು ಅಳವುಳ್ಳ(efficient) ಒಂದು ಮಿಂಕಟ್ಟಲೆಯಾಗಿದ್ದು, ಹಲವಾರು ಕಾನೂನಿಗೆ ಒಳಪಡುವ ಟೊರೆಂಟಿಂಗ್ ಸೇವೆಗಳಿವೆ. ಆದರೆ ಕೆಲವು ಟ್ರ್ಯಾಕರ್‍ಗಳು ಹಂಚಿಕೆಯಾಗುತ್ತಿರುವ ಕಡತದ ಹಕ್ಕುಗಳ ಕುರಿತ ಮಾಹಿತಿಯನ್ನು ಕಲೆಹಾಕುವುದಿಲ್ಲ. ಇದರಿಂದಾಗಿ ಕಾನೂನಿನ ಅಡಿಯಲ್ಲಿ ಇದರ ಬಳಕೆಯ ಕುರಿತು  ಸ್ಪಶ್ಟತೆ ಇಲ್ಲ.

ಕೆಲವು ಇಂಡೆಕ್ಸರ್‍ಗಳು .torrent ಬಗೆಯ ಟೊರೆಂಟ್ ಕಡತಗಳನ್ನು ಮಾತ್ರ ಹಂಚುತ್ತವೆ ಮತ್ತು ಹಕ್ಕುಗಳನ್ನು ಕಾಯ್ದಿಟ್ಟ ಬರಹಗಳು, ಹೊತ್ತಗೆಗಳು ಮತ್ತು ಸಿನೆಮಾಗಳು ಅವರ ಊಳಿಕದಲ್ಲಿ ಇರುವುದಿಲ್ಲ. ಹಕ್ಕುಗಳಿಗೆ ಒಳಪಡುಬಹುದಾದ ಕಡತಗಳನ್ನು ಹಂಚುವಲ್ಲಿ ಮತ್ತು ಪಡೆಯುವಲ್ಲಿ ಬಳಸುಗರು ನೇರವಾಗಿ ತೊಡಗಿರುವುದರಿಂದ ಇವುಗಳ ಹಕ್ಕುಗಳನ್ನು ಕಾಪಾಡುವ ಹೊಣೆ ಬಳಸುಗರ ಮೇಲಿರುತ್ತದೆ.

ಇನ್ನೂ ಕೆಲವು ಮಿಂದಾಣಗಳು ಆನ್‍ಲೈನ್ ಕೂಟ(forum)ಗಳಂತೆ ಕೆಲಸಮಾಡುತ್ತವೆ. ಇಲ್ಲಿಗೆ ಯಾರು ಬೇಕಾದರೂ ಟೊರೆಂಟ್ ಕಡತಗಳನ್ನು ಸೇರಿಸಬಹುದು ಮತ್ತು ಇಲ್ಲಿಂದ ಇಳಿಸಿಕೊಳ್ಳಬಹುದು.

ಕೆಲವು ಟ್ರ್ಯಾಕರ್‍ಗಳು ಕಲೆಹಾಕುವ ಮಾಹಿತಿಯಿಂದ ಬಳಸುಗರು ಹಂಚುತ್ತಿರುವ ಕಡತ ಅಶ್ಟೇ ಅಲ್ಲದೆ ಬಳಸುಗರ ಐಪಿ ವಿಳಾಸ(IP Address)ದಂತಹ ಮಾಹಿತಿ ಎಲ್ಲರಿಗೂ ಕಾಣುತ್ತದೆ. ಇದರಿಂದ ಜಾಗರೂಕರಾಗಿರುವುದು ಬಳಸುಗರ ಹೊಣೆಯಾಗಿದೆ.

ಮಿಂಕಟ್ಟಲೆಯ ಬಳಕೆ ಕಾನೂನಿನ ಕಟ್ಟಲೆಯಲ್ಲಿ ಸರಿಯಾದುದೇ. ಆದರೆ, ಹಂಚಲಾಗುವ ಕಡತದ ಹಕ್ಕುಗಳನ್ನು ತಿಳಿದು ಅದು ಹಂಚಲು ಯೋಗ್ಯವೇ ಎನ್ನುವುದನ್ನು ತಿಳಿದು ಎಚ್ಚರಿಕೆಯಿಂದ ನಡೆದರೆ ಒಳಿತು. ಟ್ರ್ಯಾಕರ್‍ಗಳು ನಿಮ್ಮ ಐಪಿ ವಿಳಾಸ(IP Address)ದಂತಹ ಮಾಹಿತಿಯನ್ನು ಕಲೆಹಾಕುವುದರಿಂದ ಟ್ರ್ಯಾಕರ್‍ಗಳ ಕಟ್ಟಲೆಗಳನ್ನು ತಿಳಿದು ನಡೆದರೆ ಅದು ಸುರಕ್ಶಿತವಾಗಿದೆ ಎಂದೇ ಹೇಳಬಹುದು.

(ಮಾಹಿತಿ ಮತ್ತು ಚಿತ್ರಸೆಲೆ: wikipedia.org, howtogeek.comdevicemag.com)

ಸಣ್ಣಕತೆ: ತಾನೊಂದು ಬಗೆದರೆ…

ಕೆ.ವಿ.ಶಶಿದರ.

MissedFlight

ಬದುಕಲು ಉತ್ಕಟ ಆಸೆ ಆ 40 ವರ‍್ಶ ಪ್ರಾಯದವನಿಗೆ. ಪ್ರಾಣವನ್ನಾದರೂ ಒತ್ತೆಯಿಟ್ಟು ಬದುಕಿಸಿಕೊಳ್ಳಬೇಕು ಎಂಬ ಕಾತರ ಹೆತ್ತವರಿಗೆ. ದುಡ್ಡಿಗೆ ಬರವಿರಲಿಲ್ಲ. ಲ್ಯಾಬ್ ರಿಪೊರ‍್ಟ್ ಆದಾರದ ಮೇಲೆ, ತಮ್ಮ ಪ್ಯಾಮಿಲಿ ಡಾಕ್ಟರ್ ಸಲಹೆಯಂತೆ ವಿದೇಶದಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹೊರಟಿದ್ದರು.

ಏರ್‍ಪೋರ‍್ಟ್ ರಸ್ತೆ. ಹಲವು ಸಂಗಟನೆಗಳಿಂದ ರಸ್ತೆ ತಡೆ. ಹಾಗೂ ಹೀಗೂ ದಾರಿ ಮಾಡಿಕೊಂಡು ಏರ್‍ಪೋರ‍್ಟ್ ತಲುಪಿದರೂ ಪ್ರಯೋಜನವಾಗಲಿಲ್ಲ. ಬೋರ‍್ಡಿಂಗ್ ಕೌಂಟರ್ ಬಂದ್ ಆಗಿತ್ತು. ವಾಪಸ್ಸು ದಾರಿಯುದ್ದಕ್ಕೂ ನೌಕರರ ಶಾಹಿಯ ಮೇಲೆ ವಾಚಾಮಗೋಚರ ಬೈಗುಳ ಸುರಿಮಳೆಗೈದಾಯಿತು. ಮನಸೋ ಇಚ್ಚೆ ಶಪಿಸಿದ್ದಾಯಿತು. ಮನೆಗೆ ಹಿಂದಿರುಗುವಶ್ಟರಲ್ಲ್ಲಿ ಎಲ್ಲರೂ ಹೈರಾಣಾಗಿದ್ದರು.

ಅವ ಉಸ್ಸೆಂದು ಸೋಪಕ್ಕೆ ಒರಗಿ ಕುಳಿತು ಟಿವಿ ಆನ್ ಮಾಡಿದ. ‘ಬ್ರೇಕಿಂಗ್ ನ್ಯೂಸ್’ -‘ಬೆಂಗಳೂರು ಕ್ಯಾಲಿಪೋರ‍್ನಿಯ…’ ಅವನ ಕಿವಿ ಚುರುಕಾಯಿತು. ‘…ನಡುವಿನ ಏರ್ ಇಂಡಿಯ ವಿಮಾನ ನಾಪತ್ತೆ, ಉಗ್ರರ ಕೈವಾಡದ ಶಂಕೆ’ ಕೂತಲ್ಲೇ ಅವ ನಿಟ್ಟಿಸಿರು ಬಿಟ್ಟ. ಪುನರ‍್ಜನ್ಮ ಸಿಕ್ಕಂತಾಗಿತ್ತು.

ಕರೆಗಂಟೆ ಸದ್ದಾಯಿತು. ನಾಲ್ಕಾರು ಜನ ತಪ್ಪಿತಸ್ತರಂತೆ ತಮ್ಮ ಮೈಯನ್ನು ಕುಬ್ಜವಾಗಿಸಿಕೊಂಡು ನಮ್ರತೆಯಿಂದ ಒಳಬಂದರು. ದೇಣಿಗೆಗಾಗಿ ಬಂದವರು ಎಂದುಕೊಂಡ. ಬಂದವರೆಲ್ಲಾ ಇವನಿಗೆ ಕೈಮುಗಿದು ನಮಸ್ಕರಿಸಿ ‘ನಾವುಗಳು ಡಯಾಗ್ನಿಸ್ಟಿಕ್ ಲ್ಯಾಬ್‍ನಿಂದ ಬಂದಿದ್ದೇವೆ ಸಾರ್. ಬೇರೆಯವರ ರಿಪೂರ‍್ಟ್ ತಪ್ಪಾಗಿ ನಿಮ್ಮ ಕೈಸೇರಿದೆ. ನಿಮಗೆ ನೀಡಿದ ರಿಪೊರ‍್ಟ್ ನಿಮ್ಮದಲ್ಲ. ನಿಮ್ಮ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲ. ಆರೋಗ್ಯವಂತರು ನೀವು. ದಯವಿಟ್ಟು ನಮ್ಮನ್ನು ಕ್ಶಮಿಸಿ. ತಮಗೆ ಸಂಬಂದಿಸಿದ ಲ್ಯಾಬ್ ರಿಪೊರ‍್ಟ್ ಇಲ್ಲಿದೆ. ದಯವಿಟ್ಟು ಇದನ್ನು ಸ್ವೀಕರಿಸಿ ತಪ್ಪನ್ನು ಮನ್ನಿಸಿ’ ಕಳಕಳಿಯಿಂದ ಬೇಡಿದರು.

ಅವ ಕುಸಿದ, ಹ್ರುದಯಾಗಾತದಿಂದ.

(ಚಿತ್ರ ಸೆಲೆ: passpoted.com)

ದರಣಿನೇಸರರ ಅಮರ ಪ್ರೇಮ…

– ಕೌಸಲ್ಯ.

nesaraboomipreeti

ಅಮರ ಪ್ರೇಮ
ಹೊತ್ತು ಸಾಗಿಹುದು
ಸಂದೇಶವೊಂದು
ಬೆಳ್ಳಿಯ ಮೋಡದ ನಡುವಿನಲಿ

ಸೂರ‍್ಯ ರಶ್ಮಿಯು
ಸಾರುತ್ತಿಹುದು
ಬೂರಮೆಯ ಪ್ರೇಮದ
ಕುಸುಮಗಳು ಜಗದೊಳಗಣ

ಅಮರ ಪ್ರೇಮದ ಗುರುತಾಗಿಹುದು
ಜೀವರಾಶಿಗಳು
ಶತಮಾನಗಳು ಕಳೆದರೂ
ನಿಲ್ಲಲಿಲ್ಲ ಪ್ರೇಮ ಸಲ್ಲಾಪದ ಮಾತುಗಳು

ಹಗಲಿರುಳು ಮರೆಯಾಗಲು
ಬಿಡದ ಜೋಡಿಗಳಿವರು
ದರಣಿನೇಸರರ
ಅಮರ ಪ್ರೇಮ

( ಚಿತ್ರ ಸೆಲೆ: ascensionearth2012.org ) 

‘ಸಾಹಿತ್ಯ ಸೇವೆ, ಏನು ಹಾಗೆಂದರೆ?’ – ಬೀಚಿ

– ಸುಂದರ್ ರಾಜ್.

beechi

ಬೀಚಿಯವರ ಮೂಲ ಹೆಸರು ರಾಯಸಂ ಬೀಮಸೇನರಾವ್. ಅನಕ್ರು ಅವರ ‘ಸಂದ್ಯಾರಾಗ’ ಕಾದಂಬರಿಯನ್ನೋದಿ, ತಾವೂ ಬರೆಯಬೇಕೆಂದು ನಿರ‍್ದರಿಸಿದರು. ಆಗ ಅವರು ಬರೆದ ಮೊದಲ ಕ್ರುತಿ ‘ದಾಸಕೂಟ’ – ಅವರಿಗೆ ತುಂಬ ಹೆಸರು ತಂದ ಕ್ರುತಿ. ನಂತರ ಬೀಚಿ ಹೆಸರಿನಿಂದ ತಮ್ಮ ಹಾಸ್ಯ ಕ್ರುತಿಗಳನ್ನು ರಚಿಸಿ ನಮ್ಮೆಲ್ಲರಿಗೆ ಚಿರ ಪರಿಚಿತರಾದರು. ಅವರ ಲೇಕನದ ಪ್ರದಾನ ಪಾತ್ರದಾರಿ ತಿಮ್ಮ. ಹೀಗಾಗಿ ‘ತಿಮ್ಮನ ತಲೆ’, ‘ಬೆಳ್ಳಿ ತಿಮ್ಮ ನೂರೆಂಟು ಹೇಳಿದ’, ‘ತಿಮ್ಮಾಯಣ’, ‘ತಿಮ್ಮ ಸತ್ತ’, ‘ಅಂದನಾ ತಿಮ್ಮ’ – ಹೀಗೆ ಅನೇಕ ಕ್ರುತಿಗಳನ್ನು ಬರೆದರು. ಅಲ್ಲದೆ ಕೆಲವು ನಾಟಕಗಳನ್ನೂ ಬರೆದು ಪ್ರಸಿದ್ದರಾದರು. ಅವರ ಜೀವನಚರಿತ್ರೆಯನ್ನಾದರಿಸಿ ಬರೆದ ‘ನನ್ನ ಬಯಾಗ್ರಪಿ’ ವೈಶಿಶ್ಟ್ಯಪೂರ‍್ಣವಾದದ್ದು. “ಸತ್ಯವನು ಅರಿತವನು ಸತ್ತಂತೆ ಇರಬೇಕು” ಎಂಬುದು ಅವರ ಪ್ರಸಿದ್ದ ಹೇಳಿಕೆಯಾಗಿತ್ತು. 1980ರಲ್ಲಿ ಅವರು ಇಲ್ಲವಾದಾಗ ಅವರಿಗೆ 67 ವರ‍್ಶಗಳಾಗಿತ್ತು.

ಒಮ್ಮೆ ಅವರ ಕಿರಿಯ ಮಿತ್ರರೊಬ್ಬರು ಬೇಟಿಯಾದರು. ಲೋಕಾಬಿರಾಮವಾಗಿ ಮಾತನಾಡುತ್ತಾ ಬೀಚಿಯವರಿಗೆ ಕೇಳಿದರು, ‘ನೀವು ಎಶ್ಟು ವರ‍್ಶಗಳಿಂದ ಸಾಹಿತ್ಯ ಸೇವೆ ಮಾಡುತ್ತಿದ್ದೀರಿ ಸರ‍್?’ ಎಂದು. ಆ ಪ್ರಶ್ನೆಯನ್ನು ಕೇಳಿ ಬೀಚಿಯವರು ನಕ್ಕು ಕೇಳಿದರು, ‘ಸಾಹಿತ್ಯ ಸೇವೆ, ಏನು ಹಾಗೆಂದರೆ?’. ಅದನ್ನು ಕೇಳಿ ಅವರ ಮಿತ್ರ ನಿರುತ್ತರನಾದ. ಆಗ ಬೀಚಿ ಹೇಳಿದರು, ‘ನನ್ನದು ಸಾಹಿತ್ಯ ಸೇವೆಯಲ್ಲ. ಕೇವಲ ಬರೆಯುವ ಚಟ. ಇನ್ನುಳಿದ ಚಟಗಳೊಂದಿಗೆ ಇದೂ ಒಂದು ಅಶ್ಟೆ’ ಎಂದರು.

ಅವರ ಪ್ರಕಾರ ರಾಮಾಯಣ ರಚಿಸಿದ ವಾಲ್ಮೀಕಿ, ಮಹಾಬಾರತ ರಚಿಸಿದ ವ್ಯಾಸರೂ ತಮ್ಮದು ಸಾಹಿತ್ಯ ಸೇವೆ ಎಂದು ಅಂದುಕೊಂಡಿರಲಿಲ್ಲ. ಅಂತಹದ್ದರಲ್ಲಿ ತನ್ನ ಬರವಣಿಗೆಯನ್ನು ಸಾಹಿತ್ಯ ಸೇವೆ ಎಂದು ಪರಿಗಣಿಸಲಾದೀತೆ ಎಂಬುದು ಅವರ ಪ್ರಾಮಾಣಿಕ ಅನಿಸಿಕೆಯಾಗಿತ್ತು.

(ಚಿತ್ರ ಸೆಲೆ: balapamagazine.blogspot.in )

Follow

Get every new post delivered to your Inbox.

Join 1,637 other followers